ನೀರಾವರಿ ಯೋಜನೆಗಳು ಬಾರಾಕಮಾನ್..!: ಅರುಣ ಶಹಾಪುರ ಲೇವಡಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

’ಉತ್ತರ ಕರ್ನಾಟಕ ನಿರ್ಲಕ್ಷ್ಯಿಸಿದ ಜೆಡಿಎಸ್‌ ಸಾರಥ್ಯದ ಸಮ್ಮಿಶ್ರ ಸರ್ಕಾರ’

ನೀರಾವರಿ ಯೋಜನೆಗಳು ಬಾರಾಕಮಾನ್..!: ಅರುಣ ಶಹಾಪುರ ಲೇವಡಿ

Published:
Updated:

ವಿಜಯಪುರ: ‘ಜಿಲ್ಲೆಯ ನೀರಾವರಿ ಯೋಜನೆಗಳಿಗೂ, ಐತಿಹಾಸಿಕ ಬಾರಾಕಮಾನ್‌ಗೂ ಯಾವುದೇ ವ್ಯತ್ಯಾಸ ಗೋಚರಿಸದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಲೇವಡಿ ಮಾಡಿದರು.

‘ಗೃಹ ಸಚಿವ ಎಂ.ಬಿ.ಪಾಟೀಲರೇ ಹೇಳಿಕೊಳ್ಳುವಂತೆ, ಜಿಲ್ಲೆಯಲ್ಲಿ ನೀರಾವರಿ ಕಾಮಗಾರಿಗೆ ಶರವೇಗ ಸಿಕ್ಕಿದ್ದರೆ, ತಾರ್ಕಿಕ ಅಂತ್ಯ ಲಭಿಸಿದ್ದರೆ, ಕಾಂಗ್ರೆಸ್ಸಿಗರು ಇನ್ನೊಂದು ಅವಧಿಗೆ ಅವರನ್ನೇ ಜಲಸಂಪನ್ಮೂಲ ಸಚಿವರನ್ನಾಗಿ ಮುಂದುವರೆಸಬೇಕಿತ್ತು’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟಾಂಗ್‌ ಕೊಟ್ಟರು.

‘ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗಲಿಕ್ಕಾಗಿಯೇ ಜಲಸಂಪನ್ಮೂಲ ಖಾತೆಯನ್ನು ದಕ್ಷಿಣ ಕರ್ನಾಟಕದವರಿಗೆ ನೀಡಿದ್ದಾರೆ. ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯುಕೆಪಿ ನೀರಾವರಿ ಯೋಜನೆಗಳಿಗೆ ಆದ್ಯತೆಯನ್ನೇ ಕೊಡುತ್ತಿಲ್ಲ. ಈಗಿನಂತೆಯೇ ನಡೆದರೆ, ಯೋಜನೆಗಳು ಮುಗಿಯೋದು ಭಾಳ ಕಷ್ಟವಾಗಲಿದೆ. ಜೆಡಿಎಸ್‌–ಕಾಂಗ್ರೆಸ್‌ ಜಂಟಿಯಾಗಿ ಈ ಭಾಗಕ್ಕೆ ಮಾಡಿದ ದೊಡ್ಡ ಅನ್ಯಾಯವಿದು’ ಎಂದು ಅರುಣ ಆಕ್ರೋಶ ವ್ಯಕ್ತಪಡಿಸಿದರು.

ಹೊರಟ್ಟಿಗೆ ಅಪಮಾನ:

‘ಜೆಡಿಎಸ್‌ ಮುಖಂಡರು ಆರಂಭದಲ್ಲಿ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯನ್ನಾಗಿ ಮಾಡಿದರು. ನಂತರ ಅವಮಾನ ಮಾಡಿ ಆ ಸ್ಥಾನದಿಂದಲೂ ಕೆಳಗಿಳಿಸಿದರು. ಅಪಾರ ಅನುಭವವಿದ್ದರೂ ಸಚಿವ ಸ್ಥಾನ ಕೊಡದೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಶಹಾಪುರ ಹೇಳಿದರು.

‘ಹೊರಟ್ಟಿ ತಮ್ಮ ಸಮುದಾಯದ ಮತಗಳನ್ನು ಪಕ್ಷಕ್ಕೆ ತಂದು ಕೊಡುವುದರಲ್ಲಿ, ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಜೆಡಿಎಸ್ ನಾಯಕರು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದ್ದಾರೆ. ಇದನ್ನು ಹೊರಟ್ಟಿ ಸಹಿಸಬಹುದು. ಆದರೆ ಅಭಿಮಾನಿಗಳು ಸಹಿಸಲ್ಲ’ ಎಂದು ಅರುಣ ತಿಳಿಸಿದರು.

ಪ್ರಚಾರಕ್ಕಾಗಿ ಟೀಕೆ:

‘ರಮೇಶ ಜಿಗಜಿಣಗಿ ವಿರುದ್ಧ ಪ್ರಚಾರಕ್ಕಾಗಿಯೇ ಜೆಡಿಎಸ್ ಮುಖಂಡರು ಟೀಕೆ ನಡೆಸಿದ್ದಾರೆ. ಸಾಧನೆಯನ್ನು ತಿಳಿಸಿ ಹೇಳಿದರೂ; ಕೇಳದ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ. ಪಲಾಯನವಾದ ಅನುಸರಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರು ವಾಗ್ದಾಳಿ ನಡೆಸಿದರು.

‘ಜಿಗಜಿಣಗಿ ಸಾಧನೆಯನ್ನು ನಾವು ಹೊತ್ತಿಗೆ ಮುದ್ರಿಸುವ ಮೂಲಕ ಜಿಲ್ಲೆಯ ಪ್ರತಿ ಮನೆ, ಮನೆಗೂ ತಲುಪಿಸಿದ್ದೇವೆ. ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ? ಸಮ್ಮಿಶ್ರ ಸರ್ಕಾರದಲ್ಲಿ ಏನು ಮಾಡಿದ್ದೀರಿ. ಮಲತಾಯಿ ಧೋರಣೆ ಅನುಸರಿಸುವುದನ್ನು ಬಿಟ್ಟರೇ ಬೇರೆ ಏನಿದೆ ನಿಮ್ಮ ಕೊಡುಗೆ’ ಎಂದು ಶಹಾಪುರ ಸರಣಿ ಪ್ರಶ್ನೆಗಳ ಸುರಿಮಳೆಗೈದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಸ್.ಪಾಟೀಲ ಕೂಚಬಾಳ, ರಾಕೇಶ ಕುಲಕರ್ಣಿ, ವಿಜಯ ಜೋಶಿ, ಪಾಪುಸಿಂಗ್ ರಜಪೂತ ಪತ್ರಿಕಾಗೋಷ್ಠಿಯಲ್ಲಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !