ಸಂಪತ್ತೇ ಸಂತೋಷವಲ್ಲ...

7

ಸಂಪತ್ತೇ ಸಂತೋಷವಲ್ಲ...

Published:
Updated:
Deccan Herald

ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವ ಇಂದಿನ ದಿನಗಳಲ್ಲಿ ಈ ‘ಸಂತೋಷ’ ಎಂಬುದನ್ನು ಮಾತ್ರ ಎಷ್ಟು ದುಡ್ಡು ಕೊಟ್ಟರೂ ಒಂದು ನೂರು ಗ್ರಾಂನಷ್ಟನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾಗರಿಕತೆ ಎಷ್ಟೇ ಸುಧಾರಿಸಿರಲಿ, ವಿಜ್ಞಾನ ಎಷ್ಟೇ ಮುಂದುವರಿಯುತ್ತಿರಲಿ, ಸಂತೋಷಕ್ಕೆ ಯಾವ ನಾಗರಿಕತೆಯೂ ಇಲ್ಲ, ವಿಜ್ಞಾನದ ಗೊಡವೆಯೂ ಬೇಕಿಲ್ಲ! ಇದು ನಮಗೆ ನಾವೇ ಕಂಡುಕೊಳ್ಳುವ ಸುಪ್ತಮನಸ್ಸಿನ ಅಗೋಚರ ಶಕ್ತಿ. ತೀರಾ ಇತ್ತೀಚೆಗೆ ಈ ಸಂತೋಷ ಮರೀಚಿಕೆಯಾಗಿಯೇ ಉಳಿದಿದೆಯೆಂದರೆ ಆಶ್ಚರ್ಯವೇನಿಲ್ಲ.

ಏಕೆ ಹೀಗಾಗುತ್ತಿದೆ? ಇರುವುದೆಲ್ಲವ ಬಿಟ್ಟು ಇರದಿರುವುದರ ಬಗ್ಗೆ ಯೋಚಿಸುವ ಮನಸ್ಸು ನಮ್ಮದಾದಾಗ ಸಂತೋಷ, ನೆಮ್ಮದಿ ಮರೀಚಿಕೆಯಾಗುತ್ತದೆ. ಏನು ಮಾಡಿದರೂ ನಾವೇಕೆ ಇನ್ನೂ ಇದೇ ಸ್ಥಿತಿಯಲ್ಲಿದ್ದೇವೆ? ಆರಕ್ಕೇರದ, ಮೂರಕ್ಕಿಳಿಯದ ನಮ್ಮ ಸಂಸಾರ ಸುಧಾರಣೆ ಆಗುವುದೆಂತು? ಎಲ್ಲರೂ ಇರುವ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಇಲ್ಲದಿರುವ, ಪಡೆಯಲಾಗದ್ದಕ್ಕೆ ತುಡಿಯುತ್ತಿರುತ್ತೇವೆ. ಸಂತೋಷಪ್ರಾಪ್ತಿಗೆ ಮೂಲಕಾರಣ ‘ತೃಪ್ತಿ’. ಉದಾಹರಣೆಗೆ, ಅಡಕೆಯ ಬೆಳೆ ಕ್ವಿಂಟಾಲಿಗೆ 30ಸಾವಿರ ತೂಗಿದರೂ, ಧಾರಣೆಯು 50ಸಾವಿರ ಆದ ಮೇಲೆಯೇ ಕೊಡುವುದು ಎಂದು ಕಾಯುವುದು. ಆಮೇಲೆ ಬೆಲೆ ನೆಲ ಕಚ್ಚಿದ ಮೇಲೆ ದುಃಖ ಪಡುವುದು. ‘ಅಯ್ಯೋ, ಅವರ ಯೋಗ ನೋಡು, ಮಹಡಿ ಮೇಲೆ ಮಹಡಿ ಕಟ್ಟಿದ್ದಾರೆ, ನಾವು ಮಾತ್ರ ಇದ್ದಲ್ಲೇ ಇದ್ದೇವೆ...’ ಎಂದು ಕೊರಗುವುದು. ನಮ್ಮಲ್ಲಿ ಇಲ್ಲದರ ಮೇಲೆಯೇ ನಮಗೆ ವ್ಯಾಮೋಹ ಹೆಚ್ಚು.

ಮನೆಯಲ್ಲಿ ಇರುವ ಮಕ್ಕಳ ಕಲರವವನ್ನು ನೋಡಿ ತಮ್ಮ ಮನಸ್ಸಿನ ನೋವನ್ನು ಮರೆಯುವ ಪ್ರಯತ್ನವನ್ನು ಮಾಡುವುದೇ ಇಲ್ಲ. ವಿಪರ್ಯಾಸ ಎಂದರೆ ಸಂತೋಷದ ನಿಜವಾದ ಸ್ಥಿತಿಯನ್ನು ಕಂಡೂ ಕಾಣದೆ ಕುರುಡರಾಗಿರುತ್ತಾರೆ. ನಾವು ನಮಗಿಂತ ಮೇಲಿನವರನ್ನು ನೋಡಿ, ‘ನಾವು ಅವರಂತಿಲ್ಲವಲ್ಲ’ ಎಂದು ಕೊರಗುವುದಕ್ಕಿಂತ, ನಮಗಿಂತ ಕೆಳಮಟ್ಟದಲ್ಲಿರುವವರನ್ನು ನೋಡಿ, ಸಮಾಧಾನ ಪಟ್ಟುಕೊಂಡರೆ ಸಂತೋಷ ತಾನಾಗಿಯೇ ಸಿಗುತ್ತದೆ. ನಾವಂದುಕೊಂಡಂತೆ ಎಲ್ಲ ಶ್ರೀಮಂತರೂ ಸಂತೋಷದಿಂದಿರುವುದಿಲ್ಲ; ಹಾಗೆಯೇ ಎಲ್ಲ ಬಡವರೂ ದುಃಖದಲ್ಲಿರುತ್ತಾರೆ ಎಂಬುದೂ ತಪ್ಪು. ಗಂಜಿ ಕುಡಿದು ಜೀವನ ನಡೆಸುವ ಎಷ್ಟೋ ಮಂದಿ ಸಂತೋಷದಿಂದ, ನೆಮ್ಮದಿಯಿಂದ ಬದುಕು ನಡೆಸುತ್ತಾರೆ; ಬದುಕನ್ನು ಬಂದಂತೆ ಸ್ವೀಕರಿಸುವ ಕಲೆ ಅವರಲ್ಲಿರುತ್ತದೆ. ಜೀವನದ ಪ್ರತಿದಿನವನ್ನೂ ಪ್ರತಿಕ್ಷಣವನ್ನೂ ಅನುಭವಿಸಿ ಆಸ್ವಾದಿಸುವ ಗುಣವನ್ನು ಬೆಳೆಸಿಕೊಂಡರೆ ನಾವೆಲ್ಲರೂ ಸಂತೋಷವಾಗಿರಬಹುದು. ಸಂತೋಷ ಎನ್ನುವುದು ನಮ್ಮಲ್ಲಿಯೇ ಇರುತ್ತದೆ. ಆದರೆ ಅದನ್ನು ನಾವು ಗುರುತಿಸುವುದರಲ್ಲಿ ಮಾತ್ರ ಎಡವುತ್ತಿದ್ದೇವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !