ಬಿಜೆಪಿ ಅಭ್ಯರ್ಥಿ ಯಾರು: ಇತರೆ ಪಕ್ಷಗಳಲ್ಲೂ ಕುತೂಹಲ

ಶುಕ್ರವಾರ, ಮಾರ್ಚ್ 22, 2019
29 °C
ಶ್ರೀನಿವಾಸ ಪ್ರಸಾದ್‌ ಅಭ್ಯರ್ಥಿಯಾಗಲು ಹೆಚ್ಚಿದ ಒತ್ತಡ, ಇನ್ನೂ ಮನಸ್ಸು ಮಾಡದ ಹಿರಿಯ ಮುಖಂಡ

ಬಿಜೆಪಿ ಅಭ್ಯರ್ಥಿ ಯಾರು: ಇತರೆ ಪಕ್ಷಗಳಲ್ಲೂ ಕುತೂಹಲ

Published:
Updated:
Prajavani

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಅಲ್ಲ; ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷಗಳ ಮುಖಂಡರನ್ನೂ ಕಾಡುತ್ತಿದೆ. 

ನಾಮಪತ್ರ ಸಲ್ಲಿಕೆ ಆರಂಭವಾಗುವ ದಿನ ಸಮೀಪಿಸುತ್ತಿದ್ದರೂ, ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಇನ್ನೂ ಒತ್ತಾಗುತ್ತಿಲ್ಲವಲ್ಲ ಎಂಬ ಚಿಂತೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡುತ್ತಿದ್ದರೆ, ತಮ್ಮ ಎದುರಾಳಿ ಅಭ್ಯರ್ಥಿ ಯಾರಾಗಿರಬಹುದು ಎಂಬ ಕುತೂಹಲ ಇತರ ಪಕ್ಷಗಳ ನಾಯಕರಲ್ಲಿದೆ. 

ಕಾಂಗ್ರೆಸ್‌ ಈಗಾಗಲೇ ತನ್ನ ಅಭ್ಯರ್ಥಿಯನ್ನಾಗಿ ಹಾಲಿ ಸಂಸದ ಆರ್‌.ಧ್ರುವನಾರಾಯಣ ಅವರನ್ನೇ ಕಣಕ್ಕಿಳಿಸುವುದಾಗಿ ಘೋಷಿಸಿದ್ದು, ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಪಕ್ಷದಿಂದ ಗೆಲುವು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ‘ಕೈ’ ಪಾಳಯದ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದರೂ, ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಅವರು ಹತ್ತಿರದಿಂದ ಗಮನಿಸುತ್ತಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೇನಾ ಸಿಬ್ಬಂದಿ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್‌–ಎ–ಮಹಮ್ಮದ್‌ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ದೇಶದ ರಾಜಕೀಯ ಚಿತ್ರಣ ಬದಲಾಗಿರುವಂತೆ ಕಂಡು ಬಂದಿರುವುದು ಸ್ಥಳೀಯ ಕಾಂಗ್ರೆಸ್‌ ನಾಯಕರನ್ನು ಸ್ವಲ್ಪ ಚಿಂತೆಗೀಡುಮಾಡಿದೆ. 

10ಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ ಬಿಜೆಪಿ ಯಾರಿಗೆ ಟಿಕೆಟ್‌ ನೀಡಿದರೆ, ಪಕ್ಷಕ್ಕೆ ಹೆಚ್ಚು ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರು ಮುಳುಗಿದ್ದಾರೆ.

ಶ್ರೀನಿವಾಸ ಪ್ರಸಾದ್ ಮೇಲೆ ಹೆಚ್ಚಿದ ಒತ್ತಡ: ಈ ಮಧ್ಯೆ, ಬಿಜೆಪಿಯಿಂದ ಟಿಕೆಟ್‌ ಪಡೆಯಲು 10ಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದರೂ, ಪಕ್ಷದ ಸ್ಥಳೀಯ ಮುಖಂಡರು ಚುನಾವಣೆಗೆ ಸ್ಪರ್ಧಿಸುವಂತೆ ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್‌ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. 

ಕಾಂಗ್ರೆಸ್‌ನ ಧ್ರುವನಾರಾಯಣ ಅವರಿಗೆ ಪ್ರಬಲ ಪೈಪೋಟಿ ನೀಡಲು ಶ್ರೀನಿವಾಸ ಪ್ರಸಾದ್‌ ಅವರಿಂದ ಮಾತ್ರ ಸಾಧ್ಯ ಎಂದು ತೀರ್ಮಾನಕ್ಕೆ ಬಂದಿರುವ ಸ್ಥಳೀಯ ನಾಯಕತ್ವ, ರಾಜ್ಯದ ಮುಖಂಡರು ಹಾಗೂ ರಾಷ್ಟ್ರದ ವರಿಷ್ಠರಿಗೂ ಈ ವಿಚಾರವನ್ನು ಮನವರಿಕೆ ಮಾಡಿದೆ. ಕೇಂದ್ರದ ಹಾಗೂ ರಾಜ್ಯದ ನಾಯಕರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಶ್ರೀನಿವಾಸ ಪ್ರಸಾದ್‌ ಅವರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಆರೋಗ್ಯದ ನೆಪವೊಡ್ಡಿರುವ ಶ್ರೀನಿವಾಸ ಪ್ರಸಾದ್‌ ಅವರು, ಕಣಕ್ಕಿಳಿಯಲು ಇನ್ನೂ ಮನಸ್ಸು ಮಾಡಿಲ್ಲ.

‘ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಈಗಾಗಲೇ ಘೋಷಿಸಿದ್ದೇನೆ. ನಾನು ಸೂಚಿಸುವ ವ್ಯಕ್ತಿಗೆ ಟಿಕೆಟ್‌ ನೀಡಿ, ಗೆಲುವಿಗೆ ಶ್ರಮಿಸುತ್ತೇನೆ’ ಎಂದು ಶ್ರೀನಿವಾಸ ಪ್ರಸಾದ್‌ ಅವರು ಹೇಳುತ್ತಿದ್ದಾರೆ. ಆದರೆ, ಈ ಮಾತನ್ನು ಬಿಜೆಪಿಯ ಮುಖಂಡರು ಕೇಳುತ್ತಿಲ್ಲ.

‘ಶ್ರೀನಿವಾಸ ಪ್ರಸಾದ್‌ ಅವರು ಸ್ಪರ್ಧಿಸುವುದಿಲ್ಲ ಎಂದು ಗೊತ್ತಾದ ಮೇಲೆಯೇ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಆಕಾಂಕ್ಷಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಿದರೆ, ಉಳಿದವರಲ್ಲಿ ಅಸಮಾಧಾನ ಭುಗಿಲೇಳಲಿದೆ. ಚುನಾವಣೆಯಲ್ಲಿ ಅವರು ತಟಸ್ಥರಾದರೆ, ಪಕ್ಷಕ್ಕೆ ಹಿನ್ನಡೆ ಖಚಿತ. ಶ್ರೀನಿವಾಸ ಪ್ರಸಾದ್‌ ಅವರು ಸ್ಪರ್ಧಿಸಿದರೆ, ಅಷ್ಟೂ ಮಂದಿ ಆಕಾಂಕ್ಷಿಗಳು ಅವರನ್ನು ಬೆಂಬಲಿಸುತ್ತಾರೆ. ಅವರು ಈ ಹಿಂದೆಯೂ ಸಂಸದರಾಗಿದ್ದವರು. ಕ್ಷೇತ್ರದ ಜನರು ಅದರಲ್ಲೂ ವಿಶೇಷವಾಗಿ ದಲಿತ ಸಮುದಾಯ ಅವರ ಬೆನ್ನಿಗಿದೆ. ಮೋದಿ ಅವರ ವರ್ಚಸ್ಸಿನ ಜೊತೆಗೆ ಶ್ರೀನಿವಾಸ ಪ್ರಸಾದ್‌ ಅವರ ಅಭ್ಯರ್ಥಿತನವೂ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲಿದೆ’ ಎಂಬುದು ಸ್ಥಳೀಯ ನಾಯಕರ ನಿಲುವು.

‘ನೀವೇ ಸ್ಪರ್ಧಿಸಬೇಕು ಎಂದು ಶ್ರೀನಿವಾಸ ಪ್ರಸಾದ್‌ ಅವರನ್ನು ನಾವು ಕೇಳಿಕೊಂಡಿದ್ದೇವೆ. ರಾಜ್ಯದ ಮತ್ತು ರಾಷ್ಟ್ರದ ನಾಯಕರಿಗೂ ತಿಳಿಸಿದ್ದೇವೆ. ಆದರೆ, ಅವರು ಇದುವರೆಗೂ ಸಮ್ಮತಿಸಿಲ್ಲ. ಒಂದು ವೇಳೆ ಶ್ರೀನಿವಾಸ ಪ್ರಸಾದ್‌ ಸ್ಪರ್ಧಿಸದಿದ್ದರೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ’ ಎಂದು ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರೀನಿವಾಸ ಪ್ರಸಾದ್ ಮನೆಯಲ್ಲಿ ಒತ್ತಾಯ ಸಭೆ

ಈ ಮಧ್ಯೆ, ಚಾಮರಾಜನಗರ ಜಿಲ್ಲೆಯ ಪಕ್ಷದ ಕೆಲವು ಮುಖಂಡರು, ಕಾರ್ಯಕರ್ತರು ಗುರುವಾರ ಮೈಸೂರಿನಲ್ಲಿರುವ ಶ್ರೀನಿವಾಸ ಪ್ರಸಾದ್‌ ಅವರ ಮನೆಗೆ ತೆರಳಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕಲಿದ್ದಾರೆ.

‘ಚಾಮರಾಜನರದಲ್ಲಿ ಪಕ್ಷ ಗೆಲ್ಲಬೇಕಾದರೆ ಶ್ರೀನಿವಾಸ ಪ್ರಸಾದ್‌ ಅವರೇ ಅಭ್ಯರ್ಥಿಯಾಗಬೇಕು. ಈಗಾಗಲೇ ಅವರನ್ನು ಒತ್ತಾಯ ಮಾಡಿದ್ದೇವೆ. ಗುರುವಾರ ಮತ್ತೊಮ್ಮೆ ಅವರ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರೆಲ್ಲ ಮೈಸೂರಿಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿ ಒತ್ತಡ ಹಾಕುತ್ತೇವೆ’ ಎಂದು ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ವೆಂಕಟರಮಣಸ್ವಾಮಿ (ಪಾಪು) ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !