#ಮೈಭೀಚೌಕೀದಾರ್‌ ಅಭಿಯಾನದ ಬಗ್ಗೆ ಅಸಲಿ ಚೌಕಿದಾರ ಹೇಳೋದೇನು?

ಶುಕ್ರವಾರ, ಏಪ್ರಿಲ್ 26, 2019
35 °C

#ಮೈಭೀಚೌಕೀದಾರ್‌ ಅಭಿಯಾನದ ಬಗ್ಗೆ ಅಸಲಿ ಚೌಕಿದಾರ ಹೇಳೋದೇನು?

Published:
Updated:

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಚೌಕೀದಾರ್‌ (ಕಾವಲುಗಾರ) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅವರ ಟ್ವಿಟರ್‌ ಹ್ಯಾಂಡಲ್‌ ಚೌಕೀದಾರ್‌ ನರೇಂದ್ರ ಮೋದಿ ಆಗಿ ಬದಲಾಗಿದೆ. ಇದನ್ನು ಸಾವಿರಾರು ಜನರು ಹಿಂಬಾಲಿಸಿದ ಕಾರಣ, ಚೌಕೀದಾರ್‌ ಎಂಬುದು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡ್‌ ಆಗಿತ್ತು. ಆದರೆ ನಿಜವಾದ ಚೌಕೀದಾರರ ವಾಸ್ತವ ಸ್ಥಿತಿ ಟ್ವಿಟರ್‌ನಲ್ಲಿ ಟ್ರೆಂಡ್‌ ಆದಷ್ಟು ಅದ್ಧೂರಿಯಾಗಿಲ್ಲ.

ಹಲವು ಸಂಸ್ಥೆಗಳು, ಕಚೇರಿಗಳ ಎದುರು ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬಹುತೇಕರು ತಮ್ಮನ್ನು ತಾವು ವಾಚ್‌ಮನ್‌ಗಳೆಂದು ಹೇಳಿಕೊಳ್ಳುವುದಕ್ಕೇ ಬೇಸರಪಟ್ಟುಕೊಳ್ಳುತ್ತಾರೆ. ಅಸ್ಸಾಂ, ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳಿಂದ ನಗರಕ್ಕೆ ಬಂದು ಜೀವನ ನಿರ್ವಹಣೆಗಾಗಿ ಈ ಕೆಲಸ ಮಾಡಿಕೊಂಡಿರುವ ಎಷ್ಟೋ ಜನ ತಮ್ಮ ಮನೆಗಳಲ್ಲಿ ಹೆಂಡತಿಗೆ, ಹೆತ್ತವರಿಗೆ ತಾವು ಮಾಡುತ್ತಿರುವ ಕೆಲಸದ ಗುಟ್ಟನ್ನೇ ಬಿಟ್ಟುಕೊಟ್ಟಿರುವುದಿಲ್ಲ. ಅದಲ್ಲದೆ, ‘ನಾವು ಕರ್ನಾಟಕದಲ್ಲಿ ನೆಮ್ಮದಿಯಾಗಿದ್ದೀವಿ. ಏನಾದರೂ ಹೆಚ್ಚು ಕಡಿಮೆ ಮಾತಾಡಿದರೆ ಅದನ್ನು ನಾವೇ ಹಾಳುಮಾಡಿಕೊಂಡಂತಾಗುತ್ತದೆ’ –ಅಭಿಯಾನದ ಬಗ್ಗೆ ಮಾತನಾಡಲು ಹಿಂದೇಟು ಹಾಕುವ ಹಲವರ ಮಾತಿದು.

ನಮ್ಮ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದರೆ ನಮ್ಮ ಕುಟುಂಬದವರು ಕೀಳಾಗಿ ನೋಡಬಹುದು ಎಂದು ಸಬೂಬು ಹೇಳುವ ಬಹುತೇಕರು ಮಾತಿಗೆ ಸಿಗದೆ ನುಣುಚಿಕೊಳ್ಳುತ್ತಾರೆ. ಕೆಲವರಿಗೆ ತಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಇದೆ. ಹೀಗಾಗಿಯೇ ಚೌಕೀದಾರ್‌ ಅಭಿಯಾನದ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಹುತೇಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಭಿಮಾನವಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಸಂತಸವಿದೆ. ನೋಟು ರದ್ದತಿಯಿಂದ ನಮಗೇನೂ ತೊಂದರೆ ಇಲ್ಲ. ಬದಲಾಗಿ ದೇಶಕ್ಕೆ ಒಳ್ಳೆಯದೇ ಆಗಲಿದೆ ಎಂಬ ಭರವಸೆ ಇದೆ.

ಚೌಕಿದಾರರ ಮನದ ಮಾತುಗಳ ಅಕ್ಷರ ರೂಪ ಇಲ್ಲಿದೆ...

‘ಮೋದಿ ಬಗ್ಗೆ ಹೆಮ್ಮೆ ಇದೆ; ಪ್ರಧಾನಿ ಖಂಡಿತಾ ದೇಶ ಕಾಯುತ್ತಾರೆ’

ಸೇನೆಯಲ್ಲಿದ್ದು ನಿವೃತ್ತಿ ಪಡೆದು ಇದೀಗ ಬ್ಯಾಂಕ್‌ ಒಂದರ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಮಗಳೂರಿನ ಸುರೇಶ್‌, ‘ಮೋದಿ ಚೌಕೀದಾರ್‌ ಎನ್ನುವದರಲ್ಲಿ ಎರಡು ಮಾತಿಲ್ಲ’ ಎನ್ನುತ್ತಾರೆ. ‘ಬ್ಯಾಂಕುಗಳಿಗೆ ಬಹುಕೋಟಿ ಹಣ ವಂಚಿಸಿ ದೇಶದಿಂದ ಪಲಾಯನ ಮಾಡಿರುವ ವಿಜಯ್‌ ಮಲ್ಯ, ನೀರವ್‌ ಮೋದಿ ವಿಚಾರವಾಗಿ ವಿರೋಧ ಪಕ್ಷದವರು ಮೋದಿ ವಿರುದ್ಧ ಮಾತನಾಡಬಹುದು. ಆದರೆ, ಸದ್ಯದಲ್ಲೇ ಅವರಿಬ್ಬರನ್ನೂ ದೇಶಕ್ಕೆ ಕರೆತರಲಾಗುವುದು’ ಎಂಬುದು ಅವರ ವಿಶ್ವಾಸ.

‘ಈ ಸರ್ಕಾರ ಕೈಗೊಂಡ ನೋಟುರದ್ದತಿಯಂತಹ ಕ್ರಮಗಳಿಂದ ಭ್ರಷ್ಟಾಚಾರವನ್ನು ತಹಬದಿಗೆ ತರಬಹುದು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು, ಸೇನೆಗೆ ಅಧಿಕಾರ ನೀಡಲಾಯಿತು. ಮೋದಿಯವರಲ್ಲದೆ ಬೇರೆ ಯಾರಿಗೂ ಇದು ಸಾಧ್ಯವಾಗುತ್ತಿರಲಿಲ್ಲ. ಮೋದಿ ಖಂಡಿತಾ ದೇಶ ಕಾಯುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ನಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯಿದೆ. ಮೋದಿ ಅವರ ಚೌಕಿದಾರ್ ಅಭಿಯಾನಕ್ಕೆ ಕರೆ ನೀಡಿದ ಬಳಿಕ ಮತ್ತಷ್ಟು ಹೆಮ್ಮೆ ಎನಿಸುತ್ತಿದೆ. ಮಾಡುತ್ತಿರುವ ಕೆಲಸಕ್ಕೆ ತಕ್ಕಷ್ಟು ಸಂಬಳವೂ ಸಿಗುತ್ತಿದೆ. ಇದ್ದುದರಲ್ಲಿ ನೆಮ್ಮದಿಯಾಗಿದ್ದೇವೆ. ಮೋದಿ ಅವರು ಮಾಡಿರುವ ಸಾಧನೆ ಬಗ್ಗೆ ತೃಪ್ತಿ ಇದೆ. ಹಾಗೆಯೇ ಈ ಬಾರಿ ಖಂಡಿತ ಮೋದಿಯನ್ನು ಬೆಂಬಲಿಸುತ್ತೇನೆ. ಅವರು ಇನ್ನೊಮ್ಮೆ ಪ್ರಧಾನಿಯಾಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನ ಕುಟುಂಬಕ್ಕೆ ರಕ್ಷಣೆಯೇ ಇಲ್ಲ; ದೇಶ ಕಾಯುತ್ತೇವೆ ಎನ್ನುವ ಮೋದಿ ಮಾತಿನಲ್ಲಿ ಅರ್ಥವಿಲ್ಲ’

ಸುರೇಶ್‌ ಅವರ ಅಭಿಪ್ರಾಯಕ್ಕೆ ವಿರುದ್ಧವಾದ ಮಾತನಾಡಿದವರು ಅಸ್ಸಾಂ ಮೂಲದ ಅಲೀಮುದ್ದೀನ್. ಸದ್ಯ ನಗರದ ಬಾರ್‌ ಒಂದರ ಪಾರ್ಕಿಂಗ್‌ ಸ್ಥಳದಲ್ಲಿ ವಾಚ್‌ಮನ್‌ ಆಗಿರುವ ಅವರು, ‘ನನ್ನದು ಅಸ್ಸಾಂ ಕುಟುಂಬ. ಆದರೆ, ನಮ್ಮನ್ನು ಬಾಂಗ್ಲಾದೇಶದವರು ಎಂದು ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ನಮಗೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದು ಅವಲತ್ತುಕೊಂಡರು. ಮೋದಿ ತಮ್ಮನ್ನು ತಾವು ಚೌಕೀದಾರ್‌ ಎಂದು ಕರೆದುಕೊಳ್ಳುವ ಬಗ್ಗೆಯೂ ಅವರಿಗೆ ಆಕ್ಷೇಪವಿದೆ.

‘ಬೆಂಗಳೂರಿಗೆ ಬಂದಾಗಿನಿಂದಲೂ (2014ರಿಂದ) ಈ ಕೆಲಸ ಮಾಡುತ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿರುವ ತಂದೆ–ತಾಯಿಯರಿಗೆ ನೆರವಾಗುತ್ತಿದ್ದೇನೆ. ವರ್ಷಕ್ಕೊಮೆ ಮನಗೆ ಹೊಗುತ್ತೇನೆ. ನಾವು ಬಡವರು ಶ್ರಮವಹಿಸಿ ದುಡಿದು ತಿನ್ನುತ್ತೇವೆ. ಬಡವರ ಬಗ್ಗೆ ಸರ್ಕಾರ ಕಾಳಜಿ ಹೊಂದಿರಬೇಕು. ಬಡವರಿಗೆ ಸಿಗಬೇಕಾದ ಸೌಲಭ್ಯಗಳು ದಲ್ಲಾಳಿಗಳ ಪಾಲಾಗುತ್ತಿವೆ. ನಮಗೆ ಸರ್ಕಾರದಿಂದ ಯಾವುದೇ ನೆರವು ದೊರಕಿಲ್ಲ. ಆ ಭರವಸೆಯೂ ನಮಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೋಟು ರದ್ದತಿಯಿಂದಾಗಿ ತೊಂದರೆಯಾಗಿದೆ. ಹಳೇ ನೋಟುಗಳನ್ನು ಬದಲಿಸಿಕೊಳ್ಳುವ ಸಂದರ್ಭ ಬ್ಯಾಂಕ್ ಅಧಿಕಾರಿಗಳು ಅಮಾನುಷವಾಗಿ ನಡೆಸಿಕೊಂಡರು. ಪೊಲೀಸರು ನನ್ನ ತಾಯಿಯೊಂದಿಗೂ ಕಠಿಣವಾಗಿ ವರ್ತಿಸಿದರು. ಅವರೊಂದಿಗೆ ಜಗಳವಾಡಲು ಯಾರಿಗೆ ತಾನೆ ಧೈರ್ಯವಿದೆ’ ಎಂದು ನೋಟು ರದ್ದತಿ ಸಂದರ್ಭ ತಾವೆದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡರು.

‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಲ್ಲಿ ನನ್ನ ಕುಟುಂಬದ ಎಲ್ಲರ ಹೆಸರು ಇದೆ. ಆದಾಗ್ಯೂ, ನಾವು ಬಾಂಗ್ಲಾದೇಶದವರು ಎಂದು ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಇದರಿಂದಾಗಿ ನೆಮ್ಮದಿ ಹಾಳಾಗಿದೆ. ನನ್ನ ಕುಟುಂಬದವರು 1932ರಿಂದ ಇಲ್ಲಿ (ಭಾರತದಲ್ಲಿ) ವಾಸಿಸುತ್ತಿದ್ದಾರೆ. ನನ್ನ ಪೂರ್ವಜರು 1952ರಿಂದಲೂ ಮತ ಚಲಾಯಿಸುತ್ತಿದ್ದಾರೆ’ ಎನ್ನುತ್ತಾ ಎನ್‌ಆರ್‌ಸಿಯಲ್ಲಿ ತಮ್ಮ ಕುಟುಂಬದವರ ಹೆಸರುಗಳು ಇರುವ ದಾಖಲೆಗಳನ್ನು ತೆರೆದಿಟ್ಟರು.

ಪ್ರತಿವರ್ಷವೂ ಚುನಾವಣೆ ಸಂದರ್ಭದಲ್ಲಿ ರಜೆ ಪಡೆದು ಊರಿಗೆ ಹೋಗಿ ಮತ ಚಲಾಯಿಸುತ್ತೇನೆ ಎಂದೂ ಹೇಳಿದರು.

‘ಎಲೆಕ್ಷನ್‌ ಮುಗಿಯೋವರೆಗೆ ಈ ನಾಟಕ; ಅಮೇಲ್‌ ಯಾರೂ ನಿಮ್‌ ಕೈಗ್ ಸಿಗಲ್ಲ’

ಮಂಡ್ಯ ಸಮೀಪದ ಚಿಕ್ಕಮಂಡ್ಯದಿಂದ ನಗರಕ್ಕೆ ಬಂದು ಎಟಿಎಂ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿರುವ ಮಂಡ್ಯದ ಹೊನ್ನಕಾರಯ್ಯ ಅವರೂ ಚೌಕೀದಾರ್‌ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿಕೊಂಡರು. ನರೇಂದ್ರ ಮೋದಿ ಅವರು ಎಲ್ಲರೂ ಕಾವಲುಗಾರರಾಗಬೇಕು; ದೇಶ ರಕ್ಷಿಸಬೇಕು ಎಂದು ಹೇಳುತ್ತಿದ್ದಾರೆ ಒಬ್ಬ ಕಾವಲುಗಾರನಾಗಿ ನೀವು ಏನ್‌ ಹೇಳ್ತೀರಿ ಇದಕ್ಕೆ ಅಂದ ಕೂಡಲೇ ಅವರು ಹೇಳಿದ್ದು ‘ಅಯ್ಯೋ ನಾವ್‌ ಯಾವ್ ಸೀಮೆ ಕಾವಲುಗಾರನಪ್ಪ. ಕಾಯೋರು ಪಾಕಿಸ್ತಾನದ್‌ತವ್‌ ನಿಂತವ್ರೆ ಕನ ಬುಡಿ’ ಅಂದ್ರು. ಮುಂದುವರಿದು, ‘ಎಲ್ರೂ ಕಾವಲು ಕಾಯ‌್ತೀವಿ ಅನ್ನೋ ಅವ್ರ್‌ ಮಾತು ಸುಳ್ಳು. ಇವತ್‌ ಹೇಳ್ತರೆ; ನಾಳೆಕ್‌ ಮರ್ತ್ಕತರೆ’ ಎಂದು ಅಸಹನೆ ವ್ಯಕ್ತಪಡಿಸಿದರು.

‘ಊರಲ್ಲಿದ್ದೋರು ಈ ಕೆಲಸಕ್ಯಾಕ್‌ ಬಂದ್ರಿ’ ಅಂದ್ರೆ, ‘ಊರಲ್ಲಿ ಎಳನೀರು ಯಾಪಾರ ಮಾಡ್ಕಂಡ್‌ ಇದ್ದೆ. ಗದ್ದೆ ನಾಟಿ ಟೈಂ ಅಲ್ಲಿ ಆಳ್‌ಗೆ ಹೇಳೋಕೆ ಅಂತ ಪಕ್‌ದೂರ್‌ಗೆ ಹೋಗಿದ್ದೆ. ಬರುವಾಗ ಸ್ಕೂಟ್ರವ್ನು ಗುದ್ಕಂಡ್‌ ಹೊಂಟೋದ. ಹಿಂಗೇ ಎರಡ್‌ ಸಲ ಆಗೋಯ್ತು. ಊರಲ್ಲಿ ಗೆಯ್ಯೋಕ್‌ ಆಗಲ್ಲ ಅನಿಸ್ತು. ಕುಂತಿದ್ರೆ ಆದದೇ? ಅದ್ಕೆ ಬೆಂಗ್ಳೂರ್ಗೆ ಬಂದೆ. ಐದ್‌ ವರ್ಷ್‌ದ್‌ ಹಿಂದೆ ಇಲ್ಲಿಗ್‌ ಬಂದಾಗ ಹೊಸದರಲ್ಲಿ ಎಳ್ನೀರ್‌ ಮಾರ್ತಿದ್ದೆ. ಗೊತ್ತಿರೋರ್‌ ಉಬ್ರು ‘ನಡ ಆಗುದಿಲ್ಲ ಅಂತಿಯೇ, ಈ ಕೆಲ್ಸ ಯಾಕ್‌ ಮಾಡಿಯೇ? ಬಾ ನನ್‌ಜೊತೆ’ ಅಂತ ಕರ್ಕಂಡ್‌ ಬಂದ್‌ ಇಲ್ಲಿಗ್‌ ಸೇರ್ಸವ್ರೆ ನೋಡಪ್ಪ’ ಅಂತ ಮಾತು ಮುಂದುವರಿಸಿದರು.

‘ಇಬ್ರು ಹೆಣ್‌ ಮಕ್ಳು ಇಬ್ರುಗೂ ಮದ್ವೆ ಮಾಡಿದ್ದೀವಿ. ಸರ್ಕಾರದವ್ರು ಅಕ್ಕಿ ಕೊಡ್ತರೆ ಉಣ್ಕಂದ್‌ ಅಟ್ಟಿಲಿ ಇರ್ಬೋದು. ಆದ್ರೆ ವಯ್ಸ್‌ ಆಯ್ತಲ್ಲಪ್ಪಾ.. ನಾಳೆ ಮನಿಕಂದ್ರೆ (ಆರೋಗ್ಯ ಕೆಟ್ಟರೆ) ಏನ್‌ ಮಾಡುದೂ...? ಕೈಲಿ ವೊಸಿ ದುಡ್‌ ಇಟ್ಕಳ್ಳುಮ ಬೇಕಾಯ್ತದೆ ಅಂತ ದುಡಿಯೊಕ್‌ ಬಂದೆ. ಊರಲ್ಲಿ ನಮ್‌ ಹೆಂಗುಸ್ರವ್ರೆ (ಹೆಂಡ್ತಿ). ಸಂಬ್ಳ ಆಗ್ತಿದ್ದಂಗೆ ಊರಿಗ್‌ ತಕೊಂಡೋಗ್‌ ಕೊಟ್ಬಿಡ್ತಿನಿ. ಬೇಕಾದಾಗ ಫೋನ್‌ ಮಾಡ್ತಿನಿ ತಕ ಬತ್ತಳೆ’ ಅಂದ್ರು.

‘ಸುಮ್ನೆ ಅವರನ್ಯಾಕೆ ಅಲೆದಾಡಿಸ್ತೀರಿ. ನೀವೇ ಸ್ವಲ್ಪ ಎತ್ತಿಟ್ಕೊಳಿ’ ಅಂದ್ರೆ ‘ತಿರ್ಗಾಡ್ಕಂಡ್‌ ಹೋಗ್ಲಿ ಬುಡಿ, ನಾನೂ ಅವಳೂ ಒಬ್ರುಗೊಬ್ರು ಮುಖ ನೋಡ್ದಂಗ್‌ ಆಯ್ತದಲ್ಲಾ’ ಎನ್ನುತ್ತಾ ಅವ್ಯಕ್ತ ಪ್ರೇಮವನ್ನು ವ್ಯಕ್ತಪಡಿಸಿದರು.

ಮತ್ತೆ ಮೋದಿ ಮಾತಿನತ್ತ ಎಳೆದಾಗ, ‘ಬಿಸಿಲಲ್ಲಿ ನಿಂತು ಗೆಯ್ಯೋರ್‌ ಆಡೋ ಮಾತ್ಗೂ... ನೆಳ್ಳಲ್ಲಿ (ನೆರಳಲ್ಲಿ) ಕೂತ್ಕೊಂಡ್‌ ಆಡೋರ್‌ ಮಾತ್ಗೂ ವ್ಯತ್ಯಾಸ ಅದೆ. ಕಾಯ್ತಿಮಿ ಕಾಯ್ತಿಮಿ ಅನ್ನೋದೆಲ್ಲ ಬರೀ ಸುಳ್ಳು. ಮೋದಿಯಾದ್ರೂ ಅಷ್ಟೇ, ಸಿದ್ರಾಮನಾದ್ರು ಅಷ್ಟೇ, ಕುಮಾರ್‌ಸ್ವಾಮಿ ಆದ್ರೂ ಅಷ್ಟೇ. ಎಲೆಕ್ಷನ್‌ ಮುಗಿಗಂಟ ನಾಟ್ಕ ನೋಡ್ಕಳ್ಳಿ. ಈಗ ಎಲ್ಲ ಹುಡಿಕಂಡ್‌ ಬರ್ತರೆ. ಅಮೇಲ್‌ ನೀವ್‌ ಕರುದ್ರುವೆ ಬರೋದಿಲ್ಲ’ ಎಂದು ವ್ಯಂಗ್ಯಭರಿತ ಹತಾಶೆ ವ್ಯಕ್ತಪಡಿಸಿದರು.

ಅಂದಹಾಗೆ ಹೊನ್ನಕಾರಯ್ಯ ಅವರು ಮೈಸೂರು ರಸ್ತೆಯಲ್ಲಿರುವ ಎರಡು ಎಟಿಎಂಗಳಲ್ಲಿ ಕೆಲಸ ಮಾಡುತ್ತಾರೆ. ಊಟದ ಸಮಯ ಬಿಟ್ಟರೆ ಉಳಿದೆಲ್ಲ ಅವಧಿಯನ್ನೂ ಎಟಿಎಂ ಹತ್ತಿರವೇ ಕಳೆಯುತ್ತಾರೆ. ಏಕೆಂದರೆ ಉಳಿದುಕೊಳ್ಳಲಿಕ್ಕೆ ಮನೆ ಮಾಡಿಕೊಂಡಿಲ್ಲ. ಆ ಬಗ್ಗೆ ಕೇಳಿದರೆ ಅವರು ಹೇಳೋದು, ‘ಅಯ್ಯೋ ಇವರು ಕೊಡೋ ಸಂಬಳ ಖರ್ಚ್‌ಗೇ ಸಾಲಲ್ದು ಬುಡಪ್ಪ. ಇನ್ನು ಅದ್‌ಬೇರೆ ಮಾಡ್ಕೊಳ್ಳುವೆ. ಎಟಿಎಂ ಒಳ್ಗೆ ಎಸಿ ಇಲ್ವೇ.. ಮಲ್ಕಂಡ್ರೆ ಆಯ್ತು. ನಾನೂ ಎಸಿ ರೂಮಲ್ಲಿ ಮನಿಕತಿನಿ ಅಂತ ಹೇಳ್ಕೋಬೋದಲ್ಲ’ ಎಂದು ಜೋರಾಗಿ ನಕ್ಕು ನನ್ನನ್ನೂ ಸಾಗಹಾಕಿದರು.

ಬರಹ ಇಷ್ಟವಾಯಿತೆ?

 • 23

  Happy
 • 4

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !