ಸೋಮವಾರ, ಮಾರ್ಚ್ 20, 2023
30 °C

ಸ್ಪಂದನ: ಲಸಿಕೆ ಹಾಕಿಸಿದರೆ ಮಕ್ಕಳಾಗುವುದಿಲ್ಲವೇ?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

ನಾನು ಈಗ 8 ತಿಂಗಳು ಗರ್ಭಿಣಿ. 7 ತಿಂಗಳ ಗರ್ಭಿಣಿಯಾಗಿದ್ದಾಗ ನನಗೆ ಜ್ವರ, ಕೆಮ್ಮು ಬಂತು ಎಂದು ಪರೀಕ್ಷಿಸಿದಾಗ ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದು 15 ದಿನ ಸ್ವಲ್ಪ ಸುಸ್ತು, ಹೊಟ್ಟೆನೋವು ಎಲ್ಲಾ ಉಂಟಾಗಿ ಈಗ ಏನೂ ತೊಂದರೆ ಇಲ್ಲ. ಆರಾಮಾಗಿರುವೆ. ಈಗ ವ್ಯಾಕ್ಸಿನ್‌ ಹಾಕಿಸಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಕೆಲವರು ಹಾಕಿಸಬೇಡ, ಮುಂದೆ ಮಕ್ಕಳಾಗುವುದಿಲ್ಲ ಎಂದು ಹೆದರಿಸುತ್ತಿದ್ದಾರೆ, ನನಗೆ ರೋಗನಿರೋಧಕ ಶಕ್ತಿ ಬಂದಿದೆ ಅಲ್ವೇ, ಮತ್ತೆ ಯಾಕೆ ವ್ಯಾಕ್ಸಿನ್ ಹಾಕಿಸಬೇಕು?

- ಛಾಯಾ, ಊರಿನ ಹೆಸರು ತಿಳಿಸಿಲ್ಲ

ಛಾಯಾರವರೇ, ನೀವು ಈಗಾಗಲೇ ಕೋವಿಡ್ ಸೋಂಕಾಗಿ ಗುಣಮುಖರಾಗಿದ್ದರೆ ನೀವು ಹೆರಿಗೆಯ ನಂತರ ಲಸಿಕೆ ಹಾಕಿಸಿಕೊಳ್ಳಿ. ಇದರಿಂದ ನಿಮ್ಮ ರೋಗನಿರೋಧಕ ಪ್ರತಿಕಾಯಗಳು ಇನ್ನೂ ಹೆಚ್ಚಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಕಳೆದ ವಾರವಷ್ಟೇ ಭಾರತ ಸರ್ಕಾರದ ಐ.ಸಿ.ಎಂ.ಆರ್ ನಿಂದ ಗರ್ಭಿಣಿಯರಿಗೂ ಲಸಿಕೆ ಹಾಕಿಸಲು ಅನುಮತಿ ಸಿಕ್ಕಿದೆ. ಕಳೆದ ತಿಂಗಳು ಎದೆ ಹಾಲುಣಿಸುವ ತಾಯಂದಿರಿಗೆ ಅನುಮತಿ ಸಿಕ್ಕಿತ್ತು. ಲಸಿಕೆಯಿಂದ ಮತ್ತೆ ಮಕ್ಕಳಾಗುವುದಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಲಸಿಕೆಯಿಂದ ಗರ್ಭಿಣಿಯರ ಮೇಲಾಗುವ ಪರಿಣಾಮಗಳ ಬಗ್ಗೆ ದೀರ್ಘಾವಧಿ ಅಧ್ಯಯನಗಳು ಇನ್ನು ದೊರೆತಿಲ್ಲವಾದರೂ ಕೋವಿಡ್ ಲಸಿಕೆ ಗರ್ಭಿಣಿಯರು ತೆಗೆದುಕೊಳ್ಳುವುದರಿಂದ ಆಗುವ ಸಣ್ಣಪುಟ್ಟ ತೊಂದರೆಗಿಂತ ಅನುಕೂಲಗಳೇ ಹೆಚ್ಚು. ಇದರಿಂದ ತೀವ್ರನಿಗಾ ಘಟಕದಲ್ಲಿ ಅಡ್ಮಿಟ್ ಆಗುವ ಸಂಭವ ಕಡಿಮೆಯಾಗುತ್ತದೆ. ಕೋವಿಡ್ ಲಸಿಕೆಯಲ್ಲಿ ಯಾವುದೇ ಜೀವಂತ ವೈರಾಣು ಕಣಗಳಿರುವುದಿಲ್ಲ. ಹಾಗಾಗಿ ಚಿಂತಿಸದೇ ಲಸಿಕೆ ತೆಗೆದುಕೊಳ್ಳಿ.

ಬೇರೆಲ್ಲಾ ಔಷಧಗಳ ಹಾಗೆ ಸಣ್ಣಪುಟ್ಟ ಪಾರ್ಶ್ವ ದುಷ್ಪರಿಣಾಮಗಳು ಈ ಲಸಿಕೆ ತೆಗೆದುಕೊಂಡಾಗ ಆಗಬಹುದು. ಸ್ವಲ್ಪ ಜ್ವರ, ಮೈ-ಕೈ ನೋವು, ಇಂಜೆಕ್ಷನ್ ಜಾಗದಲ್ಲಿ ನೋವು ಎರಡು ಮೂರು ದಿನ ಇರಬಹುದು. ಎಲ್ಲೋ ಒಂದರಿಂದ ಐದು ಲಕ್ಷ ಜನರಿಗೊಬ್ಬರಲ್ಲಿ ಸ್ವಲ್ಪ ಉಸಿರಾಡಲು ಕಷ್ಟ ಆದ ಹಾಗೆ, ಎದೆ ಹಿಡಿದ ಹಾಗೆ, ಎದೆನೋವು, ಹೊಟ್ಟೆನೋವು, ವಾಂತಿ, ಕಾಲುಗಳಲ್ಲಿ ಸೆಳೆತ, ಒತ್ತಿದ ಅನುಭವ, ಮೈ ಮೇಲೆ ಸಣ್ಣ ಸಣ್ಣ ರಕ್ತಸ್ರಾವದ ಕಲೆಗಳು, ಒಂದು ಭಾಗದಲ್ಲಿ ಕೈ-ಕಾಲು ಸ್ವಾಧೀನ ಕಡಿಮೆಯಾಗಬಹುದು. ಮೊದಲು ಅಪಸ್ಮಾರವಿಲ್ಲದಿದ್ದರೂ ಫಿಟ್ಸ್ ಬಂದ ಹಾಗಾಗಬಹುದು, ಈ ಮೊದಲು ಮೈಗ್ರೇನ್ ಅಥವಾ ಅರೆತಲೆನೋವು ಇಲ್ಲದಿದ್ದರೂ ವಾಂತಿ ಬಂದ ಹಾಗಾಗಬಹುದು, ಕಣ್ಣು ಮಂಜು, ಪದೇ ಪದೇ ವಾಂತಿ, ಇನ್ನಿತರ ಆರೋಗ್ಯ ಸಮಸ್ಯೆಗಳಾದಲ್ಲಿ ತಜ್ಞರ ತಪಾಸಣೆ ಹಾಗೂ ಮೇಲ್ವಿಚಾರಣೆ ಅಗತ್ಯ. ನಿಮಗೊಮ್ಮೆ ಕೋವಿಡ್ ಬಂದು ಹೋಗಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಾ ಹೆರಿಗೆಯ ನಂತರ ಆದಷ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ.

***

ನನಗೆ ಈಗ 34 ವರ್ಷ, ಮದುವೆಯಾಗಿ 5 ವರ್ಷವಾಗಿದೆ. ಆದರೆ ಮಕ್ಕಳಾಗಿಲ್ಲ. ಕಳೆದ ಎರಡು ವರ್ಷಗಳಿಂದ ಔಷಧ ಮಾಡಿ ಈ ಕೋವಿಡ್‌ ಸಮಯದಿಂದ ನಿಲ್ಲಿಸಿದ್ದೇವೆ. ನಾವು ಇಬ್ಬರೂ ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳಬಹುದೇ?

- ಉಷಾ ಉಪ್ಪಿನಂಗಡಿ, ಮಂಗಳೂರು

ಉಷಾರವರೆ ಈಗಾಗಲೇ ನಿಮಗೆ 34 ವರ್ಷವಾದ್ದರಿಂದ ನೀವು ಮಕ್ಕಳನ್ನು ಪಡೆಯುವ ಪ್ರಯತ್ನವನ್ನು ನಿಲ್ಲಿಸಬೇಡಿ. ಕೊರೊನಾ ಲಸಿಕೆಯನ್ನು ನೀವು ಹಾಗೂ ನಿಮ್ಮ ಪತಿ ಇಬ್ಬರೂ ತಪ್ಪದೇ ಹಾಕಿಸಿಕೊಳ್ಳಿ. ಯಾವುದೇ ಭಯ, ಆತಂಕ ಬೇಡ. ಮಕ್ಕಳನ್ನು ಪಡೆಯುವುದಕ್ಕೆ ಕೊರೊನಾ ವ್ಯಾಕ್ಸಿನ್ ಅಡ್ಡಿ ಏನೂ ಅಲ್ಲ. ಬದಲಾಗಿ ವ್ಯಾಕ್ಸಿನ್‌ನಿಂದ ಹೆಚ್ಚುವ ರೋಗನಿರೋಧಕ ಶಕ್ತಿಯಿಂದ ನಿಮ್ಮಲ್ಲಿ ಬದುಕಿನ ಬಗ್ಗೆ, ಮಕ್ಕಳನ್ನು ಪಡೆಯುವ ಬಗ್ಗೆ ಹೆಚ್ಚು ಸಕಾರಾತ್ಮಕ ಭಾವನೆ ಉಂಟಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು