ಮಂಗಳವಾರ, ಡಿಸೆಂಬರ್ 10, 2019
26 °C
ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ– ಇಲಾಖೆಗಳ ನಡುವೆ ಸಮನ್ವಯ ಕೊರತೆ

ಕೆರೆಗಳ ರಕ್ಷಣೆ ಹೊಣೆ ಯಾರದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮಗೆ ವಹಿಸಿದ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ. ಕೆರೆ ಕಲುಷಿತಗೊಂಡಿರುವುದಕ್ಕೆ ನಾವು ಹೊಣೆ ಅಲ್ಲ’

ಬೆಳ್ಳಂದೂರು ಹಾಗೂ ವರ್ತೂರು ಕೆರೆ ಅಭಿವೃದ್ಧಿ ಕುರಿತು ಬಿಡಿಎ, ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು ಹೀಗೆ. ಹಾಗಾದರೆ ದಾರುಣ ಸ್ಥಿತಿ ತಲುಪಿರುವ ಈ ಎರಡು ಕೆರೆಗಳನ್ನು ಸರಿಪಡಿಸಬೇಕಾದ ಹೊಣೆ ಯಾರದು ಎಂಬುದಕ್ಕೆ ಯಾರ ಬಳಿಯೂ ಸಮರ್ಪಕ ಉತ್ತರ ಇಲ್ಲ.

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಬಿಡಿಎ ಅಧೀನದಲ್ಲಿವೆ. ಈ ಕೆರೆಗಳ ಕಳೆ ತೆಗೆಸುವುದು, ನೊರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಸುತ್ತ ಬೇಲಿ ನಿರ್ಮಿಸುವುದು ಹಾಗೂ ಹೂಳು ತೆಗೆಯುವ ಹೊಣೆಯನ್ನು ಬಿಡಿಎಗೆ ವಹಿಸಲಾಗಿದೆ.

‘ಈ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನಾವು ಜಾರಿಗೊಳಿಸಿದ್ದೇವೆ. ಆದರೆ, ಕಲುಷಿತ ನೀರು ಸೇರದಂತೆ ತಡೆಯುವ ಜವಾಬ್ದಾರಿ ಜಲಮಂಡಳಿಯವರದು. ಕೊಳಚೆ ನೀರು ಸೇರುವುದು ಸಂಪೂರ್ಣ ನಿಲ್ಲುವವರೆಗೂ ನಾವು ಮಾಡುವ ಪ್ರಯತ್ನಗಳೆಲ್ಲ ವ್ಯರ್ಥ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ವರ್ಷದ ಹಿಂದೆ ಬೆಳ್ಳಂದೂರು ಕೆರೆಯಲ್ಲಿದ್ದ ಕಳೆ ಸಸ್ಯಗಳನ್ನು ಹೊರತೆಗೆಸಿದೆವು. ಈಗ ಶೇ 50ರಷ್ಟು ಭಾಗದಲ್ಲಿ ಮತ್ತೆ ಕಳೆ ತುಂಬಿಕೊಂಡಿದೆ. ಆರು ತಿಂಗಳ ಪ್ರಯತ್ನವೆಲ್ಲ ನಿಷ್ಪ್ರಯೋಜಕವಾಗಿದೆ’ ಎಂದರು.

ಬಿಡಿಎ ಬೆಳ್ಳಂದೂರು ಕೆರೆಯಿಂದ 2017ರಲ್ಲಿ ಒಟ್ಟು 17 ಸಾವಿರ ಟನ್‌ ಕಳೆಯನ್ನು ಹೊರಗೆ ತೆಗೆಸಿತ್ತು.

‘12. 26 ಕಿ.ಮೀ ಸುತ್ತಳತೆ ಹೊಂದಿರುವ ಈ ಕೆರೆಗೆ ಬಿಡಿಎ ಇದುವರೆಗೆ 7.86 ಕಿ.ಮೀ ಉದ್ದದ ಬೇಲಿ ನಿರ್ಮಿಸಿದೆ. ಅಂಬೇಡ್ಕರ್‌ ನಗರ ಕೊಳೆಗೇರಿ ಬಳಿ ಒತ್ತುವರಿ ಸಮಸ್ಯೆ ಇದೆ. ಇಲ್ಲಿ ಸುಮಾರು 1.8 ಕಿ.ಮೀ ಉದ್ದಕ್ಕೆ ಬೇಲಿ ಇನ್ನೂ ನಿರ್ಮಾಣವಾಗಿಲ್ಲ. ಕೆರೆ ಪಕ್ಕದಲ್ಲಿ 2.5 ಕಿ.ಮೀ.ಯಷ್ಟು ದೂರ ರಕ್ಷಣಾ ಇಲಾಖೆ ಜಾಗ ಇದ್ದು, ಅಲ್ಲಿಗೆ ಬೇಲಿ ಅಗತ್ಯ ಇಲ್ಲ’ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

ನೊರೆ ಹಾವಳಿ ಹಾಗೂ ಪ್ರವಾಹ ನಿಯಂತ್ರಿಸಲು ಇಲ್ಲಿ ತೂಬು (ಸ್ಲ್ಯೂಸ್‌) ಗೇಟ್‌ಗಳು,  ಕಿರು ಅಣೆಕಟ್ಟುಗಳನ್ನು ನಿರ್ಮಿಸುವುದು ಹಾಗೂ ಬದುಗಳನ್ನು ಬಲಪಡಿಸುವ ಕಾಮಗಾರಿಗಳನ್ನು ನಡೆಸುವ ಹೊಣೆಯೂ ಪ್ರಾಧಿಕಾರದ್ದು. 

‘ಬೆಳ್ಳಂದೂರು ಕೆರೆಯ ಯಮಲೂರು ಭಾಗದಲ್ಲಿ ತೂಬುಗೇಟ್‌ಗಳನ್ನು ನಿರ್ಮಿಸುವ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ. ಇಲ್ಲಿ ಕಿರು ಅಣೆಕಟ್ಟೆ ಹಾಗೂ ಬದು ಗಟ್ಟಿಯಾಗಿದೆ. ಬೆಳ್ಳಂದೂರು ಭಾಗದಲ್ಲಿ ಐದು ತೂಬು ಗೇಟ್‌ಗಳನ್ನು ನಿರ್ಮಿಸುವ ಕಾರ್ಯ ಪೂರ್ಣಗೊಂಡಿದೆ. ಕಿರು ಅಣೆಕಟ್ಟೆ ನಿರ್ಮಾಣ ಶೇ 80ರಷ್ಟು ಪೂರ್ಣವಾಗಿದೆ. ಬದುವನ್ನು ಇನ್ನಷ್ಟೇ ಬಲಪಡಿಸಬೇಕಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಕೊಳಚೆ ತಡೆಯಲು ಇನ್ನೆರಡು ವರ್ಷ ಬೇಕು: ‘ಬೆಳ್ಳಂದೂರು ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣ ತಡೆಯಲು ಇನ್ನೂ ಎರಡು ವರ್ಷ ಬೇಕು. ಈ ಕಾರ್ಯ 2020ರ ಜುಲೈನಲ್ಲಿ ಪೂರ್ಣಗೊಳ್ಳಬಹುದು. ನಾವು ಈ ಬಗ್ಗೆ ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಟ್ಟಿದ್ದೇವೆ. ನಿತ್ಯ 15 ಕೋಟಿ ಲೀಟರ್‌ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ ಎಸ್‌ಟಿಪಿಯನ್ನು ಜಲಮಂಡಳಿ ಇನ್ನಷ್ಟೇ ನಿರ್ಮಿಸಬೇಕಿದೆ’ ಎಂದು ಜಲಮಂಡಳಿ  ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಕೆರೆಯ ಆಸುಪಾಸಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕೊಳಚೆ ನೀರು ಕೆರೆ ಸೇರುವುದನ್ನು ತಡೆಯಬೇಕಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕ್ರಮ ಕೈಗೊಳ್ಳಬೇಕು’ ಎಂದು ತುಷಾರ್‌ ಅಭಿಪ್ರಾಯಪಟ್ಟರು. 

ಕೆರೆ ಆಸುಪಾಸಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ಬಳಿಕ ಯಾವುದೇ ಕ್ರಮ ಆಗಿಲ್ಲ.

ಈ ಕೆರೆಯಲ್ಲಿ ನೊರೆ ಹಾವಳಿಯೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ತಿಂಗಳ ಹಿಂದೆ ಮಳೆಯಾದಾಗಲೂ ಇಲ್ಲಿ ನೊರೆ ಹಾವಳಿ ಕಾಣಿಸಿಕೊಂಡಿತ್ತು.

‘ಎನ್‌ಜಿಟಿ ಆದೇಶದ ವಿರುದ್ಧ ಮೇಲ್ಮನವಿ’

‘ಬೆಳ್ಳಂದೂರು ಕೆರೆಯ ಉಸ್ತುವಾರಿಯನ್ನು ಬಿಡಿಎಗೆ ವಹಿಸಲಾಗಿದೆ. ನಮ್ಮದಲ್ಲದ ತಪ್ಪಿಗೆ ₹ 25 ಕೋಟಿ ದಂಡ ವಿಧಿಸಲಾಗಿದೆ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕೆರೆಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಇಲ್ಲಿನ ಭದ್ರತೆಗೆ 12 ಮಂದಿ ಮಾರ್ಷಲ್‌ಗಳನ್ನು ನೇಮಿಸಿದ್ದೇವೆ. ಇಲ್ಲಿ ಕಸ ಹಾಕುವವರನ್ನು ಹಿಡಿದು ಅವರು ದಂಡ ವಿಧಿಸುತ್ತಲೇ ಇದ್ದಾರೆ. ಇಲ್ಲಿ ಬೆಂಕಿ ಹಾಕಲು ಬಂದಿದ್ದ ನಾಲ್ವರನ್ನು ಮಾರ್ಷಲ್‌ಗಳು ಬುಧವಾರ ವಶಕ್ಕೆ ಪಡೆದಿದ್ದಾರೆ’ ಎಂದು ತಿಳಿಸಿದರು. 

ವೈರ್‌ಗಳಿಂದ ತಾಮ್ರವನ್ನು ಬೇರ್ಪಡಿಸುವ ಸಲುವಾಗಿ ಅದಕ್ಕೆ ಬೆಂಕಿ ಹಾಕುವ ಕಾರ್ಯದಲ್ಲಿ ಕೆಲವರು ತೊಡಗಿದ್ದಾರೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಇಬ್ಬಲೂರು ಪ್ರದೇಶದ ಸಮೀಪ ವರ್ಷದ ಹಿಂದೆ ಬೆಂಕಿ ಕಾಣಿಸಿಕೊಂಡಿತ್ತು. ಆ ಬಳಿಕ ಕೆರೆಯ ಭದ್ರತೆ ಹೆಚ್ಚಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು