ಮೆಜೆಸ್ಟಿಕ್ ಸುತ್ತಮುತ್ತ ಮಹಿಳಾ ಸುಲಿಗೆ ಗ್ಯಾಂಗ್‌ ಅಟ್ಟಹಾಸ!

7
ಗ್ಯಾಂಗ್ ಕಟ್ಟಿಕೊಂಡು ದರೋಡೆಗೆ ಇಳಿದ ಮಹಿಳೆಯರು * ಇಬ್ಬರ ಬಂಧನ, ನಾಲ್ವರಿಗೆ ಶೋಧ

ಮೆಜೆಸ್ಟಿಕ್ ಸುತ್ತಮುತ್ತ ಮಹಿಳಾ ಸುಲಿಗೆ ಗ್ಯಾಂಗ್‌ ಅಟ್ಟಹಾಸ!

Published:
Updated:
Deccan Herald

ಬೆಂಗಳೂರು: ರಾತ್ರಿ ವೇಳೆ ಮೆಜೆಸ್ಟಿಕ್‌ಗೆ ಬರುವ ಪ್ರಯಾಣಿಕರನ್ನು ಆಟೊದಲ್ಲಿ ಎಳೆದೊಯ್ದು ಸುಲಿಗೆ ಮಾಡುತ್ತಿದ್ದ ಮಹಿಳೆಯರ ಗ್ಯಾಂಗ್‌ನ ಸದಸ್ಯರಿಬ್ಬರು ಉಪ್ಪಾರಪೇಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬನಶಂಕರಿಯ ಆಶಾ (28) ಹಾಗೂ ಟಿ.ದಾಸರಹಳ್ಳಿಯ ಸುಧಾ ಅಲಿಯಾಸ್ ರೇಖಾ (28) ಬಂಧಿತರು. ಸೆ.11ರ ರಾತ್ರಿ ಇವರು ಉಡುಪಿಯ ಪ್ರಯಾಣಿಕರೊಬ್ಬರಿಂದ ಸುಲಿಗೆ ಮಾಡಿದ್ದ ₹3 ಸಾವಿರವನ್ನು ಜಪ್ತಿ ಮಾಡಲಾಗಿದೆ. ರತ್ನ, ಸುಮಾ, ಪದ್ಮಾ ಹಾಗೂ ಆಟೊ ಚಾಲಕ ರಾಜೇಶ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣಗಳ ಬಳಿ ನಿಲ್ಲುವ ಈ ಮಹಿಳೆಯರು, ಒಂಟಿಯಾಗಿ ಬರುವ ಪುರುಷ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಾರೆ. ಒಬ್ಬ ಮಹಿಳೆ ಆ ಪ್ರಯಾಣಿಕನ ಬಳಿ ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸುವುದಾಗಿ ಕರೆಯುತ್ತಾಳೆ. ಆತ ಒಪ್ಪಿದರೆ, ಲಾಡ್ಜ್‌ಗೆ ಕರೆದುಕೊಂಡು ಹೋಗುವುದಾಗಿ ರಾಜೇಶ್‌ನ ಆಟೊ ಹತ್ತಿಸಿಕೊಳ್ಳುತ್ತಾಳೆ’ ಎಂದು ಪೊಲೀಸರು ವಿವರಿಸಿದರು.

‘ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಇತರೆ ಮಹಿಳೆಯರೂ ಆಟೊ ಹತ್ತಿಕೊಂಡು, ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ಕೊಡಲು ನಿರಾಕರಿಸಿದರೆ, ‘ನಮ್ಮ ಮೈ–ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ’ ಎಂದು ಕೂಗಿಕೊಳ್ಳುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಭೀತಿಗೆ ಒಳಗಾಗಿ ಹಣ ಕೊಡುವ ಪ್ರಯಾಣಿಕ, ಮರ್ಯಾದೆಗೆ ಅಂಜಿ ದೂರನ್ನೂ ಕೊಡುವುದಿಲ್ಲ’ ಎಂದು ಹೇಳಿದರು.

ಎಳೆದು ಕೂರಿಸಿಕೊಂಡರು: ಕೆಲಸದ ನಿಮಿತ್ತ ಉಡುಪಿಯಿಂದ ನಗರಕ್ಕೆ ಬಂದಿದ್ದ 50 ವರ್ಷದ ವ್ಯಕ್ತಿಯೊಬ್ಬರು, ಮೆಜೆಸ್ಟಿಕ್ ಸಮೀಪದ ‘ಯಾತ್ರಿ ನಿವಾಸ್’ ಲಾಡ್ಜ್‌ನಲ್ಲಿ ರೂಂ ಮಾಡಿದ್ದರು. ಸೆ.11ರ ರಾತ್ರಿ ಅವರು ಊಟ ಮಾಡಿಕೊಂಡು ಲಾಡ್ಜ್‌ಗೆ ನಡೆದು ಹೋಗುತ್ತಿದ್ದಾಗ ಸುಧಾ ಹಾಗೂ ಆಶಾ ತಮ್ಮೊಟ್ಟಿಗೆ ಬರವಂತೆ ಕರೆದಿದ್ದರು. ಅವರು ಒಪ್ಪದೆ ಮುಂದೆ ಸಾಗುವಾಗ ರಾಜೇಶ್‌ನ ಆಟೊದಲ್ಲಿ ಇತರೆ ಮಹಿಳೆಯರೂ ಸ್ಥಳಕ್ಕೆ ಬಂದಿದ್ದರು. ಎಲ್ಲರೂ ಸೇರಿ ಅವರನ್ನು ಆಟೊದಲ್ಲಿ ಎಳೆದು ಕೂರಿಸಿಕೊಂಡು, ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣದ ಬಳಿ ಕರೆದೊಯ್ದಿದ್ದರು. ‌ರಕ್ತ ಬರುವಂತೆ ಅವರ ಭುಜವನ್ನು ಕಚ್ಚಿ, ₹ 3 ಸಾವಿರದೊಂದಿಗೆ ಪರಾರಿಯಾಗಿದ್ದರು.

‘ಆ ವ್ಯಕ್ತಿ ದೂರು ಕೊಡುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿ, ಅಲ್ಲೇ ತಿರುಗಾಡುತ್ತಿದ್ದ ಆಶಾಳನ್ನು ಹಿಡಿದುಕೊಂಡರು. ‘ಗ್ಯಾಂಗ್‌ನಲ್ಲಿ ಈಕೆಯೂ ಇದ್ದಳು’ ಎಂದು ಫಿರ್ಯಾದಿ ವ್ಯಕ್ತಿ ಗುರುತಿಸಿದರು. ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇತರೆ ಸದಸ್ಯರ ಮಾಹಿತಿ ಸಿಕ್ಕಿತು. ಬಳಿಕ ಮೊಬೈಲ್ ಕರೆ ವಿವರ ಆಧರಿಸಿ ಸುಧಾಳನ್ನೂ ಪತ್ತೆ ಮಾಡಿದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 57

  Happy
 • 7

  Amused
 • 3

  Sad
 • 4

  Frustrated
 • 12

  Angry

Comments:

0 comments

Write the first review for this !