ಭಾನುವಾರ, ಮಾರ್ಚ್ 7, 2021
27 °C
ಕಣ್ಣಿಗೆ ಹಬ್ಬ ನೀಡಿದ ರಂಗು ರಂಗಿನ ರಂಗೋಲಿ; ವಿವಿಧ ದೇಸಿ ಸ್ಪರ್ಧೆ, ಮದುವೆ ದಿಬ್ಬಣ ವಿಶೇಷ ಆಕರ್ಷಣೆ

ಮಹಿಳಾ ದಸರಾ: ಸಂಭ್ರಮದಲ್ಲಿ ಮಿಂದೆದ್ದ ನಾರಿಯರು

ರವಿ ಎನ್‌. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ರಥಬೀದಿ ಮಂಗಳವಾರ ಬಣ್ಣ ಬಣ್ಣದ ಚಿತ್ತಾರಗಳಿಂದ ಮಿಂಚುತ್ತಿತ್ತು. ಬೀದಿಯಲ್ಲಿ ಹೆಜ್ಜೆ ಹೆಜ್ಜೆಗೂ ಬಿಡಿಸಲಾಗಿದ್ದ ರಂಗು ರಂಗೋಲಿ ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿತ್ತು. ಕತ್ತೆತ್ತಿ ಅತ್ತಿತ್ತ ನೋಡಿದರೆ ಸಂಭ್ರಮದಲ್ಲಿ ತೊಡಗಿದ್ದ ಮಹಿಳೆಯರ ಕಲರವವೇ ಕೇಳಿಬರುತ್ತಿತ್ತು.

– ಜಿಲ್ಲಾ ದಸರಾ ಅಂಗವಾಗಿ ಮಂಗಳವಾರ ನಡೆದ ಮಹಿಳಾ ದಸರಾದ ಚಿತ್ರಣ ಇದು. 

ಈ ವರ್ಷ ಮಹಿಳಾ ದಸರಾಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಕಳೆದ ವರ್ಷ ಕೇವಲ ರಂಗೋಲಿ ಸ್ಪರ್ಧೆಗೆ ಮಹಿಳಾ ದಸರಾ ಮೀಸಲಾಗಿತ್ತು. ಈ ಬಾರಿ ರಂಗೋಲಿ ಸ್ಪರ್ಧೆ, ಮಡಕೆ ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಸೋಬಾನೆ ಪದ ಸ್ಪರ್ಧೆ, ಜಾನಪದ ಹಾಡುಗಳ ಸ್ಪರ್ಧೆ, ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

60ಕ್ಕೂ ಹೆಚ್ಚು ಮಂದಿ ಮಹಿಳೆಯರು ರಂಗೋಲಿ, ಪುಷ್ಪ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನವಿಲು, ಚಾಮುಂಡಿ ಮುಖ, ಸೂರ್ಯ ಇರುವ ರಂಗೋಲಿ, ಹೂವುಗಳಿಂದ ಅಲಂಕೃತ ರಂಗೋಲಿಗಳನ್ನು ಬಿಡಿಸಿ ಬೀದಿಯ ಅಂಗಳದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದರು. 

ರಂಗೋಲಿ ಬಿಡಿಸುವವರಿಗೆ ಒಂದು ಗಂಟೆ ಸಮಯ ನಿಗದಿ ಮಾಡಲಾಗಿತ್ತು. ನಿಗದಿತ ಅವಧಿಯಲ್ಲಿ ಬಿಡಿಸಿದ ರಂಗೋಲಿಗಳಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಗಾಯತ್ರಿ (ಪ್ರಥಮ), ರತ್ನಮ್ಮ (ದ್ವಿತೀಯ), ಪಿ.ಎಸ್. ಪುಷ್ಪ ಮರಿಸ್ವಾಮಿ (ತೃತೀಯ). ಪುಷ್ಪ ರಂಗೋಲಿಯಲ್ಲಿ ಆರ್. ರಾಜೇಶ್ವರಿ (ಪ್ರಥಮ), ಅನಿತಾ (ದ್ವಿತೀಯ) ಪವನಶ್ರೀ (ತೃತೀಯ) ಸ್ಥಾನ ಪಡೆದುಕೊಂಡರು.

ಮದುವೆ ದಿಬ್ಬಣ: ಮದುವೆ ದಿಬ್ಬಣ ಈ ಬಾರಿಯ ಮಹಿಳಾ ದಸರಾದ ವಿಶೇಷಗಳಲ್ಲಿ ಒಂದು. ಮಹಿಳೆಯರು ವಧು ವರರ ವೇಷ ತೊಟ್ಟು ಮದುವೆ ದಿಬ್ಬಣದ ದೃಶ್ಯವನ್ನು ಕಟ್ಟಿಕೊಟ್ಟರು. ವೃದ್ಧರು ಹೇಳುತ್ತಿದ್ದ ಸೋಬಾನೆ ಪದಗಳು ಇಡೀ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿತು. 

ವಿವಿಧ ತಿನಿಸುಗಳ ಪ್ರಾತ್ಯಕ್ಷಿಕೆ: ಮಹಿಳಾ ದಸರಾದಲ್ಲಿ ವಿವಿಧ  ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳೆಯರು ತಾವು ತಯಾರಿಸಿದ್ದ ವಿಶೇಷ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇದು ಕೂಡ ಜನರನ್ನು ಆಕರ್ಷಿಸಿತು.

ಎಲ್ಲ ಸ್ಪರ್ಧೆಗಳಿಗೂ ಮೊದಲು ಶಾಸಕರಾದ ಸಿ.ಎಸ್. ನಿರಂಜನ್‌ಕುಮಾರ್‌, ಸಿ. ಪುಟ್ಟರಂಗಶೆಟ್ಟಿ ‘ಮಹಿಳಾ ದಸರಾ’ಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯ ಸಿ.ಎನ್. ಬಾಲರಾಜು, ಸಿಇಒ ಬಿ.ಎಚ್. ನಾರಾಯಣರಾವ್ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.