ಬೆಂಗಳೂರು: ಸ್ಕೂಟರ್ ಗುದ್ದಿಸಿ, ಮಹಿಳೆ ಹೊಟ್ಟೆಗೆ ಒದ್ದ

7
ಬಸವೇಶ್ವರನಗರದ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಘಟನೆ

ಬೆಂಗಳೂರು: ಸ್ಕೂಟರ್ ಗುದ್ದಿಸಿ, ಮಹಿಳೆ ಹೊಟ್ಟೆಗೆ ಒದ್ದ

Published:
Updated:

ಬೆಂಗಳೂರು: ಪೆಟ್ರೋಲ್ ಹಾಕಿಸುವ ವೇಳೆ ಬಂಕ್‌ನಲ್ಲಿ ಜಗಳ ಶುರುವಾಗಿ ವ್ಯಕ್ತಿಯೊಬ್ಬ 34 ವರ್ಷದ ಶೋಭಾ ಎಂಬುವರ ಹೊಟ್ಟೆಗೆ ಒದ್ದಿದ್ದಾನೆ. ಬಸವೇಶ್ವರನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಎಚ್‌.ಪಿ ಪೆಟ್ರೋಲ್ ಬಂಕ್‌ನಲ್ಲಿ ಜ.3ರ ರಾತ್ರಿ ಈ ಘಟನೆ ನಡೆದಿದೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಕಮಲಾನಗರ 1ನೇ ಮುಖ್ಯರಸ್ತೆ ನಿವಾಸಿ ಶೋಭಾ, ‘ಕೆಲಸದ ನಿಮಿತ್ತ ಸ್ಕೂಟರ್‌ನಲ್ಲಿ ಹೊರಗೆ ಹೋಗಿದ್ದ ನಾನು, ರಾತ್ರಿ 8.15ರ ಸುಮಾರಿಗೆ ಪೆಟ್ರೋಲ್ ಹಾಕಿಸಲು ಬಂಕ್‌ಗೆ ತೆರಳಿದೆ. ಸರತಿಯಲ್ಲಿದ್ದಾಗ ದಂಪತಿ ಡಿಯೋ ಸ್ಕೂಟರ್‌ನಲ್ಲಿ (ಕೆಎ–02 ಜೆಎಂ–3304) ಬಂದು ನನ್ನ ವಾಹನಕ್ಕೆ ಡಿಕ್ಕಿ ಮಾಡಿದರು. ಅದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೊನೆಗೆ ಆ ವ್ಯಕ್ತಿ ನನ್ನ ಹೊಟ್ಟೆಗೆ ಒದ್ದು ಹೊರಟು ಹೋದ’ ಎಂದು ಹೇಳಿದರು.

‘ಹಲ್ಲೆಯಿಂದ ನನಗೆ ಹೊಟ್ಟೆ ನೋವು ಶುರುವಾಯಿತು. ತಕ್ಷಣ ಸಮೀಪದ ನರ್ಸಿಂಗ್ ಹೋಮ್‌ಗೆ ತೆರಳಿ ಚಿಕಿತ್ಸೆ ಪಡೆದೆ. ನಂತರ ರಾಜರಾಜಿನಗರ ಠಾಣೆಗೆ ದೂರು ಕೊಟ್ಟೆ. ಪೊಲೀಸರು ಆದಷ್ಟು ಬೇಗ ಆ ದಂಪತಿಯನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ಸೆರೆಯಾಗಿರುವ ದೃಶ್ಯ: ದಂಪತಿ ಮೊದಲು ಶೋಭಾ ಜತೆ ವಾಗ್ವಾದ ನಡೆಸಿದ್ದಾರೆ. ಆರೋಪಿ ಒಂದು ಸಲ ಫಿರ್ಯಾದಿ ಮಹಿಳೆಯ ಸ್ಕೂಟರ್‌ಗೆ ಒದಿಯುತ್ತಾನೆ. ಬಂಕ್ ನೌಕರರು ಹಾಗೂ ಇತರೆ ವಾಹನಗಳ ಸವಾರರು ಮಧ್ಯಪ್ರವೇಶಿಸಿ ಆತನನ್ನು ಕಳುಹಿಸಲು ಮುಂದಾಗುತ್ತಾರೆ. ಸ್ಕೂಟರ್‌ನಲ್ಲಿ ಸ್ವಲ್ಪ ದೂರ ಸಾಗಿದ ಬಳಿಕ ದಂಪತಿ ಪುನಃ ಶೋಭಾ ಅವರ ಬಳಿ ಬಂದು ಗಲಾಟೆ ಮಾಡುತ್ತಾರೆ. ಈ ಹಂತದಲ್ಲಿ ಆತ ಹೊಟ್ಟೆಗೆ ಒದ್ದು ಪತ್ನಿಯನ್ನು ಕರೆದುಕೊಂಡು ಹೊರಡುತ್ತಾನೆ. ಇವಿಷ್ಟು ದೃಶ್ಯಾವಳಿಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

‘ಹಲ್ಲೆ ನಡೆಸಿ ಮಹಿಳೆ ಗೌರವಕ್ಕೆ ಧಕ್ಕೆ ತಂದ (ಐಪಿಸಿ 354,323), ಉದ್ದೇಶಪೂರ್ವಕವಾಗಿ ಶಾಂತಿ ಕದಡಿದ (504) ಹಾಗೂ ಜೀವ ಬೆದರಿಕೆ ಹಾಕಿದ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಯ ಹೆಸರು–ವಿಳಾಸ ಗೊತ್ತಾಗಿದೆ. ಆತ ತಲೆಮರೆಸಿಕೊಂಡಿದ್ದು ಸದ್ಯದಲ್ಲೇ ಬಂಧಿಸುತ್ತೇವೆ’ ಎಂದು ಬಸವೇಶ್ವರನಗರ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 51

  Happy
 • 3

  Amused
 • 3

  Sad
 • 3

  Frustrated
 • 25

  Angry

Comments:

0 comments

Write the first review for this !