ಗುರುವಾರ , ಜೂನ್ 24, 2021
27 °C
ಅವಲೋಕನ

ದೇವದಾಸಿಯರು ಭೂ ಒಡತಿಯರಾದಾಗ...

ಕೆ.ರತ್ನಪ್ರಭಾ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಮಯದ ಕಥೆ ಇದು. ಒಂದು ದಿನ ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು ಸದಸ್ಯರು ಕಚೇರಿಗೆ ಬಂದು, ‘ದೇವದಾಸಿಯರ ಪುನರ್ವಸತಿ ಯೋಜನೆಗಳು ಸಫಲಗೊಳ್ಳುತ್ತಿಲ್ಲ, ಜಿಲ್ಲೆಯಲ್ಲಿ ದೇವದಾಸಿಯರ ಸಂಖ್ಯೆ ಹೆಚ್ಚುತ್ತಿದೆ’ ಎಂದು ದೂರಿದರು. ಇದರ ಸತ್ಯಾಸತ್ಯತೆ ತಿಳಿಯಲು ಅಲ್ಲೊಂದು ಸಮೀಕ್ಷೆ ನಡೆಸಿದೆವು. ದೇವದಾಸಿಯರಿದ್ದುದು ನಿಜವಾಗಿತ್ತು. ಸರ್ಕಾರಕ್ಕೆ ಒಂದು ಪ್ರಸ್ತಾವವನ್ನು ಕಳುಹಿಸಿಕೊಟ್ಟೆವು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಒಂದು ದಿನ ಕರೆ ಮಾಡಿ, ‘ದೇವದಾಸಿ ಸಮಸ್ಯೆಯಿರುವುದು ಉತ್ತರಕರ್ನಾಟಕದ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ’ ಎಂದರು. ದಲಿತ ಸಂಘರ್ಷ ಸಮಿತಿಯ ಗಮನಕ್ಕೂ ಈ ವಿಷಯ ತರಲಾಯಿತು. ಆದರೆ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಗಂಗಾವತಿ, ಸಿಂಧನೂರು ಸೀಮೆಗಳಲ್ಲಿ ಹುಲಿಗೆಮ್ಮನ ಆರಾಧಕರಿದ್ದರು. ಅಲ್ಲಿಯೂ ದೇವದಾಸಿ ಪದ್ಧತಿ ಚಾಲ್ತಿಯಲ್ಲಿತ್ತು. ಪುನರ್ವಸತಿ ಯೋಜನೆಗಳು ಸಾಕಷ್ಟಿದ್ದರೂ ಯಾವುದೂ ಪರಿಣಾಮಕಾರಿಯಾಗಿರಲಿಲ್ಲ.

ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದು, ದೇವದಾಸಿಯರನ್ನು ಭೇಟಿ ಮಾಡಲು ಹೊರಟೆ. ದೇವದಾಸಿಯರೆಲ್ಲ ದಲಿತ ಸಮುದಾಯಕ್ಕೆ ಸೇರಿದವರು– ಅಸ್ಪೃಶ್ಯರು. ಇವರನ್ನು ಆ ವೃತ್ತಿಯಿಂದ ಹೊರತರುವ ಸಲುವಾಗಿ ಪುನರ್ವಸತಿ ಯೋಜನೆಯಡಿ ಹೈನುಗಾರಿಕೆ ನಡೆಸಲು ಅಥವಾ ತರಕಾರಿ ಮಾರಾಟಕ್ಕಾಗಿ ಸಾಲ ಕೊಡುವ ವ್ಯವಸ್ಥೆಗಳು ಇದ್ದವು. ಇದು ಮೂರೂವರೆ ದಶಕಗಳ ಹಿಂದಿನ ಕಥೆ. ಅಸ್ಪೃಶ್ಯತೆ ವ್ಯವಸ್ಥೆ ಇನ್ನೂ ಆಚರಣೆಯಲ್ಲಿತ್ತು. ದೇವದಾಸಿಯರನ್ನು ಕೀಳಾಗಿ ಕಾಣಲಾಗುತ್ತಿತ್ತು.

ಸಾಲ ಮಾಡಿ ಮೇಕೆ, ಹಸು ಸಾಕಿದರೂ ಹಾಲು ಕೊಳ್ಳಲುಇವರ ಬಳಿ ಯಾರೂ ಬರುತ್ತಿರಲಿಲ್ಲ. ಕಾರ್ಮಿಕ ವರ್ಗದವರಿಗಂತೂ ಹಾಲು ಎಂಬುದು ಹುಷಾರಿಲ್ಲದಾಗ ಮಾತ್ರ ಕೊಳ್ಳುವವಿಲಾಸಿ ಆಹಾರವಾಗಿತ್ತು. ಹಾಗಾಗಿ ಹಾಲು ಮಾರಾಟವಾಗದೆ ಹಸು ಅಥವಾ ಮೇಕೆ ಖರೀದಿಗೆ ಪಡೆದ ಸಾಲವು ಮರುಪಾವತಿಯಾಗುತ್ತಿರಲಿಲ್ಲ. ಊರು ಕೇರಿಗಳಿಂದ ಅವರನ್ನು ದೂರವಿಡಲಾಗಿತ್ತು. ಹೀಗಿರುವಾಗ ಹಾಲನ್ನು ಅವರು ಯಾರಿಗೆ ಮಾರಾಟ ಮಾಡಬೇಕು?

ಇಲ್ಲಿ, ಎರಡೆರಡು ಪಿಡುಗುಗಳಿದ್ದವು. ಒಂದು ದೇವರ ಹೆಸರಿನಲ್ಲಿ ಹೆಣ್ಣುಮಕ್ಕಳ ಜೀವನವನ್ನು ಅತಂತ್ರಗೊಳಿಸುವುದು. ಇನ್ನೊಂದು ಅಸ್ಪೃಶ್ಯರೆಂದು ಒಂದು ಸಮುದಾಯದವರನ್ನು ದೂರವಿಡುವುದು. ಹೇಗೋ ಬದುಕನ್ನು ನಿಭಾಯಿಸುತ್ತಿದ್ದವರಿಗೆ ಪುನರ್ವಸತಿ ಯೋಜನೆಯಡಿ ಸಾಲ ನೀಡಿದ್ದರಿಂದ ಅವರ ಸ್ಥಿತಿ ಸಾಲದ ಕೂಪಕ್ಕೆ ಬಿದ್ದವರಂತಾಗಿತ್ತು. ಎಲ್ಲಾ ಸಮಸ್ಯೆಗಳು ಅವರ ಮೇಲೆ ಒಟ್ಟೊಟ್ಟಾಗಿ ದಾಳಿಯಿಟ್ಟಂಥ ಸ್ಥಿತಿ.

ಇದೇ ವೇಳೆಗೆ ದಲಿತರಿಗೆ ಜಮೀನು ನೀಡುವ ಯೋಜನೆ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರವು ತೀರ್ಮಾನಿಸಿ, ಎಲ್ಲಾಜಿಲ್ಲಾಧಿಕಾರಿಗಳಿಗೆ ಒಂದು ಸುತ್ತೋಲೆಯನ್ನು ಕಳುಹಿಸಿತು. ಸುತ್ತೋಲೆ ನನ್ನ ಕೈಸೇರುತ್ತಿದ್ದಂತೆ, ‘ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಆಸಕ್ತಿ ಇದೆ’ ಎಂದು ಸರ್ಕಾರಕ್ಕೆ ಪತ್ರ ಬರೆದೆ. ಜೊತೆಗೆ, ದಲಿತ ಪುರುಷರ ಬದಲಿಗೆ ದಲಿತ ಮಹಿಳೆಯರಿಗೆ ಜಮೀನು ನೀಡುವುದಾಗಿಯೂ ತಿಳಿಸಿದೆ. ಫಲಾನುಭವಿಗಳಾಗಿ ಹಲವು ದೇವದಾಸಿಯರನ್ನು ಆಯ್ಕೆ ಮಾಡಿದೆವು. ನೀರಾವರಿ ಜಮೀನಾಗಿದ್ದರೆ ಪ್ರತಿಯೊಬ್ಬರಿಗೆಅರ್ಧ ಎಕರೆ, ಖುಷ್ಕಿಯಾಗಿದ್ದಲ್ಲಿ 2 ಎಕರೆ ಜಮೀನು ನೀಡಿದೆವು. ಅಸ್ಪೃಶ್ಯರು, ದೇವದಾಸಿಯರು ಎನ್ನುವ ಕಾರಣಕ್ಕೆ ಕೃಷಿ ಕೂಲಿಕಾರ್ಮಿಕರಾಗಲೂ ಸಾಧ್ಯವಿಲ್ಲದಿದ್ದವರು ದಿನ ಬೆಳಗಾಗುವುದರಲ್ಲಿ ಜಮೀನಿನ ಒಡತಿಯರಾಗಿದ್ದರು.

ಒಂದಷ್ಟು ಜನರಿಗೆ ‘ಡಿ– ಗ್ರೂಪ್‌’ ಕೆಲಸ ನೀಡಲಾಯಿತು. ದಲಿತ ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ನೀಡಲಾಯಿತು. ಇದನ್ನೆಲ್ಲ ಸ್ಮರಿಸುವಾಗ ನಿರ್ಮಲಾ ಎಂಬ ಸಪೂರ ಕಾಯದ ಯುವತಿ ನೆನಪಾಗುತ್ತಾಳೆ. ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸಲು, ಅಸಾಂಪ್ರದಾಯಿಕ ವೃತ್ತಿಗಳನ್ನೇಕೆ ಪರಿಚಯಿಸಬಾರದು ಎಂದೆನಿಸಿತ್ತು. ಇಂಥ ವೃತ್ತಿಗಳು ಸ್ವೀಕೃತವಾದರೆ ಸಮಾಜದಲ್ಲಿ ದೃಢವಾದ ಮಾದರಿಗಳು ಸೃಷ್ಟಿಯಾಗುತ್ತವೆ. ಸಾಮಾಜಿಕ ಜಾಗೃತಿಯೂ ಆಗುತ್ತದೆ ಎಂದುಕೊಂಡು, ‘ಆಟೊ ಚಾಲಕಿಯರಾಗಲು ಎಷ್ಟು ಜನ ಮುಂದೆ ಬರುವಿರಿ?’ ಎಂದು ಮಹಿಳೆಯರನ್ನು ಕೇಳಿದೆ. 40 ಜನ ಮುಂದೆ ಬಂದರು. ಅವರಿಗೆಲ್ಲ ಆಟೊ ಚಾಲನೆ ಕಲಿಸಲಾಯಿತು. ಅವರಲ್ಲಿ 7 ಜನರು ಎಲ್ಲ ಪರೀಕ್ಷೆಗಳನ್ನೂ ಪಾಸು ಮಾಡಿ, ಡಿ.ಎಲ್‌. ಮಾಡಿಸಿಕೊಂಡು ಆಟೊ ಚಾಲಕಿಯರಾದರು. ಇವರಲ್ಲಿ ಒಬ್ಬಾಕೆ ನಿರ್ಮಲಾ.

ನಿರ್ಮಲಾ, ಮಂತ್ರಾಲಯದ ಭಕ್ತೆ. ಅಲ್ಲಿ ಮುಡಿಕೊಟ್ಟು ಬಂದಿದ್ದಳು. ಎಲ್ಲರೂ ಆಕೆಯನ್ನು ಕಾಡುವವರೇ. ಅವಳೋಮಾಲಾಶ್ರೀಯ ಅಭಿಮಾನಿ. ಚಿತ್ರವೊಂದರಲ್ಲಿ ಮಾಲಾಶ್ರೀಆಟೊ ಚಾಲಕಿಯಾಗಿ ನಟಿಸಿರುವುದನ್ನು ನೋಡಿ, ಆಕೆಯಿಂದ ಪ್ರೇರಣೆ ಪಡೆದಿದ್ದ ನಿರ್ಮಲಾ, ಮಾಲಾಶ್ರೀಯಂತೆ ಆಟೊ ಓಡಿಸಬೇಕೆಂಬ ಹಟತೊಟ್ಟಿದ್ದಳು. ಅದನ್ನು ಸಾಧಿಸಿಯೂ ಬಿಟ್ಟಳು. ಆಗ ಆ ಗುಂಪಿನಲ್ಲಿದ್ದ ಅತಿ ಸಣ್ಣವಯಸ್ಸಿನ ಯುವತಿ ಆಕೆ. 26 ವರ್ಷಗಳ ನಂತರ, ಈಗಲೂ ಆಟೊ ಓಡಿಸುತ್ತಿದ್ದಾಳೆ. ಅವರ ಗುಂಪಿನಲ್ಲಿ ಹಲವರು ಮದುವೆಯ ನಂತರ, ಮಕ್ಕಳಾದ ನಂತರ, ಆಟೊ ಹಳೆಯದಾದ ನಂತರ ಆ ವೃತ್ತಿಯನ್ನು ಕೈಬಿಟ್ಟರು. ಆದರೆ ನಿರ್ಮಲಾ ಮಾತ್ರ ಮತ್ತೆಆಟೊ ಖರೀದಿಸಿದಳು. ಬ್ಯಾಂಕಿನವರು ಸಹಾಯ ಮಾಡಿದರು. ಈಗಲೂ ಕಂತು ತುಂಬುತ್ತಿದ್ದಾಳೆ.

ಎರಡು ದಶಕಗಳ ಹಿಂದೆ ಯುವತಿಯರು ಆಟೊ ಓಡಿಸುವುದನ್ನು ನೋಡಲು ಜನ ಆಚೆ ಬರುತ್ತಿದ್ದರು. ಈ ಹೆಣ್ಣುಮಕ್ಕಳನ್ನು ಗೌರವದಿಂದ ನಡೆಸಿಕೊಂಡ ರಾಯಚೂರಿನ ಜನತೆಯನ್ನೂ ಮೆಚ್ಚಬೇಕು. ಉಳಿದ ಆಟೊ ಚಾಲಕರುಸಹ ಇವರಿಗೆ ಸಹಾಯ ಮಾಡುತ್ತಿದ್ದರು. ಲಿಂಗ ಸಂವೇದನೆಯ ಯಾವುದೇ ತರಬೇತಿಗಳಿಲ್ಲದೆ ಜನಜೀವನದಲ್ಲಿ ಸಹಜವಾಗಿಯೇ ಬದಲಾವಣೆ ಬಂದಿತ್ತು. ಆರು ತಿಂಗಳ ನಂತರ ಒಮ್ಮೆ ಸಭೆ ಆಯೋಜಿಸಿದೆವು. ಜನರಿಂದಲಾಗಲಿ, ಇತರ ಆಟೊ ಚಾಲಕರಿಂದಲಾಗಲಿ ಏನಾದರೂ ಸಮಸ್ಯೆಗಳಾಗುತ್ತಿವೆಯೇ? ಈ ವೃತ್ತಿ ಮುಂದುವರಿಸಿಕೊಂಡು ಹೋಗಲು ತೊಂದರೆಗಳಿವೆಯೇ? ಮುಂತಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಅಧಿಕಾರಿ ವರ್ಗದವರಿಗೆಲ್ಲ ಒಂದು ಆತಂಕವಿತ್ತು. ಇದು ಪ್ರಾಯೋಗಿಕ ಯೋಜನೆ. ವಿಫಲವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆಟೊ ಕಲಿಯಲು ಬಂದ ಹೆಣ್ಣುಮಕ್ಕಳು ನಂತರ ತಮ್ಮ ಮನೆಯ ಪುರುಷರಿಗೆ ಆಟೊವನ್ನು ವಹಿಸಿಕೊಡಬಹುದಿತ್ತು. ಆರಂಭದಲ್ಲಿ ತೋರಿದ ಉತ್ಸಾಹ ದಿನಗಳೆದಂತೆ ಕಡಿಮೆಯಾಗುವ ಸಾಧ್ಯತೆ ಇತ್ತು. ಆ ಕಾಲದಲ್ಲಿ ಆಟೊ ಅವಲಂಬಿಸುವವರಲ್ಲಿ ಹೆಚ್ಚಿನವರು ಪರವೂರುಗಳಿಂದ ರೈಲಿನಲ್ಲಿ ಬರುವವರಾಗಿದ್ದರು. ಅಲ್ಲಿ ಹೆಚ್ಚು ರೈಲುಗಳ ಸಂಚಾರವೂ ಇರಲಿಲ್ಲ. ಹಾಗಾಗಿ ಅವರು ನಿರೀಕ್ಷಿಸಿದಷ್ಟು ಸಂಪಾದನೆ ಆಗಬಹುದೇ ಎಂಬ ಅಳುಕಿತ್ತು. ಸ್ವಲ್ಪವಾದರೂ ಉಳಿತಾಯವಾದರೆ ಮಾತ್ರ ಇವರು ಈ ವೃತ್ತಿ ಮುಂದುವರಿಸುವ ಸಾಧ್ಯತೆ ಇತ್ತು. ಆದರೆ ಅಧಿಕಾರಿ ವರ್ಗದವರ ಈ ಆತಂಕ ಕೆಲವೇ ದಿನಗಳಲ್ಲಿ ನಿವಾರಣೆಯಾಗಿತ್ತು. ಆಟೊ ಚಾಲಕಿಯರು ರಾಯಚೂರಿನ ಎಲ್ಲ ರಸ್ತೆಗಳಲ್ಲಿ ಓಡಾಡಲಾರಂಭಿಸಿದರು. ಅವರ ಆತ್ಮವಿಶ್ವಾಸ ಉಳಿದವರೆಲ್ಲರ ವಿಶ್ವಾಸವನ್ನು ಗೆಲ್ಲುವಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು