ಕೆರೆಗೆ ನೀರು ತುಂಬಿಸಲು ಆಗ್ರಹ: 3ನೇ ದಿನಕ್ಕೆ ಕಾಲಿಟ್ಟ ಧರಣಿ

7

ಕೆರೆಗೆ ನೀರು ತುಂಬಿಸಲು ಆಗ್ರಹ: 3ನೇ ದಿನಕ್ಕೆ ಕಾಲಿಟ್ಟ ಧರಣಿ

Published:
Updated:
Prajavani

ಹೂವಿನಹಿಪ್ಪರಗಿ (ಬಸವನಬಾಗೇವಾಡಿ): ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

‌ಸಂಕನಾಳ ಗ್ರಾಮದ ರೈತರು 15 ಎತ್ತಿನ ಬಂಡಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ‘ಕೃಷ್ಣಾ ಭಾಗ್ಯ ಜಲ ನಿಗಮದ ಮೇಲಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೂವಿನಹಿಪ್ಪರಗಿ ಭಾಗದ ವಿವಿಧ ಹಳ್ಳಿಗಳ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಗಗನ ಕುಸುಮವಾಗಿದೆ’ ಎಂದು ಆರೋಪಿಸಿದರು. 

‘ತಿಂಗಳ ಹಿಂದೆಯೇ ಅಧಿಕಾರಿಗಳು ಕಾಲುವೆ ಕಾಮಗಾರಿ ಪೂರ್ಣಗೊಳಿಸಿದ್ದರೆ, ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತಿತ್ತು. ಇಡೀ ಜಿಲ್ಲೆಗೆ ನೀರು ಹರಿಸುವ ಬಳೂತಿ ಜಾಕ್‌ವೆಲ್ ಸುಟ್ಟು ಹೊಗಿ ಅಪಾರ ಹಾನಿಯಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, 10 ದಿನದೊಳಗೆ ನೀರು ಕೊಡುವುದಾಗಿ ನಂಬಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸುಟ್ಟು ಹೋಗಿರುವ ಬಳೂತಿ ಜಾಕ್‌ವೆಲ್‌ನಲ್ಲಿ 15 ದಿನದೊಳಗೆ ಹೊಸ ಯಂತ್ರಗಳನ್ನು ಅಳವಡಿಸಿದರೆ ರೈತರಿಗೆ ನೀರು ಒದಗಿಸಲು ಸಾಧ್ಯವಿದೆ. ಅಧಿಕಾರಿಗಳು ರೈತರ ಕಷ್ಟ ಅರಿತು ಕಾರ್ಯಪ್ರವೃತ್ತರಾಗಬೇಕು. ಕೆರೆಗಳಿಗೆ ನೀರು ತುಂಬಿಸಿ ಜನ, ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹೂವಿನ ಹಿಪ್ಪರಗಿ ಘಟಕದ ಅಧ್ಯಕ್ಷ ಹಣಮಂತ ತೋಟದ, ಪವಾಡೆಪ್ಪ ಹಳೇಗೌಡರ, ಹಣಮಂತ್ರಾಯ ಗುಣಕಿ, ಕೃಷ್ಣಪ್ಪ ಬಮರೆಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಗಿರೀಶ ಶಿವಯೋಗಿ, ಬಸಣ್ಣ ಪೂಜಾರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !