ಬತ್ತಿದ ಹೊಂಡ ಬಿಚ್ಚಿಟ್ಟ ಕಥೆಗಳು...

7

ಬತ್ತಿದ ಹೊಂಡ ಬಿಚ್ಚಿಟ್ಟ ಕಥೆಗಳು...

Published:
Updated:
Prajavani

ಬರಗಾಲ ಎನ್ನುವುದು ಸಂಕಟದ ಜತೆಗೆ, ಒಂದಷ್ಟು ಅಪರೂಪದ ಕಥೆಗಳನ್ನು ಬಿಚ್ಚಿಡುತ್ತದೆ. ಅದು ಹೇಗೆ ಎಂದು ತಿಳಿಯಬೇಕಾದರೆ, ಒಮ್ಮೆ ಬಾದಾಮಿಗೆ ಬನ್ನಿ. ಅಲ್ಲಿನ ಐತಿಹಾಸಿಕ ಹೊಂಡವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಾಗಿದರೆ, ಒಂದಷ್ಟು ವಿಶಿಷ್ಟ ಕಥೆಗಳು ತೆರೆದುಕೊಳ್ಳುತ್ತವೆ.

1400 ವರ್ಷಗಳ ಇತಿಹಾಸವುಳ್ಳ ಬಾದಾಮಿ ಹೊಂಡ ಈಗ ಭೂತನಾಥ ಗುಡಿಗಳ ಸಂಕೀರ್ಣದವರೆಗೂ ಬತ್ತಿದೆ. ಬಿಸಿಲಿನ ತಾಪಕ್ಕೆ ಗಂಗಾಳದಂತಹ ಅಂಗಳ ಬಿರಿತಿದೆ. ದನಕರುಗಳಿಗೆ ಗೋಮಾಳ. ಆಡುವ ಹುಡುಗರಿಗೆ ಮೈದಾನ. ಬೋರ್‌ಗಳಲ್ಲಿ ನೀರು ಕಡಿಮೆಯಾಗಿದೆ. ಊರ ಕಡೆಗಿನ ದಂಡೆಯತ್ತ ಈಗ ಸ್ವಲ್ಪ ನೀರಿದ್ದು, ಅದು ಬಟ್ಟೆ ತೊಳೆಯುವವರಿಗೆ ಆಧಾರವಾಗಿದೆ.

‘ಆನೆಗುಂಡು’ ಕಥೆ

ಹೊಂಡದ ನಡುವೆ ಒಂದು ಕಲ್ಲು ಬಂಡೆ ಇದೆ. ಅದನ್ನು ‘ಆನೆಗುಂಡು’ ಎನ್ನುತ್ತಾರೆ. ನೋಡಲು ಮಲಗಿದ ಆನೆಯಂತೆ ಕಾಣುವುದರಿಂದ, ಆ ಬಂಡೆಗೆ ಆನೆಗುಂಡು ಎಂಬ ಹೆಸರಿದೆ. ಹೊಂಡ ಬತ್ತಿರುವುದರಿಂದ, ಈಗ ಮುಕ್ಕಾಲು ಭಾಗ ಕಾಣುತ್ತಿದೆ. ಹೊಂಡದಲ್ಲಿ ನೀರು ಭರ್ತಿ ಇದ್ದಾಗ ಕೆಲವು ಈಜುಗಾರರು, ಆನೆಗುಂಡು ಹುಡುಕಿ, ಅದರ ಮೇಲೆದ್ದು ನಿಲ್ಲುತ್ತಿದ್ದರು. ಅಂಥವರನ್ನು 'ಆನೆಗುಂಡಿ ಬಲ್ದಾವಾ' ಅಂತ ಶಹಬ್ಬಾಸ್‌ ಗಿರಿ ಕೊಡ್ತಿದ್ರು’ ಎಂದು ನೆನಪಿಸಿಕೊಳ್ಳುತ್ತಾರೆ ಹೊಂಡದ ದಂಡೆಯ ಮನೆಯಲ್ಲಿರುವ ಎಂಬತ್ತರ ಹರೆಯದ ದಸ್ತಗೀರಸಾಬ ಜಮಾದಾರ. ಆದರೀಗ ಆ ಆನೆಗುಂಡಿಯೇ ತಲೆ ಎತ್ತಿ ನಿಂತು ‘ನನ್ನ ಮೇಲೆ ನಿಂತುಕೊಳ್ಳಿ’ ಎಂದು ಕರೆಯುವಹಾಗೆ ಮಲಗಿರುವ ಬಂಡೆ ಕಾಣುತ್ತದೆ.

ಬತ್ತಿದ ಹೊಂಡದಲ್ಲಿ ಬಾವಿಗಳು

ಊರ ಕಡೆಯಿದ್ದ ನೀರು ಎರಡು ಭಾಗಗಳಾಗಿ ನಿಂತಿದೆ. ಮಧ್ಯದಲ್ಲಿ ಕಲ್ಲಿನ ಒಡ್ಡು ಇದ್ದು, ಉತ್ತರಕ್ಕಿರುವುದು 'ಬ್ರಾಹ್ಮಣರ ಹೊಂಡ' ಎಂತಲೂ, ದಕ್ಷಿಣಕ್ಕಿರುವುದು 'ಉಳಿದವರ ಹೊಂಡ ' ಎಂದು ಕರೆಯುತ್ತೇವೆಂದು ಹಿರಿಯರಾದ ಶಿವಾಜಿರಾವ್ ಜಗದಾಳಿ ಹೇಳುತ್ತಾರೆ.

ಬತ್ತಿದ ಹೊಂಡದಲ್ಲಿ ಈಗ ಮೂರು ಬಾವಿಗಳು ಕಾಣಿಸಿಕೊಂಡಿವೆ. ಎರಡರಲ್ಲಿ ಹೂಳು ತುಂಬಿದೆ. ಇನ್ನೊಂದು ಕಲ್ಲು ಕಟ್ಟಡದ ಬಾವಿ. ಅದಕ್ಕೆ ಗಡಗಡೆ (ರಾಟೆ) ಕೂಡ ಇದೆ. ಅಂದರೆ ಹಿಂದೆಂದೋ ಕಾಲದಲ್ಲಿ ಇನ್ನೂ ಭೀಕರ ಬರ ಬಂದಿತ್ತು. ಆಳವಾದ ಬಾವಿಗೆ ಗಡಗಡೆ ಹಾಕಿ, ಕೊಡ ಇಳಿಸಿ ನೀರನ್ನು ಎತ್ತುತ್ತಿದ್ದರು. ಈಗಿನ್ನೂ ಆ ಸ್ಥಿತಿ ಬಂದಿಲ್ಲ. ಬಾವಿಯ ದಂಡೆಯವರೆಗೂ ನೀರು ತುಂಬಿಕೊಂಡಿದೆ. ದಿನದಿಂದ ದಿನಕ್ಕೆ ಹೊಂಡದ ನೀರು ಕಡಿಮೆಯಾಗುತ್ತಿದೆ. ಇನ್ನೇನು ಈ ತಿಂಗಳು ಮುಗಿಯುವುದರಲ್ಲಿ ನಾವೂ ಗಡಗಡೆ ಬಳಸಿ ಕೊಡದಿಂದ ನೀರೆತ್ತಬೇಕಾಗಬಹುದು. ಆದರೆ ಆಗಲೇ ಗಡಗಡೆಯ ಚೌಕಟ್ಟು ಕಿಡಗೇಡಿಗಳ ಕೃತ್ಯದಿಂದ ಕಣ್ಮರೆಯಾಗಿದೆ.

ಸಜ್ಜಿ ಬರದಂತ ಬರಗಾಲ

ಬಾದಾಮಿಯಲ್ಲಿ ಹಿಂದೆ ಬರಗಾಲಗಳು ಹೇಗಿದ್ದವು ಎಂದು ಕೇಳಿದರು ಹಿರಿಯ ನಾಗರಿಕರು ’ಸಜ್ಜಿ ಬರ’ವನ್ನು ಜ್ಞಾಪಿಸಿಕೊಳ್ಳುತ್ತಾರೆ. ‘ಸಜ್ಜಿ’ ಬರ ಅಂದರೆ ಜೋಳ ಒತ್ತಟ್ಟಿಗಿರಲಿ ಸಜ್ಜಿ ಕೂಡಾ ಬೆಳೆಯದಂಥ ಭೀಕರ ಬರ. ‘ಹಿಂದಕ ಸಜ್ಜಿ ಬರಾ ಬಿದ್ದಾಗ ಹೊಂಡ ಪೂರಾ ಬತ್ತಿತ್ತು. ಹೊಂಡದಾಗ ಈಗಿನ ಗತೆ ಬಾವಿ ಕಾಣ್ತಿದ್ವು. ಬತ್ತಿದ ಹೊಂಡದ ಒಡಲಾಗ ಏಳು ಬಾವಿ ನಾ ಕಣ್ಣಾರೆ ಕಂಡೇನಿ. ಆ ಬಾವಿಗೆಲ್ಲಾ ಆಗ ಗಡಗಡೆ ಇದ್ವು. ಆ ಬಾವ್ಯಾಗಿಂದ ಜಗ್ಗಿ ನಾ ನೀರ ತಂದೇನಿ ನೋಡ್ರಿ’ ಎನ್ನುತ್ತರೆ ಜನರು.

‘ಭೂತನಾಥ ಗಿಡಗಳ ಸಂಕೀರ್ಣದ ಕಡೆ ಈಗೇನ ಉಸುಗು ಐತೆಲ್ಲಾ ಅಲ್ಲೆ ಸಜ್ಜಿ ಬರಾ ಬಿದ್ದಾಗ ಬಾವಿ ತಗದಿದ್ರು. ತಿಳಿನೀರ ತುಂಬಕೊಂಡ ಊರ ಮಂದೆಲ್ಲಾ ಒಯ್ತಿದ್ರು. ನೀರರ ಬಾಳ ಅಂದ್ರ ಬಾಳ ರುಚಿ ಇದ್ವು’ ಎಂದು ನೆನಪಿಸಿಕೊಳ್ಳುತ್ತಾರೆ ಹೊರಪ್ಯಾಟನ್ನ ದೊಡಮನಿ ಎಲ್ಲವ್ವ.

ಅಂಟು ಜಾಡ್ಯದ ನಂಟು

ಬರಗಾಲದಿಂದ ಹೊಂಡಗಳು ಬರಿದಾಗುತ್ತಾ, ನೀರಿನ ಸಮಸ್ಯೆ ಸೃಷ್ಟಿಸಿರುವುದು ಒಂದು ಕಡೆ. ಇನ್ನೊಂದು ಕಡೆ ಅಗಸ್ತ್ಯ ತೀರ್ಥವೆಂದು ಕರೆಯುವ ಬಾದಾಮಿ ಹೊಂಡದಲ್ಲಿ ರೈನೋಸ್ಪೋರಿಡಿಯಂ ರೋಗಾಣುಗಳು ತುಂಬಿಕೊಂಡಿದೆಯಂತೆ.

ಕುಷ್ಟುರಾಯನೆಂಬ ರಾಜ ತನಗಂಟಿದ್ದ ಕುಷ್ಠರೋಗದಿಂದ ಮುಕ್ತಿ ಪಡೆದಿದ್ದು ಇದೇ ಹೊಂಡದ ನೀರಿನಿಂದ ಎಂದು ಪುರಾಣಗಳಲ್ಲಿದೆ. ಇಂಥ ಈ ಹೊಂಡವಿಂದು ರೈನೋಸ್ಪೋರಿಡಿಯಮ್ ಎಂಬ ರೋಗಾಣುಗಳ ಆಗರವಾಗಿದೆ.

ಈ ರೈನೋಸ್ಪೋರಿಡಿಯಮ್ ಅಂಟುರೋಗ. ಗಂಟು ಬಿದ್ದರೆ ಮೂಗು ವಿಕಾರಗೊಂಡು ಮುಖವೆಲ್ಲಾ ಕಳೆಗೆಟ್ಟು ಹೋಗುವುದು. ಮೂಗಿನ ಹೊಳ್ಳೆಗಳಲ್ಲಿ ದ್ರಾಕ್ಷಿ ಗೊಂಚಲದಂತಹ ಗಂಟುಗಳು ಬೆಳೆದು ರಕ್ತಮಿಶ್ರಿತ ದ್ರವ ಒಸರಿ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಉಸಿರಾಟಕ್ಕೆ ವಿಪರೀತ ತೊಂದರೆ. ಅಂತಹ ಜಿದ್ದಿನ ಜಾಡ್ಯ ಇದು. ಈ ರೋಗ ಬಾದಾಮಿ ಹೊಂಡದ ನೀರಿನಲ್ಲಿರುವುದನ್ನು ಐವತ್ತು ವರ್ಷಗಳ ಹಿಂದೆ ಹುಬ್ಬಳಿ ಕಿಮ್ಸ್‌ ಆಸ್ಪತ್ರೆಯ ಕಿವಿ, ಗಂಟಲು, ಮೂಗಿನ ತಜ್ಞ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಕೃಷ್ಣಮೂರ್ತಿ ಸಂಶೋಧಿಸಿ, ಸರ್ಕಾರದ ಗಮನಕ್ಕೆ ತಂದಿದ್ದರು. ಅದರ ನಿವಾರಣೋಪಾಯಗಳನ್ನೂ ಸೂಚಿಸಿದ್ದರು.

ಈಗೇನು ಮಾಡಬೇಕು?

ರೈನೋಸ್ಪೋರಿಡಿಯಮ್ ಕಾಣಿಸಿಕೊಂಡಿರುವ ಹೊಂಡದ ಹೂಳು ತೆಗೆಸಿ, ಹೊಲಸನ್ನು ಸ್ವಚ್ಛ ಮಾಡಲು ಸ್ವಚ್ಛತಾ ಆಂದೋಲನ ಮಾಡಬೇಕು. ಬರಗಾಲದ ಈ ದಿನಗಳಲ್ಲಿ ಬಾದಾಮಿ ಜನರ ಬಳಕೆಗೆ, ದನ ಕರುಗಳಿಗೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಬೇಕು. ಹೊಂಡದ ಹೂಳು ತೆಗೆಸಿ ಒಣಗಲು ಬಿಟ್ಟರೆ ರೈನೋಸ್ಪೋರಿಡಿಯಮ್ ನಿವಾರಣೆಯಾದೀತು. ಬಾದಾಮಿ ಜನರಿಗೆ ನೆಮ್ಮದಿ ಸಿಕ್ಕೀತು.

ಸರ್ಕಾರ ಹೊಂಡಕ್ಕೆ ನೀರು ತುಂಬುವುದನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು. ಇದರಿಂದ ಅಂತರ್ಜಲವೂ ಹೆಚ್ಚುತ್ತದೆ. ಊರಿನಲ್ಲಿರುವ ಬತ್ತಿದ ಬೋರ್‌ಗಳು ಜಲಮರುಪೂರಣಗೊಳ್ಳುತ್ತವೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಈ ಕಾರ್ಯಕ್ಕೆ ಪುರಾತತ್ವ ಇಲಾಖೆ ಮತ್ತು ಕಂದಾಯ ಇಲಾಖೆ ಕೈಜೋಡಿಸಬೇಕು. ಆಗ ಮಳೆಗಾಲದ ಸೊಬಗು, ಸೌಂದರ್ಯ, ಬೆಡಗು, ಬಿನ್ನಾಣವನ್ನು ವರ್ಷಪೂರ್ತಿ ಪ್ರವಾಸಿಗರಿಗೆ ಸಿಗುವಂತೆ ಮಾಡಲು ಸಾಧ್ಯವಿದೆ.

ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !