ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಪೂರ್ಣೆಯರು ‘ಅಮ್ಮನ ಅಕ್ಕರೆ’ಯ ಈ ಅಕ್ಕ–ತಂಗಿಯರು

Last Updated 21 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳಿಗೆ ಆಗಾಗ್ಗೆ ಅಡುಗೆ ಮನೆಯಿಂದ ಪರಿತ್ಯಕ್ತರಾಗಬೇಕೆಂಬ ವಿರಕ್ತಭಾವ ಹುಟ್ಟುವುದು ಸಹಜ. ಆಗೆಲ್ಲ ಕೈ ಹಿಡಿಯುವರು ‘ಅಮ್ಮನ ಅಕ್ಕರೆ’ಯ ಈಅಕ್ಕ–ತಂಗಿಯರು.

ನಗರದಲ್ಲಿ ನಾಲ್ಕು ಗೋಡೆಗಳ ನಡುವೆ ಹೇಗಪ್ಪಾ ಸಮಯ ಕಳೆಯೋದು, ಬದುಕೇ ಅಸಹನೀಯ ಆಗೋಗಿದೆ ಎಂದು ಗೊಣಗಿಕೊಳ್ಳುವ ಗೃಹಿಣಿಯರಿಗೆ ಈ ಸ್ನೇಹಿತೆಯರ ಲವಲವಿಕೆಯ ಕತೆಗಳು ಇಷ್ಟ ಆಗೇ ಆಗುತ್ತವೆ. ಅಡುಗೆಯನ್ನೇ ಆನಂದಿಸುವ, ತರಕಾರಿ ಕತ್ತರಿಸುತ್ತ ಕಳವಳಗಳನ್ನ ಕಳಚಿ ಹಗುರಾಗುವ, ಸಾಸಿವೆ, ಜೀರಿಗೆ, ಕೊತ್ತಂಬರಿ ಕಾಳಿನಲ್ಲಿ ಕನಸನ್ನು ತುಂಬಿಕೊಂಡು, ವಗ್ಗರಣೆ ಡಬ್ಬಿಯನ್ನು ಮಡಿಲಲ್ಲಿ ಹೊತ್ತು ತಿರುಗುವವರು ಈ ಅನ್ನಪೂರ್ಣೆಯರು.

ಅಡುಗೆಮನೆ ನಿರ್ವಹಣೆ , ಅಡುಗೆ ತಯಾರಿ ಇವೆಲ್ಲ ಮಹಿಳೆಯರ ಬೆನ್ನಿಗಂಟಿಕೊಂಡ ‘ಮೂಲಭೂತ ಕರ್ತವ್ಯ’ಗಳು! ಶ್ರದ್ಧೆಯಿಂದ ನಿರ್ವಹಿಸುವ ಈ ಕರ್ತವ್ಯ ಒಮ್ಮೊಮ್ಮೆ ಏಕತಾನತೆಯ ಬೇಸರವನ್ನೂ ಹುಟ್ಟಿಸುತ್ತದೆ. ಅಡುಗೆ ಮನೆಯಿಂದ ಪರಿತ್ಯಕ್ತಳಾಗಬೇಕೆಂಬ ವಿರಕ್ತಭಾವ ಹುಟ್ಟಿಸುತ್ತದೆ. ಆಗ ಥಟ್ಟನೆ ನೆನಪಾಗುವುದು ‘ಅಮ್ಮನ ಅಕ್ಕರೆ’ಯ ಅಕ್ಕ–ತಂಗಿಯರು.

ಅಡುಗೆ ಅಂದರೆ ಇವರಿಗೆ ಸಂತೈಸುವ ಕೈಗಳು ಬಾಚಿ ತಬ್ಬಿಕೊಂಡಂತೆ, ಒಡಲ ನೋವಿನ ಹಾಡಿಗೆ ಸ್ವರ ಸೇರಿದಂತೆ, ಖುಷಿಯ ಬಲೂನು ಬಾನಿಗೆ ಹಾರಿಬಿಟ್ಟಂತೆ, ಇವೆಲ್ಲಕ್ಕಿಂತ ಮುಖ್ಯವಾಗಿ ಹಸಿದ ಹೊಟ್ಟೆಗೆ ಸಂತೃ‍‍ಪ್ತ ಊಟ ನೀಡಿದ ತೃಪ್ತಭಾವ.

ಬೆಂಗಳೂರಿನಲ್ಲಿ ‘ಅಮ್ಮನ ಅಕ್ಕರೆ’ ಅಡುಗೆ ಮಹಿಳೆಯರ ತಂಡದ ಬಗ್ಗೆ ಗೊತ್ತಿಲ್ಲದವರು ಕಡಿಮೆ. ಕೇಟರಿಂಗ್ ಉದ್ಯಮ ನಡೆಸುವ ಹಲವಾರು ತಂಡಗಳು ಬೃಹತ್ ಬೆಂಗಳೂರಿನಲ್ಲಿವೆ. ಆದರೆ, ಇಬ್ಬರು ಮಹಿಳೆಯರು ಮಹಿಳೆಯರಿಗಾಗಿ ಕಟ್ಟಿರುವ ಈ ತಂಡ ಪ್ರೀತಿ, ಆತಿಥ್ಯದ ಮೂಲಕ ಜನರ ಮನ ಗೆದ್ದಿದೆ, ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಸಾಗರ ಸಾಲೆಕೊಪ್ಪದ ಸಹನಾ ಸುರೇಶ್ ಮತ್ತು ಭಾಗ್ಯ ಈ ತಂಡದ ರೂವಾರಿಗಳು. ನಾಲ್ಕು ವರ್ಷಗಳ ಹಿಂದೆ ನಾಲ್ವರು ಸೇರಿ, ಬಿಡುವಿನ ವೇಳೆಯನ್ನು ಖುಷಿಯಿಂದ ಕಳೆಯಲು ಶುರು ಮಾಡಿದ ಅಡುಗೆಯೆಂಬ ಕಾಯಕ ಈಗ 30ಕ್ಕೂ ಹೆಚ್ಚು ಮಹಿಳೆಯರಿಗೆ ಜೀವನಾಧಾರವಾಗಿದೆ.

‘ಶಿವಮೊಗ್ಗದಲ್ಲಿದ್ದಾಗ ಮನೆಗೆ ನೆಂಟರು, ಆಪ್ತರು ಬರ್ತಿದ್ರು, ಅಡುಗೆ ಮಾಡಿ ಬಡಿಸುತ್ತಿದ್ದೆ. ಯಜಮಾನರಿಗೆ ವರ್ಗವಾಗಿ, ಯಾವಾಗ ಬೆಂಗಳೂರಿಗೆ ಬಂದೆನೋ ಎರಡನೇ ಮಹಡಿಯ ನಾಲ್ಕು ಗೋಡೆಗಳ ನಡುವೆ ಕುಳಿತು ತಲೆ ಚಿಟ್ಟು ಹಿಡಿಯಿತು. ಬೆಳಿಗ್ಗೆ 8 ಗಂಟೆಗೆ ಮನೆಗೆಲಸ ಮುಗಿಸಿ, ಕುಳಿತರೆ ದಿಕ್ಕು ತೋಚದು, ಟಿವಿ ನೋಡುವ ಅಭ್ಯಾಸವೇ ಇಲ್ಲ. ವಾಪಸ್ ಊರಿಗೇ ಹೋಗಿಬಿಡಬೇಕು ಎಂದುಕೊಳ್ಳುತ್ತಿರುವಾಗ, ಕಾರ್ಯದ ಮನೆಯಲ್ಲಿ ಊಟ ಬಡಿಸಲು ಬಂದವರಿಬ್ಬರ ಪರಿಚಯ ಮಾಡಿಕೊಂಡೆ. ಅವರ ಜತೆ ಶ್ರೀಕಾಂತ ಬಾಪಟರ ಅಡುಗೆ ತಂಡಕ್ಕೆ ಸೇರಿಕೊಂಡೆ. ಹಾಗೆ ಆರಂಭವಾದ ಅಡುಗೆಯ ಆಹ್ಲಾದ ಮುಂದೆ ಸ್ವತಂತ್ರ ನಿರ್ವಹಣೆಯ ಪಾಠ ಕಲಿಸಿತು’ ಎನ್ನುವ ತಂಡದ ನಾಯಕಿ ಸಹನಾ ಅವರಿಗೆ ಅಡುಗೆ ಒಂದು ಕ್ಷಣಕ್ಕೂ ಬೋರ್ ಅನ್ನಿಸಿದ್ದೇ ಇಲ್ಲವಂತೆ.

ಬೆಂಗಳೂರು ಸುತ್ತಮುತ್ತ ಎಲ್ಲೇ ಕರೆದರೂ ಅಮ್ಮನ ಅಕ್ಕರೆಯ ಹೆಂಗಳೆಯರು ಅಡುಗೆ ಮಾಡಿ ಬಡಿಸುತ್ತಾರೆ. ದೂರದ ಕೊಯಮತ್ತೂರಿಗೂ ಹೋಗಿ ಅಡುಗೆ ಉಣಬಡಿಸಿದ್ದಾರೆ. ಮದುವೆ, ಉಪನಯನ, ದೇವರ ಕಾರ್ಯ ಅಷ್ಟೇ ಅಲ್ಲ ತಿಥಿ ಅಡುಗೆ ಮಾಡಲು ಸೈ ಎನ್ನುವ ಈ ಮಹಿಳೆಯರು, 10 ಜನರಿದ್ದರೂ, ಸಾವಿರ ಜನರಿದ್ದರೂ ಅಷ್ಟೇ ಅಚ್ಚುಕಟ್ಟಾಗಿ ಅಡುಗೆ ಮಾಡುತ್ತಾರೆ. ‘ಮನೆ ಆತಿಥ್ಯ’ ಇವರ ಸರಳ ಸೂತ್ರ.

ಕಷ್ಟ ಕೋಟಲೆಗಳು ನೂರೆಂಟಿದ್ದರೂ, ಎದೆಯೊಳಗಣ ತಲ್ಲಣಗಳನ್ನು ಹುದುಗಿಟ್ಟು ನಗುನಗುತ್ತ ‘ಇನ್ನೂ ಸ್ವಲ್ಪ ಕೇಸರಿ ಹಾಕಿಸಿಕೊಳ್ಳಿ, ಇನ್ನೊಂದು ಕಡಬು ತಿನ್ನಿ ಏನಾಗಲ್ಲ, ತಂಬುಳಿ ಆರೋಗ್ಯಕ್ಕೆ ಒಳ್ಳೆಯದು’ ಎನ್ನುತ್ತ ನಗುನಗುತ್ತ ಊಟ ಬಡಿಸುತ್ತಾರೆ. ಸ್ನೇಹಿತರ ನಡುವೆ ಸಮಾನತೆ ಕಾಯ್ದುಕೊಳ್ಳಲು ಸಮವಸ್ತ್ರದ ಸೀರೆ ತೊಡುವ ಕ್ರಮ ಅಳವಡಿಸಿಕೊಂಡಿದ್ದಾರೆ.

‘ಮನೆಯವರ ತರಹ ನಗ್ತಾ ನಗ್ತಾ ಪ್ರೀತಿಯಿಂದ ಬಡಸ್ತೀರಿ’ ಎಂದು ಹೇಳಿದವರೇ ಹೆಚ್ಚಿನವರು ವಿನಾ, ಯಾರೂ ಇಲ್ಲಿಯ ತನಕ ಕೀಳಾಗಿ ಕಂಡಿದ್ದು, ಅಯ್ಯೋ ಅಡುಗೆ ಮಾಡುವವರು ಇವರು ಎಂದು ಹೀಗಳೆದಿದ್ದು ಅನುಭವಕ್ಕೆ ಬಂದಿಲ್ಲ. ಇದು, ಅಡುಗೆಯ ಗೌರವ ಔನ್ನತ್ಯಕ್ಕೇರಿಸಿದ್ದಷ್ಟೆ ಅಲ್ಲ, ನಮ್ಮಲ್ಲಿ ಆತ್ಮಸ್ಥೈರ್ಯವನ್ನೂ ತುಂಬಿದೆ ಎನ್ನುತ್ತಾರೆ ಅಕ್ಕರೆಯ ಸದಸ್ಯೆಯರು.

ಟೊಮೆಟೊ ತಂಬುಳಿ, ಮಾವಿನ ಕಾಯಿ ಬೂತಗೊಜ್ಜು, ಕೆಂಪವಲಕ್ಕಿ ಹೀಗೆ ಅಪ್ಪಟ ಮಲೆನಾಡಿನ ಅಡುಗೆಯಿಂದ ಬಿಸಿಬೇಳೆ ಬಾತ್, ಪುಲಾವ್, ವಾಂಗಿಬಾತ್‌, ಉತ್ತರ ಭಾರತದ ಅಡುಗೆ ಹೀಗೆ ನಾಲಿಗೆ ಬಯಸುವ ರುಚಿ ಸಿದ್ಧಪಡಿಸುವ ಇವರು ಎಂದಿಗೂ ಟೇಸ್ಟಿಂಗ್ ಪೌಡರ್ ಬಳಸಿದ್ದೇ ಇಲ್ಲವಂತೆ. ‘ನಾನಂತೂ ಟೇಸ್ಟಿಂಗ್ ಪೌಡರ್ ಹೇಗಿರುತ್ತೆ ಅಂತನೂ ನೋಡಿಲ್ಲ, ಹೋಟೆಲ್ ಊಟವೂ ನಂಗೆ ಇಷ್ಟ ಅಲ್ಲ’ ಎನ್ನುತ್ತಿದ್ದರು ಸಹನಾ.

ಮನೆಯ ಆಪ್ತತೆ ಇರಬೇಕು, ಉಳಿದವರಿಗೆ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ಅಡುಗೆ ಸಿದ್ಧತೆಯ ವೇಳೆ ಮೊಬೈಲ್‌ ಬಳಕೆಗೆ ನಿಷೇಧ ವಿಧಿಸಿಕೊಂಡಿದ್ದಾರೆ.

‘ಅಡುಗೆ ಎನ್ನುವುದು ನಮಗೆ ಉದ್ಯಮ ಅನ್ನುವುದಕ್ಕಿಂತ ಅದೊಂದು ಬಿಡುಗಡೆಯ ನೆಮ್ಮದಿ. ಮನೋಬಲ ಹೆಚ್ಚಿಸುವ ಮಾಧ್ಯಮ. ನಮ್ಮ ತಂಡದಲ್ಲಿರುವ ಹೆಚ್ಚಿನವರು ಆರ್ಥಿಕ ಅಗತ್ಯ ಇರುವವರೇ. ಕುಟುಂಬದ ನಿರ್ವಹಣೆಯ ಜತೆಗೆ ಚಿತ್ತ ನಿರ್ವಹಣೆಗೆ ಅವರಿಗೆ ಇದು ಆಧಾರವಾಗಿದೆ. ಹೆಂಗಸರ ಜತೆ ಒಮ್ಮೊಮ್ಮೆ ಊಟ ಬಡಿಸಲು ಅವರ ಗಂಡಂದಿರು, ಮಕ್ಕಳು ಕೂಡ ಬರುತ್ತಾರೆ’ ಎನ್ನುತ್ತಿರುವಾಗಲೇ ಸಹನಾ ಅವರಿಗೆ ಮಹಿಳೆಯೊಬ್ಬರು ಕಾಲ್ ಮಾಡಿ, ‘ಅಕ್ಕಾ ನಾಳೆಯಿಂದ ನಾನು ಬರಲೇ’ ಎಂದ ದನಿ ಕೇಳಿಸಿತು.

ಭಾನುವಾರದ ರಜೆ ಅಡುಗೆ ಮಾಡಲು ಮೂಡ್‌ ಇಲ್ಲ ಅಂದ್ರೆ, ಅಕ್ಕರೆಯ ಅಮ್ಮಂದಿರಿಗೆ ಕರೆ ಮಾಡಿದರೆ ಸಾಕು, ಕನಿಷ್ಠ 10 ಜನರಿದ್ದರೂ ಮನೆಗೇ ಬಂದು ಅಡುಗೆ ಮಾಡಿಕೊಡುತ್ತಾರೆ. ಇವರ ಸಂಪರ್ಕ ಸಂಖ್ಯೆ: 9480792653.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT