ಫೇಲಾಗಲು ಕಾರಣ ಯಾರು?

ಶುಕ್ರವಾರ, ಏಪ್ರಿಲ್ 26, 2019
35 °C

ಫೇಲಾಗಲು ಕಾರಣ ಯಾರು?

Published:
Updated:

ನಾನು ಬಿಕಾಂ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಹೈಸ್ಕೂಲ್‌ನಲ್ಲಿದ್ದಾಗ ನನಗೆ ಓದುವುದು ಎಂದರೆ ತುಂಬಾ ಇಷ್ಟವಿತ್ತು. ಅಷ್ಟೇ ಚೆನ್ನಾಗಿ ಓದುತ್ತಿದ್ದೆ ಕೂಡ. ಪಿಯುಸಿಯಲ್ಲಿ ಸೈನ್ಸ್‌ (ಪಿಸಿಎಂಬಿ) ತೆಗೆದುಕೊಂಡೆ. ಕನ್ನಡ ಮೀಡಿಯಂ ವಿದ್ಯಾರ್ಥಿಯಾಗಿದ್ದರಿಂದ ಅರ್ಥವಾಗದಿದ್ದರೂ ತುಂಬಾ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ಆಮೇಲೆ ನಿಧಾನಕ್ಕೆ ಪಾಠಗಳು ಅರ್ಥವಾಗುತ್ತಾ ಹೋಯಿತು. ಆದರೆ ಮನೆಯವರ ಒತ್ತಡ, ಭಯ, ಸ್ನೇಹಿತರು ಇಲ್ಲ ಎನ್ನುವ ಬೇಜಾರು ಹೀಗೆ ಏನೇನೋ ಯೋಚನೆಗಳಿಂದ ಪಿಯುಸಿಯಲ್ಲಿ ಫೇಲಾದೆ. ಆಮೇಲೆ ಸಪ್ಲಿಮೆಂಟ್ರಿ ಪರೀಕ್ಷೆ ಬರೆದು ಮತ್ತೆ ಡಿಗ್ರಿಯಲ್ಲಿ ಬಿಕಾಂ ಆರಿಸಿಕೊಂಡೆ. ಆದರೆ ಈಗ ನನಗೆ ಪಿಯುಸಿಯಲ್ಲಿ ಚೆನ್ನಾಗಿ ಓದಿಲ್ಲ ಎಂಬ ಬೇಸರ ಕಾಡುತ್ತಿದೆ. ಅದಕ್ಕೆ ನಾನೊಬ್ಬನೇ ಕಾರಣವಲ್ಲ, ನನ್ನ ಪೋಷಕರು, ಊರಿನ ಜನ, ಸಂಬಂಧಿಕರು, ಸ್ನೇಹಿತರು ಎಲ್ಲರೂ ಕಾರಣ ಅನ್ನಿಸುತ್ತಿದೆ. ಇದರಿಂದ ಹೊರ ಬರಲು ಏನು ಮಾಡಬೇಕು?
–ಹೆಸರು, ಊರು ಬೇಡ

ಉತ್ತರ: ಒಮ್ಮೆ ಪರೀಕ್ಷೆಯಲ್ಲಿ ಫೇಲಾದೆ ಎಂಬ ಕಾರಣಕ್ಕೆ ನೀವು ಸುಮ್ಮನೆ ಕೂತಿಲ್ಲ. ಮರುಪರೀಕ್ಷೆ ಬರೆದು ಪಾಸ್ ಮಾಡಿಕೊಂಡು ಕಾಮರ್ಸ್ ವಿಷಯದಲ್ಲಿ ಡಿಗ್ರಿ ಮಾಡುತ್ತಿದ್ದೀರಿ. ಅದು ಪ್ರಶಂಸನೀಯ. ಭೂತಕಾಲದ ಬಗ್ಗೆ ಯೋಚಿಸದೆ ಸದ್ಯದ ಡಿಗ್ರಿ ಕೋರ್ಸ್‌ನ ಮೇಲೆ ಗಮನ ನೀಡಿ. ಮುಂದಿನ ಭವಿಷ್ಯಕ್ಕೆ ನೀವು ಇರಿಸಿಕೊಂಡ ಗುರಿಯನ್ನು ಸಾಧಿಸುವತ್ತ ನಿಮ್ಮ ಒಲವಿರಲಿ. ಸಾಮಾನ್ಯವಾಗಿ ಅನುತ್ತೀರ್ಣರಾಗಿರುವುದಕ್ಕೆ ನಾವು ಸದಾ ಬೇರೆಯವರನ್ನೇ ಕಾರಣವನ್ನಾಗಿಸುತ್ತೇವೆ. ಅದು ಪ್ರತ್ಯಕ್ಷವಾಗಿ ಆಗಿರಬಹುದು ಅಥವಾ ಪರೋಕ್ಷವಾಗಿಯಾದರೂ ಆಗಿರಬಹುದು. ಬೇರೆಯವರನ್ನೇ ಗುರಿ ಮಾಡುತ್ತೇವೆ. ಅದು ಏಕೆಂದರೆ ನಾವು ಸದಾ ನಮ್ಮದೇ ಸರಿ ಎಂದು ಯೋಚಿಸುವ ಕಾರಣದಿಂದ. ಈ ಯೋಚನೆಗಳಿಂದ ಹೊರ ಬರಲು ಇರುವ ಒಂದೇ ಒಂದು ಉಪಾಯ ಎಂದರೆ ವರ್ತಮಾನದಲ್ಲಿ ಬದುಕುವುದು. ಭೂತಕಾಲವನ್ನು ವಿಮರ್ಶೆ ಮಾಡುತ್ತಾ ಕುಳಿತುಕೊಳ್ಳಬೇಡಿ. ನೀವು ಮತ್ತೆ ಆ ಕಾಲಕ್ಕೆ ಮರಳಲು ಹಾಗೂ ಯಾವುದನ್ನೂ ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಈಗ ಇರಿಸಿಕೊಂಡ ಗುರಿಯ ಮೇಲೆ ಗಮನವಿಡಿ. ಅದನ್ನು ಸಾಧಿಸುವತ್ತ ನಿಮ್ಮ ಒಲವಿರಲಿ. ಕಾಮರ್ಸ್ ವಿಭಾಗದಲ್ಲಿ ಅನೇಕ ಅವಕಾಶಗಳಿವೆ. ಹಾಗಾಗಿ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಅದರ ಮೇಲೆ ಕೆಲಸ ಮಾಡಿ.

*
ನನಗೆ 24 ವರ್ಷ. ಕನ್ನಡ ಎಂ.ಎ ಮಾಡಿ ಈಗ ಬಿ.ಇಡಿ. ಮಾಡುತ್ತಿದ್ದೇನೆ. ನನಗೆ ತರಗತಿಯ ಸನ್ನಿವೇಶಗಳು ಬೇಸರ ತರಿಸಿವೆ. ಕೆಲವು ಪ್ರಾಧ್ಯಾಪಕರು ತಮ್ಮ ಕೆಲಸವನ್ನು ಬಿಟ್ಟು ಅನಗತ್ಯ ವಿಚಾರಗಳನ್ನು ಹೇಳುತ್ತಾರೆ. ಈ ಬಗ್ಗೆ ಪ್ರಾಂಶುಪಾಲರ ಬಳಿ ಹೇಳಿದರೂ ಏನೂ ಪ್ರಯೋಜನವಾಗಿಲ್ಲ. ನನ್ನ ಸಹಪಾಠಿಗಳೇ ಪ್ರಾಧ್ಯಾಪಕರಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಾರೆ. ಅವರಿಗೆ ತರಗತಿ ಇಷ್ಟವಿಲ್ಲ. ನಮಗೆ ತರಗತಿಗೆ ಹೋಗದಿದ್ದರೆ ಇಂಟರ್‌ನಲ್ ಮಾರ್ಕ್ ಕಡಿಮೆ ಬರುತ್ತದೆ ಎಂಬ ಚಿಂತೆ. ನನಗೆ ಕಾಲೇಜಿಗೆ ಹೋಗಲು ಮನಸ್ಸಿಲ್ಲ. ಆದರೂ ಹೋಗುವುದು ಅನಿವಾರ್ಯ. ಈ ಕಾರಣದಿಂದ ಓದಲು ಸಾಧ್ಯವಾಗುತ್ತಿಲ್ಲ. ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಭವಿಷ್ಯದ ಬಗ್ಗೆ ಚಿಂತಿಸಿ ನಿರಾಸೆಯಾಗುತ್ತಿದೆ. ಜೀವನದ ಬಗ್ಗೆ ಜಿಗುಪ್ಸೆ ಉಂಟಾಗುತ್ತಿದೆ. ಒಂದು ವೇಳೆ ಟೀಚರ್ ಆದರೆ ಮಕ್ಕಳಿಗೆ ಏನು ಕಲಿಸುವುದು? ಇಂತಹವರಿಂದ ನಮ್ಮ ಸಮಯ ಹಾಳಾಗುತ್ತಿದೆ ಎನ್ನಿಸುತ್ತಿದೆ. ಈಗ ನಾನು ಏನು ಮಾಡಬೇಕು?
–ಹೆಸರು, ಊರು ಬೇಡ

ಉತ್ತರ: ಸದ್ಯಕ್ಕೆ ಬೇರೆ ಏನಾದರೂ ಹೊಸತನ್ನು ಮಾಡಲು ನಿಮಗೆ ಅಕಾಶದ ಕೊರತೆ ಇದೆ. ನೀವು ಟೀಚಿಂಗ್‌ ಅನ್ನು ವೃತ್ತಿಯಾಗಿ ಪರಿಗಣಿಸಿದ್ದರೆ ಉತ್ತಮ ಅಂಕಗಳೊಂದಿಗೆ ಬಿ.ಎಡ್‌. ಮುಗಿಸುವುದು ಅನಿವಾರ್ಯ. ಅನೇಕ ಕಾಲೇಜುಗಳು ನೀವು ಹೇಳಿದ ರೀತಿಯಲ್ಲೇ ಕೆಲಸ ಮಾಡುತ್ತಿವೆ. ಕೇವಲ ನಾಮಮಾತ್ರಕ್ಕೆ ಡಿಗ್ರಿ ಪಡೆಯಬೇಕು ಎಂಬಂತೆ ಆಗಿದೆ ಪರಿಸ್ಥಿತಿ. ನೀವು ಅನಿವಾರ್ಯವಾಗಿ ಕಾಲೇಜಿಗೆ ಹೋಗಲೇಬೇಕು. ಲೈಬ್ರರಿಯಲ್ಲಿರುವ ಪುಸಕ್ತಗಳನ್ನು ಓದುವ ಮೂಲಕ ನಿಮ್ಮ ಓದಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಆಗಲೂ ನಿಮಗೆ ಅರ್ಥವಾಗದಿದ್ದರೆ ಪ್ರಾಧ್ಯಾಪಕರ ಜೊತೆ ಚರ್ಚೆ ಮಾಡಿ. ನೀವು ಒಬ್ಬರೇ ಹೋಗಿ ಕೇಳಿದರೆ ಅವರು ನಿಮ್ಮ ಅನುಮಾನಗಳನ್ನು ಪರಿಹರಿಸುತ್ತಾರೆ. ಒಂದು ವೇಳೆ ಆಗಲೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಪ್ರಾಂಶುಪಾಲರ ಜೊತೆ ಹೋಗಿ ಮಾತನಾಡಿ. ನಿಮ್ಮನ್ನು ಹೆಚ್ಚು ಹೆಚ್ಚು ಓದಿನಲ್ಲಿ ತೊಡಗಿಸಿಕೊಳ್ಳಿ. ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ಉಚಿತವಾಗಿ ಲಭ್ಯವಿರುವ ವಿಡಿಯೊಗಳನ್ನು ನೋಡಿ. ಇದರಿಂದ ನಿಮ್ಮ ಶೈಕ್ಷಣಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ಟೀಚಿಂಗ್ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿಗಳಿಗೆ ನಿಮ್ಮಿಂದಾದಷ್ಟು ಉತ್ತಮವಾಗಿ ಕಲಿಸಲು ಪ್ರಯತ್ನಿಸಿ. ಆಗ ನಿಮ್ಮ ವಿದ್ಯಾರ್ಥಿಗಳು ನೀವು ಯೋಚಿಸಿದ ರೀತಿಯಲ್ಲೇ ಯೋಚಿಸುವುದನ್ನು ತಪ್ಪಿಸಬಹುದು.

***
ನನ್ನ ವಯಸ್ಸು 25. ನಾನು ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಓದಿದ್ದು ಮ್ಯಾಟ್ರಿಕ್ಸ್‌ವರೆಗೆ ಮಾತ್ರ. ನನ್ನ ಸಮಸ್ಯೆ ಎಂದರೆ ನಾನು ಯಾವಾಗಲೂ ಚೆನ್ನಾಗಿ ನಗು ನಗುತ್ತಾ ಇರುತ್ತೇನೆ. ಆದರೆ ಒಮ್ಮಿಂದೊಮ್ಮೆಲೆ ಸಪ್ಪಗಾಗಿ ಬಿಡುತ್ತೇನೆ. ಇದಕ್ಕೆ ಏನು ಮಾಡಬೇಕು ತಿಳಿಯುತ್ತಿಲ್ಲ. ಮನಸ್ಸಿನಲ್ಲಿ ಏನೋ ಒಂಥರಾ ಕಳವಳ. ಸಮಾಧಾನವೇ ಆಗುವುದಿಲ್ಲ. ನನಗೆ ಜೀವನವೇ ಬೇಡ ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. 
–ಮಂಜುನಾಥ, ಬಾದಾಮಿ

ಉತ್ತರ: ಒಬ್ಬ ಮನುಷ್ಯ ಯಾವಾಗಲೂ ಖುಷಿಯಿಂದ ಸಂತಸವಾಗಿರಲು ಸಾಧ್ಯವಿಲ್ಲ. ಕೆಲವೊಂದು ವೇಳೆ ನಾವು ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ಬಹುಶಃ ಅದು ಮನಸ್ಸಿಗೆ ಇಷ್ಟವಾಗದ ಘಟನೆ ನಡೆದಾಗ ಹಾಗೂ ನಮ್ಮ ಬಗ್ಗೆ ಯಾರಾದರೂ ಏನಾದರೂ ಹೇಳಿದಾಗ ಮನಸ್ಸಿಗೆ ನೋವಾಗುತ್ತದೆ. ನಮ್ಮ ಸುತ್ತಲಿನ ಧನಾತ್ಮಕ ಘಟನೆಯೂ ನಮ್ಮನ್ನು ಕುಗ್ಗಿಸಿ, ಖಿನ್ನತೆಗೆ ಒಳಗಾಗುವಂತೆ ಮಾಡಬಹುದು. ಇದು ಕೆಲವೊಂದು ಸಂದರ್ಭಕ್ಕೆ ಮಾತ್ರ. ಹಾಗಾಗಿ ನೀವು ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದೊಂದು ಹಂತವಷ್ಟೇ. ಅದು ಬೇಗನೇ ಕಳೆದು ಹೋಗುತ್ತದೆ. ಯಾವಾಗ ನಿಮಗೆ ಬೇಸರ ಎನ್ನಿಸುತ್ತದೆ ಆಗ ಮನಸ್ಸನ್ನು ಬೇರೆಡೆಗೆ ಸೆಳೆಯಿರಿ. ಅದು ವಾಕ್ ಹೋಗುವುದು, ಸಂಗೀತ ಕೇಳುವುದು, ನಿಮ್ಮ ಭಾವನೆಗಳನ್ನು ಆಪ್ತ ಸ್ನೇಹಿತರ ಜೊತೆ ಹಂಚಿಕೊಳ್ಳುವುದು, ಹಣ್ಣಿನ ರಸ ಕುಡಿಯುವುದು ಅಥವಾ ನಿಮ್ಮ ಭಾವನೆಗಳನ್ನು ಪುಸ್ತಕವೊಂದರಲ್ಲಿ ಬರೆದಿಡುವುದು ಹೀಗೆ ಯಾವುದಾದರೂ ಆಗಬಹುದು. ದೀರ್ಘ ಉಸಿರು ಎಳೆದುಕೊಂಡು ಐದು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಈ ಎಲ್ಲಾ ತಂತ್ರಗಳು ನಿಮ್ಮನ್ನು ಭಯ, ಆತಂಕದಿಂದ ಹೊರಬರಲು ಸಹಾಯ ಮಾಡುತ್ತವೆ, ಜೊತೆಗೆ ಇದರಿಂದ ಖಂಡಿತ ನೀವು ಸುಧಾರಿಸುತ್ತೀರಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !