ಭಾನುವಾರ, ಅಕ್ಟೋಬರ್ 20, 2019
22 °C

ಮಹಿಳೆಯರೇ ತುಂಬಾ ಸ್ಟ್ರಾಂಗ್‌ !

Published:
Updated:

ರಸ್ತೆ ಬದಿಯಲ್ಲೋ, ಬಸ್‌/ ರೈಲ್ವೆ ನಿಲ್ದಾಣದಲ್ಲೋ ನೀವು ನಿಂತಿರುತ್ತೀರಿ. ಆಗ ಅಲ್ಲೇ ನಡೆದು ಹೋಗುತ್ತಿದ್ದ ವೃದ್ಧರೊಬ್ಬರು ತಲೆ ಸುತ್ತು ಬಂದೋ, ರಸ್ತೆಯ ಮೇಲಿನ ಕಲ್ಲು ತಾಕಿಯೋ ಬಿದ್ದು ಬಿಡುತ್ತಾರೆ ಎಂದುಕೊಳ್ಳೋಣ. ಅವರ ನೆರವಿಗೆ ಗಂಡು– ಹೆಣ್ಣು ಎನ್ನದೇ ಹಲವರು ನೆರವಿಗೆ ಧಾವಿಸಬಹುದು. ಆದರೆ ಒಂದು ವಿಷಯ ಗಮನಿಸಿದ್ದೀರಾ? ತಕ್ಷಣ ಅವರನ್ನು ಎದ್ದು ಕೂರಿಸಿ, ನೀರಿನ ಬಾಟಲ್‌ ಹುಡುಕಿ ತಂದು ಅವರಿಗೆ ನೀರು ಕುಡಿಸಿ ಉಪಚಾರ ಮಾಡಿ, ಪ್ರಥಮ ಚಿಕಿತ್ಸೆ ಕೊಡುವುದು ಬಹುತೇಕ ಘಟನೆಗಳಲ್ಲಿ ಒಬ್ಬಳು ಹೆಣ್ಣು. ಅವರ ವಿಳಾಸ ಕೇಳುವುದು, ಮುಂದಿನ ನೆರವು ಕೊಡಿಸಲು ನೆರವಾಗುವುದೂ ಆಕೆಯೇ. ಆದರೆ ಇಲ್ಲಿ ಕೆಲಸ ಮಾಡುವುದು ಆಕೆಯ ಹೆಂಗರುಳಿಗಿಂತ ತುರ್ತು ಸ್ಥಿತಿಯಲ್ಲಿ ಕ್ಷಿಪ್ರವಾಗಿ ತಲೆ ಓಡಿಸಿ ನಿಭಾಯಿಸುವ ಆಕೆಯ ಜಾಣ್ಮೆಯಂತೆ.

ಇತ್ತೀಚೆಗೆ ಸಂಭವಿಸಿದ ನೆರೆ ಪರಿಸ್ಥಿತಿ ಸಂದರ್ಭವನ್ನು ನೆನಪಿಸಿಕೊಳ್ಳಿ. ಮನೆಯೊಳಗಿನ ಪಾತ್ರೆ, ಆಹಾರ ಧಾನ್ಯ, ಒಡವೆ, ಇತರ ಅಮೂಲ್ಯ ವಸ್ತುಗಳನ್ನು ಕಟ್ಟಿಕೊಳ್ಳುವುದು, ಮಕ್ಕಳು ಮತ್ತು ವೃದ್ಧರ ನಿಗಾ ನೋಡಿಕೊಳ್ಳುವುದು, ಕಣ್ಣಲ್ಲಿ ನೀರಿನ ಧಾರೆ ಹರಿಯುತ್ತಿದ್ದರೂ ಮತ್ತೆ ಭವಿಷ್ಯ ಕಟ್ಟಿಕೊಳ್ಳುವ ಛಲ ತೋರಿಸುವುದು ಈ ಹೆಂಗಳೆಯರೇ. ಪುರುಷರು ಮಾಡುವುದಿಲ್ಲ ಎಂದಲ್ಲ. ಆದರೆ ಮಹಿಳೆಯರು ನಿರ್ಧಾರ ಕೈಗೊಂಡರೂ ತಮ್ಮ ಮನೆಯ ಗಂಡಸರ ಅನುಮತಿಗಾಗಿ ಕಾಯಬೇಕಂತೆ!

ಅಮೆರಿಕದ ಕೊಲರೆಡೊ ಬೌಲ್ಡರ್‌ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನವೊಂದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಅಲ್ಲಿ ಚಂಡಮಾರುತದಿಂದ ಅಪಾರ ಹಾನಿ ಸಂಭವಿಸಿದಾಗ, ಮನೆಯನ್ನು ತಕ್ಷಣಕ್ಕೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ಹೊರಡಲು ಸಿದ್ಧರಾದವರು ಮಹಿಳೆಯರೇ ಅಂತೆ. ಆದರೆ ಬಹುತೇಕ ಸಂದರ್ಭಗಳಲ್ಲಿ ತಮ್ಮ ಮನೆಯ ಗಂಡಸರ ಮನ ಒಲಿಸಲು ಕಷ್ಟಪಟ್ಟಿದ್ದೂ ಇದೆಯಂತೆ.

ರಕ್ಷಣೆಗಾಗಿ ಓಟ

ಹೌದು, ಅಪಾಯ ಎದುರಾದಾಗ ರಕ್ಷಣೆಗಾಗಿ ಚುರುಕುತನದಿಂದ ಓಡಾಡುವುದು ಮಹಿಳೆಯರಲ್ಲಿರುವ ಹುಟ್ಟುಗುಣ ಎನ್ನುವುದು ಕೊಲರೆಡೊ ವಿವಿಯ ಪ್ರೊ.ಮೆಲಿಸಾ ಅವರ ಅಭಿಪ್ರಾಯ ಕೂಡ. ಪ್ರವಾಹ ಇಳಿದಾಗ ಮತ್ತೆ ಮನೆ ಸೇರಿಕೊಂಡು ಅವ್ಯವಸ್ಥೆಯನ್ನು ಸರಿಪಡಿಸುವುದು, ಶಾಲೆ ಆರಂಭವಾಗುವವರೆಗೆ ಮಕ್ಕಳನ್ನು ಸಂಭಾಳಿಸುವುದು ಎಲ್ಲವೂ ಆಕೆಯೇ. ಆದರೆ ಸಮುದಾಯದ ವಿಷಯ ಬಂದಾಗ ಮಾತ್ರ ಪುರುಷನೇ ಮುಂಚೂಣಿಗೆ ಬರುತ್ತಾನೆ.

ಇದಕ್ಕೆ ಕಾರಣ ಹುಡುಕುತ್ತ ಹೋದರೆ ಕುತೂಹಲಕಾರಿ ಅಂಶಗಳು ಲಭ್ಯವಾಗುತ್ತವೆ. ಮೊದಲನೆಯದಾಗಿ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದರಲ್ಲಿ ಸಫಲರಾದಾಗ, ಜನರು ಮತ್ತು ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಾಧ್ಯ. ಅಂದರೆ ಪುರುಷರಿಗಿಂತ ಸ್ತ್ರೀಯರೇ ತಮ್ಮನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಲ್ಲರು.

ಸಾಮಾಜಿಕ ಅರಿವಿನ ವಿಷಯದಲ್ಲೂ ಅಷ್ಟೆ, ನೀವು ಮಿಕ್ಕವರನ್ನು ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಲ್ಲಿರಿ, ಅವರ ಭಾವನೆಗಳಿಗೆ ಹೇಗೆ ಸ್ಪಂದಿಸಬಲ್ಲಿರಿ ಎನ್ನುವುದು ಇಲ್ಲಿ ಮುಖ್ಯ. ಯಾರೂ ಬಂದು ತಮ್ಮ ಮನದಲ್ಲಿರುವುದನ್ನು, ತಮಗೇನಾಗುತ್ತಿದೆ ಎನ್ನುವುದನ್ನು ಸ್ವಯಂ ತಾವೇ ಹೇಳಿಕೊಳ್ಳಲಾರರು. ಮಿಕ್ಕವರ ಭಾವನೆಗಳನ್ನು ಹೊರಸೂಸುವಂತೆ ಮಾಡುವುದರಲ್ಲಿ ಹೆಣ್ಣುಮಕ್ಕಳು ನಿಪುಣರು. ಈ ಜಾಣ್ಮೆ ಅವರಿಗೆ ಚಿಕ್ಕಂದಿನಿಂದಲೂ ಕರಗತವಾಗಿರುತ್ತದೆ. ಮಾತನಾಡದೆ ತಮ್ಮ ಕಣ್ಣುಗಳ ಮೂಲಕವೇ ಅವರೊಂದಿಗೆ ಸಂಭಾಷಿಸಬಲ್ಲರು.

ಸಂಬಂಧಗಳ ನಿರ್ವಹಣೆ

ಸಂಬಂಧಗಳ ನಿರ್ವಹಣೆ ಎನ್ನುವುದು ಭಾವಾನಾತ್ಮಕ ಬುದ್ಧಿವಂತಿಕೆಯ ಕಳಸವೆನ್ನಬಹುದು. ಸ್ವಯಂ ಅರಿವು, ಸ್ವಯಂ ನಿರ್ವಹಣೆ ಮತ್ತು ಸಾಮಾಜಿಕ ಅರಿವು ಈ ಎಲ್ಲದರ ಮೇಳೈಸುವಿಕೆಯಿಂದಲೇ ನಿಮ್ಮೊಂದಿಗೆ ವ್ಯವಹರಿಸುವ ಇತರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಂಡಾಗ ಖಂಡಿತ ಇದು ಸಾಧ್ಯ. ಈ ಗುಟ್ಟು ಹೆಣ್ಣುಮಕ್ಕಳಿಗೆ ಬಹಳ ಚೆನ್ನಾಗಿ ಗೊತ್ತು. ಆದ್ದರಿಂದಲೇ ಈ ವಿಷಯದಲ್ಲಿ ಗೆಲುವು ಅವರದು. ಭಾವನಾತ್ಮಕ ಜಾಣ್ಮೆ ಅವರಿಗೆ ತಮ್ಮ ವೃತ್ತಿ ಜೀವನದ ಗೆಲುವಿನ ಮುಖ್ಯ ಭಾಗವೂ ಹೌದು ಎನ್ನುತ್ತದೆ ಭಾವನಾತ್ಮಕ ಬುದ್ಧಿವಂತಿಕೆಯಲ್ಲಿ ಸಂಶೋಧನೆ ಮಾಡಿದ ಟ್ಯಾಲೆಂಟ್ ಸ್ಮಾರ್ಟ್ ಸಂಸ್ಥೆ.

ಇದನ್ನೂ ಓದಿ: ಮಹಿಳಾ ಹೋರಾಟದ ದಿಟ್ಟ ಹೆಜ್ಜೆಗಳು

ಇಷ್ಟೆಲ್ಲಾ ಹೇಳುವಾಗ ಆಕೆ ಮಲ್ಟಿಟಾಸ್ಕರ್‌ ಎನ್ನುವುದನ್ನು ಮರೆಯಲು ಸಾಧ್ಯವೇ? ಸಹಜವಾಗಿಯೇ ವಿವಿಧ ಕೆಲಸಗಳನ್ನು ಒಮ್ಮೆಲೇ ನಿಭಾಯಿಸುವ ಛಾತಿ ಆಕೆಗಿದೆ. ಮಕ್ಕಳು, ಮನೆಗೆಲಸ, ಕಚೇರಿ ಕೆಲಸ, ಹೊರಗಿನ ವ್ಯವಹಾರ.. ಅವಳಿಗೆ ಸವಾಲುಗಳನ್ನು ಎದುರಿಸುವಲ್ಲಿ ಹೆಚ್ಚು ಆಸಕ್ತಿ. ಅವಳ ಜೀವನ ಬೆಳೆದು ಬಂದಿರುವುದೇ ಹಾಗೆ.

ತುರ್ತು ಸ್ಥಿತಿ ನಿಭಾಯಿಸುವುದನ್ನು ಕಲಿಯಲು ಸಾಧ್ಯವಿಲ್ಲ. ನಿಮ್ಮೊಳಗೆ ಅಡಗಿರುವುದನ್ನು ಬೆಳೆಸಿಕೊಳ್ಳಬೇಕು ಅಷ್ಟೆ.
ನಿಮಗೆ ಬೇಕಾಗಿರುವುದು

* ಸಮಯಪ್ರಜ್ಞೆ

* ಆತ್ಮವಿಶ್ವಾಸ

* ತಕ್ಷಣಕ್ಕೆ ಅಪಾಯ

* ಸವಾಲುಗಳನ್ನು ಗುರುತಿಸುವ ಜಾಣ್ಮೆ

* ನಿರ್ಣಯವನ್ನು ತುರ್ತಾಗಿ ಕೈಗೊಳ್ಳುವ ಬುದ್ಧಿವಂತಿಕೆ

* ಅನುಮಾನಗಳನ್ನು, ನಕಾರಾತ್ಮಕ ಭಾವನೆಗಳನ್ನು ದೂರ ಇಡುವ ಛಾತಿ

* ಸಲಹೆಗಳನ್ನು ಸ್ವೀಕರಿಸುವ ಮನೋಭಾವ

Post Comments (+)