ಮಕ್ಕಳ ಜತೆ ಸೇರಿ ಗಂಡನ ಕೊಂದವಳ ಸೆರೆ

7
ಕೊಲೆ ಮಾಡಿ ಆತ್ಮಹತ್ಯೆಯ ಕತೆ ಹೆಣೆದಿದ್ದರು

ಮಕ್ಕಳ ಜತೆ ಸೇರಿ ಗಂಡನ ಕೊಂದವಳ ಸೆರೆ

Published:
Updated:
ಪಳನಿವೇಲು

ಬೆಂಗಳೂರು: ಇಬ್ಬರು ಮಕ್ಕಳೊಂದಿಗೆ ಸೇರಿ ಪಾನಮತ್ತ ಪತಿಯನ್ನು ಕೊಲೆಗೈದಿದ್ದ ಮಹಿಳೆ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದರು. ಆದರೆ, ತುರ್ತಾಗಿ ಮರಣ ಪ್ರಮಾಣ ಪತ್ರ (ಡೆತ್‌ ಸರ್ಟಿಫಿಕೇಟ್) ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದೇ ಆ ತಾಯಿ–ಮಕ್ಕಳ ಪಾಲಿಗೆ ಮುಳುವಾಯಿತು.

ಕ್ಯಾಬ್ ಚಾಲಕ ಪಳನಿವೇಲು (43) ಕೊಲೆಯಾದವರು. ಮೃತರ ಪತ್ನಿ ಕವಿತಾ (35), ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಅವರ ಹಿರಿಯ ಮಗ ರಾಜುವೇಲು ಹಾಗೂ ಪಿಯುಸಿ ಓದುತ್ತಿರುವ ಕಿರಿಯ ಮಗನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈ ಕುಟುಂಬ ನಾಲ್ಕು ವರ್ಷಗಳಿಂದ ಅರುಂಧತಿನಗರದಲ್ಲಿ ನೆಲೆಸಿತ್ತು.

ಪಳನಿ, ನಿತ್ಯ ಪಾನಮತ್ತರಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಶನಿವಾರ ರಾತ್ರಿ ಸಹ ಇದೇ ವಿಚಾರಕ್ಕೆ ಜಗಳವಾಗಿತ್ತು. ಪತಿಯ ವರ್ತನೆಯಿಂದ ಬೇಸರಗೊಂಡಿದ್ದ ಕವಿತಾ, ಅವರನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದರು. ಮಕ್ಕಳು ಸಹ ತಾಯಿಯ ತೀರ್ಮಾನವನ್ನೇ ಒಪ್ಪಿಕೊಂಡಿದ್ದರು.

ರಾತ್ರಿ 12 ಗಂಟೆ ಸುಮಾರಿಗೆ ಪಳನಿ ನಿದ್ರೆಗೆ ಜಾರಿದ್ದರು. ಆಗ ಮೂಗು–ಬಾಯಿ ಮುಚ್ಚಿ ಉಸಿರುಗಟ್ಟಿಸಿ ಅವರನ್ನು ಕೊಂದ ಆರೋಪಿಗಳು, ಬಳಿಕ ಬೆಳಗಿನ ಜಾವದವರೆಗೂ ಅದೇ ಕೋಣೆಯಲ್ಲೇ ಮಲಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

6 ಗಂಟೆಗೆ ಎಚ್ಚರಗೊಂಡ ತಾಯಿ–ಮಕ್ಕಳು, ಪಳನಿ ಕುತ್ತಿಗೆಗೆ ಬಟ್ಟೆಯೊಂದನ್ನು ಬಿಗಿದಿದ್ದಾರೆ. ನಂತರ ಜೋರಾಗಿ ಚೀರಿಕೊಂಡಿರುವ ಕವಿತಾ, ಜನ ಸೇರುತ್ತಿದ್ದಂತೆಯೇ ಆತ್ಮಹತ್ಯೆಯ ಕತೆ ಹೆಣೆದಿದ್ದಾರೆ. ಮಕ್ಕಳು ಸಹ ತಂದೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸುವಂತೆ ನಾಟಕ ಮಾಡಿದ್ದಾರೆ.

‘ಕುಡಿದು ಮನೆಗೆ ಬಂದರೆಂದು ರಾತ್ರಿ ಬೈದಿದ್ದೆ. ಅಷ್ಟಕ್ಕೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎನ್ನುತ್ತಾ ಕವಿತಾ ರೋದಿಸಿದ್ದಾರೆ. ಆ ಮಾತುಗಳನ್ನು ನಂಬಿ ನೆರೆಹೊರೆಯವರೂ ದುಃಖತಪ್ತರಾಗಿದ್ದಾರೆ. ಆದರೆ, ಸಂಜೆ ವೇಳೆಗೆ ಸಾವಿನ ಅಸಲಿ ರಹಸ್ಯ ಬಯಲಾಗಿದೆ.

ಸಾಕ್ಷ್ಯನಾಶಕ್ಕೂ ಯತ್ನ: ಪೊಲೀಸರಿಗೆ ವಿಷಯ ತಿಳಿಸಿದರೆ ತೊಂದರೆ ಆಗಬಹುದೆಂದು ಆರೋಪಿಗಳು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು.

ಮುಂದೊಂದು ದಿನ ಸಾವಿನ ವಿಚಾರ ಗೊತ್ತಾದರೂ, ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಗಬಾರದೆಂದು ಶವವನ್ನು ಹೂಳುವ ಬದಲು ಸುಡಲು ನಿರ್ಧರಿಸಿದ್ದರು. ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ಮರಣ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ ಎಂಬುದೂ ಅವರಿಗೆ ಗೊತ್ತಿತ್ತು. ಹೀಗಾಗಿಯೇ, ಶವವನ್ನು ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಹೋಗಿದ್ದ ಆರೋಪಿಗಳು, ‘ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣ ಪ್ರಮಾಣ ಪತ್ರ ಬೇಕು’ ಎಂದು ಕೇಳಿದ್ದರು.

‘ಪೊಲೀಸರಿಗೆ ವಿಷಯ ತಿಳಿಸದೆ ಮುಂದುವರಿಯುವುದಿಲ್ಲ’ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದಾಗ, ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !