ನಮ್ಮದು ಅಪ್ಪ, ಅಮ್ಮ, ಅಕ್ಕ ಹಾಗೂ ನಾವಿಬ್ಬರು ಅವಳಿಗಳಿದ್ದ (ಅಣ್ಣ) ವಿಭಕ್ತ ಕುಟುಂಬ. ಎಳವೆಯಿಂದಲೂ ಅಣ್ಣ ತೀರಾ ಕೀಟಲೆಯ, ಹಟ ಸ್ವಭಾವದ ಕೋಪಿಷ್ಟ. ಗಂಡುಮಗನೆಂಬ ಕಾರಣಕ್ಕೆ ಅಮ್ಮನ ಮುದ್ದು ತುಸು ಹೆಚ್ಚಾಗಿದ್ದರಿಂದಲೂ ಇರಬಹುದು. ಅವನಿಗೆ ಇಷ್ಟವಾಗದ ಕೆಲಸ ಮಾಡಿದೆವೆಂದರೆ ನನಗೆ, ಅಕ್ಕನಿಗೆ ಸರಿಯಾಗಿ ಗುದ್ದುತ್ತಿದ್ದ. ನಾವಿಬ್ಬರು ಸೇರಿದರೂ ಅವನನ್ನು ಬಗ್ಗಿಸಿ ಏಟು ಹಾಕಲು ನಮ್ಮಿಂದ ಆಗುತ್ತಿರಲಿಲ್ಲ. ನೋಡಲೂ ಅಷ್ಟೇ ದಷ್ಟಪುಷ್ಟವಾಗಿದ್ದ (ಅಮ್ಮ ಮಮತೆಯಲ್ಲಿ ಕಡುಬಿನ ಜೊತೆ ಕಡುಬಿನಷ್ಟೇ ದೊಡ್ಡ ಆಕಾರದ ಬೆಣ್ಣೆಯುಂಡೆ ಹಾಕಿ ಬೆಳೆಸಿದ್ದ ಮೈಕಟ್ಟದು).

ಒಮ್ಮೆ ತೀರ್ಥಹಳ್ಳಿ ಜಾತ್ರೆಯಿಂದ ಅವನು ಬಹಳ ಇಷ್ಟಪಟ್ಟು ತಂದಿದ್ದ ಆಟಿಕೆ ವಿಮಾನವನ್ನು, ಅವನಿಲ್ಲದಾಗ ನಾವಿಬ್ಬರೂ ಹಾರಿಸಲು ಯತ್ನಿಸಿ ವಿಫಲರಾಗಿ, ಅದು ಜೋರಾಗಿ ನೆಲಕ್ಕಪ್ಪಳಿಸಿದ್ದರಿಂದ ತಂದ ದಿನವೇ ತುಂಡಾಗಿಹೋಯಿತು. ಅಮ್ಮ ‘ಇಬ್ಬರೂ ಬೆನ್ನಿಗೆ ಹಾಳೆ ಕಟ್ಟಿಕೊಳ್ಳಿ. ನಾನಂತೂ ಅವನನ್ನು ತಡೆಯುವುದಿಲ್ಲ’ ಎಂದುಬಿಟ್ಟರು. ಅವನ ಹೊಡೆತದ ರುಚಿಯನ್ನು ನೆನೆದು ನಮ್ಮಿಬ್ಬರಿಗೂ ನಡುಕ ಆರಂಭವಾಗಿತ್ತು. ಮನೆಗೆ ಬಂದು ತನ್ನ ವಿಮಾನದ ಅವಸ್ಥೆಯನ್ನು ಕಂಡವನೇ ಕಣ್ಣು ಕೆಂಪಾಗಿಸಿದ. ಕಾಳಗ ಪ್ರಾರಂಭವಾಗಿಯೇ ಹೋಯಿತು. ಮೂವರ ನಡುವೆ ದೊಡ್ಡ ಹೊಡೆದಾಟವಾಗಿ, ನಂತರ ಅಪ್ಪನ ಮಧ್ಯಸ್ಥಿಕೆಯಲ್ಲಿ, ನಾವಿಬ್ಬರೂ ಅವನಿಗೆ ಅದರ ಹಣ ಕೊಡಬೇಕೆಂದು ಇತ್ಯರ್ಥವಾಯಿತು.

ತೀರ್ಥಹಳ್ಳಿಯಲ್ಲಿ ಡಿಸೆಂಬರ್ ಕೊನೆಯಲ್ಲಿ ನಡೆಯುವ ಎಳ್ಳಮಾವಾಸ್ಯೆ ಜಾತ್ರೆ ತುಂಬಾ ಪ್ರಸಿದ್ಧಿ. ಆ ಸಮಯದಲ್ಲಿ ಎಲ್ಲರ ಮನೆಯಲ್ಲೂ ಅಡಿಕೆ ಕೊಯ್ಲಿನ ಸಮಯ. ಅಡಿಕೆ ಸಿಪ್ಪೆ ಬಿಡಿಸಿ, ತಿರುಳನ್ನು ತೆಗೆದುಕೊಟ್ಟರೆ, ಅದನ್ನು ಕೊಳಗದ ಪ್ರಮಾಣದಲ್ಲಿ ಅಳೆದು, ಒಂದು ಕೊಳಗಕ್ಕೆ ಒಂದು ರೂಪಾಯಿ ಕೊಡುತ್ತಿದ್ದರು. ವಾರಗಳ ಕಾಲ ಮನೆಯಲ್ಲಿ ನಾವಿಬ್ಬರೂ ಅಡಿಕೆ ಸುಲಿದು, ಅಪ್ಪನಿಂದ ಹಣ ಪಡೆದು, ಅವನ ವಿಮಾನದ ನಷ್ಟವನ್ನು ತುಂಬಿಕೊಟ್ಟೆವು. ಆದರೂ ಜಾತ್ರೆ ಮುಗಿದಿದೆ, ಇನ್ನೆಲ್ಲಿ ವಿಮಾನ ತರುವುದೆಂದು ಗಲಾಟೆ ಮಾಡುವುದು, ಹೊಡೆಯುವುದು ನಡೆದೇ ಇತ್ತು.

ಇವನನ್ನು ನಾವಿಬ್ಬರೂ ಶಕ್ತಿಯಿಂದ ಗೆಲ್ಲಲು ಸಾಧ್ಯವಾಗದೆಂದು ತಿಳಿದ ಅಕ್ಕ, ಹೇಗಾದರೂ ಇವನಿಗೂ ನಾಲ್ಕೇಟು ತಿನ್ನಿಸಲೇಬೇಕೆಂದು ಯೋಚಿಸಿದಳು. ನನ್ನದು, ಅಣ್ಣನದು ಒಂದೇ ತರಗತಿಯಾಗಿತ್ತು. ನಮ್ಮ ಇಂಗ್ಲಿಷ್ ಭಾಷೆಯ ಶಿಕ್ಷಕಿ ಲೀಲಾಬಾಯಿ ಅವರು ಬಹಳ ಕಟ್ಟುನಿಟ್ಟು. ಮನೆಕೆಲಸ ಬರೆದಿಲ್ಲವೆಂದರೆ ತುಸು ಹೆಚ್ಚೆನಿಸುವಷ್ಟೇ ಹೊಡೆಯುತ್ತಿದ್ದರು. ಉಪಾಯ ಮಾಡಿದ ಅಕ್ಕ, ಲೀಲಾಬಾಯಿ ಮೇಡಂ ಯಾವಾಗ ಮನೆಕೆಲಸ ಕೊಟ್ಟಿರುತ್ತಾರೆ ಆಗ ಹೇಳು ಎಂದಿದ್ದಳು. ಮರುದಿನವೇ ತುಂಬಾ ಬರೆಯಲು ಕೊಟ್ಟಿದ್ದನ್ನು ತಿಳಿಸಿದೆ.

ಅಣ್ಣ ಸ್ನಾನಕ್ಕೆ ಹೋಗುವುದನ್ನೇ ಕಾದಿದ್ದ ನಾವು, ಇಂಗ್ಲಿಷ್ ಭಾಷೆಯ ಮನೆಕೆಲಸದ ಪುಸ್ತಕವನ್ನು ಅಡಗಿಸಿಟ್ಟೆವು. ಅವನು ಎಂದಿನಂತೆ ಶಾಲೆಗೆ ಹೊರಟ. ನಾವಿಬ್ಬರೂ ಮುಖ ನೋಡಿಕೊಂಡು ನಸುನಕ್ಕೆವು. ಶಾಲೆಯ ಗಂಟೆ ಬಾರಿಸಿದಾಕ್ಷಣವೇ ಅಣ್ಣ ನನ್ನ ಬಳಿ ಓಡಿ ಬಂದ. ಗದ್ಗದ ಸ್ವರದಲ್ಲಿ ‘ನನ್ನ ಮನೆಕೆಲಸದ ಪುಸ್ತಕ ನಿನ್ನ ಪಾಟೀಚೀಲದಲ್ಲಿ ಬಂದಿದೆಯಾ ನೋಡು’ ಎಂದ. ಅವನ ಕೈ, ಕಾಲು ನಡುಗುತ್ತಿದ್ದವು. ಇಲ್ಲವೆಂದೆ. ಪೇಚಾಡಿಕೊಂಡು ಪುನಃ ಪುನಃ ಹುಡುಕಲಾರಂಭಿಸಿದ. ಶಿಕ್ಷಕಿ ಬಂದರು. ಬಾಕಿಯವರೆಲ್ಲ ಮನೆಕೆಲಸ ತೋರಿಸಿದೆವು. ಅಣ್ಣನಿಗೆ ಮೇಡಂ ಉದ್ದನೆಯ ಕೋಲಿನಲ್ಲಿ ಥಳಿಸತೊಡಗಿದರು.

ಓದಿನಲ್ಲಿ ಸದಾ ಮುಂದಿದ್ದ, ಎಂದೂ ಶಿಕ್ಷೆ ಅನುಭವಿಸದವ, ‘ಅಮ್ಮಾ, ಅಮ್ಮಾ’ ಎಂದು ನೋವಿನಿಂದ ಕೂಗುತ್ತಿದ್ದದ್ದು ನೋಡಿ ನನ್ನ ಕಣ್ಣಾಲಿಗಳು ತೇವಗೊಂಡವು. ಅವನಿಗೆ ಹೇಳಿದ ಸುಳ್ಳು ಅವನ ದೇಹದ ಮೇಲಾದ ನೋವಿಗಿಂತ ನನ್ನ ಮನವನ್ನು ಹೆಚ್ಚು ಗಾಸಿಗೊಳಿಸಿತ್ತು.

ಎಷ್ಟೇ ಸಿಟ್ಟಿದ್ದರೂ ಅದನ್ನು ಕಳ್ಳಹಾದಿಯಲ್ಲಿ ತೀರಿಸಿಕೊಳ್ಳುವುದು ತಪ್ಪೆಂದು ಅಂದೇ ನಮ್ಮಿಬ್ಬರಿಗೂ ಅರಿವಾಗಿತ್ತು. ಮಾಡಿದ ತಪ್ಪನ್ನು ಅವನಿಗೆ ತಿಳಿಸಿ, ಪುಸ್ತಕ ಕೈಗಿತ್ತು ಇಬ್ಬರೂ ತಲೆತಗ್ಗಿಸಿ ನಿಂತಿದ್ದೆವು.

ಅಣ್ಣನಿಗೂ ನಾವಿಬ್ಬರೂ ಮಾಡಿದ್ದು ತಪ್ಪೆಂದು ತಿಳಿದಿದ್ದರೂ ಆ ಪರಿ ಸೇಡು ತೀರಿಸಿಕೊಳ್ಳಲು ಕಾರಣವೇನೆಂಬುದು ಅರಿವಾಗಿ, ನಂತರದ ದಿನಗಳಲ್ಲಿ ಜಗಳವಾದರೂ ಅವನು ನಮ್ಮಿಬ್ಬರ ಮೇಲೆ ಕೈ ಎತ್ತುವುದನ್ನು ನಿಲ್ಲಿಸಿದ್ದ. ಅಡಗಿಸಿಟ್ಟ ಪುಸ್ತಕ ಮೂವರಿಗೂ ಪಾಠ ಕಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.