ಸರಸದಲಿ ಸಮಯದ ಚಿಂತೆ ಏಕೆ?

ಮಂಗಳವಾರ, ಜೂನ್ 18, 2019
26 °C

ಸರಸದಲಿ ಸಮಯದ ಚಿಂತೆ ಏಕೆ?

Published:
Updated:
Prajavani

ಮಿಲನದ ಸರಾಸರಿ ಸಮಯ ಎಷ್ಟು? ಎಂದು ಅನೇಕರು ಕೇಳುವುದಿದೆ. ಹಾಗೆ ನೋಡಿದರೆ ಇದಕ್ಕೆ ಸರಾಸರಿ ಸಮಯ ಎನ್ನುವುದು ಇರುವುದಿಲ್ಲ. ಅಷ್ಟಕ್ಕೂ ಸರಸದಲ್ಲಿ ಸಮಯದ ಚಿಂತೆ ಮಾಡಬಾರದು. ಇಲ್ಲಿ ‘ಸಮಯ’ಕ್ಕಿಂತ ಹೆಚ್ಚು ಮುಖ್ಯವಾದುದು ‘ಸಂತೃಪ್ತಿ’. 

ಕೆಲವರು ಕೆಲ ನಿಮಿಷಗಳ ಕಾಲ ಮಾತ್ರ ಸರಸದಲ್ಲಿ ತೊಡಗಿದರೂ ಪೂರ್ಣಪ್ರಮಾಣದ ಸಂತೃಪ್ತಿಯನ್ನು ಪಡೆಯುತ್ತಾರೆ. ಇನ್ನೂ ಕೆಲವರು ಗಂಟೆಗಳ ಕಾಲ ಮಿಲನಮಹೋತ್ಸವದಲ್ಲಿ ಮೀಯುವುದುಂಟು. ಇದು ಅವರವರ ಅಭಿರುಚಿ, ಕಾಲಾವಕಾಶ, ಸ್ಥಳ, ಸಂದರ್ಭಗಳ ಮೇಲೆ ನಿರ್ಧಾರವಾಗುತ್ತದೆ. ಯುವ ಜೋಡಿಗಳಂತೂ ತಮ್ಮ ಬಿಡುವಿಲ್ಲದ ದಿನಗಳಲ್ಲಿ ಸಮಯವಿಲ್ಲದಾಗ ಐದೇ ನಿಮಿಷದ ಮಿಲನಕ್ಕೆ ಹಾತೊರೆಯುವುದುಂಟು. ವಾರಾಂತ್ಯಗಳಲ್ಲಿ ಸಮಯವಿದ್ದಾಗ ದಿನವಿಡೀ ಹಾಸಿಗೆಯಲ್ಲಿ ಜತೆಯಾಗಿ ಸರಸದ ರಸನಿಮಿಷಗಳನ್ನು ಅನುಭವಿಸುವುದೂ ಇದೆ.

ಅದೂ ಅಲ್ಲದೆ, ವಯಸ್ಸು ಮತ್ತು ಆರೋಗ್ಯ ಕೂಡ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತವೆ. ವಯಸ್ಸಾದಂತೆ ಮಿಲನಕ್ಕೂ ಮುನ್ನ ಉದ್ರೇಕಗೊಳ್ಳುವುದಕ್ಕೇ ಹೆಚ್ಚು ಸಮಯ ಬೇಕಾಗಬಹುದು. ನಂತರ ಪರಾಕಾಷ್ಠೆಯನ್ನು ತಲುಪಲು ಇನ್ನೂ ಹೆಚ್ಚು ಸಮಯದ ಅಗತ್ಯ ಬೀಳಬಹುದು. ಆಗ ಸಹಜವಾಗಿ ಮಿಲನದ ಅವಧಿ ಅಧಿಕಗೊಳ್ಳುತ್ತದೆ. ಆದರೂ ಅದರಲ್ಲಿ ಸಂತೃಪ್ತಿಯ ಗಳಿಗೆ ಕಡಿಮೆಯೇ.

ಇನ್ನೊಂದು ಗಮನಿಸಬೇಕಾದ ಸಂಗತಿ. ‘ಮಿಲನ’ದ ವ್ಯಾಖ್ಯಾನವೂ ಸಹ ಅವಧಿಯನ್ನು ನಿರ್ಧರಿಸುತ್ತದೆ. ಕೆಲವರು ಸಂಭೋಗದ ಅವಧಿಯನ್ನು ಮಾತ್ರ ಪರಿಗಣಿಸುತ್ತಾರೆ. ಆಗ ಅದು ನಿಮಿಷಗಳ ಲೆಕ್ಕದಲ್ಲಿ ಮುಗಿದು ಹೋಗುತ್ತದೆ. ಇನ್ನೂ ಕೆಲವರು, ಮಿಲನಕ್ಕೆ ಇಬ್ಬರೂ ತಯಾರಾಗುವ, ಪರಸ್ಪರರನ್ನು ಉದ್ರೇಕಿಸುವ ಸಮಯವನ್ನೂ ಜೋಡಿಸಿಕೊಳ್ಳುತ್ತಾರೆ. ಆಗ ಸಹಜವಾಗಿ ಅವಧಿ ಹೆಚ್ಚಾಗುತ್ತದೆ. ಕೆಲವರು ಬೇಕೆಂದೇ ಉದ್ರೇಕ ಸ್ಥಿತಿ ತಲುಪುವುದನ್ನು ನಿಧಾನಗೊಳಿಸುತ್ತಾರೆ. ಇದರಿಂದ ಮಿಲನದ ಅವಧಿ ದೀರ್ಘವಾಗುತ್ತದೆ.

ಕೆಲವು ದಂಪತಿಗಳಿಗೆ, ಮಿಲನದ ‌ಅವಧಿಯು ಅವರ ಆಯ್ಕೆಯಾಗಿರುವುದಿಲ್ಲ. ಅದು ತನ್ನಿಂದ ತಾನೇ ನಿರ್ಧಾರವಾಗುತ್ತದೆ. ಅಂದರೆ ಶೀಘ್ರ ಸ್ಖಲನ ಸಮಸ್ಯೆ ಇರುವವರಿಗೆ ಬಯಸುವುದಕ್ಕಿಂತ ಮುಂಚಿತವಾಗಿ ಮುಗಿದು ಹೋದರೆ, ವಿಳಂಬ ಸ್ಖಲನ ಸಮಸ್ಯೆ ಎದುರಿಸುತ್ತಿರುವವರು ಮುಗಿಸಬೇಕು ಎಂದುಕೊಂಡರೂ ಮುಗಿಯುವುದಿಲ್ಲ. ಏಕೆಂದರೆ ಮಿಲನಮಹೋತ್ಸವದ ಪರಾಕಾಷ್ಠೆ ತಲುಪಿದಾಗಲೂ ಅವರು ವೀರ್ಯ ಸ್ರವಿಸುವುದೇ ಇಲ್ಲ. ಇಂತಹ ಸಂದರ್ಭಗಳಲ್ಲಿ, ವೈದ್ಯರನ್ನು ಅಥವಾ ಸೂಕ್ತ ಲೈಂಗಿಕ ಚಿಕಿತ್ಸಕರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವುದೇ ಬಗೆಯ ಸ್ಖಲನ ಅಸ್ವಸ್ಥತೆಗಳು ಕಾಣಿಸಿಕೊಂಡಾಗ– ಅಂದರೆ ದುರ್ಬಲ ಸ್ಖಲನ, ಶೀಘ್ರ ಸ್ಖಲನ, ವಿಳಂಬ ಸ್ಖಲನವಾದರೆ, ಸಾಮಾನ್ಯಕ್ಕಿಂತಲೂ ಕಡಿಮೆ ವೀರ್ಯ ಹೊರಹೊಮ್ಮಿದರೆ, ಮಿಲನದ ಪರಾಕಾಷ್ಠೆಯಲ್ಲೂ ವೀರ್ಯವೇ ಹೊರಬಾರದೆ ಇದ್ದರೆ, ಮಿಲನಮಹೋತ್ಸವದಲ್ಲಿ ಅಥವಾ ಅನಂತರ ನೋವಿನ ಅನುಭವ ಉಂಟಾದರೆ, ವೀರ್ಯದಲ್ಲಿ ರಕ್ತ ಕಾಣಿಸಿಕೊಂಡರೆ, ಮಿಲನದ ನಂತರ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರದ ಬಣ್ಣದಲ್ಲಿ ಬದಲಾವಣೆ ಕಂಡುಬಂದರೆ, ಪುರುಷರಲ್ಲಿ, ಅದರಲ್ಲೂ ವಯಸ್ಸಾದಂತೆ ಲೈಂಗಿಕ ಸಮಸ್ಯೆಗಳು ತಲೆದೋರುವುದು ಸಾಮಾನ್ಯ. ಲೈಂಗಿಕ ಕ್ರಿಯೆಯ ಸಮಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಲೈಂಗಿಕ ಕ್ರಿಯೆಯಲ್ಲಿ ಬೇರೆ ಸಮಸ್ಯೆಗಳು ಅಥವಾ ಯಾವುದೇ ರೀತಿಯ ಬದಲಾವಣೆ ಅಥವಾ ತೊಡಕುಗಳು ಕಂಡುಬಂದರೆ ಕೂಡಲೇ ಗಮನಿಸಬೇಕು ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಬೇಕು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !