ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ನಂದಕುಮಾರ್ ಬರಹ: ಬಿಂದಾಸ್ ಹುಡ್ಗೀರು

Last Updated 18 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಏನಾಗುತ್ತೋ ನೋಡಿಯೇ ಬಿಡೋಣ ಎನ್ನುವ ಧೈರ್ಯ ಹುಡುಗಿಯರಲ್ಲಿ ಹಿಂದೆಂದಿಗಿಂತಲೂ ಇಂದು ಎದ್ದು ಕಾಣುತ್ತಿದೆ. ತನ್ನ ಗಳಿಕೆಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅವಕಾಶವೂ ಅವಳಿಗೆ ಸಿಕ್ಕಿದೆ.

***
ನಲವತ್ತು ವರ್ಷಗಳ ಹಿಂದೆ ನಾನು ಬರೆದ ‘ನಾವು ಹುಡುಗಿಯರೇ ಹೀಗೆ’ ಎನ್ನುವ ಕವನವನ್ನು ಮೊನ್ನೆ ಒಬ್ಬಳು ಹುಡುಗಿ ಓದಿ ಪ್ರತಿಕ್ರಿಯಿಸಿದ ರೀತಿ ಯುಗಪರಿವರ್ತನೆಗೆ ಷರಾ ಬರೆದಂತೆ ಅನ್ನಿಸಿತು. ಪ್ರೀತಿಸಿದ ಹುಡುಗನಿಗೆ ನಿವೇದನೆ ಮಾಡಿಕೊಳ್ಳಲಾಗದ ಅಸಹಾಯಕತೆಯನ್ನು ಅಂದಿನ ಹುಡುಗಿ ತೋಡಿಕೊಂಡಿದ್ದರೆ, ಇಂದಿನ ಹುಡುಗಿ ಹೇಳಿದ್ದು: ‘ವಾಟ್ಸ್ ಆ್ಯಪ್‌ನಲ್ಲಿ ಒಂದು ಫಾರ್ವರ್ಡ್ ಮಾಡಿದ್ರೆ ಮುಗೀತು. ಆ ಕಡೆಯಿಂದ ರೆಸ್ಪಾನ್ಸ್ ಬಂದ್ರೆ ಓಕೆ. ಇಲ್ದಿದ್ರೆ ಡಿಲೀಟ್, ಅಷ್ಟೆ. ನಿಮ್ಮ ಕಾಲದವರು ಹಾಕಿಕೊಂಡ ಬೌಂಡರಿಗೂ ನಮ್ಮ ಬೌಂಡರಿಗೂ ತುಂಬಾ ವ್ಯತ್ಯಾಸ ಇದೆ. ನಾವು ನಮ್ಮ ಬೌಂಡರಿನ ವಿಸ್ತಾರ ಮಾಡಿಕೊಂಡಿದ್ದೀವಿ. ಅದಕ್ಕೇ ನಮಗೆ ಹೆಚ್ಚು ಬ್ರೀದಿಂಗ್ ಸ್ಪೇಸ್ ಸಿಗುತ್ತೆ.’

ಹಾಗಾದರೆ ಇಂದಿನ ಹುಡುಗಿಯರು ಹೆಚ್ಚು ಸರಾಗವಾಗಿ ಉಸಿರಾಡುತ್ತಾರಾ? ಅವರು ಹಿಂದಿನವರಂತೆ ಪರಿಸ್ಥಿತಿಗಳಲ್ಲಿ ಸಿಕ್ಕಿಬಿದ್ದು ಉಸಿರುಕಟ್ಟಿದಂತೆ ಬದುಕಬೇಕಾಗಿಲ್ಲವೇ? ಅಕಸ್ಮಾತ್ ಬಿಕ್ಕಟ್ಟಿನ ಸ್ಥಿತಿಗಳನ್ನು ಎದುರಿಸಬೇಕಾದರೂ ಅವರು ಅದರ ಪರ್ಯಾಯ ಪರಿಹಾರಗಳನ್ನು ಸುಲಭವಾಗಿ ಕಂಡುಕೊಳ್ಳುತ್ತಾರೆಯೇ? ಹಿಂದಿನವರಿಗಿಂತ ಅವರಿಗೆ ಹೆಚ್ಚು ಅಭಿಪ್ರಾಯ ಸ್ವಾತಂತ್ರ್ಯ ಸಿಕ್ಕಿದೆಯೇ? ಅಭಿವ್ಯಕ್ತಿ ಸ್ವಾತಂತ್ರ್ಯ ದಕ್ಕಿದೆಯೇ? ಕಾನೂನಿನ ನೆರವು ಇರುವುದರಿಂದ ಇಂದಿನ ಹುಡುಗಿಯರು ಹೆಚ್ಚು ಸಬಲೆಯರಾಗಿದ್ದಾರೆಯೇ? ಇಂತಹ ಪ್ರಶ್ನೆಗಳು ಹುಟ್ಟಿದವು. ಅವುಗಳಿಗೆ ಬಂದ ಉತ್ತರ ‘ಹೌದು’ ಮತ್ತು ‘ಇಲ್ಲ’ ಎನ್ನುವ ಮಿಶ್ರಣವಾಗಿತ್ತು.

ತದ್ವಿರುದ್ಧ

ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ಮಾತನಾಡುವಾಗ ಸಾಮಾನ್ಯೀಕರಣ - ಜನರಲೈಸೇಶನ್ - ಸಾಧ್ಯವೇ ಇಲ್ಲ. ಯಾವುದೇ ಒಂದು ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಎರಡು ತದ್ವಿರುದ್ಧ ಧ್ರುವಗಳು ಕಾಣಿಸುತ್ತವೆ. ಎರಡು ಎಕ್ಸ್‌ಟ್ರೀಮ್‌ಗಳು. ಉಳಿದವರೆಲ್ಲ ಅದರ ನಡುವೆ ವಿವಿಧ ಘಟ್ಟಗಳಲ್ಲಿ ಕಾಣಿಸುತ್ತಾರೆ. ಅಂದರೆ ಒಂದು ತುದಿಯಲ್ಲಿ ಸಕಲ ಅವಕಾಶ ವಂಚಿತರಾದ, ಅತ್ಯಂತ ಶೋಷಿತ ಮಹಿಳೆಯರಿದ್ದರೆ, ಇನ್ನೊಂದು ತುದಿಯಲ್ಲಿ ಎಲ್ಲ ಅವಕಾಶಗಳನ್ನು ಹೊಂದಿದ, ಪ್ರಗತಿಯ ಸಂಕೇತರಾದ, ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಹೊಂದಿದ ಮಹಿಳೆಯರು ಇರುತ್ತಾರೆ. ಹಾಗಾಗಿ ಒಂದು ಕಡೆ ಶ್ರುತಿ #ಮೀಟೂ ಅಂತ ಸುದ್ದಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಬಾಸ್/ಗೆಳೆಯ/ಪಕ್ಕದ ಮನೆಯವ/ಅಪರಿಚಿತ/ಕೊನೆಗೆ ಮಹಿಳೆಯು ತಂದೆ ಅಥವಾ ಅಣ್ಣಂದಿರಿಂದಲೇ ಅತ್ಯಾಚಾರಕ್ಕೆ ಒಳಗಾಗುವ ಘಟನೆಗಳು ದಿನಂಪ್ರತಿ ಮಾಧ್ಯಮಗಳಲ್ಲಿ ವರದಿ ಆಗುತ್ತಲೇ ಇರುತ್ತವೆ. ಎಷ್ಟೋ ಹಳ್ಳಿಯ ಹೆಂಗಸರೇ ನಗರದ ಹೆಂಗಸರಿಗಿಂತ ಹೆಚ್ಚು ಲಿಬರೇಟೆಡ್ ಆಗಿರುತ್ತಾರೆ. ಒಂದು ಕಡೆ, ಗಂಡ ಸರಿಯಾಗಿಲ್ಲ ಎಂದು ಅವನನ್ನು ಓಡಿಸಿ ಇನ್ನೊಬ್ಬನ ಜೊತೆ ಕೂಡಿಕೆ ಮಾಡಿಕೊಂಡ ಮಹಿಳೆ ಸುಖವಾಗಿ ಬದುಕುತ್ತಿದ್ದರೆ, ಇನ್ನೊಂದು ಕಡೆ ತಂಗಿ ಬೇರೆ ಜಾತಿಯವನನ್ನು ಮದುವೆ ಆದಳೆಂದು ಅವಳ ತಲೆ ಕತ್ತರಿಸಿ ತಾನೊಬ್ಬ ಮಹಾವೀರ, ಜಾತಿಯ ಶ್ರೇಷ್ಠತೆಯ ರಕ್ಷಕ ಎಂದು ಭ್ರಮಿಸುವ ಹುಂಬ ಹುಡುಗ ಇದ್ದಾನೆ.

ಕುಗ್ಗಬೇಕಾಗಿಲ್ಲ

ಆದರೆ ನಿಜವಾಗಿ ನೋಡಿದರೆ ಈಗಿನ ಹುಡುಗಿಯರು ಸಮಾಜದ ಸ್ವಾಸ್ಥ್ಯದ ಜವಾಬ್ದಾರಿಯನ್ನು ತಮ್ಮ ತಲೆ ಮೇಲೆ ಹೊತ್ತು ಕುಗ್ಗಬೇಕಾಗಿಲ್ಲ ಎನ್ನಿಸುತ್ತದೆ. ಏಕೆಂದರೆ ಅವರಿಗೆ ಒಂದು ಪರ್ಯಾಯ ವ್ಯವಸ್ಥೆಯನ್ನು ಅವರೇ ಕಲ್ಪಿಸಿಕೊಳ್ಳುತ್ತಿದ್ದಾರೆ. ತಂದೆ ತಾಯಿಗಳು ಮಾತ್ರವಲ್ಲದೇ ಗೆಳೆಯರ ಬಳಗವನ್ನು ತಾವೇ ನಿರ್ಮಿಸಿಕೊಂಡು ಒಂದು 'ಸಪೋರ್ಟ್ ಸಿಸ್ಟಮ್' ಅನ್ನು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯವಾಗಿ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಕಾರಣವಾಗಿದೆ. ಉದ್ಯೋಗಸ್ಥ ಮಹಿಳೆಯರು ಈಗ ಇಪ್ಪತ್ತು ವರ್ಷದ ಹಿಂದೆ ಅನುಭವಿಸುತ್ತಿದ್ದ ಕಟ್ಟುಪಾಡುಗಳು ಸಡಿಲಗೊಂಡಿವೆ. ತಾವು ಗಳಿಸುವ ಹಣಕ್ಕೆ ತಮ್ಮದೇ ಒಡೆತನ ಎನ್ನುವುದು ಹಿಂದೆ ಊಹಿಸಿಕೊಳ್ಳಲೂ ಸಾಧ್ಯವಿರುತ್ತಿರಲಿಲ್ಲ. ಹೆಂಡತಿಯ, ಸೊಸೆಯ, ಮಗಳ ಸಂಬಳವನ್ನು ಗಂಡಸರು ತಾವೇ ಇಸ್ಕೊಳ್ಳುತ್ತಿದ್ದ ಸಾವಿರಾರು ಉದಾಹರಣೆಗಳಿರುತ್ತಿದ್ದವು. ಈಗ ಬ್ಯಾಂಕಿಗೆ ನೇರವಾಗಿ ಸಂಬಳ ಸಂದಾಯವಾಗುವುದರಿಂದ ಅಷ್ಟರಮಟ್ಟಿಗೆ ಮಹಿಳೆ ತನ್ನ ಗಳಿಕೆಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಅವಕಾಶ ಒದಗಿದೆ. ಎಲ್ಲಿ ಆರ್ಥಿಕ ಸ್ವಾವಲಂಬನೆ ಒದಗುತ್ತದೋ ಅಲ್ಲಿ ಇತರ ಸ್ವಾತಂತ್ರ್ಯ ತಾನಾಗಿ ಬರುತ್ತದೆ.

ಮುಕ್ತ ಮಾರುಕಟ್ಟೆ, ಸ್ಯಾಟಲೈಟ್ ಟಿವಿ, ಮೊಬೈಲ್ ಫೋನ್, ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಜೊತೆಗೆ ಹಲವಾರು ಸಂವಹನ ಮಾರ್ಗಗಳು ಮಹಿಳೆಯರಿಗೆ ತಂದು ಕೊಟ್ಟಿರುವ ಮುಕ್ತತೆ ಮತ್ತು ಬಿಡುಗಡೆ ಅಪಾರ ಮತ್ತು ಸಾಮಾನ್ಯ ಗ್ರಹಿಕೆಗೂ ಮೀರಿದ್ದು. ಮೊದಲು ಪ್ರಸ್ತಾಪಿಸಿದ ಹುಡುಗಿ ಹೇಳಿದ್ದು ‘ಕಮಿಟ್‌ಮೆಂಟ್ ಅನ್ನುವುದು ಈಗ ರಿಡಿಫೈನ್ ಆಗಿದೆ. ಒಬ್ಬ ಹುಡುಗನ ಜೊತೆ ಪ್ರೀತಿ ಆಯಿತು, ಸಂಬಂಧ ಆಯಿತು ಅಂತ ಅನಿವಾರ್ಯವಾಗಿ ಮದುವೆ ಮಾಡಿಕೊಳ್ಳಕ್ಕಾಗಲ್ಲ. ಕಮಿಟ್‌ಮೆಂಟ್ ಇದ್ದರೆ ಮಾತ್ರ ಮದುವೆ, ಮದುವೆ ಆಯಿತು ಅಂತ ಕಮಿಟ್‌ಮೆಂಟ್ ಅಲ್ಲ!’ ಅಂದರೆ ಸರಿ ಬರದಿದ್ದರೆ ಬಿಟ್ಟು ಹೋಗುವ ಸ್ವಾತಂತ್ರ್ಯ ಇವತ್ತಿನ ಹುಡುಗಿಯರಿಗೆ ದೊಡ್ಡ ಬಳುವಳಿ.

ಪ್ರಸಿದ್ಧ ಲಾಯರ್ ಒಬ್ಬರು ಹೇಳಿದ್ದು: ‘ಇವತ್ತು ಒಂದೇ ದಿನದಲ್ಲಿ ಫ್ಯಾಮಿಲಿ ಕೋರ್ಟಿನಲ್ಲಿ 365 ಕೇಸ್‌ಗಳು ಸೆಟಲ್ ಆದವು. ಅಂದರೆ ಸರಿ ಬರಲ್ಲ, ಸೆಪರೇಷನ್ ಕೊಡಿ ಅಂತ ಕೇಳಿ ದೂರವಾದರು. ಅಲ್ಲಿ ಭಾವನೆ, ಸಂಬಂಧ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿಗಳಿಗಿಂತ ಹೆಚ್ಚಾಗಿ ವ್ಯಕ್ತಿಗತ ಸ್ವಾತಂತ್ರ್ಯಕ್ಕೇ ಹೆಚ್ಚು ಒತ್ತು ಬಿದ್ದಿತ್ತು. ಸಹಿಷ್ಣುತೆ ಅನ್ನುವುದು ಈಗ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಅರ್ಥಮಾಡಿಕೊಳ್ಳುವ ತಾಳ್ಮೆಯಾಗಲೀ ಸಂಬಂಧಗಳನ್ನು ಉಳಿಸಿಕೊಳ್ಳುವ ಕಳಕಳಿಯಾಗಲೀ ಕಂಡುಬರುತ್ತಿಲ್ಲ. ಒಬ್ಬ ಹೋದರೆ ಮತ್ತೊಬ್ಬ ಸಿಗುತ್ತಾನೆ ಅನ್ನುವ ಧೈರ್ಯ ಬಂದಿದೆ ಹುಡುಗಿಯರಲ್ಲಿ. ಅದಕ್ಕೇ ಹಿಂದಿನ ಕಾಲದ ಗಟ್ಟಿ ನಂಬಿಕೆಯಾದ ‘ಮದುವೆ ಎನ್ನುವುದು ಬದುಕಿನಲ್ಲಿ ಒಂದೇ ಬಾರಿಗೆ, ಹೆಣ್ಣಿಗೆ ಒಬ್ಬನೇ ಗಂಡ’ ಎನ್ನುವ ಮಾತುಗಳೆಲ್ಲ ಗಾಳಿಗೆ ತೂರಿಹೋಗಿವೆ. ಇರೋದು ಒಂದೇ ಬದುಕು ಅದನ್ನು ಅನುಭವಿಸೋಣಾ, ಆನಂದಿಸೋಣಾ ಅನ್ನುವ ಪ್ರವೃತ್ತಿ ಇವತ್ತಿನ ಹುಡುಗಿಯರಲ್ಲಿ ಹೆಚ್ಚಾಗಿದೆ.’

ಬೆಂಬಲಶಕ್ತಿ

ಅದನ್ನು ಸಮಾಜ ಕೀಳಾಗಿ ನೋಡುತ್ತಿದೆಯೇ ಎಂದರೆ ಒಂದು ವರ್ಗದ ತಂದೆ ತಾಯಿಗಳು ಇಲ್ಲ ಎಂದು ಹೇಳುತ್ತಾರೆ. ಚೆನ್ನಾಗಿ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಮಾಡುತ್ತಾ ದೊಡ್ಡ ವೇತನ ಪಡೆದುಕೊಳ್ಳುತ್ತಿರುವ ಮಗಳು ಇವತ್ತಿನ ತಂದೆತಾಯಿಯರಿಗೆ ಒಂದು ಬೆಂಬಲಶಕ್ತಿಯಾಗುತ್ತಿದ್ದಾಳೆ. ಹಾಗಾಗಿ ಆ ಆಸರೆ ತಪ್ಪಿಹೋದರೆ ಎನ್ನುವ ಭಯಕ್ಕೆ ಅವರು ಮಗಳ ಮದುವೆಯ ವಿಚಾರವನ್ನೇ ಪ್ರಸ್ತಾಪಿಸದೆ ಸುಮ್ಮನಿದ್ದು ಬಿಡುತ್ತಿದ್ದಾರೆ. ಹಾಗಾಗಿ ಒಂದು ವಯಸ್ಸು ಮೀರಿದ ಹೆಣ್ಣುಮಗಳು ಹೊರಗಡೆ ಬಾಯ್ ಫ್ರೆಂಡ್‌ಗಳನ್ನು ಮಾಡಿಕೊಂಡರೂ ನೋಡಿಯೂ ನೋಡದ ಹಾಗೆ ಸುಮ್ಮನಿದ್ದು ಬಿಡುವುದು ಅಥವಾ ಅದನ್ನು ತಾವೂ ಒಪ್ಪಿ ಸಮ್ಮತಿಸುವುದು ಟ್ರೆಂಡ್ ಆಗುತ್ತಿದೆ.

ಪ್ರತಿಷ್ಠಿತ ದೊಡ್ಡ ಕುಟುಂಬಗಳ ಹೆಣ್ಣು ಮಕ್ಕಳು ಸುಲಭವಾಗಿ ಡೈವೋರ್ಸ್ ಮಾಡುತ್ತಿರುವುದು, ಹುಡುಗಿಯರಿಗೆ ಮದುವೆ ಶಾಶ್ವತ ಬಂಧನವಲ್ಲ, ಬಿಡುಗಡೆ ಅಷ್ಟೇ ಸುಲಭ ಎನ್ನುವ ಸಂದೇಶವನ್ನು ಉಳಿದ ವರ್ಗಗಳಿಗೆ ರವಾನಿಸುತ್ತಿವೆ. ಜೊತೆಗೆ ಕಾನೂನು ಮಹಿಳೆಯರಿಗೆ ಸಿಕ್ಕಾಪಟ್ಟೆ ರಕ್ಷಣೆ ನೀಡುವುದರಿಂದ ಮಹಿಳಾ ಸಬಲೀಕರಣ ಎನ್ನುವುದು ನಿಧಾನವಾಗಿಯಾದರೂ ಜಾರಿಯಾಗುತ್ತಿದೆ. ಪಾಸ್‌ಪೋರ್ಟ್ ಪಡೆಯಲು ಗಂಡನ ಅನುಮತಿ ಅಗತ್ಯ ಎನ್ನುವ ಅನಗತ್ಯ ಕಾನೂನನ್ನು ತೆಗೆದು ಹಾಕಿದ್ದು ವ್ಯವಸ್ಥೆಯೂ ತನ್ನ ಚಿಂತನೆಯಲ್ಲಿ ಮುನ್ನಡೆದಿದೆ ಎನ್ನುವುದರ ಸಂಕೇತ.

ಸಮಾಜದಲ್ಲಿ ಮಹಿಳೆಯರ ಸಾಂಪ್ರದಾಯಿಕ ಪಾತ್ರವನ್ನು ಪ್ರಶ್ನಿಸಲು ಸಾಧ್ಯವಾಗಿರುವುದೇ ಇವತ್ತಿನ ಸನ್ನಿವೇಶದಲ್ಲಿ ದೊಡ್ಡ ಪ್ಲಸ್ ಪಾಯಿಂಟ್. ಕಿರುತೆರೆಗಳ ಧಾರಾವಾಹಿಗಳು, ಮುಖ್ಯ ವಾಹಿನಿಯ ಚಲನಚಿತ್ರಗಳು ಎಷ್ಟೇ ಓಬಿರಾಯನ ಕಾಲದ ಪ್ಲಾಟ್‌ಗಳನ್ನು ಇಟ್ಟುಕೊಂಡು ಮಹಿಳೆಯರ ಸ್ಟೀರಿಯೊ ಟೈಪ್‌ಗಳನ್ನು ಬಿಂಬಿಸುತ್ತಿದ್ದರೂ ಅದನ್ನು ಮನರಂಜನೆ ಎಂದುಕೊಂಡು ನೋಡುವ ಮಹಿಳೆಯರು ತಮ್ಮ ಜೀವನದಲ್ಲಿ ಸಂಕೀರ್ಣ ಸಮಸ್ಯೆ ಎದುರಾದಾಗ ತಮಗೆ ಇಷ್ಟವಾದ ಸಮ್ಮತವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆಯೇ ಹೊರತು ಯಾರೋ ಸೂಚಿಸಿದ ತೀರ್ಮಾನಗಳಿಗೆ ಕಟ್ಟುಬೀಳುವುದಿಲ್ಲ. ಏನಾಗುತ್ತೋ ನೋಡೇ ಬಿಡೋಣಾ ಎನ್ನುವ ಧೈರ್ಯ ಹಿಂದೆಂದಿಗಿಂತ ಇಂದು ಹುಡುಗಿಯರಲ್ಲಿ ಎದ್ದು ಕಾಣುತ್ತಿದೆ.

ಇತ್ತೀಚಿಗೆ ಹೆಚ್ಚುತ್ತಿರುವ ಸನಾತನ ನಂಬಿಕೆಗಳಿಗೆ ಮಹಿಳೆಯರನ್ನು ಒಗ್ಗಿಸುವ ಪ್ರಯತ್ನಗಳನ್ನೂ ಇವತ್ತಿನ ಹುಡುಗಿಯರು ಒಂದು ಸಂಶಯದಲ್ಲೇ ಪರಿಗಣಿಸುತ್ತಿದ್ದಾರೆ ಎನ್ನುವುದು ಒಂದು ಮುಖ್ಯ ಅಂಶ. ಎಲ್ಲಿಯವರೆಗೆ ಅದು ತಮ್ಮ ವೈಯಕ್ತಿಕ ಬದುಕಿಗೆ ಹಾನಿಕಾರಕವಲ್ಲವೋ ಅಲ್ಲಿಯವರೆಗೆ ಅವರಿಗೆ ದೂರುಗಳಿಲ್ಲ. ಆದರೆ ಯಾವತ್ತು ದುಷ್ಟ ಗಂಡನನ್ನು ಪತಿ ಪರಮೇಶ್ವರ ಎಂದು ತಿಳಿದು ಸಹಿಸಿಕೊಂಡಿರು ಎಂದು ಹೇಳುತ್ತಾರೋ ಅವತ್ತು ಅವರು ಸಿಡಿದೆದ್ದು ಹೊರಬರುತ್ತಾರೆ/ಬರುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಈಗ ಮಹಿಳೆಗೆ ಎಲ್ಲಾ ವಲಯಗಳಲ್ಲೂ ಪ್ರವೇಶ ಸಿಕ್ಕಿರುವುದರಿಂದ ಅದು ಮಹಿಳೆಯರ ವೃತ್ತಿ ಸಾಧ್ಯತೆಗಳನ್ನು ಸಿಕ್ಕಾಪಟ್ಟೆ ಹೆಚ್ಚಿಸಿದೆ. ಅದರಿಂದ ಒಟ್ಟಾರೆ ಮಹಿಳೆಯರ ಚಿಂತನೆ, ಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಕಂಡಿದೆ.

ಸ್ವಾರ್ಥವೇ ಸ್ವಾತಂತ್ರ್ಯ

ಆದರೂ ಒಂದೊಂದು ಸಲ ಇವತ್ತಿನ ಹುಡುಗಿಯರಿಗೆ ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆಯ ಬಗ್ಗೆ ಭ್ರಮೆ ಅಥವಾ ತಪ್ಪು ತಿಳುವಳಿಕೆ ಇದೆ ಅನ್ನಿಸುತ್ತದೆ.

ವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ತನ್ನನ್ನು ಶೋಷಣೆಗೆ ಒಳಪಡಿಸದ ಹಾಗೆ ಕಾಪಾಡಿಕೊಳ್ಳುವುದು ಎನ್ನುವುದರ ಬದಲಿಗೆ ಇತರರನ್ನು ಕೀಳಾಗಿ ಕಾಣುವುದು ಎಂದುಕೊಳ್ಳುವ ಸಾಧ್ಯತೆಗಳೂ ಇವೆ. ನಾನು ನನ್ನಿಷ್ಟ ನನಗಾಗಿ ನಾನೇ ಎನ್ನುವ ಧೋರಣೆಯಿಂದಾಗಿ ಸಂಬಂಧಗಳನ್ನು ಬಹಳ ಹಗುರವಾಗಿ ಕಂಡುಬಿಡುವ ಅಪಾಯ ಹೆಚ್ಚಾಗುತ್ತಿದೆ. ಸ್ವಾರ್ಥವೇ ಸ್ವಾತಂತ್ರ್ಯ. ಜೊತೆಗೆ ಜೀವನದ ಎಲ್ಲ ಹಂತಗಳಲ್ಲೂ ಹೆಂಗಸರು, ಸದಾ ಗಂಡಸರ ಜೊತೆಜೊತೆಗೆ ವ್ಯವಹರಿಸಬೇಕಾದ ಕಾರಣ ಅಲ್ಲಿ ಒಂದು ಸಮತೋಲನ ಕಳೆದುಕೊಳ್ಳುವುದೂ ಸಾಧಾರಣವಾಗಿ ಬಿಡುತ್ತಿದೆ. ಎಲ್ಲ ಅನಿಷ್ಟಗಳಿಗೂ ಮಹಿಳೆಯನ್ನೇ ಹೊಣೆಮಾಡುವ ಸಮಾಜದಲ್ಲಿ ಮಹಿಳೆ ತನ್ನನ್ನು ಕಾಪಾಡಿಕೊಳ್ಳಲು ಇನ್ನಷ್ಟು ಉಗ್ರವಾಗಿ ಸಮರ್ಥಿಸಿಕೊಳ್ಳಬೇಕಾಗಿ ಬಂದಿರುವುದರಿಂದ ಆಕೆ ದುಪ್ಪಟ್ಟು ಶ್ರಮವಹಿಸಿ ತನ್ನನ್ನು ಕಾಪಾಡಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಇವತ್ತಿನ ಪೀಳಿಗೆಯ ಹುಡುಗಿಯರು ಮೊದಲಿನಿಂದಲೇ ಒಂದು ರೀತಿಯ ಒರಟುತನ, ಉಗ್ರತೆಯನ್ನು ರೂಢಿಸಿಕೊಂಡು ಅದನ್ನೇ ಸ್ವಾತಂತ್ರ್ಯ ಎಂದು ತಿಳಿಯುತ್ತಾರೆ.

ಸಮಾಜದಲ್ಲಿ ಮಹಿಳೆಯ ಸ್ಥಿತಿ ಬಗ್ಗೆ ಉಂಟಾಗಿರುವ ಬದಲಾವಣೆಯ ಅಳತೆಗೋಲು ಎಂದರೆ ಇವತ್ತು ಕನ್ನಡದಲ್ಲಿ ಜನಪ್ರಿಯವಾಗಿರುವ ಮಹಿಳಾ ಸ್ಟ್ಯಾಂಡ್ ಅಪ್ ಕಮೆಡಿಯನ್‌ಗಳು. ತರ್ಲೆ ಬಾಕ್ಸ್‌ನ ಸೋನು ವೇಣುಗೋಪಾಲ್ ವಿಡಂಬನೆ ಮಾಡುವ ಸಂಗತಿಗಳೆಲ್ಲ ಈಗ ಹತ್ತು ವರ್ಷದ ಮೊದಲು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದಂತವೇ ಆಗಿದ್ದವು. ಮಹಿಳೆಯರ ‘ಗುಪ್ತ’ ವಿಷಯಗಳೆಲ್ಲ ಈಗ ‘ಮುಕ್ತ ಮುಕ್ತ’. ಇವತ್ತಿನ ಹುಡುಗಿಯರು #ಮುಟ್ಟು ಅಂತ ರಕ್ತದ ಕಲೆಯ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಜಂಭದಲ್ಲಿ ಹಾಕುತ್ತಾರೆ. ‘ಎಕ್ಸ್’ಗಳ ಜೊತೆ ಬಿಂದಾಸ್ ಆಗಿ ಮಾತನಾಡುತ್ತಾರೆ, ಅನೇಕ ಸಂದರ್ಭಗಳಲ್ಲಿ ತಮ್ಮ ‘ಕರೆಂಟ್’ಗೆ ಪರಿಚಯ ಮಾಡಿಸುತ್ತಾರೆ. ‘ಡೈವೋರ್ಸ್ ಪಾರ್ಟಿ’ ಕೂಡ ಮಾಡುತ್ತಾರೆ ಮತ್ತು ‘ಬ್ರೇಕ್ ಅಪ್ ಸಾಂಗ್’ಅನ್ನು ಜೋರಾಗಿ ಹಾಡುತ್ತಾರೆ. ಇವತ್ತು ಯಾರಾದರೂ ‘ನಾವು ಹುಡುಗಿಯರೇ ಹೀಗೆ’ ಎಂದು ಬರೆದರೆ ಅದು ನಾನು ನಲವತ್ತು ವರ್ಷದ ಹಿಂದೆ ಬರೆದಿದ್ದಕ್ಕಿಂತ ಸಿಕ್ಕಾಪಟ್ಟೆ ಅಜಗಜಾಂತರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT