ಅಂಗನವಾಡಿ ಆಹಾರ ಎಲ್ಲಿ ಹೋಗುತ್ತಿದೆ?

7
ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರ ಪ್ರಶ್ನೆ

ಅಂಗನವಾಡಿ ಆಹಾರ ಎಲ್ಲಿ ಹೋಗುತ್ತಿದೆ?

Published:
Updated:
ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ವಿ.ಬಿ.ಪಾಟೀಲ ಮಾತನಾಡಿದರು

ಕಲಬುರ್ಗಿ: ‘ಹಾಜರಾತಿ ಪುಸ್ತಕದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಹಾಗಾದರೆ ಮಕ್ಕಳಿಗೆ ವಿತರಿಸುವ ಆಹಾರ ಎಲ್ಲಿಗೆ ಹೋಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರು ಪ್ರಶ್ನಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಂಗನವಾಡಿ, ಅಕ್ಷರ ದಾಸೋಹ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಆಯೋಗದ ಸದಸ್ಯ ಡಿ.ಜಿ.ಹಸಬಿ ಮಾತನಾಡಿ, ‘ತಾಲ್ಲೂಕಿನ ಹಡಗಿಲ ಹಾರುತಿ ಅಂಗನವಾಡಿ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿದ್ದೆವು. ಅಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ 28. ಆದರೆ ಇಬ್ಬರು ಮಾತ್ರ ಹಾಜರಿದ್ದರು. ಅದರ ಪಕ್ಕದಲ್ಲಿರುವ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದಾಗ ₹38 ಕೆ.ಜಿ ತೊಗರಿ ಬೇಳೆಯನ್ನು ₹50 ಕೆ.ಜಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂತು. ಹೀಗಾದರೆ ಬಡವರು ಬದುಕುವುದು ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಹಡಗಿಲ ಹಾರುತಿ ತಾಂಡಾದ ಅಂಗನವಾಡಿಯಲ್ಲಿ ಮಕ್ಕಳು, ಕಾರ್ಯಕರ್ತೆ ಇರಲಿಲ್ಲ. ಚವಡಾಪುರದಲ್ಲಿ 32ರ ಪೈಕಿ 5 ಮಕ್ಕಳು ಇದ್ದವು. ಆದರೆ ಹಾಜರಾತಿ ಪುಸ್ತಕದಲ್ಲಿ ಹೆಚ್ಚು ಮಕ್ಕಳ ಸಂಖ್ಯೆಯನ್ನು ತೋರಿಸಲಾಗಿತ್ತು. ಇದೇ ರೀತಿ ಹಲವೆಡೆ ಕಂಡು ಬಂದಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ಸದಸ್ಯ ಎಚ್.ಬಿ.ಶಿವಶಂಕರ ಮಾತನಾಡಿ, ‘ಜಿಲ್ಲೆಯ ಕೆಲವು ಅಂಗನವಾಡಿ, ಪಡಿತರ ಅಂಗಡಿ ಮತ್ತು ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದೇವೆ. ಎಲ್ಲ ಕಡೆಯೂ ಸಮಸ್ಯೆಗಳು ಇರುವುದು ಕಂಡು ಬಂದಿದೆ. ಹಾಸ್ಟೆಲ್‌ನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಮೂಲ ಸೌಕರ್ಯದ ಕೊರತೆ ಇದೆ. ಉಪಾಹಾರ ಕಡಿಮೆ ಕೊಡುತ್ತಾರೆ, ಟೀ, ಕಾಫಿ ಕೊಡುವುದಿಲ್ಲ ಎಂದು ವಿದ್ಯಾರ್ಥಿನಿಯರು ಅಳಲುತೋಡಿಕೊಂಡಿದ್ದಾರೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸದಸ್ಯ ವಿ.ಬಿ.ಪಾಟೀಲ ಮಾತನಾಡಿ, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಯಲ್ಲಿರುವ ಅಪೌಷ್ಟಿಕ ಮಕ್ಕಳ ವಾರ್ಡ್‌ಗೆ ಮಕ್ಕಳನ್ನು ದಾಖಲಿಸುತ್ತಿಲ್ಲ ಎಂದು ಆರೋಪಿಸುತ್ತಾರೆ. ಅಪೌಷ್ಟಿಕತೆ ಹೋಗಲಾಡಿಸಲು ಕ್ರಮಕೈಗೊಳ್ಳಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ಎರಡು ತಿಂಗಳಿಗೊಮ್ಮೆ ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು’ ಎಂದು ಹೇಳಿದರು.

ಸದಸ್ಯರಾದ ಬಿ.ಎ.ಮಹಮ್ಮದ್ ಅಲಿ, ಮಂಜುಳಾಬಾಯಿ ಇದ್ದರು.

ಸಿಇಒ, ಕೆಲವು ಅಧಿಕಾರಿಗಳು ಗೈರು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಗೈರಾಗಿದ್ದರು. ಇದರಿಂದ ಆಕ್ರೋಶಗೊಂಡ ಸದಸ್ಯರು, ‘ಆಯೋಗದ ಸಭೆಗೇ ಗೈರಾದರೆ ಹೇಗೆ?, ಇದಕ್ಕಿಂತಲೂ ಮಹತ್ವದ ಕಾರ್ಯಕ್ರಮ ಏನಿದೆ’ ಎಂದು ಪ್ರಶ್ನಿಸಿದರು. ‘ಅಧಿಕಾರಿಗಳ ಅನುಪಸ್ಥಿತಿಯನ್ನು ದಾಖಲಿಸಿಕೊಳ್ಳಲಾಗುವುದು’ ಎಂದರು.

ದಾಸ್ತಾನು ವಿಲೇವಾರಿಗೆ ಕ್ರಮಕೈಗೊಳ್ಳಿ

‘ಜಿಲ್ಲೆಯಲ್ಲಿ 4,127 ಕ್ವಿಂಟಲ್ ಗೋಧಿ, 198 ಕ್ವಿಂಟಲ್ ಸಕ್ಕರೆ, 254 ಕ್ವಿಂಟಲ್ ಹೆಸರು ಮತ್ತು 48,131 ಲೀಟರ್ ತಾಳೆ ಎಣ್ಣೆ ದಾಸ್ತಾನು ಉಳಿದಿದ್ದು, ಅದು ತಿನ್ನಲು ಯೋಗ್ಯವಾಗಿಲ್ಲ. ಆದ್ದರಿಂದ ವಿಲೇವಾರಿಗೆ ಕ್ರಮಕೈಗೊಳ್ಳಬೇಕು’ ಎಂದು ಸದಸ್ಯರು ಸೂಚಿಸಿದರು.

ಪಡಿತರ ಅಂಗಡಿಗಳಲ್ಲಿ ಎರಡು ವರ್ಷಗಳಿಂದ ವಿತರಣೆ ಮಾಡದೇ ಇರುವ ಗೋಧಿ, ಸಕ್ಕರೆ, ಹೆಸರು, ತೊಗರಿ ಬೇಳೆ ಮತ್ತು ತಾಳೆ ಎಣ್ಣೆಯನ್ನು ಹರಾಜು ಹಾಕಲು ಕ್ರಮಕೈಗೊಳ್ಳಬೇಕು.
– ಆರ್.ವೆಂಕಟೇಶಕುಮಾರ್, ಜಿಲ್ಲಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !