ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಅಧ್ಯಾಯ ಮತ್ತೆ ತೆರೆಯುವುದೇಕೆ?

Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಪತಿಯ ಅಥವಾ ಪ್ರೇಮಿಯ ಜೊತೆಗಿನ ಸಂಬಂಧ ಮುರಿದ ಮೇಲೂ ಆತನ ಜೊತೆ ‘ಶುದ್ಧ ಸ್ನೇಹ’ ಇಟ್ಟುಕೊಳ್ಳಲು ಬಯಸುವ ಯುವತಿಯರ ಸಂಖ್ಯೆ ಹೆಚ್ಚು ಎನ್ನುತ್ತದೆ ಸಮೀಕ್ಷೆ. ಇದರಿಂದ ಒಳಿತಾಗುವ ಬದಲು ತೊಂದರೆಯೇ ಹೆಚ್ಚು. ಜೊತೆಗೆ ಬದುಕಿನ ಖುಷಿಯನ್ನೂ ಕಳೆದುಕೊಳ್ಳುತ್ತೀರಿ ಎಂಬುದು ತಜ್ಞರ ಅಭಿಪ್ರಾಯ.

ಖಾಸಗಿ ಕಂಪನಿಯೊಂದರ ಸಾರ್ವಜನಿಕ ಸಂಪರ್ಕಾಧಿಕಾರಿ ರೀಮಾ ಗುಪ್ತಾ ಫೇಸ್‌ಬುಕ್‌ನಲ್ಲಿ ನೋಡುವುದು ತನ್ನ ಖಾತೆಯನ್ನಲ್ಲ, ಬದಲಾಗಿ ಕೆಲವೇ ತಿಂಗಳ ಹಿಂದೆ ತನ್ನಿಂದ ದೂರವಾದ ಮಾಜಿ ಪ್ರೇಮಿಯ ಖಾತೆಯನ್ನು. ಆತನ ಜೊತೆ ಸಹಜೀವನ ನಡೆಸುತ್ತಿದ್ದಾಗ ತಿಳಿದುಕೊಂಡಿದ್ದ ಪಾಸ್‌ವರ್ಡ್‌ ಬಳಕೆ ಮಾಡಿಕೊಂಡು ಆತನ ಇನ್‌ಸ್ಟಾಗ್ರಾಮ್‌ನಲ್ಲೂ ಕದ್ದು ಇಣುಕುತ್ತಿದ್ದಳು. ಅದಕ್ಕೆ ಆಕೆ ಕೊಟ್ಟ ಸಬೂಬು ಮಾಜಿ ಪ್ರೇಮಿಯ ಜೊತೆ ಒಳ್ಳೆಯ ಸ್ನೇಹ ಇಟ್ಟುಕೊಳ್ಳಬಾರದೇ ಎಂಬುದು. ಆದರೆ ಆತ ಬೇರೆ ಹುಡುಗಿಯ ಜೊತೆಗೆ ಓಡಾಡುವುದನ್ನು ಅರಿತು ತಾನೇ ಖಿನ್ನತೆಗೊಳಗಾಗಿದ್ದು ಬೇರೆ ಕಥೆ.

ಹಾಗಾದರೆ ಮಾಜಿ ಪ್ರೇಮಿಗಳು ಒಳ್ಳೆಯ ಸ್ನೇಹಿತರಾಗಬಹುದೇ? ಹೌದು ಎನ್ನುತ್ತಾರೆ ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ ಪುರುಷರು. ಯಾಕೆಂದರೆ ಅವರು ಮಾನಸಿಕ ಸಾಂಗತ್ಯಕ್ಕಿಂತ ದೈಹಿಕ ಸಂಬಂಧಕ್ಕೆ ಹೆಚ್ಚು ಒಲವು ತೋರಿಸುತ್ತಾರಂತೆ. ಆದರೆ ಮಹಿಳೆಯರಿಗೆ ಮಾತ್ರ ಇದು ಹಳೆಯ ಗಾಯವನ್ನು ಕೆರೆದು ನೋವುಂಟು ಮಾಡುವ ವಿಷಯ. ಸಂಗಾತಿಯೊಂದಿಗಿನ ಸಂಬಂಧಕ್ಕೆ ಹೆಚ್ಚು ಮಹತ್ವ ಕೊಡುವವರು ಮಹಿಳೆಯರೇ. ದೀರ್ಘಕಾಲ ಆ ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸುವವರೂ ಮಹಿಳೆಯರೇ. ಪ್ರೇಮಿ ಅಥವಾ ಪತಿಯ ಜೊತೆಗಿನ ಸಂಬಂಧವೆಂಬುದು ವೈಫಲ್ಯದ ಹಾದಿ ಹಿಡಿದಾಗ ತಮ್ಮ ಭಾವನೆಗಳು ನುಚ್ಚುನೂರಾದಂತೆ ಭಾವಿಸುತ್ತಾರೆ. ತನ್ನ ಜೊತೆ ನಿಷ್ಠೆಯಿಂದ ಇರದೇ ಬೇರೆ ಹುಡುಗಿಯರತ್ತ ಆಕರ್ಷಿತರಾಗಿದ್ದೇ ‘ಬ್ರೇಕಪ್‌’ಗೆ ಕಾರಣ ಎಂದು ದೂರುವುದು ಮಾಮೂಲು ಎನ್ನುತ್ತದೆ ಆ ಸಮೀಕ್ಷೆ.

‘ಎಕ್ಸ್ ಫೈಲ್‌’ ತೆರೆಯುವುದೇಕೆ?

ಸಂಬಂಧದಲ್ಲಿ ಅತ್ಯಂತ ನೋವು ಕೊಡುವ ವಿಷಯ ಯಾವುದು ಗೊತ್ತೇ? ಮಾಜಿ ಪ್ರೇಮಿ ಅಥವಾ ಮಾಜಿ ಪತಿ/ ಪತ್ನಿಯ ಬಗ್ಗೆ ನೆನಪು ಮಾಡಿಕೊಳ್ಳುತ್ತ ಕೂರುವುದು. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಕನಸಿನಲ್ಲಿ ಕೂಡ ಆತ ಬಂದು ಕಾಡಿದರೆ.. ಬೆಳಿಗ್ಗೆ ಎದ್ದು ಹಳಹಳಿಸುತ್ತ ಆ ಸುಂದರ ದಿನವನ್ನು ಹಾಳು ಮಾಡಿಕೊಳ್ಳುವುದು. ಇದು ಯುವತಿಯರಿಗೆ ಒಂದು ರೀತಿಯ ದುಃಸ್ವಪ್ನವಾಗಿ ಕಾಡುತ್ತದಂತೆ. ಅಷ್ಟಕ್ಕೂ ಆ ‘ಎಕ್ಸ್ ಫೈಲ್‌’ಗಳನ್ನು ತೆರೆದು ಕೂರುವ ಜರೂರು ಏನಿದೆ ಎಂದು ಕೇಳುತ್ತೀರಾ?

ಮಜಕೂರು ಇರುವುದು ಅಲ್ಲೇ. ಒಂದು ಸುಂದರವಾದ ಸಂಬಂಧಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ ಎಂದುಕೊಳ್ಳಿ. ಅದಕ್ಕೊಂದು ಸುಂದರವಾದ ವೇದಿಕೆ ತಯಾರಾಗಿ ಪರಸ್ಪರ ಗುಡ್‌ಬೈ ಹೇಳಲು ಹಿನ್ನೆಲೆ ಸಂಗೀತ, ರಂಗಿನ ಬೆಳಕಿನ ಓಲಾಟ, ಪ್ರೇಕ್ಷಕರು ಎಲ್ಲವೂ ತಯಾರಾಗಿರುತ್ತದೆ ಎಂದು ಕನಸು ಕಾಣಬೇಡಿ. ಅದೊಂದು ಕೆಟ್ಟ ಕ್ಷಣವಾಗಿ ಜೀವನಪೂರ್ತಿ ಕಾಡಬಹುದು. ಕಹಿ ನೆನಪುಗಳ ಸರಮಾಲೆಯೇ ನಿಮ್ಮ ಮುಂದಿರಬಹುದು. ಗಂಡ- ಹೆಂಡತಿ ನಡುವಿನ ವಿಚ್ಛೇದನ ಕೂಡ ಹಾಗೇ. ಬೇಡದ ಸಂಬಂಧವು ನೂರೆಂಟು ಬೇಡದ ಘಟನೆಗಳು, ಕೆಲವೊಮ್ಮೆ ಹಿಂಸೆ, ದೌರ್ಜನ್ಯದ ಕೂಪವೂ ಆಗಿರಬಹುದು. ಹೀಗಿರುವಾಗ ಆ ಅಧ್ಯಾಯವನ್ನು ಮತ್ತೆ ಮಗುಚುತ್ತ ಕೂರುವುದ್ಯಾಕೆ?

ಶುದ್ಧ ಸ್ನೇಹವೇ?

ಬಹುತೇಕ ಯುವತಿಯರಲ್ಲಿ ಪ್ರಿಯಕರನಿಂದಲೋ, ಗಂಡನಿಂದಲೋ ದೂರವಾದ ನಂತರವೂ ಮತ್ತೆ ಸ್ನೇಹ, ಅದೊಂದು ಶುದ್ಧವಾದ, ಪವಿತ್ರವಾದ ಗೆಳೆತನ ಇಟ್ಟುಕೊಳ್ಳುವ ಮನೋಭಾವ ಅವಿತು ಕೂತಿರುತ್ತದಂತೆ. ಆತನ ಮೇಲೆ ಕಾಳಜಿ ತೋರಿಸುವುದು, ಆತನನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅನುಸರಿಸುವುದು.. ಹೀಗೆ ಮೊದಮೊದಲು ಲಘುವಾಗಿ ತೆಗೆದುಕೊಂಡು ಆಮೇಲೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರಂತೆ.

‘ಮಾಜಿ ಪ್ರೇಮಿ ಅಥವಾ ಪತಿಯ ಜೊತೆ ಒಳ್ಳೆಯ ಸ್ನೇಹ ಇಟ್ಟುಕೊಳ್ಳುವುದು ಸಾಧ್ಯವೇ ಇಲ್ಲ ಎಂತಲ್ಲ. ಅದಕ್ಕೆ ಮನಸ್ಸು ಪಕ್ವವಾಗಿರಬೇಕು ಅಷ್ಟೆ. ಆದರೆ ಪರಸ್ಪರ ದೂರವಾದ ನಂತರ ಕನಿಷ್ಠ ಆರು ತಿಂಗಳ ಕಾಲ ಕಾಯಿರಿ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಎಸ್‌.ಪ್ರಮೀಳಾ. ಅಂದರೆ ಹಳೆಯ ಪ್ರೇಮವನ್ನು ಸ್ನೇಹವನ್ನಾಗಿ ನೋಡಬೇಕೆ ಎಂದು ನಿರ್ಧರಿಸಲು ಆತುರ ತೋರಬೇಡಿ ಎನ್ನುವುದು ಇದರರ್ಥ. ಇದು ಜೋಡಿಯಿಂದ ಜೋಡಿಗೆ, ದಂಪತಿಯಿಂದ ದಂಪತಿಗೆ, ಆ ಸಂಬಂಧಕ್ಕೆ ಹೇಗೆ ಕೊನೆ ಹಾಡಬೇಕಾಯಿತು ಎಂಬುದನ್ನೆಲ್ಲ ಅವಲಂಬಿಸಿದೆ.

ಮರೆಯಲು ಸಮಯ ಬೇಕು

ಪರಸ್ಪರ ದೂರವಾಗಲು ಮಾನಸಿಕವಾಗಿ, ದೈಹಿಕವಾಗಿ ಒಂದಿಷ್ಟು ಸಮಯ ಬೇಕು. ಜಂಟಿಯಾಗಿದ್ದವರು ಒಂಟಿಯಾಗಿ ಈ ಸಮಾಜದಲ್ಲಿ ವ್ಯವಹರಿಸಲು, ಮುರಿದು ಹೋದ ಸಂಬಂಧದ ಬಗ್ಗೆ ಹಳಹಳಿಸುತ್ತ ಆ ನೋವನ್ನು ಮರೆಯಲು, ಪರಸ್ಪರ ಒಪ್ಪಿಕೊಂಡು, ಸೌಹಾರ್ದಯುತವಾಗಿ ‘ಗುಡ್‌ಬೈ’ ಹೇಳಿದರೂ ಈ ಬೇರ್ಪಡುವ ಪ್ರಕ್ರಿಯೆ ಇದೆಯಲ್ಲ, ಅದರಿಂದ ಸುಧಾರಿಸಿಕೊಳ್ಳಲು ಸಮಯ ಬೇಕೇ ಬೇಕು.

ಪರಸ್ಪರ ಬೇರೆಯಾಗಿ ಒಂದು ವರ್ಷದವರೆಗೂ ಆ ಸಂಬಂಧವನ್ನು, ಅದರಲ್ಲಿರುವ ಕಹಿಯನ್ನು ಮರೆಯಲಿ ಸಾಧ್ಯವಾಗದೇ ನೋವಾಗುತ್ತಿದ್ದರೆ ಅಥವಾ ಸಿಟ್ಟು ಬರುತ್ತಿದ್ದರೆ, ಖಂಡಿತ ಮಾಜಿ ಪ್ರೇಮಿ ಅಥವಾ ದೂರವಾದ ಪತಿಯ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬೇಡಿ.

ನಿಮ್ಮ ಭಾವನೆಗಳನ್ನು, ಸಿಟ್ಟನ್ನು, ತಿರಸ್ಕಾರವನ್ನು, ಕೊನೆಗೆ ದುಃಖವನ್ನು ಹೊರಹಾಕಲು ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.

ಮನಸ್ಸಿಗೆ, ಹೃದಯಕ್ಕೆ ತೀವ್ರ ಹೊಡೆತ ಬಿದ್ದು, ಆಳವಾದ ಗಾಯವಾದರೆ ಅದರಷ್ಟಕ್ಕೇ ಅದು ಗುಣವಾಗದಿದ್ದರೆ ಮನೋಚಿಕಿತ್ಸಕರ ನೆರವು ಪಡೆಯಿರಿ. ಇದರ ಹೊರತಾಗಿ ನಿಮ್ಮಲ್ಲೇ ಎಲ್ಲವನ್ನೂ ಅದುಮಿಟ್ಟುಕೊಂಡರೆ ಆತ ಮತ್ತೆ ಮತ್ತೆ ನೆನಪಾಗುತ್ತಾನೆ. ಸ್ನೇಹದ ಹೆಸರಲ್ಲಿ ಇಲ್ಲದ ಭಾನಗಡಿ ಮಾಡಿಕೊಳ್ಳಬಹುದು.

ಬೇರೆ ಒಬ್ಬನ ಮನಸ್ಸಿನಲ್ಲಿ ಜಾಗ ಪಡೆದರಂತೂ ಮಾಜಿಯ ಜೊತೆಗಿನ ‘ಶುದ್ಧ ಸ್ನೇಹ’ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಇದರ ಬದಲಾಗಿ ಪರಿಹಾರವಾಗದ ಸಮಸ್ಯೆಗಳತ್ತ ಗಮನ ಕೊಡಿ. ವೈಯಕ್ತಿಕ ಸುಧಾರಣೆ ಹೇಗೆ ಎಂದು ಯೋಚಿಸಿ ಜಾರಿಗೆ ತನ್ನಿ. ಇತರ ಸ್ನೇಹಿತರ ಜೊತೆ ಮಾತನಾಡಿ. ಭಾವನೆಗಳನ್ನು ಹೊರಹಾಕಲು ಮಾರ್ಗ ಹುಡುಕಿ.

ಮಾಜಿಯ ಬಗ್ಗೆ ಮಾತನಾಡುವಾಗ ಕಣ್ಣು ಒದ್ದೆ ಮಾಡಿಕೊಂಡು ಭಾವನಾತ್ಮಕವಾಗಿ ಮಾತನಾಡಿದರೆ, ನೀವಿನ್ನೂ ಮಾಜಿ ಪ್ರೇಮಿಯನ್ನು ಮರೆತಿಲ್ಲ ಎಂದೇ ಅರ್ಥ. ಅದರ ಬದಲು ನೀವು ಬೇರೆಯವರ ಬಗ್ಗೆ ಮಾತನಾಡಿದಂತೆ ಸಾಮಾನ್ಯವಾಗಿ ಹೇಳಲು ಆರಂಭಿಸಿದರೆ, ಮಾಜಿ ಪ್ರೇಮಿಯ ಜೊತೆ ಖಂಡಿತ ಸ್ನೇಹವನ್ನು ಮುಂದುವರಿಸುವ ಬಗ್ಗೆ ಆಲೋಚನೆ ಕೈಬಿಡುತ್ತೀರಿ.

ನಿಮ್ಮ ಮಾಜಿ ಪ್ರೇಮಿ ಇನ್ನೊಬ್ಬಳು ಹುಡುಗಿಯ ಜೊತೆ ಸುತ್ತುತ್ತಿರಬಹುದು ಎಂಬ ಯೋಚನೆಯೇ ನಿಮ್ಮಲ್ಲಿ ಕಳವಳ ಮೂಡಿಸಿದರೆ, ಆತನ ಜೊತೆ ಖಂಡಿತ ಒಳ್ಳೆಯ ಸ್ನೇಹ ಇಟ್ಟುಕೊಳ್ಳುವ ಬಗ್ಗೆ ಯೋಚಿಸಬೇಡಿ. ಇದು ಇನ್ನಿಲ್ಲದ ಸೇಡು ತೀರಿಸಿಕೊಳ್ಳುವ ಯೋಚನೆಯನ್ನೂ ಹುಟ್ಟುಹಾಕಬಹುದು. ಬದುಕಿನಲ್ಲಿ ಬದಲಾವಣೆಗಳು ಸಾಮಾನ್ಯ. ಆತ ಬೇರೆ ಹುಡುಗಿಯ ಜೊತೆಗೆ ಓಡಾಟ, ಮದುವೆ ಎಂದೆಲ್ಲ ಮುಂದುವರಿದರೆ, ನೀವು ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ಆತನಿಗೆ ಶುಭ ಕೋರುವ ಮನಸ್ಸಿದೆಯೇ ಎಂದು ಯೋಚಿಸಿ.

ಒಂದು ಸಂಬಂಧ ಕೊನೆಗೊಂಡಾಗ, ಒಂಟಿತನದ ಭಾವನೆ ಬರುವುದು ಸಹಜ. ಅದರಲ್ಲೂ ಪ್ರೇಮಿಯ ಜೊತೆ ಸಹಜೀವನ ನಡೆಸಿದವರು, ಮದುವೆಯಾಗಿ ಪತಿಯೊಂದಿಗೆ, ಆತನ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದವರು ಒಂಟಿತನದಿಂದ ಬಳಲುತ್ತಾರೆ. ಆಗ ಯಾವುದಾದರೂ ಹವ್ಯಾಸ ಬೆಳೆಸಿಕೊಳ್ಳಿ. ಪ್ರೀತಿಪಾತ್ರರ ಜೊತೆ ಜೊತೆ ಕಾಲ ಕಳೆಯಿರಿ. ಯಾವುದಾದರೂ ಸಂಘ-ಸಂಸ್ಥೆ ಸೇರಿಕೊಳ್ಳಿ.

ಆತ ಎಲ್ಲಿದ್ದಾನೆ, ಯಾರ ಜೊತೆಗಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡುವುದು ಸರಿಯಲ್ಲ. ಹಾಗೆಯೇ ನಿಮ್ಮಿಬ್ಬರ ಸಾಮಾನ್ಯ ಸ್ನೇಹಿತರಲ್ಲಿ ಆತನ ಬಗ್ಗೆ ವಿಚಾರಿಸಲು ಹೋಗಬೇಡಿ.

ಮಾಜಿಯಲ್ಲಿ ಒಳ್ಳೆಯ ಸ್ನೇಹವನ್ನು ಹುಡುಕಾಡುತ್ತ, ಮುಂದೆ ಆ ಸ್ನೇಹ ಪ್ರೇಮಕ್ಕೆ ತಿರುಗಬಹುದು ಎಂದೆಲ್ಲ ಕನಸಿಗೆ ಜೋತು ಬಿದ್ದರೆ, ಇನ್ನೊಬ್ಬ ಸಂಗಾತಿಯನ್ನು ಪಡೆದು ಬದುಕನ್ನು ಖುಷಿಯಾಗಿ ಕಳೆಯುವ ಅವಕಾಶ ಕಳೆದುಕೊಳ್ಳುತ್ತೀರಿ.

ಸೈಬರ್ ಸೆಕ್ಯುರಿಟಿ ಕಂಪನಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಶೇ 69ರಷ್ಟು ಮಂದಿ ತಮ್ಮ ಮಾಜಿ ಪ್ರೇಮಿಯ ಇನ್‌ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗುತ್ತಾರಂತೆ. ಹಾಗೆಯೇ ಶೇ 27ರಷ್ಟು ಜನ ಫೇಸ್‌ಬುಕ್‌ನಲ್ಲಿ ಮಾಜಿ ಪ್ರೇಮಿಯನ್ನು ಹಿಂಬಾಲಿಸುತ್ತಾರಂತೆ. ಇದರಿಂದ ಹೆಚ್ಚು ಖಿನ್ನತೆಗೆ ಒಳಗಾಗುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಜೊತೆಗೆ ಇದು ಜೀವನದಲ್ಲಿ ಬೇರೆ ಸಾಧನೆಗೆ ಅಥವಾ ಬೇರೆ ಸಂಗಾತಿಯನ್ನು ಹುಡುಕಿಕೊಳ್ಳಲು ಅಡ್ಡಿಯಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT