ಜಲಮಂಡಳಿ ಕೊಟ್ಟರೂ ವಾಲ್ವ್‌ಮ್ಯಾನ್‌ ಕೊಡಲ್ಲ!

ಮಂಗಳವಾರ, ಮಾರ್ಚ್ 19, 2019
33 °C
ದುಡ್ಡು ಕೊಟ್ಟವರ ಬೀದಿಗಳ ಕಡೆಗೆ ತಿರುಗುತ್ತೆ ನೀರು ಪೂರೈಕೆ ವಾಲ್ವ್‌

ಜಲಮಂಡಳಿ ಕೊಟ್ಟರೂ ವಾಲ್ವ್‌ಮ್ಯಾನ್‌ ಕೊಡಲ್ಲ!

Published:
Updated:
Prajavani

ಬೆಂಗಳೂರು: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯು ಜಲಮಂಡಳಿಯ ಬಹುತೇಕ ವಾಲ್ವ್‌ಮ್ಯಾನ್‌ಗಳ ಕಾರ್ಯನಿರ್ವಹಣೆಗೆ ಒಪ್ಪುತ್ತದೆ. ಇವರಿಗೆ ಒಂದಿಷ್ಟು ಲಂಚದ ‘ನೈವೇದ್ಯ’ ಅರ್ಪಿಸದ ಹೊರತು, ಕಾವೇರಿ ನೀರು ಮನೆಗಳಿಗೆ ಬರುವುದಿಲ್ಲ.

ನಗರದ ಬಹುತೇಕ ಬಡಾವಣೆಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ದೂರಿದು.

ಪ್ರತಿತಿಂಗಳು ಮಾಮೂಲಿಯನ್ನು ಕೊಡುವ ಗ್ರಾಹಕರಿಗೆ ವಾಲ್ವ್‌ಮ್ಯಾನ್‌ಗಳು ಯಾವುದೇ ತೊಂದರೆ ನೀಡದೆ ನೀರು ಬಿಡುತ್ತಾರೆ. ‘ಸಂದಾಯ’ ಮಾಡದ ಅಪಾರ್ಟ್‌ಮೆಂಟ್‌ ಸಮುಚ್ಚಯ, ಕ್ವಾರ್ಟರ್ಸ್‌ ಹಾಗೂ ಹೊಟೇಲ್‌ಗಳಿಗೆ ನೀರು ನಿಲ್ಲಿಸಿ, ಪಾವತಿಸಬೇಕಾದ ಮೊತ್ತದ ಕುರಿತು ಸೂಚನೆ ನೀಡುತ್ತಾರೆ.

‘ಒಂದಿಷ್ಟು ಹಣ ಕೊಟ್ಟರೆ ಕಾವೇರಿ ನೀರು ತಪ್ಪದೇ ಬರುತ್ತದೆ. ವಾಲ್ವ್‌ಮ್ಯಾನ್‌ ಜತೆ ವಾಗ್ವಾದಕ್ಕೆ ಇಳಿದರೆ, ಬರುವ ನೀರು ಬಂದ್‌ ಆಗಿ, ದುಬಾರಿ ದರದ ಟ್ಯಾಂಕರ್‌ ನೀರು ತರಿಸಬೇಕಾಗುತ್ತದೆ. ಹಾಗಾಗಿ ತಿಂಗಳಿಗೆ ಒಂದೆರಡು ಸಾವಿರ ಕೈಗಿಡುತ್ತೇವೆ’ ಎಂದು ಜೀವನ್‌ ಬಿಮಾನಗರದ ವಸತಿ ಸಮುಚ್ಚಯವೊಂದರ ಮೇಲ್ವಿಚಾರಕರೊಬ್ಬರು ತಿಳಿಸಿದರು.

‘ನಮ್ಮ ಮನೆಗೆ ಮೂರ್ನಾಲ್ಕು ತಿಂಗಳುಗಳಿಂದ ಸರಿಯಾಗಿ ನೀರು ಬರುತ್ತಿಲ್ಲ. ಈ ಕುರಿತು ವಾಲ್ವ್‌ಮ್ಯಾನ್‌ನನ್ನು ಕೇಳಿದರೆ ಲೈನ್‌ ರಿಪೇರಿ ನಡೆಯುತ್ತಿದೆ. ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ನೀರಿಲ್ಲ. ಹಾಗಾಗಿ ನೀರಿನ ಕೊರತೆ ಇದೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಅದೇ ವೇಳೆ, ನಮ್ಮ ಪಕ್ಕದ ಬೀದಿಯ ಮನೆಗಳಿಗೆ ನೀರು ಹೋಗುತ್ತಿರುತ್ತದೆ’ ಎಂದು ಸುಂಕದಕಟ್ಟೆಯ ನಿವಾಸಿಯೊಬ್ಬರು ತಿಳಿಸಿದರು. 

‘ಕಾಸು ಕೊಡದಿದ್ದರೆ, ವಾಲ್ವ್‌ಅನ್ನು ಬಹುತೇಕ ಮುಚ್ಚಿ ನೀರಿನ ಹರಿವನ್ನು ನಿಯಂತ್ರಣದಲ್ಲಿ ಇಡುತ್ತಾರೆ. ಇದರಿಂದ ಒಂದು ಗಂಟೆ ನೀರು ಬಿಟ್ಟರೂ, ಮೂರು ಬಕೆಟ್‌ ನೀರು ಸಿಗುವುದಿಲ್ಲ. ಕೇಳಿದರೆ, ‘ನಿಮ್ಮ ಪ್ರದೇಶ ಎತ್ತರದಲ್ಲಿದೆ. ನೀರು ಜೋರಾಗಿ ಬರಲು ಸ್ವಲ್ಪ ಸಮಯ ಬೇಕು ಎಂಬ ಸಿದ್ಧ ಉತ್ತರ ಕೊಟ್ಟು ಹೋಗುತ್ತಾರೆ. ನಮ್ಮ ಸಂಪ್‌ ತುಂಬುವಷ್ಟರಲ್ಲೇ ನೀರು ಸರಬರಾಜು ನಿಂತಿರುತ್ತದೆ’ ಎಂದು ಮತ್ತೊಬ್ಬ ನಿವಾಸಿ ಕಷ್ಟ ಹೇಳಿಕೊಂಡರು.

‘ದುಡ್ಡು ಕೊಡದಿದ್ದರೆ, ಕೆಲವೊಮ್ಮೆ ಮಧ್ಯರಾತ್ರಿಯ ಒಂದರ್ಧ ಗಂಟೆ ಮಾತ್ರ ನೀರು ಬಿಡುತ್ತಾರೆ. ಕೇಳಿದರೆ ‘ರಾತ್ರಿಪೂರ್ತಿ ಸಪ್ಲೈ ಕೊಟ್ಟಿದ್ದೇವಲ್ಲ. ನಿಮಗೆ ಇಷ್ಟು ಬಿಟ್ಟಿದ್ದೆ ಜಾಸ್ತಿ, ನಾಳೆ ನೋಡೋಣ’ ಎಂಬ ಉತ್ತರ ನೀಡುತ್ತಾರೆ’ ಎಂದು ಈಜೀಪುರದ ನಿವಾಸಿಯೊಬ್ಬರು ತಿಳಿಸಿದರು. 

‘ಈ ವಾಲ್ವ್‌ಮ್ಯಾನ್‌ಗಳು ಕೆಲವೊಮ್ಮೆ ಟ್ಯಾಂಕರ್‌ ನೀರು ಮಾರಾಟಗಾರರ ಆಮಿಷಕ್ಕೆ ಒಳಗಾಗಿ ಕಾವೇರಿ ನೀರು ಸರಬರಾಜನ್ನು ನಿಯಂತ್ರಿಸುತ್ತಾರೆ. ನೀರಿನ ಕೃತಕ ಬೇಡಿಕೆ ಸೃಷ್ಟಿಸಿ ಟ್ಯಾಂಕರ್‌ ನೀರನ್ನು ಅನಿವಾರ್ಯವಾಗಿ ಕೊಳ್ಳುವಂತೆ ಮಾಡುತ್ತಾರೆ’ ಎಂದು ಹಲಸೂರಿನ ನಿವಾಸಿಯೊಬ್ಬರು ಹೇಳಿದರು.

‘ಬಾಣಸವಾಡಿಯ 2ನೇ ಅಡ್ಡರಸ್ತೆಯ ಬದಿಯಲ್ಲಿ ಪಾಲಿಕೆಯ ಕೊಳವೆಬಾವಿಯಿದೆ. ಇಲ್ಲಿಂದ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ತುಂಬಿಸಿ, ಉಚಿತವಾಗಿ ನೀರು ಬಿಡಲು ವಾಲ್ವ್‌ಮ್ಯಾನ್‌ ಇದ್ದಾರೆ. ಅವರು ದುಡ್ಡು ಕೊಟ್ಟವರ ಮನೆಗಳಿಗೆ ಮಾತ್ರ ನೀರು ಹರಿಸುತ್ತಾರೆ’ ಎಂದು ಸ್ಥಳೀಯರೊಬ್ಬರು ದೂರಿದರು.
*

ನೀರಿಗಾಗಿ ಮದ್ಯದ ಲಂಚ

‘ರಕ್ಷಣಾ ಇಲಾಖೆಯ ಕ್ವಾರ್ಟರ್ಸ್‌ಗಳಿಗೆ ನೀರು ಪೂರೈಕೆ ನೋಡಿಕೊಳ್ಳುವ ವಾಲ್ವ್‌ಮ್ಯಾನ್‌ಗಳು ಇಲಾಖೆಯ ಕ್ಯಾಂಟಿನ್‌ಗಳಲ್ಲಿ ಮಾರಾಟವಾಗುವ ಮದ್ಯಕ್ಕೂ ಬೇಡಿಕೆ ಇಡುತ್ತಾರೆ’ ಎಂದು ಸಿ.ವಿ.ರಾಮನ್‌ ನಗರದ ಕ್ವಾರ್ಟರ್ಸ್‌ ಒಂದರ ಪಂಪ್‌ಹೌಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

‘ನಮ್ಮ ಕ್ವಾರ್ಟರ್ಸ್‌ ವಾಸಿಗಳಿಗಾಗಿ ಪಡೆಯುವ ನೀರಿಗೆ ತಿಂಗಳಿಗೆ ಸರಾಸರಿ ₹ 2 ಲಕ್ಷದ ವರೆಗೂ ಶುಲ್ಕ ಕಟ್ಟುತ್ತೇವೆ. ಜತೆಗೆ ವಾಲ್ವ್‌ಮ್ಯಾನ್‌ಗೆ ತಿಂಗಳಿಗೆ ₹ 3,000 ಕೊಡುತ್ತೇವೆ. ಇದಲ್ಲದೆ ವಿಸ್ಕಿ, ರಮ್‌ ಮತ್ತು ಓಡ್ಕಾ ಬಾಟಲಿಗಳನ್ನು ಲಂಚವಾಗಿ ನೀಡುತ್ತೇವೆ’ ಎಂದು ಅವರು ಹೇಳಿದರು.
 

ಉಲ್ಲಾಳ ನೀರಿನ ಸಮಸ್ಯೆ ಬಹಳ

ಬೇಸಿಗೆಯ ಬಿಸಿ ಏರುತ್ತಿರುವ ಬೆನ್ನಲ್ಲೇ ಉಲ್ಲಾಳು ಉಪನಗರದಲ್ಲಿ ನೀರಿಗೆ ಹಾಹಾಕಾರ ಹೆಚ್ಚುತ್ತಿದೆ.

ಮೂರು ತಿಂಗಳಿನಿಂದ ಉಲ್ಲಾಳು ಬಸ್ ನಿಲ್ದಾಣ ಸುತ್ತಮುತ್ತಲ ಪ್ರದೇಶದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಬಸ್ ನಿಲ್ದಾಣದ ಬಳಿಯಲ್ಲೇ ಇರುವ ನಲ್ಲಿಗಳ ಹತ್ತಿರ ಪ್ರತಿದಿನ ಹತ್ತಾರು ಖಾಲಿ ಕೊಡಗಳು ನೀರಿಗಾಗಿ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ನೀರಿಗಾಗಿ ಮಹಿಳೆಯರು–ಮಕ್ಕಳು ಕೆಲಸ ಕಾರ್ಯಗಳನ್ನು ಬಿಟ್ಟು ಬಿರು ಬಿಸಿಲಿನಲ್ಲಿ ಕಾಯುವಂತಾಗಿದೆ.

‘ಮೂರು ತಿಂಗಳಿನಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ. 3–4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಬರುವ ನೀರು ದಿನವೊಂದಕ್ಕೆ ಸಾಲದಾಗಿದೆ’ ಎಂದು ನಾಗರಿಕರು ಅವಲತ್ತುಕೊಂಡಿದ್ದಾರೆ.

‘ನನಗೆ ಅನಾರೋಗ್ಯ ಕಾಡುತ್ತಿದೆ. ಮನೆಯ ನಲ್ಲಿಗೆ ನೀರು ಬರುತ್ತಿಲ್ಲ. ಬೀದಿಯ ನಲ್ಲಿಗೆ ಬಂದರೂ ನೀರು ಸಿಗದಂತಾಗಿದೆ.  ಹಣ ಕೊಟ್ಟು ನೀರು ಪಡೆಯುವಷ್ಟು ಶಕ್ತರಲ್ಲ ನಾವು. ಏನು ಮಾಡುವುದು ತಿಳಿಯದಾಗಿದೆ’ ಎಂದು ವೃದ್ಧೆ ಲಕ್ಷ್ಮಮ್ಮ ಬೇಸರ ವ್ಯಕ್ತಪಡಿಸಿದರು.

ಗೃಹಿಣಿ ಛಾಯಾ,‘ಬಿಬಿಎಂಪಿಯಿಂದ ಟ್ಯಾಂಕರ್‌ ಮೂಲಕ ದಿನಕ್ಕೆ ಮೂರು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ಚಾಲಕರು ಬೇಕಾದವರಿಗೆ ನೀರಿನ ಭಾಗ್ಯ ಕಲ್ಪಿಸುತ್ತಿದ್ದಾರೆ. ಉಳಿದವರಿಗೆ 4 ಬಿಂದಿಗೆ ನೀರು ಸಿಗಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಪಾಲಿಕೆಯ ಟ್ಯಾಂಕರ್‌ ನೀರನ್ನು ತುಂಬಿಸಿಕೊಳ್ಳಲು ಸಹ ಕೆಲವೊಮ್ಮೆ ಹಣವನ್ನು ಪಾವತಿಸಬೇಕಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು. ಮಾಂಸದ ವ್ಯಾಪಾರಿ ಗೌಸ್‌, ‘ಅಂಗಡಿ ಶುಚಿಮಾಡಲು ನೀರು ಸಿಗುತ್ತಿಲ್ಲ. ದಿನಾಲೂ ದುಡ್ಡು ಕೊಟ್ಟು ನೀರು ಖರೀದಿ ಮಾಡಿದರೆ ನಾವು ಬದುಕುವುದಾದರೂ ಹೇಗೆ’ ಪ್ರಶ್ನಿಸಿದರು.

‘ಶನಿ ಮಹಾತ್ಮ ದೇವಾಲಯದ ಬೀದಿಗಳು, ಚರ್ಚ್ ಬಳಿಯ ಬೀದಿಗಳಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ’ ಎಂದು ಅವರು ಹೇಳಿದರು.

ಪ್ರತಿ ಡ್ರಮ್ ನೀರಿಗೆ ₹ 50 : ನೀರಿನ ಬೇಡಿಕೆಯನ್ನು ಲಾಭಕ್ಕೆ ಬಳಸಿಕೊಂಡಿರುವ ಟ್ಯಾಂಕರ್‌ ನೀರು ಸರಬರಾಜುದಾರರು ಪ್ರತಿ ಡ್ರಮ್ ನೀರಿಗೆ ₹ 50 ನೀಡಲು ಒತ್ತಾಯಿಸುತ್ತಾರೆ. ಟ್ಯಾಂಕರ್‌ವೊಂದಕ್ಕೆ ₹ 500 ನಿಗದಿಪಡಿಸಿದ್ದಾರೆ. ಕಾಸಿದ್ದವರು ಹಾಗೂ ಸಂಪ್ ಸೌಲಭ್ಯ ಹೊಂದಿರುವವರು ಟ್ಯಾಂಕರ್‌ ನೀರು ಪಡೆದರೆ ಉಳಿದವರು ನಿತ್ಯ ಗೋಳು ಅನುಭವಿಸುತ್ತಿದ್ದಾರೆ.

 

ಎಲ್ಲೆಲ್ಲಿದೆ ನೀರಿನ ಸಮಸ್ಯೆ?

 

ಶ್ರೀನಿವಾಸಪುರ, ಯಲಹಂಕ: 

ಕಳೆದ ನವೆಂಬರ್‌ನಿಂದ ಕೊಳವೆಬಾವಿ ರಿಪೇರಿಯಂದು ನೀರು ಕೊಡಲಿಲ್ಲ. ಕಾವೇರಿ ನೀರಿನ ಕೊಳವೆ ಮಾರ್ಗ ಜೋಡಿಸಿ ಒಂದು ವರ್ಷ ಆಗಿದೆ. ಇನ್ನೂ ನೀರೇ ಬಂದಿಲ್ಲ. ಜನರು ದುಪ್ಪಟ್ಟು ದರದ ಟ್ಯಾಂಕರ್‌ ನೀರನ್ನು ಅವಲಂಬಿಸಿದ್ದಾರೆ. ಪಾಲಿಕೆ ಪ್ರತಿವರ್ಷ ಶೇ 20ರಷ್ಟು ತೆರಿಗೆ ಹೆಚ್ಚಳ ಮಾಡುತ್ತಿದೆ ಹೊರತು ಮೂಲಸೌಕರ್ಯ ಒದಗಿಸುತ್ತಿಲ್ಲ. 

ಬಿ.ಬಿ.ರಾಮಪ್ಪ 

*

ನಂದಿನಿ ಬಡಾವಣೆ: 
ಇಲ್ಲಿ ಬಿಡಿಎ ನಿರ್ಮಿಸಿರುವ ಎಡಿಎಫ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಈ ಸಮುಚ್ಚಯದ ಒಂದು ಭಾಗಕ್ಕೆ ನೀರು ಬಂದರೆ, ಮತ್ತೊಂದು ಭಾಗಕ್ಕೆ ನೀರು ಬರಲ್ಲ. ಇದರಿಂದ ಕಚೇರಿ ಕೆಲಸಗಳಿಗೆ ಹೋಗುವವರಿಗೆ ತುಂಬ ತೊಂದರೆ ಆಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ಎಲ್ಲ ಬ್ಲಾಕ್‌ಗಳಲ್ಲಿ ನೀರು ಸಿಗುವಂತೆ ಮಾಡಿ.

ಪ್ರಭು ಹಾರ್ಲೆ 

*

ವಿಜಯನಗರ:

ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಷನ್‌ನಲ್ಲಿನ 9 ಎ ಮುಖ್ಯರಸ್ತೆಯ ಮನೆಗಳಿಗೆ ಜಲಮಂಡಳಿಯಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕೇಳಿದರೆ ‘ವಾಲ್ವ್‌ ಕೆಟ್ಟಿದೆ’ ಅಂತಾರೆ. ಬಹುತೇಕ ಬಾರಿ ರಾತ್ರಿ 3.30ರಿಂದ 4.30ರ ವರೆಗೆ ನೀರು ಬಿಡುತ್ತಾರೆ. ನಿದ್ದೆಗೆಟ್ಟು ನೀರು ತುಂಬಿಸಿಕೊಳ್ಳಬೇಕು. 

ಎನ್‌.ವಿ.ಚಂದ್ರಶೇಖರ್‌

*

4ನೇ ಅಡ್ಡರಸ್ತೆ, ಕೆರೆಪಾಳ್ಯ, ದುರ್ಗಾನಗರ ವಾರ್ಡ್‌:
ಇಲ್ಲಿನ ಎತ್ತರದ ಪ್ರದೇಶದ ಮನೆಗಳಿಗೆ ಎರಡು ತಿಂಗಳಿನಿಂದ ಕಾವೇರಿ ನೀರು ಬಂದಿಲ್ಲ. ಆದರೆ, ಜಲಮಂಡಳಿಯ ಶುಲ್ಕದ ರಸೀದಿ ಮಾತ್ರ ಬರುತ್ತಿದೆ. ಮಿನಿಮಮ್‌ ಚಾರ್ಚ್‌ ಎಂದು ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ. 

ನಿರಂಜನ್‌ ದತ್ತ

 *

ನಂದಿನಿ ಬಡಾವಣೆ: 
ಬಿಡಿಎ ಪ್ಲಾಟ್‌ಗಳಿಗೆ ಕಾವೇರಿ ನೀರು ನಿಯಮಿತವಾಗಿ ಸರಬರಾಜು ಆಗುತ್ತಿಲ್ಲ. ಈ ಕುರಿತು ಜಲಮಂಡಳಿಯ ಸಿಬ್ಬಂದಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ.

ಎಂ.ಪ್ರಜ್ವಲ್‌

***

ಬೇಸಿಗೆ ಆರಂಭದಲ್ಲೇ ನಗರದ ಹಲವು ಬಡಾವಣೆಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ, ಜನರ ಈ ಬವಣೆ. ಮೇಲೆ 'ಪ್ರಜಾವಾಣಿ' ಬೆಳಕು ಚೆಲ್ಲುತ್ತಿದೆ, ನಿಮ್ಮ ಬಡಾವಣೆಯಲ್ಲೂ ನೀರಿನ ಸಮಸ್ಯೆಯಿದ್ದರೆ ವಾಟ್ಸ್ಆ್ಯಪ್ ಮಾಡಿ
9513322930

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !