ಗಜೇಂದ್ರಗಡದಲ್ಲೊಬ್ಬ ಜಲದಾನಿ

7

ಗಜೇಂದ್ರಗಡದಲ್ಲೊಬ್ಬ ಜಲದಾನಿ

Published:
Updated:
Prajavani

ಅವು ಮಳೆಗಾಲದ ದಿನಗಳು. ಗದಗ ಜಿಲ್ಲೆ ಗಜೇಂದ್ರಗಡದ ಡಬಲ್ ರೋಡ್‍ಲ್ಲಿ ಹೋಗುತ್ತಿದ್ದರೆ ನೂರು ಮೀಟರ್‌ಗೆ ಒಂದರಂತೆ ನೀರಿನ ಮಡಿಕೆ, ಕ್ಯಾನ್ ಕಂಡವು. ಹಾದಿಯಲ್ಲಿ ಸುತ್ತಾಡುತ್ತಿದ್ದ ಜನರೆಲ್ಲಾ ಇವುಗಳ ಬಳಿ ನಿಂತು ನೀರು ಕುಡಿದು, ದಾಹ ತೀರಿಸಿಕೊಂಡು ಮುಂದೆ ಸಾಗುತ್ತಿದ್ದರು.

ಸಾಮಾನ್ಯವಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಅರವಟ್ಟಿಗೆಗಳನ್ನು ನೋಡಿದ್ದ ನನಗೆ, ಇದನ್ನು ಕಂಡು ಕುತೂಹಲವಾಯಿತು. ಕುತೂಹಲ ತಾಳಲಾರದೇ ಪಕ್ಕದಲ್ಲೇ ಇದ್ದ ಬಾಳೆಹಣ್ಣಿನ ವ್ಯಾಪಾರಿ ಭಾಷಾಸಾಬ್‍ಗೆ ‘ಏನು ಈ ಕಥೆ’ ಎಂದು ಕೇಳಿದೆ. ‘ನಮ್ಮೂರಿನ ಮುಜಾವರ್ ಇದ್ದಾನಲ್ಲಾ, ಅವನು ವರ್ಷಪೂರ್ತಿ ಹೀಗೆ ನೀರಿನ ಸೇವೆ ಮಾಡ್ತಾನೆ’ ಎಂದರು. ಅಷ್ಟರೊಳಗೆ, ಯುವಕನೊಬ್ಬ ಬಂದು, ಆ ಮಡಿಕೆಗೆ ನೀರು ತುಂಬಿಸಿದ. ಇನ್ನೊಂದು ಕಡೆ ಕ್ಯಾನ್‌ಗೂ ನೀರು ಹಾಕಿದ.

ಅಂದಹಾಗೆ ಗಜೇಂದ್ರಗಡದಲ್ಲಿ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಪೆಂಡಾಲ್ ಹಾಕುವ ಮುಜಾವರ್, ನಾಲ್ಕು ವರ್ಷಗಳಿಂದ ಇಂಥದ್ದೊಂದು ‘ಜಲಸೇವೆ’ ಮಾಡುತ್ತಿದ್ದಾರೆ. ಹೇಳಿಕೊಳ್ಳುವ ದುಡಿಮೆ ಇಲ್ಲ. ಒಮ್ಮೊಮ್ಮೆ ವ್ಯಾಪಾರಕ್ಕೂ ಹಣದ ತೊಂದರೆಯಾಗಿದೆ. ಆದರೆ, ನೀರಿನ ಸೇವೆ ಮಾತ್ರ ನಿಲ್ಲಿಸಿಲ್ಲ.

ಯಾಕೆ ಈ ಅಚಲ ನಿರ್ಧಾರ? ಎಂದು ಪ್ರಶ್ನಿಸಿದರೆ ‘ರಂಜಾನ್ ತಿಂಗಳಲ್ಲಿ ಮಸೀದಿಯಲ್ಲಿ ರೋಜಾ ಇದ್ದವರಿಗೆ ಕುಡಿಯುವ ನೀರಿನ ಸೇವೆ ಮಾಡುತ್ತಿದ್ದೆ. ರಂಜಾನ್ ಮುಗಿದ ನಂತರ ಸೇವೆಯೂ ನಿಂತಿತು. ಬಾಯಾರಿದವರು ನೀರಿಗೆ ಪರದಾಡುವುದನ್ನು ನೋಡಿದೆ. ಬೇಸರ ಆಯ್ತು. ಈ ಸೇವೆ ವರ್ಷಪೂರ್ತಿ ಜನರಿಗೆ ಸಿಗುವಂತೆ ಮಾಡಬೇಕು ಎಂದೆನಿಸಿತು. ಎರಡು ನೀರಿನ ಮಡಕೆಗಳನ್ನು ತಂದು ದುರ್ಗಾ ಸರ್ಕಲ್‍ನಲ್ಲಿಟ್ಟೆ. ಜನರೂ ಬಳಸಿದರು. ಖುಷಿ ಆಯ್ತು. ದಿನೇ ದಿನೇ ನೀರಿನ ಕೇಂದ್ರಗಳನ್ನು ಹೆಚ್ಚಿಸಿದೆ’ ಎಂದು ವಿವರಿಸಿದರು ಮುಜಾವರ್.

ಹೀಗೆ ಎರಡು ಮಡಕೆಗಳಿಂದ ಆರಂಭವಾದ ನೀರಿನ ಸೇವೆ ಈಗ ಡಬಲ್ ರೋಡ್, ದುರ್ಗಾ ಸರ್ಕಲ್, ಎಪಿಎಂಸಿ... ಜನ ಸಂದಣಿಯ ಸುಮಾರು 25-30 ಕಡೆ ವಿಸ್ತರಿಸಿದೆ. ಈ ಸೇವೆ ಸಾಂಗೋಪಸಾಂಗವಾಗಿ ಸಾಗಲು ತನ್ನೊಂದಿಗೆ ಮೂರ್ನಾಲ್ಕು ಹುಡುಗರನ್ನು ಕೂಲಿ ಕೊಟ್ಟು ನೇಮಿಸಿಕೊಂಡಿದ್ದಾರೆ ಮುಜಾವರ್. ನಿತ್ಯವೂ ಗಡಿಗೆಗಳನ್ನು ಸ್ವಚ್ಛಗೊಳಿಸಿ, 3-4 ಬಾರಿ ನೀರು ತುಂಬಿಸುತ್ತಾರೆ. ಹೀಗಾಗಿ ನಿತ್ಯ ಜನರಿಗೆ ಕುಡಿಯುವ ನೀರು ಸಿಗುತ್ತಿದೆ. ತಾಪಮಾನ ಹೆಚ್ಚಾದರೆ ನೀರು ಬೆಚ್ಚಗಾಗದಂತೆ ಮಡಕೆಗಳಿಗೆ ಬಟ್ಟೆ ಸುತ್ತುತ್ತಾರೆ.

ಬಿಡಾಡಿ ದನಗಳು, ಕುಡುಕರು, ಮಕ್ಕಳ ಹಾವಳಿಯಿಂದ ಮಡಕೆಗಳು ಒಡೆದು ಹೋಗಿವೆ. ಆಗ ಬೇಸರಿಸಿಕೊಳ್ಳದೇ, ತಡಮಾಡದೇ ಮತ್ತೊಂದು ಮಡಕೆ ವ್ಯವಸ್ಥೆ ಮಾಡುತ್ತಾರೆ. ‘ಮಡಕೆಗಳು ಪದೇ ಪದೇ ಒಡೆದು ಹೋಗುತ್ತಿದ್ದು, ಈ ಕಾರಣಕ್ಕೆ ಈಗ ನೀರಿನ ಕ್ಯಾನ್‍ಗಳನ್ನು ಇಡುತ್ತಿದ್ದೇನೆ’ ಎನ್ನುತ್ತಾರೆ ಮುಜಾವರ್. ‘ಮಡಿಕೆಗಳನ್ನು ಒಡೆದವರಿಗೆ ಹೊಸದನ್ನು ತಂದಿಡುವಂತೆ, ಇಲ್ಲವೇ ಅದರ ಖರ್ಚು ಭರಿಸುವಂತೆ ಹೇಳುತ್ತೇವೆ. ನಾವೆಲ್ಲಾ ಅವುಗಳನ್ನು ಜೋಪಾನದಿಂದ ನೋಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಕುಮಾರ್ ಜುಂಜಾ.

‘ನೀರಡಿಕೆ ಆದ ತಕ್ಷಣ ನಮಗೆಲ್ಲಾ ನೆನಪಾಗೋದು ಮುಜಾವರ್ ಅವರ ಈ ನೀರಿನ ಕೇಂದ್ರಗಳು. ಸ್ವಚ್ಛ ಹಾಗೂ ಸಿಹಿ ನೀರು ಪೂರೈಕೆ ಮತ್ತು ಸ್ವಚ್ಛತೆ ನಿರ್ವಹಣೆಯಲ್ಲಿ ಈತ ನಂಬರ್ ಒನ್’ ಎಂದು ಮುಜಾವರ್ ಸೇವೆಯನ್ನು ಶ್ಲಾಘಿಸುತ್ತಾರೆ ಗಜೇಂದ್ರಗಡದ ಅಮರೇಶ ಗೌರಿಮಠ್.

ದಿನಕ್ಕೆ ಕನಿಷ್ಠ 700-750 ಲೀಟರ್ ನೀರು ಖರ್ಚಾಗುತ್ತೆ. ಮುಜಾವರ್ ಪ್ರಾರಂಭದ ಎರಡು ವರ್ಷ ಫಿಲ್ಟರ್ ನೀರನ್ನು ಕೊಂಡು ಪೂರೈಸಿದರು. ನಂತರ ಇವರ ನಿಸ್ವಾರ್ಥ ಸೇವೆ ಕಂಡ ಕೇಕ್ ಕಾರ್ನಾರ್ ಬೇಕರಿ ಮಾಲಿಕ ಲೋಕಣ್ಣ ರಾಥೋಡ್ ಸಿಹಿ ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ. ಮುಜಾವರ್ ನೀರು ಸರಬರಾಜಿಗೆ ಟಂಟಂ ಗಾಡಿ ಮೀಸಲಿಟ್ಟು, ಅದಕ್ಕೆ ಸಿಂಟೆಕ್ಸ್ ಅಳವಡಿಸಿದ್ದಾರೆ.

‘ದಿನಕ್ಕೆ ಕನಿಷ್ಠ 600-700 ಖರ್ಚಿದೆ. ಕಷ್ಟನೋ ಸುಖನೋ ಅದು ನನಗೆ ಲೆಕ್ಕಕ್ಕಿಲ್ಲ. ಜನರೆಲ್ಲಾ ಬಹಳ ಚಲೋ ಮಾಡಿದೆ. ಪುಣ್ಯದ ಕೆಲಸ. ನೀರು ಕೊಟ್ಟ ನಿನ್ನ ಹೊಟ್ಟೆ ತಣ್ಣಗೆ ಇರಲಿ ಎಂದು ಮನಸಾರೆ ಹಾರೈಸುತ್ತಾರೆ. ಸಂತೋಷ ಆಗ್ತೈತೆ. ನನ್ನಿಂದ ನಾಲ್ಕು ಜನರ ಬಾಯಾರಿಕೆ ನೀಗತೈತೆ. ಅಷ್ಟು ಸಾಕು’ ಎನ್ನುತ್ತಾರೆ ಮುಜಾವರ್.

**

ಕೊಪ್ಪಳದಲ್ಲಿ ಅಮರ್ ನೀರಸೇವೆ...

ಕೊಪ್ಪಳದ ಆಶೋಕ್ ಸರ್ಕಲ್‍ನಲ್ಲಿ ಅಮರದೀಪ್ ಎಲೆಕ್ಟ್ರಿಕಲ್ & ಹಾರ್ಡ್‍ವೇರ್ ಅಂಗಡಿ ಇದೆ. ಇದರ ಎದುರು ವರ್ಷವಿಡಿ ಕುಡಿಯುವ ನೀರಿನ ಸೇವೆ ನಡೆಯುತ್ತೆ. ಸುತ್ತಲಿನ ಶಾಲಾ-ಕಾಲೇಜಿನ ಮಕ್ಕಳ, ದಾರಿಹೋಕರ ದಾಹ ನೀಗಿಸುವ ನೀರಿನ ಕೇಂದ್ರವಾಗಿದೆ. 

‘ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ಜನರಿಗೆ ಅನುಕೂಲ ಆಗಲೆಂದು ನೀರಿನ ವ್ಯವಸ್ಥೆ ಮಾಡಿದ್ದೆ. ಬೇಸಿಗೆ ನಂತರ ನಿಲ್ಲಿಸಿದೆ. ಆದರೆ ಶಾಲಾ ಮಕ್ಕಳು ಎಂದಿನಂತೆ ಬರುತ್ತಿದ್ದರು. ನೀರಿಗಾಗಿ ಪರದಾಡುತ್ತಿದ್ದರು. ಕರಳು ಚುರ್‌ ಅಂದಿತು. ತಕ್ಷಣ ಪುನಃ ಸೇವೆ ಆರಂಭಿಸಿದೆ’ ಎನ್ನುತ್ತಾರೆ ಮಾಲಿಕ ಅಮರಸಿಂಗ್ ರಾಜಪೂತ್.

ದಿನಕ್ಕೆ ಸುಮಾರು 600 ಲೀ ಫಿಲ್ಟರ್ ನೀರು, ₹ 1200 ಖರ್ಚಾಗುತ್ತೆ. ಸಾವಿರಕ್ಕೂ ಹೆಚ್ಚು ಜನ ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ‘ಹಳ್ಳಿಯಿಂದ ಓಡಾಡುತ್ತೇವೆ. ಹೋಗುವಾಗ, ಬರುವಾಗ, ಊಟಕ್ಕೆ ಬಿಟ್ಟಾಗ ಇಲ್ಲಿಗೇ ಬಂದು ನೀರು ಕುಡಿಯುತ್ತೇವೆ. ತುಂಬಾ ಉಪಕಾರ ಆಗಿದೆ’ ಎನ್ನುತ್ತಾರೆ ಬಾಯ್ಸ್ ಕಾಲೇಜ್‍ನ ವಿದ್ಯಾರ್ಥಿಗಳಾದ ಗ್ಯಾನಪ್ಪ ಮತ್ತು ಮಾರುತಿ.

‘ಇದರಲ್ಲಿ ಸಂತೋಷ, ಸಂತೃಪ್ತಿ ಸಿಗುತ್ತಿದೆ. ಖರ್ಚಾದರೂ ಚಿಂತೆಯಿಲ್ಲ. ಈ ಸೇವೆ ಶಾಶ್ವತವಾಗಿ ಮಾಡುತ್ತೇನೆ.’ ವಿನಯದಿಂದ ನುಡಿಯುತ್ತಾರೆ ಅಮರಸಿಂಗ್.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !