ಚಳಿಗಾಲದನಂಟುಈ ಗಂಟುನೋವು

7

ಚಳಿಗಾಲದನಂಟುಈ ಗಂಟುನೋವು

Published:
Updated:
Prajavani

ಕೆಲಸಕ್ಕೆ ಹೊರಟ ಮಗನಿಗೆ ಅಮ್ಮ ಹೇಳಿದಳು, ‘ಬರ್ತಾ ಮರೀದೆ ನೋವಿನ ಮಾತ್ರೆ ತೊಗೊಂಡು ಬಾ. ಚಳಿಗಾಲ, ಗಂಟುಗಳು ವಿಪರೀತ ನೋಯ್ತಾ ಇದೆ. ಬೆಳಗ್ಗೆ ಏಳೋ ಹೊತ್ತಿಗೆ, ಸೆಟಕೊಂಡ ಹಾಗೆ ಆಗಿರತ್ತೆ’ ಎಂದು. ಇದು ಒಬ್ಬರ ಮನೆಯ ಕಥೆ ಅಲ್ಲಾ. ಬಹಳಷ್ಟು ಜನರು ಚಳಿಗಾಲದಲ್ಲಿ ಸಂಧಿ ಅಥವಾ ಗಂಟುನೋವಿನಿಂದ ನರಳುತ್ತಾರೆ. ಇದೇಕೆ? ಚಳಿಗಾಲಕ್ಕೂ ಗಂಟುನೋವಿಗೂ ಏನು ಸಂಬಂಧ?

ಖಂಡಿತ ಸಂಬಂಧವಿದೆ. ಚಳಿಯಿಂದಾಗಿ ಚರ್ಮದ ಹೊರಭಾಗದ ರಕ್ತನಾಳಗಳು ಸಂಕೋಚಗೊಂಡು ರಕ್ತಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಗಂಟುಗಳಿಗೂ ರಕ್ತಪರಿಚಲನೆ ಕಡಿಮೆಯಾಗಿ ಊತ, ಚಲನಾರಾಹಿತ್ಯ (ಚಲಿಸಲು ಸಾಧ್ಯವಾಗದಿರುವುದು), ನೋವು – ಕಂಡು ಬರುತ್ತದೆ. ಚಳಿಗಾಲದ ಶೀತವು ಕಫವನ್ನು ಹೆಚ್ಚುಮಾಡುವುದಲ್ಲದೆ, ವಾತಾವರಣದ ಚಲನೆಯ ಸಾಮರ್ಥ್ಯವನ್ನೂ ಕಡಿಮೆ ಮಾಡುತ್ತದೆ. ಇದರಿಂದ ಸಂಧಿಗಳ ಚಲನೆ ಕಷ್ಟವಾಗುತ್ತದೆ. ಅಲ್ಲದೆ ಕೆಲಮೊಮ್ಮೆ ಸಂಧಿಗಳಲ್ಲಿರುವ ನೀರಿನಂಶ ಕಡಿಮೆಯಾಗುವುದು ಅಥವಾ ಸಂಧಿಗಳಲ್ಲಿರುವ ಚಲನೆಗೆ ಕಾರಣವಾದ ಜಿಡ್ಡಿನ ಅಂಶದಲ್ಲಿ ಪಿತ್ತದ ಅಂಶ ಹೆಚ್ಚಾಗಿ ಅದರಲ್ಲಿ ಉರಿಯೂತ ಕಂಡು ಬರುತ್ತದೆ. ಆಗಲೂ ಗಂಟುಗಳಲ್ಲಿ ಊತ, ಉರು, ನೋವುಗಳು ಕಂಡುಬರುತ್ತವೆ. ಇದಕ್ಕೆ ವಾತಾವರಣದ ತಂಪು ಸ್ವಲ್ಪಮಟ್ಟಿಗೆ ಕಾರಣವಾದರೂ, ನಮ್ಮ ಆಹಾರ, ಜೀವನಶೈಲಿಯಲ್ಲಿನ ವ್ಯತ್ಯಾಸಗಳೂ ಕಾರಣವಾಗುತ್ತವೆ.

ಹೊಟ್ಟೆ ತುಂಬಾ ಆಹಾರ ಸೇವಿಸಿ, ಅದರಲ್ಲೂ ಜಿಡ್ಡು ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ, ಅದು ಜೀರ್ಣವಾಗುವ ಮೊದಲೇ ವ್ಯಾಯಮ, ಕುಸ್ತಿ, ಈಜು – ಇವನ್ನು ಮಾಡಬಾರದು’ ಏಕೆಂದರೆ ಹೀಗೆ ಮಾಡುವುದರಿಂದ ರಕ್ತಪರಿಚಲನೆಯಲ್ಲಿ ತೊಂದರೆ ಉಂಟಾಗುತ್ತದೆ. ಅಷ್ಟೇ ಏಕೆ, ಹೊಟ್ಟೆಯಲ್ಲಿ ಆಹಾರವಿರುವಾಗ ಸ್ನಾನ ಮಾಡಿದರೂ ರಕ್ತಪರಿಚಲನೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಸಂಧಿಗಳಲ್ಲಿರುವ ಜಿಡ್ಡು ಅಥವಾ ನೀರಿನ ಅಂಶದಲ್ಲಿ ಸಮತೋಲನ ತಪ್ಪುತ್ತದೆ. ಅದರ ಪ್ರಮಾಣದಲ್ಲಿ, ಗುಣಗಳಲ್ಲಿ ಹೆಚ್ಚು ಕಡಿಮೆ ಆಗುವುದರಿಂದ ಉರಿಯೂತ ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಇದು ಕಾಲಾಂತರದಲ್ಲಿ ಸಂಧಿ ವಿಕೃತವಾಗಿ ಸೊಟ್ಟಗಾಗುವುದು, ಜಾರುವುದು ಹೀಗೆ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಇದು ದೊಡ್ಡ ದೊಡ್ಡ ಸಂಧಿಗಳಾದ ಮೊಣಕೈ, ಮೊಣಕಾಲು, ಸೊಂಟದ ಸಂಧಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹಾಗೆಯೇ ಹಸಿವಿಲ್ಲದಿದ್ದರೂ, ಹಿಂದಿನ ಆಹಾರ ಜೀರ್ಣವಾಗುವ ಮೊದಲೇ ಬಾಯಿ ಚಪಲಕ್ಕಾಗಿ ತಿನ್ನುವುದು; ಕರಿದ, ಅತಿ ಖಾರದ (ಬೇಲ್ಪುರಿ, ಮಂಚೂರಿಗಳು, ನೂಡಲ್ಸ್‌ಗಳು – ಇತ್ಯಾದಿ ಈ ಜಾತಿಗೆ ಸೇರಿದ ಆಹಾರಪದಾರ್ಥಗಳು), ಅತಿ ತಂಪಾಗಿರುವ ಆಹಾರವನ್ನು ಸೇವಿಸುವುದರಿಂದ, ಪದೇ ಪದೇ ಆಹಾರ ಸೇವಿಸುವುದರಿಂದ, ಪ್ಯಾನ್ ಹಾಕಿಯೋ ಅಥವಾ ಏಸಿಯಲ್ಲಿ ವ್ಯಾಯಾಮ ಮಾಡುವುದು, ಅತಿ ತಣ್ಣಗಿನ ನೀರಿನಲ್ಲಿ ಈಜುವುದು – ಇಂಥವುಗಳನ್ನು ಮಾಡುವುದರಿಂದ ಯೂರಿಕ್ ಆಮ್ಲದ ಕಣಗಳು ಮೂಳೆಯಲ್ಲಿ ಸೇರಿ ಗಟ್ಟಿಯಾಗುತ್ತದೆ; ಆಗ ಬೆರಳಿನ ಸಂದುಗಳಲ್ಲಿ ಊತ, ಕೆಂಪಗಾಗುವುದು, ಬೆರಳಿನ ಸಂದು ವಿಕಾರವಾಗುವುದು, ಬೆರಳುಗಳು ಸೊಟ್ಟಗಾಗುವುದು ಮೊದಲಾದ ತೊಂದರೆಗಳು ಉಂಟಾಗುತ್ತವೆ.

ಇನ್ನು ಕಾಲದ ಪ್ರಭಾವ ಎಂದರೆ ಚಳಿಗಾಲದಲ್ಲಿ ಸಹಜವಾಗಿಯೇ ರಕ್ತಪರಿಚಲನೆ ಕಡಿಮೆಯಾಗುತ್ತದೆ. ಬೆಚ್ಚಗಿನ ಬಟ್ಟೆಗಳನ್ನು ಹಾಕದೆ ಇರುವುದು, ಅತಿ ಅಮ್ಲೀಯವಾದ ಆಹಾರ ಸೇವಿಸುವುದು, ಹಿಂದಿನ ದಿನದ ಅಥವಾ ಮೂರು ನಾಲ್ಕುದಿನ ತಂಪುಪೆಟ್ಟಿಗೆಯಲ್ಲಿಟ್ಟ ಆಹಾರವನ್ನು ಸೇವಿಸುವುದು, ಪದೇಪದೇ ಬಿಸಿ ಮಾಡಿ ಸೇವಿಸುವುದು – ಇವು ಚಳಿಗಾಲದಲ್ಲಿ ಬರುವ ಹೆಚ್ಚಿನ ರೋಗಗಳಿಗೆ ಮೂಲವಾಗಿದೆ.

‘ನಾನು ಸರಿಯಾದ ಆಹಾರವನ್ನೇ, ಸಮಯಕ್ಕೆ ಸರಿಯಾಗಿ ಸೇವಿಸುತ್ತೇನೆ, ವ್ಯಾಯಾಮ ಮಾಡುತ್ತೇನೆ; ಆದರೂ ನನಗೆ ಕೈಕಾಲು ಗಂಟುನೋವು, ಮೈಕೈ ನೋವು  ಕಾಣಿಸುತ್ತದೆ’ ಎನ್ನುವವರ ಸಂಖ್ಯೆ ಹೆಚ್ಚು. ವ್ಯಾಯಾಮ ಮಾಡಿದರೆ ಸಾಲದು, ವ್ಯಾಯಾಮವನ್ನು ಸರಿಯಾಗಿ ಮಾಡಬೇಕು. ಹೆಚ್ಚಿನವರು ಟಿ.ವಿ.ಯಲ್ಲಿ ಬರುವ ಯೋಗಾಭ್ಯಾಸ ಅಥವಾ ವ್ಯಾಯಾಮದ ಕಾರ್ಯಕ್ರಮಗಳನ್ನು ನೋಡಿ, ಕಲಿತು ಮಾಡುತ್ತೇವೆ ಎನ್ನುತ್ತಾರೆ. ಬೇರೆಲ್ಲಾ ವಿದ್ಯೆಗಳಂತೆ ವ್ಯಾಯಾಮವನ್ನೂ ತಜ್ಞರ ಮಾರ್ಗದರ್ಶನದಲ್ಲಿ ಕಲಿತರೆ ಮಾತ್ರ ಸರಿಯಾದ ಫಲ ದೊರೆಯುತ್ತದೆ. ವ್ಯಾಯಾಮಶಿಕ್ಷಕರು ಹೇಳುವಂತೆ, ಎಲ್ಲಾ ಮಾಂಸಖಂಡಗಳನ್ನು ಸರಿಯಾದ ರೀತಿಯಲ್ಲಿ ಹಿಗ್ಗುವಿಕೆ, ಕುಗ್ಗುವಿಕೆಯ ಪ್ರಕ್ರಿಯೆಗೆ ಒಳಪಡಿಸಬೇಕು.

ಕೇವಲ ಹಿಗ್ಗುವಿಕೆಗೆ ಸಂಬಂಧಪಟ್ಟ ವ್ಯಾಯಾಮಗಳನ್ನು ಅಥವಾ ಕೇವಲ ಮಾಂಸಖಂಡಗಳ ಕುಗ್ಗುವಿಕೆಗೆ ಸಂಬಂಧಿಸಿದಂತಹ ವ್ಯಾಯಾಮಗಳನ್ನು ಮಾಡುವುದು ಅಥವಾ ವ್ಯಾಯಾಮ ಮಾಡುವಾಗ ಮಾಂಸಖಂಡಗಳ ಸ್ಥಿತಿಗತಿಗಳ ಹೊಂದಾಣಿಕೆಯ ಕೊರತೆಯೂ ಮೈಕೈನೋವು ಗಂಟುನೋವಿಗೆ ಕಾರಣವಾಗುತ್ತದೆ. ಮಾಂಸಖಂಡಗಳ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವುದೂ ವ್ಯಾಯಾಮ ಮಾಡುವುದರ ಮುಖ್ಯ ಉದ್ದೇಶ. ಅದನ್ನು ಗಮನಿಸದೇ ವ್ಯಾಯಾಮ ಮಾಡಿದಾಗ ತೊಂದರೆ ಎದುರಾಗುವುದರಲ್ಲಿ ಯಾವ ಸಂಶಯವೂ ಇಲ್ಲ; ಚಳಿಗಾಲದಲ್ಲಿ ಬೆಳಗಿನ ಜಾವಾ, ವಿಪರೀತ ಚಳಿ ಇರುವಾಗ ವಾಕಿಂಗ್, ಜಾಗಿಂಗ್‌ಗಳನ್ನು ಮಾಡುವುದು; ಬಯಲಿನಲ್ಲಿ ವ್ಯಾಯಾಮ ಮಾಡುವುದೂ ಗಂಟುನೋವು ಕಾಣಿಸಿಕೊಳ್ಳಲು ಕಾರಣ. ಇನ್ನು ಕೆಲವರಲ್ಲಿ ಕೆಲವು ರೀತಿಯ ಸೋಂಕಿನಿಂದಾಗಿಯೂ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

 ಹಿಪ್ಪಲಿ, ಶುಂಠಿ, ಮೆಣಸು – ಇವು ಮೂರನ್ನೂ ಸಮಪ್ರಮಾಣದಲ್ಲಿ ಬೆರೆಸಿ ಹುರಿದು, ಇದನ್ನು ಒಂದು ಚಿಟಿಕೆ, ಅದಕ್ಕೆ ಹುರಿದ ಜೀರಿಗೆಪುಡಿ ಅರ್ಧ ಚಮಚ ಸೇರಿಸಿ ನೀರಿಗೆ ಹಾಕಿ ಕುದಿಸಿ, ಅದಕ್ಕೆ ಕಾಲು ಚಮಚ ತುಪ್ಪವನ್ನು ಸೇರಿಸಿ ಬಿಸಿಬಿಸಿಯಾಗಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಚಳಿಗಾಲದಲ್ಲಿ ಪ್ರಾರಂಭವಾಗುವ ಗಂಟುನೋವುಗಳಿಗೆ ವಿರಾಮ ಹಾಕಬಹುದು. ಚಳಿಗಾಲದಲ್ಲಿ ಚರ್ಮ ಒಣಗುವುದು, ಗಂಟುಗಳಲ್ಲಿರುವ ನೀರಿನಂಶ ಒಣಗುವುದು – ಇಂಥವು ಚಳಿಗಾಲದಲ್ಲಿ ಸಾಮಾನ್ಯ. ಇದರಿಂದಾಗಿ ಹೆಚ್ಚಿನವರಲ್ಲಿ ಗಂಟುನೋವು ಕಾಣಿಸಿಕೊಳ್ಳುತ್ತದೆ. ಅಂತಹವರು ನಿತ್ಯ ಮೈಗೆ ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ತುಪ್ಪ – ಇವುಗಳನ್ನು ಸಮಪ್ರಮಾಣದಲ್ಲಿ ಮಿಶ್ರಣಮಾಡಿ, ಸ್ವಲ್ಪ ಸಾಸಿವೆ, ಕರಿಜೀರಿಗೆ, ಶುಂಠಿಪುಡಿ, ಬೆಳ್ಳುಳ್ಳಿ, ಸ್ವಲ್ಪ ಸೈಂದುಪ್ಪು ಇವುಗಳನ್ನು ಹಾಕಿ ಒಗ್ಗರಣೆ ಮಾಡಿದಂತೆ ಮಾಡಿಟ್ಟುಕೊಂಡು ನಿತ್ಯವೂ ಮೈಗೂ ಹಚ್ಚಿ ಸಂದುಗಳಿಗೂ ಹಚ್ಚಿ ಬಿಸಿಬಿಸಿ ನೀರಿನಿಂದ ಸ್ನಾನ ಮಾಡಬೇಕು; ಅಥವಾ ಸಂದುಗಳಿಗೆ, ನೋವಿರುವ ಜಾಗಕ್ಕೆ ಬಿಸಿನೀರಿನ ಶಾಖ ಕೊಡಬೇಕು.

ಹೀಗೆ ಮಾಡುವುದರಿಂದ ಸಂದುನೋವು ನಿವಾರಣೆಯಾಗುತ್ತದೆ. ಇನ್ನು ಸಂದುಗಳಲ್ಲಿ ಊತ ಹೆಚ್ಚಾಗಿದ್ದರೆ ಶುಂಠಿಯನ್ನು ಅರೆದು ಅಥವಾ ಒಣಶುಂಠಿಪುಡಿಯನ್ನು ಹಾಲಿನಲ್ಲಿ ಕಲೆಸಿ ಸಂದುಗಳಿಗೆ ಲೇಪಿಸುವುದರಿಂದಲೂ ಸಂದುಗಳಲ್ಲಿರುವ ಊತ ಇಳಿದು ನೋವು ಕಡಿಮೆ ಆಗುತ್ತದೆ. ವ್ಯಾಯಾಮ ಮಾಡುವ ಮೊದಲು ಅಥವಾ ನಂತರ ಚೆನ್ನಾಗಿ ಅಭ್ಯಂಗ ಮಾಡುವುದೂ, ತ್ರಿಫಲಾಚೂರ್ಣ ಅಥವಾ ಅಗರು, ದೇವದಾರು, ಜೀರಿಗೆ – ಇವುಗಳ ಚೂರ್ಣವನ್ನು ಮಿಶ್ರಣಮಾಡಿ ಸಂದುಗಳಿಗೆ ತಿಕ್ಕುವುದರಿಂದಲೂ, ಶಾಖ ತೆಗೆದುಕೊಳ್ಳುವುದರಿಂದಲೂ ಸಂದುನೋವುಗಳು ಕಡಿಮೆಯಾಗುತ್ತವೆ.

ಇದು ಸಾಮಾನ್ಯವಾಗಿ ನೋವುಗಳು ಪ್ರಾರಂಭದ ಹಂತದಲ್ಲಿರುವಾಗ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಅದಲ್ಲದೆ ರೋಗ ಬಲಿತಮೇಲೆ ಅಥವಾ ಎರಡು, ಮೂರು ವ್ಯಾಧಿಗಳ ಒಟ್ಟಿಗೆ ಇರುವಾಗ, ಬೇರೆ ಬೇರೆ ರೋಗಗಳ ಕಾರಣದಿಂದಾಗಿ ಸಂದುನೋವು ಸಮಸ್ಯೆಯಾಗಿ ಬಂದಿರುವಾಗ ಯಾರೂ ಮನೆಮದ್ದನ್ನು ಮಾಡಬಾರದು. ಸೂಕ್ತ ವೈದ್ಯರಲ್ಲಿ ತಪಾಸಣೆ ಮಾಡಿಸಿ, ರೋಗಕ್ಕೆ ಕಾರಣವನ್ನು ತಿಳಿದು, ಸೂಕ್ತವಾದ ಚಿಕಿತ್ಸೆಯನ್ನು ಪಡೆಯಬೇಕು.

**

ಬದನೆಕಾಯಿಯೂ ಔಷಧ...

ಸಾಮಾನ್ಯವಾಗಿ ಬದನೆಕಾಯಿ ನೋವನ್ನು ಹೆಚ್ಚಿಸುತ್ತದೆ ಎನ್ನುವುದು ವಾಡಿಕೆ. ಆದರೆ ಗುಳ್ಳಬದನೆ, ಜಾಬದನೆ, ಅಥವಾ ನಿತ್ಯೋಪಯೋಗಿ ಮೈಸೂರು ಬದನೆಕಾಯಿಯನ್ನೂ ಹರಳೆಣ್ಣೆಯಲ್ಲಿ ಹುರಿದು ಬೇಯಿಸಿ ಪಲ್ಯ ಮಾಡಿ ತಿನ್ನುವುದರಿಂದಲೂ ಮೊಣಕಾಲು ಊತ, ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಕಾಲು ಚಮಚ ಹರಳೆಣ್ಣೆಯನ್ನು ಕಾಲು ಲೋಟ ಹಾಲಿನಲ್ಲಿ ಕುದಿಸಿ, ತಿನ್ನುವ ಮೊದಲು ಸೇವಿಸಿ ತಕ್ಷಣ ಆಹಾರ ತೆಗೆದುಕೊಂಡರೆ ಸೊಂಟನೋವು ಪರಿಹಾರವಾಗುತ್ತದೆ. ಇದು ಮಲಪ್ರವೃತ್ತಿಯನ್ನು ಹೆಚ್ಚೂ ಮಾಡುವುದಿಲ್ಲ. ಅಮೃತಬಳ್ಳಿ, ಶುಂಠಿಯನ್ನು ಹಾಲಿನಲ್ಲಿ ಕುಡಿಸಿ ಸೇವಿಸುವುದೂ ಗಂಟು ನೋವು ಪರಿಹಾರಕ್ಕೆ ಒಂದು ದಾರಿ. ಆದರೆ ಇವಾವುದನ್ನು ಕಾಲಮಿತಿ ಇಲ್ಲದೆ ಸೇವಿಸಬಾರದು. ಸರಿಯಾದ ವೈದ್ಯರ ಸಲಹೆ ಪಡೆದು, ಕಾಲಮಿತಿಯನ್ನನುಸರಿಸಿ ಸೇವಿಸಬೇಕು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !