ಗಿರಿಗಳಲ್ಲಿ ಗಂಗೆ...

ಮಂಗಳವಾರ, ಏಪ್ರಿಲ್ 23, 2019
31 °C

ಗಿರಿಗಳಲ್ಲಿ ಗಂಗೆ...

Published:
Updated:

ತುಮಕೂರಿನ ಸಿದ್ಧಗಂಗಾ ಮಠ ಜಗದ್ವಿಖ್ಯಾತ. ಒಮ್ಮೆ ಗೋಸಲ ಶ್ರೀ ಸಿದ್ದೇಶ್ವರರು ತಪೋ ನಿರತರಾಗಿದ್ದಾಗ ಹಣತೆ ಆರಿಹೋಯಿತಂತೆ, ಉರಿಸಲು ಏಣ್ಣೆ ಇರಲಿಲ್ಲ. ಶಿಷ್ಯ ತೋಂಟದ ಸಿದ್ದೇಶ್ವರರು ಪ್ರಾರ್ಥನೆಯಿಂದ ಬಂಡೆಯಲ್ಲಿ ಗಂಗೆ ತರಿಸಿ ಹಣತೆಗೆ ನೀರು ಎರೆದು ದೀಪ ಹಚ್ಚಿದರೆಂಬ ಐತಿಹ್ಯವಿದೆ. ಇನ್ನೊಂದು ಕಥೆಯ ಪ್ರಕಾರ ವೀರಶೈವ ಮಠ ಸ್ಥಾಪನೆಯ ಬಳಿಕ ನೂರೊಂದು ವಿರಕ್ತರು ಜಂಗಮ ದಾಸೋಹ ಕ್ರಿಯೆಗಳಲ್ಲಿ ತೊಡಗಿ ನಾಡು ಬೆಳಗಿಸಲು ಮುಂದಾದರು. ಒಂದು ದಿನ ಮಧ್ಯರಾತ್ರಿ ಗೋಸಲ ಸಿದ್ಧೇಶ್ವರರ ಹಿರಿಯ ಶಿಷ್ಯರೊಬ್ಬರಿಗೆ ಬಾಯಾರಿಕೆಯಾಯ್ತು. ಶಿಷ್ಯರ ಸಂಕಟವರಿತ ಸಿದ್ಧೇಶ್ವರರು ತಮ್ಮ ಪಾದದಿಂದ ಬಂಡೆಯನ್ನು ತುಳಿದರು, ಗಂಗೋದ್ಬವವಾಯ್ತು. ಸಿದ್ಧೇಶ್ವರರ ಪವಾಡದಿಂದ ಸ್ಥಳ ‘ಸಿದ್ಧಗಂಗೆ’ ಪ್ರಸಿದ್ಧಿ ಪಡೆಯಿತು.

ಕರಾವಳಿಯಿಂದ ಬರದ ಬಯಲು ನಾಡಿನವರೆಗೂ ಕಲ್ಲು ಬೆಟ್ಟದಲ್ಲಿ ಬೆರಗಿನ ನೀರ ನಿಲ್ದಾಣಗಳಿವೆ, ಪುರಾಣ ಪವಾಡಗಳ ಕಥೆಗಳಿವೆ. ನೀರಿಲ್ಲದ ಕೋಲಾರದಲ್ಲಿ ಕೊಳವೆ ಬಾವಿಯ ಆಳ 1950 ಅಡಿ ದಾಟಿದೆ. ಅಲ್ಲಿನ ಅಂತರಗಂಗೆ ಬೆಟ್ಟದ ತುದಿಯ ತೆರೆದ ಬಾವಿಗಳಲ್ಲಿ 25-30 ಅಡಿಗೆ ನೀರು ಇಂದಿಗೂ ನಗುತ್ತಿದೆ. ಉತ್ತರ ಕನ್ನಡದ ಯಾಣ ಪಶ್ಚಿಮ ಘಟ್ಟದ ನಿಸರ್ಗ ರಮ್ಯ ತಾಣ. ಇಲ್ಲಿನ ಕಲ್ಲು ಗುಹೆಯಲ್ಲಿ ಗಂಗಾ ಚಂಡಿಕಾ ಭೈರವೇಶ್ವರ ದೇವರ ಉದ್ಭವ ಮೂರ್ತಿಯ ಭುಜದಿಂದ ವರ್ಷವಿಡೀ ನೀರು ಹನಿ ಸೂಸುತ್ತಿರುತ್ತದೆ. ಅಬ್ಬರದ ಮಳೆಯಾಗಲಿ, ಕಡು ಬರವಾಗಲಿ ಒಂದೇ ಪ್ರಮಾಣದಲ್ಲಿ ನೀರು ಒಸರುತ್ತದೆ. ತ್ರಿಪುರಾ ಸುರರನ್ನು ಸಂಹರಿಸುವಾಗ ಸಹ್ಯಾಚಲದ ಮೇಲೆ ಬಿದ್ದ ಬೆಂಕಿ ಕಾಡನ್ನು ಸುಡತೊಡಗಿತು. ಆಗ ಶಿವ ಜಟೆಯಲ್ಲಿದ್ದ ಗಂಗೆಯನ್ನು ಕಳುಹಿಸಿ ಬೆಂಕಿ ಆರಿಸಿದನೆಂಬ ನಂಬಿಕೆಯಿದೆ. ಎಲ್ಲೂ ನೀರಿಲ್ಲದಾಗ ಕಲ್ಲಿನಲ್ಲಿ ಕಂಡ ನೀರು ಕಾಲದ ಅಚ್ಚರಿಯಾಗಿ ಗಮನ ಸೆಳೆದಿದೆ.


ಕಾಡು ಉಳಿಸಿ ನೀರು ಗಳಿಸಿ

ಎಲ್ಲೆಲ್ಲೂ ಮಳೆ ಮಲ್ಲೇಶ್ವರಾ !

ಕಲಬುರ್ಗಿ ಚಿಂಚೋಳಿಯ ಗೊಟ್ಟಂಗೊಟ್ಟಿಯಲ್ಲಿ ಭಕ್ಕಪ್ರಭುಗಳ ತಪಸ್ಸಿನ ತಾಣವಿದೆ. ಇಲ್ಲಿನ ಸಿದ್ಧಕುಂಡದಲ್ಲಿ ಕಲ್ಲಿನಿಂದ ಹನಿ ನೀರು ಸದಾ ಬೀಳುತ್ತಿರುತ್ತದೆ. ತೀವ್ರ ಜಲಕ್ಷಾಮದಿಂದ ಬಳಲಿದ 1972 ರ ಭೀಕರ ಬರಸಾಥ್ ಬರದಲ್ಲಿಯೂ ನೀರಿತ್ತೆಂಬ ದಾಖಲೆಯಿದೆ. ಇಲ್ಲಿನ ಲಮಾಣಿಗರಲ್ಲಿ ಗುಡ್ಡದ ಮರ ನಂಬಿಕೆ ವಿಶೇಷವಿದೆ. ಬೆಟ್ಟದಲ್ಲಿ ಕಾಣುವ ‘ಸ್ವಾಮಿ ಗಿಡ’ ಚಿಗುರು ಕೆಂಪು, ಕಲ್ಲುಸಾಗಡೆಯೆಂಬ ಈ ವೃಕ್ಷವನ್ನು ಕಾಲಲ್ಲಿ ಮೆಟ್ಟುವ ನೇಗಿಲು, ಕುಂಟೆ ಮತ್ತಿ ಕೃಷಿ ಉಪಕರಣ ತಯಾರಿಗೆ ಬಳಸುವುದಿಲ್ಲ. ಮರ ಕಡಿಯಲು ಅವಕಾಶವಿಲ್ಲ. ಚಿಗುರು ಕೆಂಪು ಕಾವಿಯಾಗಿ ಕಾಣಿಸಿದ್ದು ಸಂರಕ್ಷಣೆಯ ಭಕ್ತಿ ಮೊಳೆತಿದೆ. ಇನ್ನು ತಾರೆ ಗಿಡ ಕಡಿಯಲ್ಲ. ಮಾತ್ರವಲ್ಲ, ಅದರ ಹತ್ತಿರವೂ ಜನ ಕೂರುವುದಿಲ್ಲ. ಶನಿ ದೇವರ ಆವಾಸದ ಈ ಶಾಂತಿಮರದಿಂದ ಶನಿಕಾಟ ಶುರುವಾಗುವ ಭಯ! ಕಲ್ಲು, ಮರ, ನೀರಿರುವ ಬೆಟ್ಟದ ಸರಹದ್ದು ಪವಿತ್ರ ನೆಲೆಯಾಗಿ ದೇವರ ಕಾಡಾಗಿದೆ, ನೀರಿಗಾಗಿ ಕಾಡುಳಿಸುವ ಸಂರಕ್ಷಣೆಯ ಸೂತ್ರವಿದೆ. ನೂರು ವರ್ಷದ ಹಿಂದೆ ಕರಾವಳಿಗೆ ಬಂದ ಬ್ರಿಟಿಷ್ ಕಲೆಕ್ಟರ್ ಕಾಲಿನ್ಸ್ ನೀರಿರುವ ತಾಣಗಳನ್ನು ಜನ ಪೂಜನೀಯವೆಂದು ಭಾವಿಸುತ್ತಾರೆಂದು ಗುರುತಿಸಿದ್ದಾರೆ.

ಶಿಖರದಿಂದ ವೈರಿ ಸೈನ್ಯಗಳ ವೀಕ್ಷಣೆಗೆ ರಾಜರು ಬತ್ತೇರಿಗಳನ್ನು ನಿರ್ಮಿಸಿದಂತೆ ಗುಡ್ಡಗಳಲ್ಲಿ ಗುಡಿಯಿದೆ, ಪರಿಸರ ಅವಲೋಕನಕ್ಕೆ ಪರಂಪರೆಯ ಅವಕಾಶವಿದೆ. ಕೊಪ್ಪಳದ ಮಳೆ ಮಲ್ಲೇಶ್ವರ ದೇಗುಲ ಇಂದ್ರಕೀಲ ಪರ್ವತವೆಂದು ಹೆಸರಾಗಿದೆ. ಅರ್ಜುನ ಪಾಶುಪತಾಸ್ತ್ರ ಪಡೆಯಲು ಇಲ್ಲಿ ತಪ್ಪಸ್ಸು ಮಾಡಿದನು. ಪರಮೇಶ್ವರ ಹಂದಿಯ ರೂಪದಲ್ಲಿ ಪರೀಕ್ಷೆಗೆ ಬಂದನಂತೆ ! ತಪೋಭಂಗವಾದ್ದರಿಂದ ಸಿಟ್ಟಿಗೆದ್ದ ಅರ್ಜುನ ಹಂದಿಗೆ ಬಾಣ ಬಿಡಲು ಬಾಗಿದಾಗ ‘ನೋಡಿದೆಯಾ ಪಾರ್ವತಿ’ ಎಂದು ಮಾರುವೇಷದ ಶಿವ ಉಚ್ಚರಿಸಿದಾಗ ಅರ್ಜುನ ಶಿವನನ್ನು ಗುರುತಿಸುತ್ತಾನೆ. ಆಗ ಬಾಯಾರಿದ ಶಿವನಿಗೆ ಪಾರ್ವತಿ ನೀರು ನೀಡಿದ ತಾಣವೆಂದು ಮಲ್ಲೇಶ್ವರ ಶಕ್ತಿ ಸ್ಥಳವಾಗಿದೆ. ವರ್ಷವಿಡೀ ಕಲ್ಲು ಬಂಡೆಯಿಂದ ಸಿಹಿ ನೀರು ಬರುತ್ತಿದೆ, ಜನ ಸಿಹಿ ನೀರಿಗೆ ಈ ಬೆಟ್ಟ ಏರುವುದನ್ನು ನೋಡಬಹುದು.

ಬರದಿಂದ ತತ್ತರಿಸಿ ಕೆರೆಗಳು ಒಣಗಿ ಕೊಳವೆ ಬಾವಿಯ ನೀರು ನಂಬಿದ ಹಿರೆಕೆರೂರಿನಲ್ಲಿ ಕಣಿವೆ ಸಿದ್ದೇಶ್ವರ ಗುಡ್ಡವಿದೆ. ಇಲ್ಲಿ ವರ್ಷವಿಡೀ ಪುಟ್ಟ ತೊರೆ ಹರಿಯುತ್ತಿದೆ, ಆದರೆ ಅದು ಗುಡ್ಡದ ಕೆಳಗಡೆ ಕಾಣಿಸುವುದಿಲ್ಲ. ಬನದ ಹುಣ್ಣಿಮೆಯ ಚೌಡೇಶ್ವರಿ ಜಾತ್ರೆಯ ದಿನ ಸಹಸ್ರಾರು ಜನ ಬೆಟ್ಟದಲ್ಲಿ ಸೇರುತ್ತಾರೆ. ‘ಗುಪ್ತಗಂಗೆ’ ಮಹಿಮೆಗೆ ತಲೆ ಬಾಗುತ್ತಾರೆ. ಬೀದರಿನ ‘ಗಾಯ್‍ಮಾತಾ’ ಆಕಳ ಬಾಯಲ್ಲಿ ನೀರು ಚಿಮ್ಮುವ ನೆಲೆ. ದೇಗುಲದ ಹಿಂಭಾಗ ಗುಮ್ತಾಪುರ, ಹೊನ್ನಿಕೇರಿಯ ಸುಮಾರು 885 ಎಕರೆ ಮೈಲಾರ ಲಿಂಗನ ಭೂಮಿ ಸಂರಕ್ಷಿತ ಅರಣ್ಯವಿದೆ.

40 ವರ್ಷಗಳಿಂದ ದೇಗುಲದಲ್ಲಿ ನೆಲೆಸಿರುವ ಖಾನಾಪುರದ ಕಾಶಿನಾಥ (52)ರ ಪ್ರಕಾರ ಒಮ್ಮೆಯೂ ನೀರು ಬತ್ತಿಲ್ಲವಂತೆ! ಊರೆಲ್ಲ ಜಲಕ್ಷಾಮ ಅನುಭವಿಸುತ್ತಿದ್ದರೂ ಜಲಶಕ್ತಿಯಾಗಿ ಗಾಯ್‍ಮಾತಾ ಸಾಕ್ಷಿಯಿದೆ. ಸಿಖ್ ಧರ್ಮಸ್ಥಾಪಕರಾದ ಶ್ರೀ ಗುರು ನಾನಕರ ತಪಸ್ಸಿನ ನೆಲೆ ಬೀದರಿನ ನಾನಕ್ ಝರಾ ಕೂಡಾ ನೀರಿನ ಮೂಲಕ ಗಮನ ಸೆಳೆಯುತ್ತದೆ. ಬದಾಮಿಯ ಮಹಾಕೂಟದ ಪುಷ್ಕರಣಿಯ ಒರತೆ, ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಮಲೆಬೆನ್ನೂರಿನ ಅರಸಾಳ, ಬೈಲಹೊಂಗಲದ ಸೊಗಲ, ಸೌದತ್ತಿ ಹೀಗೆ ನೂರಾರು ಗುಡ್ಡದ ಗಂಗೆಯರು ಬರದ ರಾಜ್ಯದ ಭಕ್ತಿ ಸೆಲೆಯಲ್ಲಿದ್ದಾರೆ.


ಪರ್ವತೇಶ್ವರನ ನೆಲೆಯ ಗಂಗೆ

ಕಾಲು ಬುಡದ ಕಾಡುಳಿಸಿ, ಕೈಲಾಸದ ಗಂಗೆ ಬರುವಳು

ಬೆಟ್ಟದಲ್ಲಿ ನೀರು ಉಳಿಯಲು ಮೂಲ ಕಾಡು ಬೇಕು. ಕುಮಟಾ ಬ್ರಹ್ಮೂರಿನ ಪರ್ವತೇಶ್ವರ ದೇಗುಲದ ತೊರೆ ಇದನ್ನು ಹೇಳುತ್ತಿದೆ. ಒಮ್ಮೆ ಮರವಿಲ್ಲದಿದ್ದರೆ ಕಲ್ಲುಬಂಡೆ, ಹುಲ್ಲು, ಮಣ್ಣು ನಾಶ ನಿಲ್ಲಿಸಿದರೂ ನೀರುಳಿಯುತ್ತದೆ. ಭಕ್ತಿ ತಾಣಗಳ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತ ರಸ್ತೆ, ಛತ್ರ, ಕೊಳವೆ ಬಾವಿ ಕೊರೆಸುತ್ತ ಹೋದಂತೆ ಗುಡ್ಡದ ಗಂಗೆ ಮಾಯವಾದ ಉದಾಹರಣೆಗಳಿವೆ. ಕಲ್ಲುಪದರಗಳಲ್ಲಿ ಶೇಖರಣೆಯಾದ ನೀರು ಹನಿ ಹನಿಯಾಗಿ ವರ್ಷವಿಡೀ ಜಿನುಗುತ್ತ ಪವಿತ್ರ ನಂಬಿಕೆ ಬೆಟ್ಟದಲ್ಲಿ ಜನಿಸಿ ಊರಿಗೆಲ್ಲ ಭಕ್ತಿಯ ಸಂದೇಶ ಹಂಚಿದೆ. ಮಳೆ ನೀರು ಹಿಡಿದ ಬಂಡೆಗಳು ಅಂತರ್ಜಲ ಏರಿಕೆಗೆ ನೆರವಾಗಿವೆ. ರಾಜ್ಯದ ಪ್ರಪ್ರಥಮ ಕೆರೆ ಕದಂಬರ ಗುಡ್ಡತಟಾಕ ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ನಿರ್ಮಾಣವಾಗಿದೆ. ಕೊಪ್ಪಳದ ಹುಲಿಕೆರೆ, ಮಂಡ್ಯ ಮೇಲುಕೋಟೆಯ ಪುಷ್ಕರಣಿಗಳನ್ನು ಈ ಹಿನ್ನಲೆಯಲ್ಲಿ ನೋಡಬಹುದು.

50 ವರ್ಷ ಹಿಂದೆ ಮಳೆ , ಒಸರು ಜಲ, ಒರತೆ ನಂಬಿ ಜನಜೀವನ, ಬೇಸಾಯ ಬದುಕಿದೆ. ನೀರಿನ ಬಳಕೆ ಹೆಚ್ಚಿದಂತೆ ಅಣೆಕಟ್ಟು, ಕೊಳವೆ ಬಾವಿಗಳಿಂದ ನೀರೆತ್ತುತ್ತ ಓಟ ಸಾಗಿದೆ. ಚೊಂಬಿನಂತೆ ಆಳವಾಗಿದ್ದ ಕೆರೆಗಳು ಹೂಳು ತುಂಬಿ ತಟ್ಟೆಯಂತೆ ಬದಲಾಗಿವೆ. ವಾಡಿಕೆಯ ಎರಡು ಪಟ್ಟು ಜಾಸ್ತಿ ಮಳೆ ಸುರಿದರೂ ನಮಗೆ ನೀರು ಸಾಲದಷ್ಟು ಬಳಕೆ ಹೆಚ್ಚಿದೆ. ರಾಜ ಮಹಾರಾಜರು ಗಿರಿ ದುರ್ಗ, ವನದುರ್ಗಗಳಲ್ಲಿ ನೀರು ಹಿಡಿದು ಗೆದ್ದವರು ಕೋಟೆ ಬಾವಿ, ಕೆರೆ ಕಟ್ಟಿದವರು. ಪರಿಸರ ವೀಕ್ಷಣೆಯ ಪವಿತ್ರ ಬತ್ತೇರಿಗಳಂತಿರುವ ಗುಡ್ಡದ ದೇಗುಲಗಳಲ್ಲಿ ಕಣ್ಣುಮುಚ್ಚಿ ಕೈ ಮುಗಿದಿದ್ದೇವೆ. ಈಗ ಸ್ವಲ್ಪ ಕಣ್ತೆರೆದು ಸುತ್ತಲಿನ ಪರಿಸರ ಓದಬೇಕಾಗಿದೆ. ಪರಿಸರ ನಾಶದ ಪ್ರಹಾರಕ್ಕೆ ಗುಡ್ಡಕ್ಕೆ ಗಾಯವಾಗಿ ಜಲ ಮಾಯವಾಗಿದೆ, ಬರದ ಗತಿ ಭಯ ಹುಟ್ಟಿಸುತ್ತಿದೆ. ಗಿರಿ ಕಾಯಲು ಮಲೆ ಮಹದೇಶ್ವರರಿಂದ ಕಷ್ಟವಾಗಿದೆ. ಕೈಲಾಸದ ಗಂಗೆಯನ್ನು ಕರೆತರಲು ಕೈಮುಗಿಯುವುದಕ್ಕಿಂತ ಕಾಲುಬುಡದ ಕಾಡುಳಿಸಲು ಕೈಜೋಡಿಸುವುದು ಮುಖ್ಯವಿದೆ. 

ಜಲ ವರ್ಷ 2019: ಸೋಲು ಸವಾಲು

ಇಂದು ರಾಜ್ಯದಲ್ಲಿ ನೀರಿಗೆ ಬೆಂಕಿ ಬಿದ್ದಿದೆ. ಈಗ 156 ತಾಲೂಕುಗಳಲ್ಲಿ ಬರ ಆವರಿಸಿದೆ. ದೇಶದ ಎರಡನೇ ದೊಡ್ಡ ಮರುಭೂಮಿಯಾಗಿ ರಾಜ್ಯ ಹೀನಾವಸ್ಥೆಗೆ ತಲುಪುತ್ತಿದೆ.

ಇದೇ ಸಂದರ್ಭದಲ್ಲಿ  ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2019 ಅನ್ನು ‘ಜಲವರ್ಷ’ವೆಂದು ಘೋಷಿಸಿದೆ. ಬರ ಸಂಕಟದ ಮಧ್ಯೆ ಚುನಾವಣೆಯ ಅವಸರದಲ್ಲಿ ಮುಖ್ಯಮಂತ್ರಿಗಳಿಂದ ಇದು ಉದ್ಘಾಟನೆಯಾಗಿದೆ. ಜಲಾಮೃತ ಕಾರ್ಯಕ್ರಮದ ಮೂಲಕ ಜಲಸಾಕ್ಷರತೆ, ಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರೀಕಣದ ಮೂಲಕ ಜಲಕ್ಷಾಮದ ವಿರುದ್ಧ ಹೋರಾಡುವ ಗುರಿಯಿದೆ. ಆದರೆ ಈಗ ಚುನಾವಣೆ ಶುರುವಾಗಿದೆ. ಏರುತ್ತಿರುವ ಜಲ ಬವಣೆಗೆ ಭಾಷಣ, ಘೋಷಣೆಗಿಂತ ಕೆಲಸ ಮಾಡುವವರು ಬೇಕಾಗಿದ್ದಾರೆ. ಜಲವರ್ಷ ಸಂದರ್ಭದಲ್ಲಿ ಸರ್ಕಾರಿ, ಸಮುದಾಯದ ಜಲಕಾಯಕ ಅವಲೋಕನ ಅಗತ್ಯವಿದೆ. ಮಳೆ ಬಂದರೆ ನೀರಾಗುತ್ತದೆ, ಹಣವಿದ್ದರೆ ಯೋಜನೆಯಾಗುತ್ತದೆಂಬ ಆಡಳಿತಕ್ಕೆ ಮೊದಲು ಜಲಸಾಕ್ಷರತೆಯ ಪಾಠ ಅಗತ್ಯವಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !