‘ತನಿಖೆ ನಡೆಸುವ ಅಧಿಕಾರಿಗಳಿಗೆ ವಿಶೇಷ ಕೌಶಲ ಅಗತ್ಯ’

ಗುರುವಾರ , ಜೂನ್ 20, 2019
28 °C
‘ವೈಲ್ಡ್‌ ಲೈಫ್‌ ಲಾ ಫಾರ್‌ ರೇಂಜರ್ಸ್‌’ ಕೃತಿ ಬಿಡುಗಡೆ

‘ತನಿಖೆ ನಡೆಸುವ ಅಧಿಕಾರಿಗಳಿಗೆ ವಿಶೇಷ ಕೌಶಲ ಅಗತ್ಯ’

Published:
Updated:
Prajavani

ಬೆಂಗಳೂರು: ‘ಅರಣ್ಯ ಪ್ರದೇಶಗಳಲ್ಲಿ ನಡೆಯುವ ಅಪರಾಧಗಳು ಪೊಲೀಸ್‌ ಮತ್ತು ಅರಣ್ಯ ಇಲಾಖೆಗಳೆರಡರ ವ್ಯಾಪ್ತಿಗೂ ಬರುವುದರಿಂದ ಕಾನೂನು ಜಾರಿ ವಿಷಯದಲ್ಲಿ ಕೆಲವು ಗೊಂದಲಗಳಿವೆ. ಇಂತಹ ಪ್ರಕರಣಗಳ ತನಿಖಾಧಿಕಾರಿಗಳಿಗೆ ವಿಶೇಷ ಕೌಶಲ ಇರಬೇಕು’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಡಾ. ಎಸ್. ಟಿ. ರಮೇಶ್‌ ಹೇಳಿದರು. 

ನಗರದ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರವೀಣ್‌ ಭಾರ್ಗವ್‌ ಅವರ ‘ವೈಲ್ಡ್‌ಲೈಫ್‌ ಲಾ ಫಾರ್‌ ರೇಂಜರ್ಸ್‌’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ತನಿಖೆ ವೇಳೆ ವಿಧಿವಿಜ್ಞಾನಕ್ಕೆ ಸಂಬಂಧಿಸಿದ ಅಂಶ ಅತಿ ದುರ್ಬಲವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದರು. 

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್‌ ಮೋಹನ್‌, ‘ಅರಣ್ಯಪ್ರದೇಶಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳಲ್ಲಿ ಮಹಜರಿನಿಂದ ಹಿಡಿದು, ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸುವವರೆಗಿನ ಪ್ರತಿ ಹಂತದಲ್ಲಿಯೂ ತಪ್ಪುಗಳಾಗುತ್ತಿವೆ. ಹೀಗಾಗಿ ತನಿಖಾಧಿಕಾರಿಗಳಿಗೆ ತರಬೇತಿ ಅವಶ್ಯವಿದೆ’ ಎಂದರು. 

ಕ್ರಿಕೆಟಿಗ ಅನಿಲ್‌ಕುಂಬ್ಳೆ, ‘ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಜನಸಾಮಾನ್ಯರಲ್ಲಿ ಈ ಕಾನೂನುಗಳ ಬಗ್ಗೆ ಅರಿವಿನ ಕೊರತೆ ಇದೆ’ ಎಂದು ಅಭಿಪ್ರಾಯಪಟ್ಟರು. 

ಲೇಖಕ ಪ್ರವೀಣ್‌ ಭಾರ್ಗವ್‌, ‘ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಲಯ ಅರಣ್ಯಾಧಿಕಾರಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಲ್ಲಿ ಈ ಪುಸ್ತಕವನ್ನು ಬರೆದಿದ್ದೇನೆ. ತನಿಖೆಯ ವೇಳೆ ಅಧಿಕಾರಿಗಳಿಗೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಯಾವ ಹಂತದಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ, ಪ್ರಕರಣ ಗಟ್ಟಿಗೊಳಿಸಲು ಕಾನೂನಿನ ಯಾವ ಅಂಶವನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ಇದೆ’ ಎಂದು  ಹೇಳಿದರು. 

ತನಿಖೆಯ ಪ್ರತಿ ಹಂತದಲ್ಲಿಯೂ ತಪ್ಪುಗಳಾಗುತ್ತಿವೆ. ಹೀಗಾಗಿ ಯಾವುದೇ ಪ್ರಕರಣದ ತನಿಖೆಯನ್ನು ತಾರ್ಕಿಕವಾಗಿ ಅಂತ್ಯಗೊಳಿಸಲು ಆಗುತ್ತಿಲ್ಲ

-ಸಂಜಯ್ ಮೋಹನ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !