‘ವೈಲ್ಡ್‌ ಸೇವೆ’ ಹೇಳಿಕೆ ಆಧಾರ ರಹಿತ–ಬಾಲಚಂದ್ರ

ಶನಿವಾರ, ಮೇ 25, 2019
22 °C
ಬಂಡೀಪುರ: ಮಾನವ ವನ್ಯಜೀವಿ ಸಂಘರ್ಷ ಪರಿಹಾರ ಪ್ರಕ್ರಿಯೆಯಲ್ಲಿ ಯಾರೊಂದಿಗೂ ಕೈಜೋಡಿಸಿಲ್ಲ

‘ವೈಲ್ಡ್‌ ಸೇವೆ’ ಹೇಳಿಕೆ ಆಧಾರ ರಹಿತ–ಬಾಲಚಂದ್ರ

Published:
Updated:

ಚಾಮರಾಜನಗರ: ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಂಭವಿಸುವ ಬೆಳೆ ನಷ್ಟ, ಜಾನುವಾರುಗಳ ಪ್ರಾಣ ಹಾನಿ ಅಂದಾಜಿಸುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಅಥವಾ ಸರ್ಕಾರೇತರ ಸಂಸ್ಥೆಗಳೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ಕೈಜೋಡಿಸಿಲ್ಲ ಎಂದು ಹುಲಿಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ನಾವು ಈ ಹಿಂದೆಯೂ ಸಂಘ ಸಂಸ್ಥೆಗಳ ನೆರವು ಪಡೆದಿಲ್ಲ. ಮುಂದೆಯೂ ಪಡೆಯುವುದಿಲ್ಲ. ಹಾನಿ ಸಮೀಕ್ಷೆ, ಪರಿಹಾರಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ, ಪರಿಹಾರ ವಿತರಣೆ ಸೇರಿದಂತೆ ಎಲ್ಲ ಕೆಲಸಗಳನ್ನೂ ಹುಲಿ ಯೋಜನೆಯ ಅಧಿಕಾರಿಗಳೇ ನಿರ್ವಹಿಸುತ್ತಾರೆ’ ಎಂದು ಹೇಳಿದ್ದಾರೆ.

‘ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ‘ವೈಲ್ಡ್‌ ಸೇವೆ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತಲಿನ 5 ಲಕ್ಷ ಗ್ರಾಮಸ್ಥರಿಗೆ ವನ್ಯಜೀವಿಗಳ ದಾಳಿಯಿಂದಾಗಿ ಆದ ನಷ್ಟಕ್ಕೆ ಪರಿಹಾರ ಕೊಡಿಸಲು ಹಾಗೂ ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ನೆರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

‘ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಹಲವು ವರ್ಷಗಳಿಂದ ಮಾನವ–ವನ್ಯಜೀವಿ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳುತ್ತಲೇ ಬಂದಿದ್ದಾರೆ. ಈ ಉದ್ದೇಶದಿಂದಲೇ ಆನೆ ನಿಗ್ರಹ ಕಂದಕಗಳು, ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ, ಪ್ರಾಣಿಗಳ ದಾಳಿಯಿಂದ ಆಸ್ತಿ–ಪಾಸ್ತಿ ಹಾನಿಯಾದವರಿಗೆ ಆರ್ಥಿಕ ಪರಿಹಾರವನ್ನೂ ನೀಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.  

‘ಈ ವಿಚಾರದಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆಗಳು ನೀಡುತ್ತಿರುವ ಹೇಳಿಕೆಗಳು ತಪ್ಪು, ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾದುದು’ ಎಂದು ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !