ಶನಿವಾರ, ಜೂನ್ 6, 2020
27 °C
ಕಸದ ರಾಶಿಗಳಿದ್ದಲ್ಲಿಗೆ ಆಹಾರ ಹುಡುಕಿಕೊಂಡು ಬರುವ ಹಂದಿಗಳು; ಓಡಾಡಲು ಭಯಪಡುವ ಭಕ್ತರು, ಜನರು

ಮಾದಪ್ಪನ ಬೆಟ್ಟದಲ್ಲಿ ರಾತ್ರಿ ಹೊತ್ತು ಕಾಡು ಹಂದಿಗಳ ಕಾಟ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Deccan Herald

ಮಹದೇಶ್ವರ ಬೆಟ್ಟ: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ಹೊತ್ತು ಕಾಡು ಹಂದಿಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಹಾಗೂ ಭಕ್ತರು ರಾತ್ರಿ ಹೊತ್ತು ತಿರುಗಾಡಲು ಭಯಪ‍ಡುವಂತಾಗಿದೆ. 

ಮಹದೇಶ್ವರ ವನ್ಯಧಾಮ ವ್ಯಾಪ್ತಿಗೆ ಬರುವ ದೇವಾಲಯದ ಸುತ್ತಲೂ ದಟ್ಟ ಕಾಡು ಇದೆ. ಸಂಜೆ ಹೊತ್ತಿಗೆ ಜನ ಸಂಚಾರ ವಿರಳ ಆಗುತ್ತಲೇ ಕಾಡು ಹಂದಿಗಳು ಹಿಂಡು ಹಿಂಡಾಗಿ ಊರಿನೊಳಗೆ ಲಗ್ಗೆ ಹಾಕುತ್ತವೆ. 

ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೂ ದೇವಾಲಯದ ಸುತ್ತಮುತ್ತ ಹಾಗೂ ಪಟ್ಟಣದಲ್ಲಿ ಅಲ್ಲಲ್ಲಿ ಇವುಗಳು ಕಂಡು ಬರುತ್ತವೆ. ಇದರಿಂದ ರಾತ್ರಿ ಹೊತ್ತಲ್ಲಿ  ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.

ಕಸದ ರಾಶಿ ಇರುವ ಕಡೆ ಹೆಚ್ಚು: ಕಾಡು ಹಂದಿಗಳು ಹೆಚ್ಚಾಗಿ ಕಸಗಳ ರಾಶಿ ಇರುವ ಕಡೆಗಳಲ್ಲಿ, ಹೋಟೆಲುಗಳ ಸಮೀಪ‍ ತ್ಯಾಜ್ಯ ಎಸೆದಿರುವ ಜಾಗಗಳಲ್ಲಿ ಕಂಡು ಬರುತ್ತಿವೆ. 

ವಿದ್ಯುತ್‌ ಸೌಲಭ್ಯ ಇಲ್ಲ: ದೇವಾಲಯದ ಮುಂಭಾಗವಿರುವ ವಾಹನಗಳ ಪಾರ್ಕಿಂಗ್‌ನಲ್ಲಿ ವಿದ್ಯುತ್‌ ಸೌಲಭ್ಯ ಸರಿಯಾಗಿ ಇಲ್ಲದೆ ಇರುವುದರಿಂದ ಇಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 5ರ ವರೆಗೂ ಭಕ್ತಾದಿಗಳಿಗೆ ಪಾಲಾರ್ ರಸ್ತೆಯ ಪಕ್ಕದಲ್ಲಿರುವ ಶೌಚಾಲಯಕ್ಕೆ ತೆರಳಲು ಸಮಸ್ಯೆಯಾಗುತ್ತಿದೆ. 

‘ಇಲ್ಲಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸ್ವಚ್ಛತೆ ಕಾಪಾಡಬೇಕು: ‘ಹಿಂದೆ ದೇವಾಲಯವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದಾಗ, ಭಕ್ತರ ಸಂಖ್ಯೆ ಕಡಿಮೆ ಇತ್ತು. ದೇವಾಲಯದ ಆವರಣ ಹಾಗೂ ಇತರ ಕಡೆಗಳಲ್ಲಿ ಶುಚಿತ್ವವೂ ಇತ್ತು. ಈಗ ದೇವರ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಹೋಟೆಲುಗಳ ಸಂಖ್ಯೆಯಲ್ಲೂ ಹೆಚ್ಚಳ ಆಗಿದೆ. ಹೋಟೆಲ್‌ ತ್ಯಾಜ್ಯ ಹಾಗೂ ಇತರ ಕಸಗಳನ್ನು ಅಲ್ಲಲ್ಲಿಯೇ ಎಸೆಯುತ್ತಿರುವುದರಿಂದ ಹಂದಿಗಳು ಊರಿಗೆ ಬರುತ್ತಿವೆ. ಹಗಲು ಹೊತ್ತು ಇಲ್ಲಿ ದುಡಿದು ಸಂಜೆ ಹೊತ್ತು ಮನೆಗೆ ತೆರಳುವುದಕ್ಕೆ ಈಗ ಹರಸಾಹಸ ಪಡಬೇಕಾಗಿದೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು’ ಎಂದು ಸ್ಥಳೀಯರಾದ ಶಿವು ಹಾಗೂ ಕೃಷ್ಣ ಅವರು ದೂರಿದರು.

ಪ್ರಾಧಿಕಾರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಈಶ್ವರ್‌ ಎಂಬುವವರು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಹಂದಿ ದಾಳಿ ಮಾಡಿದ್ದರಿಂದ ಅವರ ಬೆನ್ನಿಗೆ ತೀವ್ರ ಏಟಾಗಿದ್ದ ಘಟನೆ ಈ ಹಿಂದೆ ನಡೆದಿತ್ತು.

ಹಂದಿಗಳಿಂದ ಇನ್ನಷ್ಟು ಆಪತ್ತು ಎದುರಾಗುವ ಮುಂಚೆಯೇ ಪ್ರಾಧಿಕಾರವು, ದೇವಾಲಯದ ಸುತ್ತಮುತ್ತ ಶುಚಿತ್ವ ವಾತಾವರಣ ನಿರ್ಮಿಸಲು ಹಾಗೂ ವಾಹನ ಪಾರ್ಕಿಂಗ್‌ ಜಾಗಕ್ಕೆ ವಿದ್ಯುತ್‌ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರ ಹಾಗೂ ಸ್ಥಳೀಯರ ಒತ್ತಾಯ.

ಈ ಬಗ್ಗೆ ಪ‍್ರತಿಕ್ರಿಯೆಗಾಗಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ನಡೆಸಿದ ಯತ್ನ ವಿಫಲವಾಯಿತು.

‘ಶುಚಿತ್ವ ಕಾಪಾಡಿದರೆ ಸಮಸ್ಯೆ ಇರದು’
‘ದೇವಾಲಯದ ಆವರಣ ಹಾಗೂ ಹೋಟೆಲುಗಳ ಅಕ್ಕಪಕ್ಕ ಬಿಟ್ಟರೆ ಬೇರೆ ಯಾವ ಸ್ಥಳಗಳಲ್ಲಿ ಹಂದಿಗಳ ಗದ್ದಲ ಇಲ್ಲ. ಇಲ್ಲಿ ಕಸದ ರಾಶಿಯಿದ್ದು, ದುರ್ವಾಸನೆಗೆ ಹಂದಿಗಳು ಊರಿಗೆ ಬರುತ್ತವೆ. ಈ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿದರೆ ಹಂದಿಗಳು ಬರುವ ಪ್ರಮೇಯವೇ ಇರುವುದಿಲ್ಲ’ ಎಂದು ಮಹದೇಶ್ವರ ಬೆಟ್ಟದ ವಲಯ ಅರಣ್ಯ ಅಧಿಕಾರಿ ಗುರುರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು