ಜೋಡಿರಥವನು ಎಳೆವ ಜೀವಜಾತ್ರೆ

7

ಜೋಡಿರಥವನು ಎಳೆವ ಜೀವಜಾತ್ರೆ

Published:
Updated:

ಕಿರ‍್ರನೆ ಕಿರಿಚುವ ಸದ್ದು ಸಕ್ಕರೆನಿದ್ದೆಯನ್ನು ಸೀಳಿಕೊಂಡು ಕಿವಿಯೊಳಗಿಳಿದಾಗ ಅದೂ ಕನಸಿನ ಒಂದು ಭಾಗವೆಂದೇ ಭಾಸವಾಗುತ್ತದೆ. ಹಾಗೆಯೇ ಮುಂದುವರಿದ ಗಂಟಾರವ ಅಲಾರಾಂ ಎನ್ನುವ ನಿದ್ರಾಶತ್ರುವಿನ ಎಚ್ಚರಿಕೆಯ ಕರೆ ಎಂದು ಅರ್ಥವಾಗಿದ್ದೇ ತಡ, ‘ಅಯ್ಯೋ! ಬೆಳಗಾಗಿಯೇ ಹೋಯಿತೇ’ ಎಂಬ ಬೇಸರದ ಶಹನಾಯಿ ಸಣ್ಣಗೆ ಹಾಡತೊಡಗುತ್ತದೆ. ಆಮೇಲಿನ ಅಷ್ಟೂ ಚಟುವಟಿಕೆಗಳು ಗಡಿಯಾರದ ಮುಳ್ಳುಗಳ ಜೊತೆಗಿನ ಜುಗಲ್‌ಬಂದಿ ಕಾರ್ಯಕ್ರಮ. ಅಡುಗೆ-ತಿಂಡಿ ಮಾಡುತ್ತಲೇ, ಸ್ನಾನ-ಬಟ್ಟೆ-ಜಡೆ ಅಂತೆಲ್ಲ ತಯಾರಾಗುತ್ತ, ಜೊತೆಜೊತೆಗೆ ಮಕ್ಕಳು-ಗಂಡ ಇವರುಗಳ ಡಬ್ಬಿ ಜೋಡಿಸುತ್ತ ಮನೆಗೆ ಕೀಲಿ ಹಾಕುವ ವೇಳೆಗೆ ‘ಅರೆ, ಹೊತ್ತಾಗಿ ಹೋಯಿತಲ್ಲ’ ಎಂಬ ಉದ್ಗಾರದೊಂದಿಗೆ, ಎಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಸಮಯದ ಜೊತೆಗೆ ಹೆಜ್ಜೆ ಹಾಕಲಾರದೇ ಸೋಲಬೇಕಲ್ಲ – ಎಂದೆನ್ನಿಸಿದಾಗ ಶಹನಾಯಿಯ ಸದ್ದು ಜೋರಾಗುತ್ತದೆ. ಸಂಜೆ ಕೆಲಸ ಮುಗಿಸಿ ಬರುತ್ತಿದ್ದಂತೆ – ಹಸಿದು ಬಂದ ಮಕ್ಕಳ ತಿಂಡಿ, ಹೋಂವರ್ಕ್‌ ಉಸ್ತುವಾರಿ, ರಾತ್ರಿಯಡುಗೆಯ ಜೊತೆಗೆ ನಾಳೆ ಬೆಳಿಗ್ಗೆ ತಿಂಡಿಗೇನು, ಡಬ್ಬಿಗೇನು ಎಂಬೆರಡು ಪ್ರಶ್ನೆಗಳು ಬೇತಾಳನಂತೆ ಎದುರು ನಿಂತಾಗ ಶಹನಾಯಿ ತನ್ನ ತಾರಕಸ್ಥಾಯಿಯಲ್ಲಿ ಮೊಳಗತೊಡಗುತ್ತದೆ. ಮನೆ-ಉದ್ಯೋಗ ಎಂಬೆರಡು ದೋಣಿಗಳ ಮೇಲೆ ಕಾಲಿಟ್ಟು ಸಾಗುವ ಈ ಯಾನಕ್ಕೆ ಕೊನೆಯೇ ಇಲ್ಲವೆ ಎಂಬ ನೋವೊಂದು ಮನಸ್ಸಿನೊಳಕ್ಕೆ ಗೂಡು ಕಟ್ಟತೊಡಗುತ್ತದೆ.

ಇಷ್ಟಪಟ್ಟು ವರಿಸಿದ ಸಂಗಾತಿ, ಆಸೆಪಟ್ಟು ಹೆತ್ತ ಮಕ್ಕಳು, ಕನಸು ಕಂಡು ಕಟ್ಟಿದ ಮನೆ – ಇವನ್ನೆಲ್ಲ ವ್ಯವಧಾನದಿಂದ ಅನುಭವಿಸಬೇಕೆಂದರೆ ಕಿವಿಗಪ್ಪಳಿಸುವುದು ಕರ್ತವ್ಯದ ಕರೆ. ಗಂಡುಮಕ್ಕಳಿಗೆ ನಾವೇನೂ ಕಡಿಮೆಯಿಲ್ಲ ಎಂಬ ಛಲದಿಂದ ನಿದ್ದೆಗೆಟ್ಟು ಓದಿ ಅತ್ಯುನ್ನತ ಅಂಕಗಳೊಂದಿಗೆ ಪಡೆದುಕೊಂಡ ವಿದ್ಯೆ ಸಾರ್ಥಕವಾಗುವುದಕ್ಕಾದರೂ ಉದ್ಯೋಗ ಮಾಡಲೇಬೇಕೆನ್ನಿಸುತ್ತದೆ. ಇಷ್ಟಕ್ಕೂ ಮನೆಯಲ್ಲೇ ಇದ್ದು ಮಾಡುವುದಾದರೂ ಏನು? ಮತ್ತದೇ ಅದೇ ಕೆಲಸಗಳು. ಪೆದ್ದು ಪೆದ್ದು ಕಾರ್ಯಕ್ರಮ ತೋರಿಸುವ ಟಿ.ವಿ., ಹಾಗೆಂದು ಉದ್ಯೋಗ ಮಾಡಲಾರಂಭಿಸಿದೊಡನೆ ಹಗ್ಗದ ಮೇಲಿನ ನಡಿಗೆ ಶುರು! ಈ ದೊಂಬರಾಟದ ಕೌಶಲಕ್ಕೆ ಎಷ್ಟು ಚಾಕಚಾಕ್ಯತೆಯಿದ್ದರೂ ಕಡಿಮೆಯೇ. ಪ್ರತಿಯೊಬ್ಬರೂ ತಮ್ಮ ತಮ್ಮ ಅನುಭವದ ಮೂಸೆಯಿಂದ ಏನು ಮಾಡಿದರೊಳಿತು, ಹೇಗೆ ಮಾಡಿದರೊಳಿತು ಎಂಬಿತ್ಯಾದಿ ಕಿವಿಮಾತುಗಳನ್ನು ಹೇಳಿದರೆ ನೊಗಕ್ಕೆ ಕೊರಳು ಕೊಟ್ಟವರು ಓಹೋ ನಮ್ಮಂತೆಯೇ ಹೆಣಗುತ್ತಿರುವವರು, ಓಡುತ್ತಿರುವವರು ಲಕ್ಷಾಂತರ ಜನ ಇದ್ದಾರಲ್ಲ ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಆಗ ಅವರೊಳಗಿನ ಶಹನಾಯಿ ಕೊಂಚ ಮೌನವಾಗಿ ಲವಲವಿಕೆಯ ಕೊಳಲು ಉಲಿಯಲಾರಂಭಿಸಬಹುದು.

ಅನಂತ ಬೇಡಿಕೆಯ ಎದುರಿನಲ್ಲಿ ಸೀಮಿತ ಸಂಪನ್ಮೂಲಗಳಿದ್ದಾಗ ಆದ್ಯತೆಯನ್ನಾಧರಿಸಿದ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ನಿರ್ವಹಣಾಶಾಸ್ತ್ರದ ಮೂಲ ನಿಯಮ. ಎರಡು ದೋಣಿಯ ಒಡತಿಯರು ಮೊದಲು ಮಾಡಬೇಕಾದ ಕೆಲಸವೇ ಈ ಆದ್ಯತಾ ಪಟ್ಟಿಯ ತಯಾರಿ. ಅಂದರೆ ತನ್ನೆದುರು ಬಿದ್ದುಕೊಂಡಿರುವ ಕೆಲಸಗಳನ್ನು ಅವುಗಳ ಸಮಯಮಿತಿ, ಉಪಯೋಗ, ಲಾಭ-ನಷ್ಟ ಮುಂತಾದವುಗಳ ಆಧಾರದ ಮೇಲೆ ಆದ್ಯತಾ ಶ್ರೇಣಿಯನ್ನು ನೀಡುವುದು. ಪ್ರತಿಯೊಂದು ಕೆಲಸಕ್ಕೂ, ಅದನ್ನು ಮಾಡುವುದರಿಂದ ಆಗುವ ಪ್ರಯೋಜನ ಮತ್ತು ಮಾಡದಿದ್ದರೆ ಆಗುವ ನಷ್ಟ ಎಂಬ ಲೆಕ್ಕಾಚಾರ ಇದ್ದೇ ಇರುತ್ತದೆ. ಉದಾಹರಣೆ ಅತ್ತೆ-ಮಾವ ಮುಂತಾದ ವಯಸ್ಸಾದ ಸದಸ್ಯರಿಗೆ ಪಥ್ಯದ ಪ್ರತ್ಯೇಕ ಅಡುಗೆಮಾಡುವುದು, ದೇವರ ಪೂಜೆ ಮಾಡುವುದು ಇವೆರಡು ಕೆಲಸಗಳಲ್ಲಿ ಸಹಜವಾಗಿಯೇ ಮೊದಲ ಆದ್ಯತೆ ಪಥ್ಯದ ಅಡುಗೆಗೆ ನೀಡಬೇಕಾಗುತ್ತದೆ. ತನ್ನನ್ನು ಮೂರ್ತಿರೂಪದಲ್ಲಿಯೇ ಪೂಜಿಸಬೇಕೆಂಬ ಕಟ್ಟಳೆಯನ್ನು ಯಾವ ದೇವರೂ ವಿಧಿಸಿಲ್ಲವಾದ್ದರಿಂದ ಪ್ರಯಾಣ ಮಾಡುವಾಗ ಮನಸ್ಸಿನಲ್ಲಿಯೇ ಸ್ತೋತ್ರಪಠಣ ಮಾಡುವ ಮೂಲಕವೂ ಭಗವಂತನ ಸಾನ್ನಿಧ್ಯಸುಖವನ್ನು ಪಡೆಯಬಹುದು.

ಹಬ್ಬ–ಹುಣ್ಣಿಮೆಗಳ ಆಚರಣೆ, ಲಕ್ಷ್ಮಿ-ಗೌರಿಯರ ವ್ರತಗಳು ಇವೆಲ್ಲವುಗಳನ್ನು ಮಾಡಲೇಬೇಕೆಂಬ ಹಠಕ್ಕೆ ಬಿದ್ದರೆ ಅನಗತ್ಯ ಒತ್ತಡ ಉಂಟಾಗುತ್ತದೆ. ಕೆಲವು ಸಲ ಹಿರಿಯರು, ಬಂಧುಗಳು ಏನೆಂದುಕೊಳ್ಳುತ್ತಾರೋ ಎಂಬ ಮುಜುಗರಕ್ಕೆ ಬಿದ್ದು ತೋರಿಕೆಗಾದರೂ ಆವರಿಸಲು ಪ್ರಯತ್ನಿಸಿ ಕೆಲಸದ ಹೊರೆಯನ್ನು ಹೆಚ್ಚಿಗೆ ಮಾಡಿಕೊಳ್ಳುತ್ತೇವೆ. ಕೆಲವು ಸಲ ‘ಆಹಾ! ಎಲ್ಲವನ್ನೂ ನಿಭಾಯಿಸುವ ಜಾಣೆ’ ಎಂದು ಹೊಗಳಿಸಿಕೊಳ್ಳುವ ಆಸೆಯಿಂದ ಹೆಚ್ಚಿನ ಕೆಲಸಗಳನ್ನು ಮೈಮೇಲೆ ಎಳೆದುಕೊಂಡಿರುತ್ತೇವೆ. ಆದ್ದರಿಂದ ನಾವು ಮಾಡಲೇಬೇಕಾದ ಕೆಲಸಗಳು ಯಾವುವು ಮತ್ತು ಮಾಡದಿದ್ದರೂ ತೊಂದರೆಯಿಲ್ಲ ಎಂಬಂತಹ ಕೆಲಸಗಳು ಯಾವುವು ಎಂಬ ವರ್ಗೀಕರಣ ಮಾಡಿಕೊಳ್ಳುವುದರಲ್ಲಿಯೇ ಬಹು ದೊಡ್ಡ ಜಾಣತನವಿದೆ. ಈ ವರ್ಗೀಕರಣ ಯಶಸ್ವಿಯಾಗಿದ್ದೇ ಆದಲ್ಲಿ ಅರ್ಧ ಹೊರೆ ಇಳಿಯಿತೆಂದೇ ಅರ್ಥ. ಆದರೆ ಈ ಕೆಲಸ ಮಾಡುವಾಗ ಮನಸ್ಸು ವಿವೇಕದಿಂದ, ವಿವೇಚನೆಯಿಂದ ತೊಡಗಿಕೊಳ್ಳಬೇಕು.

ಮಾಡಲೇಬೇಕಾದ ಕೆಲಸಗಳ ಪಟ್ಟಿ ತಯಾರಾದ ನಂತರ ಕುಟುಂಬದ ಸದಸ್ಯರ ನಡುವೆ ಅವುಗಳ ಹಂಚಿಕೆ ಮಾಡಿಕೊಂಡರೆ ಬಹಳ ಒಳ್ಳೆಯದು. ಮಕ್ಕಳೆಂದರೆ ಕೇವಲ ಶಾಲೆ-ಕಾಲೇಜಿಗಷ್ಟೇ ಹೋಗಬೇಕು, ತಮ್ಮ ಅಭ್ಯಾಸ, ಟ್ಯೂಶನ್ ಅಂತ ನೋಡಿಕೊಂಡರೆ ಅದೇ ನಮಗೆ ಉಪಕಾರ ಎಂಬ ಭಾವದಿಂದ ಸಾಕಿಬಿಟ್ಟರೆ ಅವರಿಗೆ ಸಾಮಾನ್ಯ ಜ್ಞಾನವೂ ಬೆಳೆಯುವುದಿಲ್ಲ, ಪ್ರಾಯೋಗಿಕ ಬದುಕಿನ ಎಬಿಸಿಡಿಯೂ ತಿಳಿಯುವುದಿಲ್ಲ. ಬ್ಯಾಂಕಿನ ಕೆಲಸ, ಬಿಲ್ಲು ಕಟ್ಟುವುದು, ಸಣ್ಣ-ಪುಟ್ಟ ಸಾಮಾನು ತರುವುದು – ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡ ಮಕ್ಕಳು ಸಂಸಾರದ ಉಪ್ಪು-ಹುಳಿಯ ಸ್ವಾದ ತಿಳಿಯುತ್ತಾರೆ. ಅದಕ್ಕಿಂತ ಹೆಚ್ಚಾಗಿ ಓದಿ ಓದಿ ‘ಫಸ್ಟ್ ರ‍್ಯಾಂಕ್‌ ರಾಜು’ವಿನಂತೆ ಅಂಕಗಳನ್ನಷ್ಟೇ ಪಡೆದರೆ ಸಾಮಾನ್ಯ ಬದುಕನ್ನು ಎದುರಿಸುವ ಆತ್ಮವಿಶ್ವಾಸವೂ ಇಲ್ಲದೇ ಭವಿಷ್ಯದಲ್ಲಿ ಕಂಗಾಲಾಗುತ್ತಾರೆ.

ಲಭ್ಯವಿರುವ ಸಂಪನ್ಮೂಲಗಳನ್ನು ಅವುಗಳ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಜಾಣ್ಮೆಯನ್ನು ಮಹಿಳೆಯರು ಅಷ್ಟಾಗಿ ರೂಢಿಸಿಕೊಳ್ಳುವುದೇ ಇಲ್ಲ. ಇದಕ್ಕೆ ಕಾರಣಗಳು ಹಲವಾರು. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಡಿಯಲ್ಲಿ ಶತಶತಮಾನಗಳನ್ನೇ ಕಳೆದಿರುವುದರಿಂದ ಲಕ್ಷಾಂತರ ಸಂಬಳ ಪಡೆಯುವವರೂ ವೆಚ್ಚದ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವಷ್ಟು ಸ್ವಾತಂತ್ರ್ಯವನ್ನು ಹೊಂದಿರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಮಕ್ಕಳಿಗೆ, ಅವರ ವಿದ್ಯೆಗೆ, ಮದುವೆಗೆ, ಭವಿಷ್ಯದ ರಕ್ಷಣೆಗೆ ಎಂದೆಲ್ಲ ಮುಂದಾಲೋಚನೆ ಮಾಡಿ ಉಳಿತಾಯ ಮಾಡುವ ಕ್ರಮವನ್ನೇ ನಾವು ಜಾಣತನವೆಂದು ಶ್ಲಾಘಿಸುತ್ತೇವೆ, ಕಲಿಸುತ್ತೇವೆ ಹಾಗೂ ರೂಢಿಸಿಕೊಳ್ಳುತ್ತೇವೆ. ಆದರೆ ನೆಲ ಕಚ್ಚುತ್ತಿರುವ ಬಡ್ಡಿದರ, ಬಂದ ಬಡ್ಡಿಯ ಮೇಲೂ ಅಪ್ಪಳಿಸುವ ಆದಾಯ ತೆರಿಗೆ ಇವೆಲ್ಲ ನಮಗೆ ಸಾರಿ ಸಾರಿ ಹೇಳುತ್ತಿವೆ ‘ದುಡಿದಿದ್ದನ್ನು ಮೊದಲು ಉಣ್ಣು, ತಿಂದಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’.

ಈ ಹಿನ್ನೆಲೆಯಿಂದ ಆಲೋಚನೆ ಮಾಡಿದರೆ ದುಡಿಯುವ ಮಹಿಳೆ ತನ್ನ ಆದಾಯವನ್ನು ತನ್ನ ಅನುಕೂಲಕ್ಕಾಗಿ ಅಥವಾ ಕುಟುಂಬದ ಒಳಿತಿಗಾಗಿ ಬಳಸಿಕೊಳ್ಳುವು ದರಲ್ಲಿ ಕೊಂಚ ಧಾರಾಳಿಯಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ. ಉದಾಹರಣೆಗೆ ಸಿಟಿಬಸ್ಸಿಗೆ ಜೋತು ಬೀಳುವ ಬದಲಿಗೆ ಸ್ವಂತ ವಾಹನ ಇಟ್ಟುಕೊಳ್ಳುವುದು ಅಥವಾ ತಿಂಗಳ ಬಾಡಿಗೆಯ ಮೇಲೆ ರಿಕ್ಷಾ ಬಳಕೆ. ಪಾತ್ರೆ-ಬಟ್ಟೆ, ಕಸ-ನೆಲ, ಅಡುಗೆ ಇತ್ಯಾದಿ ಕೆಲಸಗಳಿಗೆ ಕೆಲಸದವರನ್ನು ಇಟ್ಟುಕೊಳ್ಳುವುದು, ಶುಚಿ-ರುಚಿಯಾಗಿ ಮನೆಯಲ್ಲಿಯೇ ಭಕ್ಷ್ಯ-ತಿಂಡಿ ತಯಾರಿಸುವವರಿದ್ದರೆ ಅವರಿಂದ ಖರೀದಿಸುವುದರ ಮೂಲಕ ಹಬ್ಬ-ಉತ್ಸವಗಳ ತಯಾರಿಯನ್ನು ಹಗುರಗೊಳಿಸಿಕೊಳ್ಳುವುದು. ಹೀಗೆ ಮಾಡಿದಲ್ಲಿ ನಾವು ವಿದ್ಯೆ ಕಲಿಯದ ಅಥವಾ ಉದ್ಯೋಗ ದೊರಕದಿರುವ ಅನೇಕ ಹೆಣ್ಣುಮಕ್ಕಳಿಗೆ ಸಹಾಯ ಮಾಡಿದಂತೆಯೂ ಆಗುತ್ತದೆ.

ಮುಖ್ಯವಾದ ಸಂಗತಿಯೆಂದರೆ ದ್ವಿಪಾತ್ರ ನಿರ್ವಹಣೆಯ ಮನೋಭಾವ. ಉದ್ಯೋಗ-ಸಂಸಾರಗಳೆರಡನ್ನೂ ಸಂಭಾಳಿಸಲು ನಿಂತ ಮಹಿಳೆ ಗಮನಿಸಬೇಕಾದ ಸಂಗತಿಯೇನೆಂದರೆ ಇದು ಎರಡು ದಿನದ ನಾಟಕವಲ್ಲ. ಜೀವನದುದ್ದಕ್ಕೂ ಅಂದರೆ ಸರಿ ಸುಮಾರು ಮೂರು ದಶಕಗಳ ಕಾಲ ನಿರ್ವಹಿಸಬೇಕಾದ ದ್ವಿಪಾತ್ರ. ಆದ್ದರಿಂದ ಇದ್ದ ಸಮಯವನ್ನೇ ಹಂಚಿಕೊಂಡು, ಇದ್ದ ಸಂಪನ್ಮೂಲಗಳನ್ನೇ ಅವುಗಳ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು, ಕುಟುಂಬದ ಸದಸ್ಯರನ್ನೆಲ್ಲ ಒಂದೇ ಸೂತ್ರದಲ್ಲಿ ಹೊಂದಿಸಿ ರೂಢಿಸಿಕೊಂಡು ಎಳೆಯಬೇಕಾದ ರಥಯಾತ್ರೆಯಿದು. ನಮ್ಮ ಬಾಳಪಥದಲ್ಲಿ ಎರಡೆರಡು ರಥಗಳನ್ನು ಎಳೆಯಬೇಕಾಗಿದೆ. ಎರಡರಲ್ಲಿಯೂ ಅಷ್ಟಷ್ಟೇ ದೊಡ್ಡ ದೇವರೇ ಕುಳಿತಿದ್ದಾನೆ. ಯಾವುದನ್ನೂ ಹಿಂದುಳಿಸಿ ಮುಂದೆ ಹೋಗುವಂತಿಲ್ಲ. ಅದಕ್ಕಾಗಿ ಮನಸ್ಸನ್ನು ಗಟ್ಟಿಗೊಳಿಸುವುದು ಮುಖ್ಯವಾದ ಕೆಲಸ. ‘ಅಯ್ಯೋ, ನಾನು ಎರಡೂ ಕಡೆ ದುಡಿದು ನುಗ್ಗಾಗುತ್ತಿದ್ದೇನಲ್ಲ’ ಎಂಬ ಭಾವನೆ ಬಂದುಬಿಟ್ಟರೆ ಸ್ವಮರುಕ ಶುರುವಾಗುತ್ತದೆ. ಅದು ನಮ್ಮ ಚೈತನ್ಯವನ್ನು ಗಟಗಟ ಕುಡಿದು ದುರ್ಬಲರನ್ನಾಗಿ ಮಾಡಿ ಒಗೆದುಬಿಡುತ್ತದೆ. ಆದ್ದರಿಂದ ನನ್ನ ಮನೆ-ಉದ್ಯೋಗಗಳೆರಡೂ ಪರಸ್ಪರ ವೈರಿಗಳಲ್ಲ, ಅವು ಒಂದರಿಂದ ಇನ್ನೊಂದು ಪಡೆಯುವ-ನೀಡುವ ಪೂರಕ ಸಂಗತಿಗಳು ಎಂಬ ದೃಷ್ಟಿಕೋನವಿಟ್ಟುಕೊಳ್ಳುವುದು ಧನಾತ್ಮಕವಾದ ಶಕ್ತಿಯನ್ನು ನೀಡುತ್ತದೆ. ದುಡಿಮೆಗೆ ಬೇಕಾದ ಶಕ್ತಿ-ವಿಶ್ರಾಂತಿಗಳನ್ನು ಮನೆಯಲ್ಲಿ ಪಡೆಯುತ್ತೇವೆ. ಹಾಗೆಯೇ ಸಂಸಾರಕ್ಕೆ ಬೇಕಾದ ತಿಳಿವಳಿಕೆ, ಜ್ಞಾನ-ಮಾಹಿತಿಗಳನ್ನು ಉದ್ಯೋಗದಲ್ಲಿ ಪಡೆಯುತ್ತೇವೆ. ಇವೆರಡೂ ಸಾಮರಸ್ಯದಿಂದ ನಡೆದಾಗ ಮಹಿಳೆಯ ಇಡೀ ವ್ಯಕ್ತಿತ್ವವೇ ಪಕ್ವತೆಯಿಂದ ತುಂಬಿಕೊಳ್ಳುತ್ತದೆ. ಮನೆಯಲ್ಲಿನ ಜಗಳ-ದುಗುಡಗಳನ್ನು ಮರೆತು, ಅಲಕ್ಷಿಸಿ ಮತ್ತೆ ಉತ್ಸಾಹ ತುಂಬುವ ರಿಚಾರ್ಜಿಂಗ್ ಪ್ರಕ್ರಿಯೆ ಉದ್ಯೋಗ ಸ್ಥಳದಲ್ಲಿ ನಡೆದಿರುತ್ತದೆ. ಈ ಎರಡೂ ರೆಕ್ಕೆಗಳು ಶಕ್ತಿಯುತವಾದರೆ ಎತ್ತೆತ್ತರಕ್ಕೆ ಹಾರುತ್ತ ಅನಂತ ಆಗಸದ ನೀಲಿಯಲ್ಲಿ ತೇಲುವ ಸುಖ ನಮ್ಮದಾಗಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !