ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ: 94 ವರ್ಷದ ‘ಸೂಪರ್ ದಾದಿ’ ಭಗವಾನಿ

Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

ವಯಸ್ಸು ಒಂದು ಸಂಖ್ಯೆ ಮಾತ್ರ. ಮನದಲ್ಲಿ ಸಾಧಿಸಬೇಕು ಎಂಬ ಛಲ ಇರಬೇಕು. ಅದಕ್ಕಾಗಿ ಸಾಧ್ಯವಿರುವ ಎಲ್ಲ ಪರಿಶ್ರಮವನ್ನೂ ಪಡಬೇಕು. ಯಶಸ್ಸು ತಾನಾಗಿಯೇ ಒಲಿಯುತ್ತದೆ. ಯಾವುದೇ ವಯಸ್ಸಿನಲ್ಲಿಯೂ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ 94 ವರ್ಷದ ‘ಸೂಪರ್ ದಾದಿ’ ಉತ್ತಮ ನಿದರ್ಶನ.

***

ಎಂಟು ವರ್ಷದ ಹಿಂದಿನ ಮಾತು. ದುಬೈ ಕ್ರೀಡಾಂಗಣದಲ್ಲಿ ಪ್ಯಾರಾ ಅಥ್ಲೀಟ್‌ ವಿಕಾಸ್ ದಾಗರ್ ತಮ್ಮ ಮೈಮೇಲೆ ತ್ರಿವರ್ಣಧ್ವಜ ಹೊದ್ದುಕೊಂಡು, ಕೊರಳಲ್ಲಿ ಮಿನುಗುವ ಪದಕವನ್ನು ಧರಿಸಿ ಸಂಭ್ರಮಿಸಿದ್ದರು. ಆ ವಿಜಯೋತ್ಸವಕ್ಕೆ ದೇಶದ ಕ್ರೀಡಾಭಿಮಾನಿಗಳು ಹೆಮ್ಮೆಪಟ್ಟಿದ್ದರು.

ಅದೇ ಹೊತ್ತಿಗೆ ವಿಕಾಸ್ ಅವರ ಕುಟುಂಬದಲ್ಲಿಯೇ ಕ್ರೀಡಾಪ್ರತಿಭೆಯೊಂದರ ಉದಯವಾಯಿತು. ಅದು ಬೇರೆ ಯಾರೂ ಅಲ್ಲ. ವಿಕಾಸ್ ಅವರ ಅಜ್ಜಿ ಭಗವಾನಿ ದೇವಿ. ಹೋದ ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ 94 ವರ್ಷದ ಅಜ್ಜಿಯ ಸಾಧನೆಯ ಕತೆಗಳು ಓಡಾಡುತ್ತಿವೆ. ಫಿನ್ಲೆಂಡ್‌ನಲ್ಲಿ ನಡೆದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ 100 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಸಾಧನೆ ಅವರದ್ದು. ಥೇಟ್ ತಮ್ಮ ಮೊಮ್ಮಗನಂತೆಯೇ ಹೆಗಲ ಮೇಲೆ ತ್ರಿವರ್ಣ ಧ್ವಜ ಹೊದ್ದುಕೊಂಡು, ಬಂಗಾರದ ಪದಕಕ್ಕೆ ಮುತ್ತಿಡುತ್ತ ಸಂಭ್ರಮಿಸಿದ ‘ಸೂಪರ್‌ ದಾದಿ’ ಚಿತ್ರಗಳು ಎಲ್ಲರ ಚಿತ್ತವನ್ನು ಗೆಲ್ಲುತ್ತಿವೆ.

ಫಿನ್ಲೆಂಡ್‌ನಲ್ಲಿ ಅವರು 90 ರಿಂದ 100 ವರ್ಷದೊಳಗಿನವರ ವಿಭಾಗದ 100 ಮೀಟರ್ಸ್ ಓಟದಲ್ಲಿ 24.74 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಅಲ್ಲದೇ ಶಾಟ್‌ಪಟ್‌ನಲ್ಲಿ ಕಂಚು ಪಡೆದರು. ಅವರಿಗೆ ತರಬೇತುದಾರರಾಗಿ ನಿಂತವರು ಸ್ವತಃ ಮೊಮ್ಮಗ ವಿಕಾಸ್.

ಭಗವಾನಿದೇವಿ ಯಾವತ್ತೂ ಆಟೋಟದ ಕಡೆಗೆ ಹೆಚ್ಚು ಒಲವು ತೋರಿದವರಲ್ಲ.ಕುಟುಂಬದ ದೇಖರೇಕಿಯಲ್ಲಿಯೇ ಜೀವನ ಸವೆಸಿದವರು. 29ನೇ ವಯಸ್ಸಿನಲ್ಲಿ ಪತಿವಿಯೋಗದ ದುಃಖ ಆವರಿಸಿತು. ಆ ಸಂದರ್ಭದಲ್ಲಿ ಭಗವಾನಿದೇವಿ ತುಂಬು ಗರ್ಭಿಣಿಯಾಗಿದ್ದರು. ಎರಡನೇ ಮಗುವಿನ (ವಿಕಾಸ್ ಅವರ ತಂದೆ) ನಿರೀಕ್ಷೆಯಲ್ಲಿದ್ದರು. ಇದಾಗಿ ನಾಲ್ಕು ವರ್ಷ ಕಳೆದಾಗ ಮೊದಲ ಮಗಳು 11 ವರ್ಷದ ವಯಸ್ಸಿನಲ್ಲಿಯೇ ನಿಧನಳಾದ ಆಘಾತ ಎದುರಿಸಿದರು. ಅಷ್ಟಕ್ಕೆ ಅವರ ದುಃಖ ಮುಗಿಯಲಿಲ್ಲ. ಹೃದಯಸಂಬಂಧಿ ಕಾಯಿಲೆ ಕಾಡಿತು. ಬೈಪಾಸ್ ಸರ್ಜರಿಯೂ ಆಗಿಹೋಯಿತು.

ಇದೆಲ್ಲದರ ನಡುವೆ ಸಂಸಾರದ ರಥ ಎಳೆದರು.ಅಳುಕದೇ ಮುನ್ನುಗ್ಗಿದರು. ಮಗನಿಗೆ ಒಳ್ಳೆಯ ಭವಿಷ್ಯ ರೂಪಿಸಿದರು. ಮೊಮ್ಮಗ ವಿಕಾಸ್ ಕ್ರೀಡೆಯಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲು ಹತ್ತುವುದನ್ನು ನೋಡಿದರು. ಅಂಗವಿಕಲನಾದರೂ 100 ಮೀಟರ್ ಓಟ, ಲಾಂಗ್ ಜಂಪ್ ಕ್ರೀಡೆಗಳಲ್ಲಿ ಮಿಂಚುತ್ತಿದ್ದ ವಿಕಾಸ್ ಸಾಧನೆ ಅಜ್ಜಿಗೆ ಪ್ರೇರಣೆಯಾಯಿತು. ಇದೀಗ ಅವರೇ ಸಾವಿರಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಮೊದಲಿಗೆ ಶಾಟ್‌ಪಟ್‌ ಅಭ್ಯಾಸ ಆರಂಭಿಸಿದರು. ನಂತರ ನಿಧಾನವಾಗಿ ಓಟದತ್ತ ಒಲವು ತೋರಿದರು.

‘ವಯಸ್ಸು ಒಂದು ಸಂಖ್ಯೆ ಮಾತ್ರ. ಮನದಲ್ಲಿ ಸಾಧಿಸಬೇಕು ಎಂಬ ಛಲ ಇರಬೇಕು. ಅದಕ್ಕಾಗಿ ಸಾಧ್ಯವಿರುವ ಎಲ್ಲ ಪರಿಶ್ರಮವನ್ನೂ ಪಡಬೇಕು. ಯಶಸ್ಸು ತಾನಾಗಿಯೇ ಒಲಿಯುತ್ತದೆ. ಯಾವುದೇ ವಯಸ್ಸಿನಲ್ಲಿಯೂ ಏನು ಬೇಕಾದರೂ ಸಾಧಿಸಬಹುದು. ಮುಂದೆ ಪೊಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ಸಿದ್ಧತೆ ಆರಂಭಿಸಿದ್ದಾರೆ.

‘ನಾವು ಅಭ್ಯಾಸಕ್ಕಾಗಿ ಅವರ ಮೇಲೆ ಒತ್ತಡ ಹಾಕುವುದಿಲ್ಲ. ಈ ವಯಸ್ಸಿನಲ್ಲಿ ಗಾಯಗೊಳ್ಳುವ ಅಪಾಯ ಹೆಚ್ಚು. ಬೆಳಿಗ್ಗೆ ಮತ್ತು ಸಂಜೆ ಐದು ಕಿಲೋಮೀಟರ್ ವಾಕಿಂಗ್ ಮಾಡ್ತಾರೆ. ಒಂದಷ್ಟು ಸರಳ ವ್ಯಾಯಾಮಗಳನ್ನು ರೂಢಿಸಿಕೊಂಡಿದ್ದೇವೆ. ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರ ಕ್ರಮ ಇದೆ. ದೇಹಶಕ್ತಿಗಿಂತಲೂ ಅವರ ಮನೋಬಲ ದೊಡ್ಡದು. ಆತ್ಮವಿಶ್ವಾಸದ ಶಕ್ತಿಯಿಂದಲೇ ಅವರ ಕಾಲುಗಳಿಗೆ ಚೈತನ್ಯ ಪ್ರವಹಿಸುತ್ತದೆ’ ತಮ್ಮ ಅಜ್ಜಿಯ ಕುರಿತು ವಿಕಾಸ್ ಹೇಳುತ್ತಾರೆ.

ಭಗವಾನಿ ದೇವಿಯವರ ಗೆಲುವಿನ ಸಂಭ್ರಮ
ಭಗವಾನಿ ದೇವಿಯವರ ಗೆಲುವಿನ ಸಂಭ್ರಮ

ಭಗವಾನಿದೇವಿಯವರು ಇಳಿವಯಸ್ಸಿನಲ್ಲಿ ದೇಶಕ್ಕೆ ಪದಕಗಳ ಕಾಣಿಕೆಯನ್ನು ನೀಡಿದ್ದಾರೆ. ಜೊತೆಗೆ ಬಾಳ ಮುಸ್ಸಂಜೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುವ ಹಿರಿಯಜೀವಗಳ ಬದುಕಿನಲ್ಲಿ ಉತ್ಸಾಹ ತುಂಬಿದ್ದಾರೆ. ಮೆಚ್ಚಿನ ಹವ್ಯಾಸವನ್ನು ಯಾವುದೇ ವಯಸ್ಸಿನಲ್ಲಿಯೂ ಮಾಡಿ ಜಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಸ್ಪರ್ಧೆಯೊಂದಿಗೆ ಬದುಕನ್ನು ಗೆಲ್ಲುವ ಕಲೆಯನ್ನೂ ಪ್ರದರ್ಶಿಸಿದ್ದಾರೆ.

*

ಬೇರೊಂದು ದೇಶದನೆಲದಲ್ಲಿ ನನ್ನ ಭಾರತಕ್ಕಾಗಿ ಪದಕಜಯಿಸಿದ್ದು ಅಪಾರ ಸಂತಸ ಮತ್ತು ಹೆಮ್ಮೆ ತಂದಿದೆ.
–ಭಗವಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT