ಕೌದಿಯಂಥ ಮಹಿಳಾ ಚಳವಳಿ

ಬುಧವಾರ, ಮೇ 22, 2019
29 °C
ಸೂಜಿ ಇದೆ, ನೂಲೂ ಇದೆ; ಹರಿದ ಚಿಂದಿಗಳಿಲ್ಲಿ ಚಿತ್ತಾರವಾಗುತ್ತವೆ

ಕೌದಿಯಂಥ ಮಹಿಳಾ ಚಳವಳಿ

Published:
Updated:

ಶಿವಮೊಗ್ಗೆಯ ಸಮಾರಂಭವೊಂದರಲ್ಲಿ ಚಿಂತಕಿ, ಹೋರಾಟಗಾರ್ತಿ ಮನೀಷಾ ಗುಪ್ತೆ ಒಂದು ಮಾತು ಹೇಳಿದರು. ಮಹಿಳೆಯರಿಗೆ ಇಪ್ಪತ್ತನಾಲ್ಕು ಗಂಟೆ ಸಾಕಾಗುವುದಿಲ್ಲ, ಅದನ್ನು ನಲವತ್ತೆಂಟು, ಅರವತ್ನಾಲ್ಕು... ಹೀಗೆ ವಿಸ್ತರಿಸುತ್ತಾ ಹೋಗಬೇಕು. ಅದನ್ನು ಸಾಧಿಸುವುದು ಹೇಗೆಂದರೆ, ಒಬ್ಬಳು ಈರ್ವಳಾಗುತ್ತಾ, ಮೂರ್ವಳಾಗುತ್ತಾ ಸಾಗುವುದು. ಅಂದರೆ, ಕೈಗೆ ಕೈ ಜೋಡಿಸುವುದು. ಒಬ್ಬರನ್ನು ಒಬ್ಬರು ಆತುಕೊಂಡು ಕೆಲಸ, ಹವ್ಯಾಸ, ಹೋರಾಟ, ಅಧಿಕಾರ ಹಂಚಿಕೆಗಳನ್ನು ಮಾಡಿಕೊಳ್ಳುವ ಈ ಪರಿಕಲ್ಪನೆಯೇ ಮೂಲತಃ ಚಳವಳಿಯ ಆಶಯ ಕೂಡಾ ಆಗಿರುತ್ತದೆ. ಮತ್ತಿದು ಅದರ ಫಲವೂ ಆಗಬೇಕಿದೆ.


ಸಬಿತಾ ಬನ್ನಾಡಿ

ಇದು ಚಳವಳಿಗಳಿಲ್ಲದ ಕಾಲ ಎನ್ನಲಾಗುತ್ತದೆ. ಆದರೆ ಇದು ಭಿನ್ನ ಸ್ವರೂಪದ ಚಳವಳಿಗಳ ಕಾಲ. ಹೆಂಗಸರ ಚಳವಳಿಗಳು ಇತರ ಚಳವಳಿಗಳಂತಲ್ಲ. ಹೆಂಗಸರು ಬರೀ ಪ್ರಶ್ನೆ ಕೇಳುವುದಿಲ್ಲ. ಅವರು ಉತ್ತರದಿಂದಲೇ ಆರಂಭಿಸಿರುತ್ತಾರೆ. ಅದನ್ನು ಕೇಳಿಸಿಕೊಳ್ಳಿ ಎನ್ನುತ್ತಿರುತ್ತಾರೆ. ಒಮ್ಮೆ ನನ್ನ ಪರಿಚಯದ ಹುಡುಗ ಹೇಳುತ್ತಿದ್ದ. ನಾನು ಹದಿಹರೆಯದಲ್ಲಿ ತುಂಬಾ ಕೆಟ್ಟು ಹೋಗಿದ್ದೆ. ಅದು ನನ್ನ ಅಮ್ಮನಿಗೆ ತಿಳಿಯಿತು. ಅವಳು ನನ್ನನ್ನು ಮನೆಬಿಟ್ಟು ಹೋಗು ಎನ್ನುತ್ತಾಳೆ ಅಂದುಕೊಂಡಿದ್ದೆ. ಆದರವಳು ನನ್ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ‘ಮಗೂ ಇದು ಬದುಕಿನ ದಾರಿಯಲ್ಲ, ಸರಿ ಮಾಡಿಕೊಳ್ಳಲು ಇನ್ನೂ ಸಾಧ್ಯ ಇದೆ’ ಎಂದಳು. ನಾನು ಗಿಲ್ಟ್‌ನಲ್ಲಿ ಮುಳುಗಿ ಹೋದೆ. ಅದು ನನ್ನ ಜೀವನದ ಬದಲಾವಣೆಯ ತಿರುವಾಯಿತು. ಹೆಂಗಸರು ಯಾವಾಗಲೂ ದಾರಿ ತೋರುವ ಮಾತಾಡುತ್ತಾರೆ. ಅವರು ಕೊಡುವ ಶಿಕ್ಷೆ ಎಂದರೆ ದೂರ ತಳ್ಳುವುದಲ್ಲ, ಅಪ್ಪಿ ಸಂತೈಸುವುದು. ಈ ಜಗತ್ತಿನಲ್ಲಿ ಬದಲಾವಣೆ ಈ ದಾರಿಯಿಂದ ಮಾತ್ರ ಸಾಧ್ಯ ಅಂದ. ಅರೆರೆ! ಅಂತ ನನಗನ್ನಿಸಿತು. ಮನೆಯ ಈ ದಾರಿ ಜಗದ ದಾರಿಯಾಗಿಲ್ಲ ಎಂಬುದೇ ಸಮಸ್ಯೆ.

ಆ ಹುಡುಗ ಹೇಳಿದ್ದು ನಿಜವೆನ್ನಿಸಿತು. ಪಾಶ್ಚಾತ್ಯ ಮೂಲದ್ದು ಎಂದೆಲ್ಲಾ ಟೀಕೆಗೆ ಒಳಗಾದ ‘ಮೀ–ಟೂ’ವನ್ನೇ ಗಮನಿಸಿ. ಆ ಹೆಣ್ಣುಮಕ್ಕಳು ಇದನ್ನು ಆರಂಭಿಸಿದಾಗ ತಮ್ಮೊಡನೆ ಅವಮಾನಕರವಾಗಿ ನಡೆದುಕೊಂಡ ಗಂಡಸರಿಗೆ ಶಿಕ್ಷೆಯಾಗಲಿ ಎನ್ನಲಿಲ್ಲ. ಬದಲಿಗೆ ಈಗಾದರೂ ಗಿಲ್ಟ್ ಫೀಲ್ ಮಾಡಿಕೊಳ್ಳಿ ಎಂದರು. ಇಷ್ಟಕ್ಕೇ ತಡೆದುಕೊಳ್ಳಲಾಗಲಿಲ್ಲ. ಅಭದ್ರತೆಯ ಭಯದಲ್ಲಿ ನರಳಿದ ಗಂಡಸರು ಮತ್ತು ಅವರಂತೆಯೇ ಯೋಚಿಸುವ ಹೆಂಗಸರು ‘ಓಹೋ, ಇವರೇನು ಪತಿವ್ರತೆಯರಾ’ ಎಂದು ಅರಚಾಡತೊಡಗಿದರು. ಆದರೆ ಒಂದಂತೂ ಸತ್ಯ, ಇದು ಒಳಗೊಳಗೇ ಒಂದು ಎಚ್ಚರಿಕೆಯನ್ನು ರವಾನಿಸಿದೆ.

ಶಿವಮೊಗ್ಗದಲ್ಲಿ ಕಳೆದ ವರ್ಷ ‘ಅರಿವಿನ ಪಯಣ’ವೆಂಬ ಹೆಸರಿನಲ್ಲಿ ಮಹಿಳಾ ಒಕ್ಕೂಟವು ಹುಡುಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಹೆಣ್ಣುಮಕ್ಕಳ ಕುರಿತು ತಿಳಿಹೇಳಿದಾಗ, ಆ ಹುಡುಗರು ಅದು ತಮ್ಮ ಅವಶ್ಯಕತೆ ಎಂದು ಹೇಳಿದರು. ಇಂತಹ ಸಣ್ಣದೇ ಆದರೂ ಬದಲಾವಣೆಯ ಹಾದಿಯನ್ನು ಹೆಂಗಸರು ತೋರುತ್ತಿದ್ದಾರೆ. ಅದು ಫ್ರೆಂಚ್ ಕ್ರಾಂತಿಯಂತಲ್ಲ ಎಂದವರಿಗೆ ತಿಳಿದಿದೆ. ಈ ಹತ್ತು ವರ್ಷಗಳಲ್ಲಿ ಇಂತಹ ಹಲವಾರು ನಡೆಗಳು ಆಗಿವೆ. ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ದೆಹಲಿಯ ವಿದ್ಯಾರ್ಥಿನಿಯರು ಮುಂದೆ ನಿಂತರು. ಹಲವು ದಿನಗಳ ಮೇಲಾದರೂ ಸರ್ಕಾರ ಅದನ್ನು ಕೇಳಿಸಿಕೊಳ್ಳಲೇ ಬೇಕಾಯಿತು. ಆದರೆ ಅದಕ್ಕೆ ಗೊತ್ತಿರುವ ಪರಿಹಾರ ಇನ್ನೂ ಪೌರುಷದ ಮಾದರಿಯಿಂದ ಹೊರಬಂದಿಲ್ಲ. ಅದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿತು. ಆದರೆ ಅತ್ಯಾಚಾರಿಗಳೇ ಹೇಳಿದ, ‘ಮದ್ಯಪಾನದ ಅಮಲು ಮತ್ತು ಹೆಣ್ಣೆಂದರೆ ಗಂಡಸರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾದವಳು’ ಎಂಬ ಮಾತನ್ನು ಕೇಳಿಸಿಕೊಂಡೇ ಇಲ್ಲ. ಯಾಕೆಂದರೆ ಮದ್ಯ ಮಾರಾಟ ಮತ್ತು ಸೆಕ್ಸ್ ವಿಡಿಯೊಗಳು ಇವರಿಗೆ ಆದಾಯ ತಂದು ಕೊಡುವ ಸರಕುಗಳು. ಈ ಹಿನ್ನೆಲೆಯಿಂದ ಮದ್ಯಪಾನ ವಿರೋಧಿ ಆಂದೋಲನವನ್ನು ನೋಡಬೇಕು. ಹೆಣ್ಣುಮಕ್ಕಳು ಎತ್ತುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ಪ್ರಶ್ನೆಯನ್ನು. ನಿಮಗಿದು ಆದಾಯ ಮಾತ್ರವಾಗಿ ಕಾಣುತ್ತಿದೆಯೇ? ಮನೆಯನ್ನು ರಣರಂಗವಾಗಿಸಿ, ಮನೆಯ ಹೊರಗನ್ನು ಸ್ಮಶಾನವಾಗಿಸುವ ಈ ಅನಿಯಂತ್ರಿತ ದಂಧೆಯ ಪರಿಣಾಮ ತಿಳಿದಿದೆಯೇ? ಬೆಳ್ಳಂಬೆಳಗ್ಗೆಯೇ ಮದ್ಯದಂಗಡಿಯಲ್ಲಿ ಕ್ಯೂ ಬೆಳೆದಿರುತ್ತದೆ. ಚಿಗುರು ಮೀಸೆಯ ಹುಡುಗರು ಎಗ್ಗಿಲ್ಲದೇ ಕುಡಿಯುತ್ತಿದ್ದಾರೆ. ವೋಟಿಗಾಗಿ ಜನ ಈ ವ್ಯಸನದಲ್ಲಿ ಮುಳುಗೇಳುವುದು ಆಳುವವರಿಗೂ ಬೇಕಾಗಿದೆ. ಆಳುವವರೇ ಇವರು? ಇಡೀ ದೇಶವು ‘ಹಿರಿಯರಿಲ್ಲದ ನೆರವಿ’ಯಾಗುತ್ತಿದೆ. ಹೆಂಗಸರಿಗೇ ಕುಡಿತದ ಚಟ ಅಂಟಿಸಿ ಬಚಾವಾಗಬಹುದು ಎಂದು ಇವರು ತಿಳಿದಿದ್ದಾರೆ.

ವೋಟಿನ ಹಕ್ಕೊಂದು ಇಲ್ಲದೇ ಹೋಗಿದ್ದರೆ ಹೆಣ್ಣುಮಕ್ಕಳ ಚಳವಳಿಯನ್ನು ಸಲೀಸಾಗಿ ನಿಯಂತ್ರಿಸಿ ಬಿಡುತ್ತಿದ್ದರು. ಗಾರ್ಮೆಂಟ್ಸ್‌ನ ಮಹಿಳಾ ಉದ್ಯೋಗಿಗಳು ಒಮ್ಮೆಗೇ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಕೇಳಿದ್ದೇನು? ‘ನನ್ನ ದುಡಿಮೆಯ ಹಣವೇ ಬೇಕೇ ನಿಮಗೆ? ನನ್ನ ಮಕ್ಕಳ ಮದುವೆಗೋ, ಮನೆ ಕಟ್ಟಲೋ, ಮಕ್ಕಳ ಉದ್ಯೋಗಕ್ಕೋ ಉಪಯೋಗಿಸಲು ಆ ಹಣ ಬೇಕೆಂದು ನಿಮಗೆ ತಿಳಿದಿಲ್ಲವೇ’ ಎಂಬ ಅವರ ಪ್ರಶ್ನೆಯಲ್ಲೇ ಲೋಕ ನಡೆಯಬೇಕಾದ ರೀತಿ ಯಾವುದೆಂಬ ಉತ್ತರವಿದೆ. ಅಂಗನವಾಡಿ ಹೆಣ್ಣುಮಕ್ಕಳು ಹಗಲೂ ರಾತ್ರಿ ರಸ್ತೆಯಲ್ಲೇ ಬೀಡುಬಿಟ್ಟು ಪ್ರತಿಭಟನೆ ಮಾಡಿದಾಗಲೂ ಸರ್ಕಾರಗಳಿಗೆ ‘ಗಂಟಲೊಳಗೆ ಕಡುಬು ತುರುಕಿದ’ ಅನುಭವ. ‘ದುಡಿವವರಿಗೆ ಸರಿಯಾಗಿ ಸಂಬಳ ಕೊಡಿ ಎನ್ನುವುದನ್ನೂ ತಿವಿದು ಕೇಳಬೇಕಾ? ನಿಮ್ಮ ಮೊಖಕ್ಕೆ’ ಅಂತ ಖಂಡಿತಾ ಹಳ್ಳಿ ಹೆಣ್ಣುಮಗಳು ಕೇಳದೇ ಬಿಡುತ್ತಿರಲಿಲ್ಲ.

ತಾರತಮ್ಯವನ್ನು ಪ್ರಶ್ನಿಸುವುದೆಂದರೆ, ನೀವು ಇದುವರೆಗೂ ಕಟ್ಟಿದ, ನೋಡಿದ ಕ್ರಮದಲ್ಲಿ ಸಮಸ್ಯೆ ಇದೆ ಎಂದು ಹೇಳುವುದು. ಏನು ಸಮಸ್ಯೆ ಇದೆ ಎಂದು ಕೇಳುವುದೇ ಸಮಸ್ಯೆಯಾದರೆ ಕಷ್ಟ. ಝಂಕಿಸಿ, ಹುಬ್ಬು ಗಂಟಿಕ್ಕಿ, ದುರ್ಬಲರನ್ನು ಹಿಂಸಿಸಿ ಮನುಷ್ಯರನ್ನೂ, ಭೂಮಿಯನ್ನೂ ಬಟ್ಟೆಯ ತುಂಡುಗಳಂತೆ ಕತ್ತರಿಸಿ ಗಡಿಯುದ್ದ ಮುಳ್ಳುಬೇಲಿ ಏರಿಸುವ ಹುಸಿ ಪೌರುಷದ ದಾರಿಗಿಂತ ಹೆಣ್ಣುದಾರಿ ಭಿನ್ನ. ಇದು ಹರಿದ ತುಂಡುಗಳ ನಡುವಿನ ಬೇಲಿ ಕಿತ್ತು, ಪ್ರತಿ ತುಂಡಿನ ಅನನ್ಯತೆಯನ್ನೂ ಹಾಗೇ ಉಳಿಸಿ, ಅವುಗಳನ್ನು ಸೇರಿಸಿ ಹೊಲಿಯ ಬಯಸುತ್ತದೆ. ಇದು ಆಕರ್ಷಕವಾಗಿರಲಾರದು. ಯಾಕೆಂದರೆ ಪೌರುಷದ, ಅಟ್ಟಹಾಸದ ಮೋಜು ಇದಕ್ಕಿರಲಿಕ್ಕಿಲ್ಲ. ಈ ಮಾದರಿಯನ್ನೇ ಅನುಕರಿಸುವ, ಮೋಹಿಸುವ, ಹೆಣ್ಣಾಗಿದ್ದರೂ ‘ಇದೇ ಸರಿ’ ಎನ್ನುವ ದಂಡೂ ನಮ್ಮ ನಡುವೆ ಇದೆ. ಇವರು ‘ಹೆಂಗಸರಿಗೇಕೆ ಸ್ವಾತಂತ್ರ್ಯ, ಸಮಾನತೆ?’ ಎಂದುಲಿದು ಗಂಡಸರನ್ನು ಮೆಚ್ಚಿಸುವ, ‘ಪಾಠ ಮಾಡುವ ನೀನು ಸೀರೆಯನ್ನೇ ಉಡಬೇಕು, ಇಲ್ಲದಿದ್ರೆ ನಿನ್ನನ್ನು ನೋಡಿಕೊಳ್ತೇನೆ’ ಎಂದು ಬೆದರಿಸುವ ಅಧಿಕಾರದ ಗಮ್ಮತ್ತಿನಲ್ಲಿ ಮುಳುಗಿದ್ದಾರೆ.

ಇರಲಿ ಬಿಡಿ, ಪಾಪ. ಅವರನ್ನು ನೋಡಿ ‘ಹೆಂಗಸರೆಲ್ಲಾ ಹೀಗೇ’ ಎನ್ನಬೇಕಾಗಿಲ್ಲ. ಯಾಕೆಂದರೆ ‘ಗಂಡಸರೆಲ್ಲಾ ಹಾಗೇ’ ಎಂದು ನಾವೆಂದೂ ನಿರ್ಣಯಿಸಿ ದೂರ ಮಾಡಿರಲಿಲ್ಲ ಅಲ್ಲವೇ? ಅವರಿಗೆ ಹೇಳೋಣ. ಅಕ್ಕಗಳಿರಾ, ಅದು ನಮ್ಮ ದಾರಿಯಲ್ಲ. ಅದು ಯಾರ ದಾರಿಯೂ ಆಗಬಾರದು. ಅಲ್ಲದೇ, ಹೋರಾಟದ ಹಾದಿಯಿಂದಾಗಿಯೇ ಲಕ್ಷಾಂತರ ಹೆಣ್ಣುಮಕ್ಕಳು ಅಕ್ಷರ, ಉದ್ಯೋಗ ಪಡೆದಿದ್ದಾರೆ. ಕೌಟುಂಬಿಕ ದೌರ್ಜನ್ಯದ ಉರುಳಿನಿಂದ ಹೊರಬಂದಿದ್ದಾರೆ, ಘನತೆಯ ಬದುಕನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ. ಹಾಗೆಯೇ ಪೌರುಷದ ಮಾದರಿಯೆಂಬ ವಿನಾಶದ ಜಾರುಬಂಡಿ ಏರಿ ಕುಳಿತ ಎಲ್ಲಾ ಸ್ತ್ರೀ ಪುರುಷರೂ ಬಚಾವಾಗಬೇಕೆಂದರೆ ಈ ಮಹಾ ಇಳೆಯ ಮಾದರಿಯೆಡೆಗೆ ಮರಳಲೇಬೇಕು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !