ಗಂಡನ ಹತ್ಯೆಗೆ ಸುಪಾರಿ; ಪತ್ನಿ ಜೈಲುಪಾಲು

7
ಮನೆ ಮಾಲೀಕನ ಮಗನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಮತಾ

ಗಂಡನ ಹತ್ಯೆಗೆ ಸುಪಾರಿ; ಪತ್ನಿ ಜೈಲುಪಾಲು

Published:
Updated:
Prajavani

ಬೆಂಗಳೂರು: ಹುಳಿಮಾವು ಸಮೀಪದ ಅರಕೆರೆಯ ಬಿಟಿಎಸ್ ಬಡಾವಣೆ ನಿವಾಸಿ ನಾಗರಾಜ್ ಎಂಬುವರ ಹತ್ಯೆಗೆ ಸುಪಾರಿ ಕೊಟ್ಟಿದ್ದ ಆರೋಪದಡಿ, ಅವರ ಪತ್ನಿ ಮಮತಾ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಆರೋಪಿ ಮಮತಾ, ಬಾಡಿಗೆಗಿದ್ದ ಮನೆಯ ಮಾಲೀಕನ ಮಗ ಪ್ರಶಾಂತ್‌ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆ ಬಗ್ಗೆ ನಾಗರಾಜ್‌ಗೆ ಅನುಮಾನ ಬಂದಿತ್ತು. ಅವರಿಂದ ತಮ್ಮಿಬ್ಬರ ಸಂಬಂಧಕ್ಕೆ ತೊಂದರೆಯಾಗುತ್ತದೆಂದು ತಿಳಿದಿದ್ದ ಮಮತಾ, ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಅದಕ್ಕಾಗಿ ₹1.5 ಲಕ್ಷ ಸುಪಾರಿ ಸಹ ಕೊಟ್ಟಿದ್ದಳು’ ಎಂದು ಹುಳಿಮಾವು ಪೊಲೀಸರು ಹೇಳಿದರು.

‘ಮಮತಾ ಜೊತೆಯಲ್ಲಿ ಪ್ರಶಾಂತ್, ಆತನ ಸ್ನೇಹಿತರಾದ ಅನಿಲ್ ಬಿಸ್ವಾಸ್, ಜಾಕೀರ್ ಪಾಷಾ, ಹರೀಶ್‌ಕುಮಾರ್ ಹಾಗೂ ಒಬ್ಬ ಬಾಲಕನನ್ನು ಬಂಧಿಸಲಾಗಿದೆ. ಅವರಿಂದ ಚಿನ್ನಾಭರಣ, ಮೊಬೈಲ್ ಜಪ್ತಿ ಮಾಡಲಾಗಿದೆ. ಕೃತ್ಯದ ಬಗ್ಗೆ ಅವರೆಲ್ಲರೂ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

ದರೋಡೆ ಸೋಗಿನಲ್ಲಿ ಹತ್ಯೆಗೆ ಯತ್ನ: ‘ನಾಗರಾಜ್‌ ಮನೆಗೆ ದರೋಡೆಕೋರರ ಸೋಗಿನಲ್ಲಿ ಡಿ. 14ರಂದು ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು, ಅವರ ಹಲ್ಲೆ ಮಾಡಿದ್ದರು. ಚಿನ್ನದ ಸರ, ಮೊಬೈಲ್ ಕಿತ್ತುಕೊಂಡಿದ್ದರು. ಜೊತೆಗೆ ಮಮತಾಳನ್ನೂ ಹೆದರಿಸಿ ಎರಡು ಚಿನ್ನದ ಉಂಗುರಗಳನ್ನು ಕಿತ್ತಕೊಂಡಿದ್ದರು. ನೀರಿನ ಕ್ಯಾನ್‌ ಸರಬರಾಜು ಯುವಕನೊಬ್ಬ ಮನೆ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳು, ಓಡಿಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ದರೋಡೆ ಬಗ್ಗೆ ನಾಗರಾಜ್ ದೂರು ನೀಡಿದ್ದರು. ಕೆಲವು ದಿನಗಳ ನಂತರ ಠಾಣೆಗೆ ಬಂದಿದ್ದ ಅವರು, ‘ನನ್ನ ಪತ್ನಿ ಮಮತಾ ಮನೆಯಿಂದ ಹೋದವಳು ವಾಪಸ್‌ ಬಂದಿಲ್ಲ. ಮನೆಯ ಮಾಲೀಕನ ಮಗ ಪ್ರಶಾಂತ್ ಸಹ ಕಾಣಿಸುತ್ತಿಲ್ಲ’ ಎಂದು ಮಾಹಿತಿ ನೀಡಿದ್ದರು. ಅವರಿಬ್ಬರನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಯಿತು’ ಎಂದರು. 

‘ಅಂದು ನೀರಿನ ಕ್ಯಾನ್‌ ಸರಬರಾಜು ಯುವಕ ಮನೆಗೆ ಬಂದಿದ್ದರಿಂದಲೇ, ನಾಗರಾಜ್‌ ಅವರ ಪ್ರಾಣ ಉಳಿದಿದೆ. ಇಲ್ಲದಿದ್ದರೆ, ಅವರನ್ನು ದುಷ್ಕರ್ಮಿಗಳು ಕೊಲೆ ಮಾಡುವ ಸಾಧ್ಯತೆ ಇತ್ತು’ ಎಂದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !