ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಳವಿಕಾ ಅವಿನಾಶ್‌ ಬರಹ: ನಟಿಯರು ಅಷ್ಟೇ ಏಕೆ?

Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌ ಅನ್ನೂ ಮರೆತು ಮಾಧ್ಯಮಗಳು ಇಡೀ ದಿನ ನಶೆರಾಣಿಯರು, ಡ್ರಗ್ಗಿಣಿಯರು ಎಂದು ಒಟ್ಟು ಪ್ರಕರಣಕ್ಕೆ ಸ್ತ್ರೀಲಿಂಗವನ್ನು ಲೇಪಿಸಿದ್ದೇಕೆ? ಡ್ರಗ್ಸ್‌ ಸೇವಿಸುವ ಎಲ್ಲಾ ನಟರೂ ವಿಚಾರಣೆಗೆ ಒಳಪಟ್ಟರೇ? ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು, ಅವರ ಮಕ್ಕಳು, ಐ.ಟಿ- ಬಿ.ಟಿಯವರು, ಬೇರೆಲ್ಲಾ ವಲಯಗಳಲ್ಲಿರುವವರು ಯಾರೆಂದರೆ ಯಾರೂ ಡ್ರಗ್ಸ್‌ ಮುಟ್ಟಿಲ್ಲವೇ?

***

ನಾನು ಕಾಲೇಜು ಸೇರಿದ ದಿನಗಳಿಂದಲೂ 3-4 ಇಂಗ್ಲಿಷ್ ಪತ್ರಿಕೆಗಳು, ಅಂತೆಯೇ ಎಲ್ಲ ಪ್ರಮುಖ ಕನ್ನಡ ಪತ್ರಿಕೆಗಳ ಮೇಲೆ ನಿತ್ಯ ಕಣ್ಣು ಹಾಯಿಸುವುದು ನನಗೆ ವಾಡಿಕೆ. ಹಾಗಾಗಿ ಸಹಜವಾಗಿಯೇ, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವ ಎಲ್ಲ ವಿಚಾರಗಳ ಬಗ್ಗೆ ವರ್ಷಗಳಿಂದಲೂ ಚಿಂತನೆ ಮಾಡಿದ್ದುಂಟು. ಭಾಷೆ, ಸಾಹಿತ್ಯ, ಕಲೆ, ರಾಜಕೀಯ, ಸ್ತ್ರೀ ಪ್ರಧಾನ ವಿಷಯ, ಹಿಂದುತ್ವ, ರಾಷ್ಟ್ರೀಯವಾದ... ಹೀಗೆ ನನ್ನನ್ನು ಕಾಡುವ ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದೇನೆ, ಬರೆದಿದ್ದೇನೆ. ಆದರೆ, ಅನೇಕರು –ಅದರಲ್ಲೂ ಮಾಧ್ಯಮದ ಮಿತ್ರರು– ಹುಬ್ಬೇರಿಸುವಷ್ಟು ಈ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಮೌನವಾಗಿಯೇ ಉಳಿದಿದ್ದೇನೆ.

ಕೋವಿಡ್‌ನಿಂದ ಎದುರಾಗಿರುವ ಅಭದ್ರತೆಗಿಂತ ಹೆಚ್ಚು, ಚಿತ್ರೋದ್ಯಮವನ್ನು ಇಂದು ಬಾಧಿಸುತ್ತಿರುವ ವಿಷಯವೆಂದರೆ ಡ್ರಗ್ಸ್! ಏಕೆಂದರೆ, ಹೋದ ಕೆಲಸ ಮತ್ತೆ ಬರುತ್ತೆ. ಆದರೆ, ಹೋದ ಮರ್ಯಾದೆ ಮತ್ತೆ ಬಂದೀತೆ?!

ನಾನು ಮಾತನಾಡದಿರುವುದಕ್ಕೆ ಕಾರಣವಿಷ್ಟೆ: ನಾವಿರೋದೇ ಮೂರು ಮತ್ತೊಬ್ಬರು. ನಮ್ಮ ಗಾತ್ರ ಆರ್ಥಿಕವಾಗಿ ಹೆಚ್ಚಿರಬಹುದು. ಆದರೆ, ಮಾನವ ಸಂಪನ್ಮೂಲದ ಪ್ರಮಾಣ ನಮ್ಮಲ್ಲಿ ತೀರ ಕಡಿಮೆ. ಅದರಲ್ಲೂ ಅಪರಿಚಿತ ಕಲಾವಿದರು ಇನ್ನೂ ಕಡಿಮೆ. ಹಾಗಾಗಿ ಯಾರ ಮನೆಬಾಗಿಲಿಗೆ ಪೊಲೀಸರು ಬಂದರೂ ಅವರು ನಮ್ಮ ಕಲಾ ಕುಟುಂಬದ ಸದಸ್ಯರೇ ಆಗಿರುತ್ತಾರೆ. ಪ್ರಾರಂಭಿಕ ಹಂತದಲ್ಲಿ, ‘ಛೇ! ನಮ್ಮವರು, ಅದರಲ್ಲೂ ಕಲಾವಿದೆಯರು? Impossible’ ಎಂದುಕೊಂಡೆವು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ‘ನಮ್ಮವರು ಅಂತಹವರಲ್ಲ’ ಎಂಬ ಆಕ್ರೋಶಭರಿತ ವಾದವನ್ನೇ ಮುಂದಿಟ್ಟಿತು. ಆದರೆ, ಆ ಇಬ್ಬರು ಕಲಾವಿದೆಯರ ಬಂಧನದ ನಂತರ ‘ನಾನವನಲ್ಲ, ನಾನವನಲ್ಲ’ ಎನ್ನುವುದು ಪ್ರಾರಂಭವಾಯಿತು. ನಮ್ಮ ನಮ್ಮಲ್ಲೇ ‘ಇರಬಹುದೇನೋ, ನಮಗೇ ಗೊತ್ತಿರಲಿಲ್ಲ ನೋಡಿ’ ಎಂಬ ಗುಸುಗುಸು ಮಾತುಗಳು ಶುರುವಾದವು. ನಮ್ಮ ಸಣ್ಣ ಪ್ರಪಂಚದೊಳಗಡೆ, ಬೇರೆಯದೇ ‘ಒಂದು ಅಪರಿಚಿತ ಲೋಕವಿದೆ’ ಎಂಬ ನಿಜವೂ ಅನಾವರಣಗೊಂಡಿತು.

ಬಾಲಿವುಡ್‌ನ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಹೊರಬಂದ ಡ್ರಗ್ಸ್ ಕುರಿತ ಕೆಲವು ಸತ್ಯಗಳು ಮತ್ತು ಮುಂಬೈನಲ್ಲಿ ಬಂಧಿತರಾದ ಕೆಲವು ಪೆಡ್ಲರ್‌ಗಳು ಬಯಲು ಮಾಡಿದ ಸುಳಿವುಗಳೇ ಬೆಂಗಳೂರಿನ ಬಾಗಿಲು ತಟ್ಟಿದ್ದು. ಒಂದು ವಿಚಾರವನ್ನು ನಾನು ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲೇಬೇಕು. ಹಿಂದಿ ಸಿನಿಮಾ ರಂಗದಲ್ಲಿ ಬದುಕನ್ನರಸಿ ಹೋಗುವ ಯುವಕ–ಯುವತಿಯರಿಗೆ, ಅಲ್ಲಿಯ ಮತ್ತೆಲ್ಲವನ್ನೂ ಮೈಗೂಡಿಸಿಕೊಳ್ಳುವಂತೆ, ಡ್ರಗ್ಸ್ ಸಂಸ್ಕೃತಿಗೂ ಒಗ್ಗಿಕೊಳ್ಳುವ ಅನಿವಾರ್ಯ ಇದೆಯೆಂಬುದು ಬಯಲಾಗಿದೆ. ಆದರೆ, ದಕ್ಷಿಣ ಭಾರತದ ಯಾವುದೇ ಭಾಷೆಯ ಚಿತ್ರೋದ್ಯಮದಲ್ಲಿ ಅಂತಹ ಅನಿವಾರ್ಯ ಇಲ್ಲ! ನಾನು ನಾಲ್ಕೂ ಭಾಷೆಗಳಲ್ಲಿ ಕೆಲಸ ಮಾಡಿರುವ ಅನುಭವದ ಮೇರೆಗೆ ಹೇಳುತ್ತಿದ್ದೇನೆ. ನಮ್ಮಲ್ಲಿ ಇದು ಕಡ್ಡಾಯವಲ್ಲ ಮತ್ತು ಯಾರೂ ಇಂತಹದ್ದಕ್ಕೆ ಒತ್ತಾಯವನ್ನೂ ಮಾಡುವುದಿಲ್ಲ. ಅಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಮನೆಗಳಲ್ಲಿ, ನೀರಿಗೆ ಕೂಡ ಬೆರೆಸಿ ಕೊಡುತ್ತಾರೆ ಎಂಬ ಮಹತ್ವದ ಆರೋಪವನ್ನು ಕಂಗನಾ ರನೌತ್ ಸಾರ್ವಜನಿಕವಾಗಿಯೇ ಮಾಡುತ್ತಾರೆ.

ನನ್ನ ಸಮಕಾಲೀನ ನಟಿಯರು ಮತ್ತು ನನಗಿಂತ ಹಿರಿಯರು ಅನೇಕರು, ಎಲ್ಲರೂ ಕಳೆದ ಕೆಲವು ದಿನಗಳಲ್ಲಿ ಈ ಕುರಿತು ಚರ್ಚಿಸಿದ್ದೇವೆ. ನನ್ನ ಸಮೇತವಾಗಿ ನಮ್ಮಲ್ಲಿ ಅನೇಕರು ಗಾಂಜಾವನ್ನು ಕಣ್ಣಾರೆ ನೋಡಿದ್ದು ಕೂಡ ಇಲ್ಲ. ‘ಕೋಕೇನ್‌’ ಅನ್ನು, ಪಾಬ್ಲೊ ಎಸ್ಕೋಬಾರ್‌ನ ಚಿತ್ರಗಳಲ್ಲಷ್ಟೇ ನೋಡಿರುವುದು. ಹಾಗಂತ ನಾವು ಪಾರ್ಟಿಗಳಿಗೇ ಹೋಗಿಲ್ಲವೇ? ಖಂಡಿತಾ ಹೋಗಿದ್ದೇವೆ. ಆದರೆ, ಯಾವ ಆಫ್ಟರ್ ಪಾರ್ಟಿಗಳಲ್ಲಿ ಡ್ರಗ್ಸ್‌ನ ಘಾಟು ಕಲಾವಿದರ ಮೂಗನ್ನೂ ನೇವರಿಸುತ್ತದೆಯೋ, ಅಂಥವಕ್ಕೆ ನಮಗೆ ಆಹ್ವಾನವೇ ಬಂದಿಲ್ಲ. ಪ್ರಾಯಶಃ 30-35ರ ವಯಸ್ಸಿನ ಕೆಳಗಿರುವ ಹೊಸ ಪೀಳಿಗೆಯ ಕಲಾವಿದರು ಇಂಥದರಲ್ಲಿ ಹೆಚ್ಚು ಸಿಲುಕಿರುವುದು. ಇಷ್ಟೆಲ್ಲಾ ಬಂಧನಗಳು, ಕಿರುತೆರೆಯ ಕಲಾವಿದರ ಸಮೇತವಾಗಿ ಅನೇಕರ ಸುದೀರ್ಘ ವಿಚಾರಣೆಗಳಾದ ಮೇಲೆ, ಸ್ಯಾಂಡಲ್‌ವುಡ್‌ನ ಕಲಾವಿದರು ಇಂಥದ್ದನ್ನೆಲ್ಲ ಮಾಡಲ್ಲ ಅನ್ನುವ ಭ್ರಮೆ ನಮ್ಮಲ್ಲಿ ಇನ್ನು ಉಳಿದಿಲ್ಲ. ನಿರಾಕರಿಸುವ ಮಾತೇ ಇಲ್ಲ. ಆದರೆ, ನಾನು ಪುನರುಚ್ಚರಿಸುತ್ತೇನೆ. ನಮ್ಮಲ್ಲಿ ಡ್ರಗ್ಸ್ ಸೇವಿಸುವ ಅನಿವಾರ್ಯ ಯಾರಿಗೂ ಇಲ್ಲ. ಅಂತಹ ಯಾವುದನ್ನೂ ಮಾಡದೆ ನನ್ನ ಪೀಳಿಗೆಯವರು ಮತ್ತು ನಮಗಿಂತ ಹಿರಿಯರು ಹೆಸರು, ಗೌರವ, ಸ್ಟಾರ್ ಡಂ ಎಲ್ಲವನ್ನೂ ಗಳಿಸಿಲ್ಲವೇ?

ಡ್ರಗ್ಸ್‌ನ ಇಂತಹ ಸಂಪರ್ಕಕ್ಕೆ ಬಂದವರು ತಮ್ಮ ಖುಷಿಗಾಗಿ ಮಾಡುತ್ತಾರೇನೋ ಅಥವಾ ಸ್ಟೈಲಿಗಾಗಿರಬಹುದೇನೋ. ಚಿತ್ರರಂಗದಲ್ಲಿ ಯಶಸ್ಸು ಕಾಣದ ಕಾರಣ, ದೊಡ್ಡ ಕಾರು, ಬಂಗಲೆ, ಫೋನು ಇತ್ಯಾದಿ ಐಷಾರಾಮಿ ವಸ್ತುಗಳನ್ನು ಖರೀದಿಸಲು ಬೇಕಾದ ಹೆಚ್ಚಿನ ಆದಾಯಕ್ಕೂ ಇರಬಹುದೇನೋ. ಆದರೆ, ಯಾಕೆ ನಟಿಯರು ಮಾತ್ರ? ನಟರಿಲ್ಲವೇ ಎಂಬ ಸಹಜ ಪ್ರಶ್ನೆ ಮೂಡುತ್ತದೆ.

ಬಾಲಿವುಡ್‌ನಲ್ಲಿ ನಡೆಯುತ್ತಿರುವುದರ ಬಗ್ಗೆ ನನಗಷ್ಟು ಸ್ಪಷ್ಟತೆಯಿಲ್ಲ, ಮಾಹಿತಿಯೂ ಇಲ್ಲ. ಆದರೆ, ನಮ್ಮಲ್ಲಿ ನಟರದ್ದೂ ವಿಚಾರಣೆ ಆಗಿದೆ, ಬಂಧನ ಮಾತ್ರ ನಟಿಯರದ್ದೇ ಆಗಿರುವುದು.

ನಾನು ಕಾನೂನು ವ್ಯಾಸಂಗವನ್ನೂ ಮಾಡಿರುವುದರಿಂದ ನನ್ನ ಗ್ರಹಿಕೆಗೆ ಸಿಕ್ಕ ಒಂದಷ್ಟು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ತನಿಖಾಧಿಕಾರಿಗಳಿಗೆ ಡ್ರಗ್ಸ್ ವಹಿವಾಟು ಸ್ಥಗಿತಗೊಳಿಸುವುದು ಎಲ್ಲಕ್ಕಿಂತ ಮುಖ್ಯವಾದ ಆದ್ಯತೆ. ಅದಕ್ಕಾಗಿ ಅವರು ಮೊದಲು ಜಾಡು ಹಿಡಿದು ಹೋಗುವುದು ದಂಧೆಕೋರರನ್ನು. ಯಾರನ್ನು ನಾವು ಪೆಡ್ಲರ‍್ಸ್‌ ಎನ್ನುತ್ತೇವೆಯೋ ಅವರನ್ನು. ಅವರಿಗೆ ಹೂಡಿಕೆ ಮಾಡುವ ಮಾಫಿಯಾವನ್ನು. ಡ್ರಗ್ಸ್, ಹವಾಲಾ, ಕಪ್ಪುಹಣ, ಕ್ಯಾಸಿನೊ, ಕಳ್ಳಸಾಗಾಣಿಕೆ, ವೇಶ್ಯಾವಾಟಿಕೆ, ಕ್ರಿಕೆಟ್, ಬೆಟ್ಟಿಂಗ್ ಮತ್ತು ಇದೆಲ್ಲವುದರ ದೊಡ್ಡಪ್ಪ ಭಯೋತ್ಪಾದನೆಯ ಪ್ರಾಯೋಜನೆ –ಎಲ್ಲವೂ ಒಂದಕ್ಕೊಂದು ಅಂತರ್‌ಸಂಪರ್ಕ ಹೊಂದಿವೆ. ಹಾಗಾಗಿಯೇ ಸ್ಯಾಂಡಲ್‌ವುಡ್ ಪ್ರಕರಣದಲ್ಲಿ ಸಿಸಿಬಿ ಜತೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಮತ್ತು ಜಾರಿ ನಿರ್ದೇಶನಾಲಯವೂ ತನಿಖೆಯಲ್ಲಿ ಭಾಗಿಯಾಗಿರುವುದು.

ಡ್ರಗ್ಸ್ ಸೇವನೆಯಿಂದ, ಸೇವಿಸುವವರ ಆರೋಗ್ಯವಷ್ಟೇ ಹಾಳಾಗುವುದು, ಅವರ ಮನೆಯಷ್ಟೇ ಮುರಿದು ಬೀಳುವುದು.ಆದರೆ, ಡ್ರಗ್ಸ್ ದಂಧೆಯಿಂದ ಇಡೀ ಯುವಪೀಳಿಗೆ ಹಾಳಾಗುತ್ತದೆ. ದೇಶದ ಭವಿಷ್ಯವೇ ತತ್ತರಿಸಿ ಹೋಗುತ್ತದೆ. ಸ್ವತಃ ಸೇವಿಸುವುದಕ್ಕಾಗಿ ನಿರ್ಬಂಧಿತ ವಸ್ತುಗಳನ್ನು ವಶದಲ್ಲಿ ಇಟ್ಟುಕೊಂಡವರಿಗಿಂತ ದೊಡ್ಡ ಪ್ರಮಾಣದಲ್ಲಿ ಅರ್ಥಾತ್ ದಂಧೆಗಾಗಿ, ತಯಾರಿಕೆ, ಶೇಖರಣೆ, ಸಾಗಾಣಿಕೆ, ಮಾರಾಟ ಮತ್ತು ಸಂಗ್ರಹ ಮಾಡುವವರಿಗೆ, ‘ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ–1985’ ಅಡಿಯಲ್ಲಿ ದಂಡದ ಜತೆಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

‘ನಾವು ಸೇವಿಸಿದ್ದುಂಟು’ ಎಂದು ಬಂಧಿತ ನಟಿಯರು ಒಪ್ಪಿರುವುದಾಗಿ ವರದಿಯಾಗಿದೆ. ಹಾಗಿದ್ದರೆ ಸೇವಿಸುವ ಎಲ್ಲರೂ ಜೈಲು ಸೇರಿಲ್ಲ ಏಕೆ? ಆ ಇಬ್ಬರು ನಟಿಯರು ಮಾತ್ರ ಯಾಕೆ?

ಅವರಿಬ್ಬರೂ ಸೇವನೆ ಮಾಡುವುದರಿಂದ ಆಚೆಗೆ,

1. ದಂಧೆಕೋರರ ಸ್ನೇಹ ಮಾಡಿದ್ದಾರೆಯೇ?

2. ದಂಧೆಕೋರರ ಪಾರ್ಟಿಗಳಿಗೆ ತಮ್ಮ ಇತರ ಸಿನಿಮಾ ಸ್ನೇಹಿತರನ್ನು ಕರೆದೊಯ್ಯುತ್ತಿದ್ದರೆ?

3. ಆ ಮೂಲಕ ಈ ಡ್ರಗ್ಸ್/ಡ್ರಗ್ಸ್ ಪಾರ್ಟಿಗಳಿಗೆ ಒಂದು ರೀತಿಯ ರಾಯಭಾರಿಗಳಂತೆ ಸಂಪರ್ಕ ಸೇತುಗಳಾಗಿ ಕೆಲಸ ಮಾಡುತ್ತಿದ್ದರೆ?

4. ಯುವಜನರು ಡ್ರಗ್ಸ್‌ನಲ್ಲಿ ತೊಡಗುವುದಕ್ಕೆ ಪರೋಕ್ಷ ಪ್ರಚೋದನೆಯನ್ನು ನೀಡುತ್ತಿದ್ದರೆ?

ಈ ಪ್ರಶ್ನೆಗಳು ಕಾಡುತ್ತಿವೆ. ಜತೆಗೆ ಒಬ್ಬಾಕೆಯ ಬಗ್ಗೆ ಹೊರದೇಶದ ಕ್ಯಾಸಿನೊಗಳಿಗೆ ಜನರನ್ನು ಸೆಳೆಯುವ ಕೆಲಸವನ್ನು ಮಾಡಿರುವುದಾಗಿ ಕೂಡ ಆರೋಪ ಕೇಳಿಬಂದಿದೆ!

‘Bail is the rule, Jail is an exception’ ಅನ್ನೋದು ನಮ್ಮ ನ್ಯಾಯ ವ್ಯವಸ್ಥೆಯ ಬಲವಾದ ನಂಬಿಕೆ. ಹಾಗಿರು ವಾಗ, ನಮ್ಮ ಗಮನಕ್ಕೆ ಬಂದಿರುವುದಕ್ಕಿಂತ ಹೆಚ್ಚಿನ ಸತ್ಯ ಪೊಲೀಸರ ಬಳಿ ಇದ್ದರೆ ಮಾತ್ರ ಅವರ ಬೇಲ್ ಪದೇ ಪದೇ ನಿರಾಕರಣೆ ಯಾಗುವುದು. ನಟಿಯರಿಗೆ ಮಾತ್ರ ಏಕೆ ಸೆರೆವಾಸ ಎಂಬ ಪ್ರಶ್ನೆಗೆ, ಈ ಮೇಲ್ಕಂಡವು ನಾನು ಕಂಡುಕೊಂಡ ಸಮಾಧಾನ.

ಆದರೆ, ನಿಮ್ಮಂತೆಯೇ ಈ ಪ್ರಕರಣದಲ್ಲಿ, ನನ್ನನ್ನು ಕಾಡುವ ಬೇರೆಯ ಹಲವು ಪ್ರಶ್ನೆಗಳಿವೆ. ಈ ತನಿಖೆ ತಾರ್ಕಿಕ ಅಂತ್ಯವನ್ನು ತಲುಪುತ್ತದೆಯೇ? ಎಫ್‌ಐಆರ್‌ನಲ್ಲಿ ಆರೋಪಿ ಎಂದು ನೇಮಿಸಿರುವ, ದಿವಂಗತ ರಾಜಕಾರಣಿಯ ಪುತ್ರನ ಸುಳಿವು ಪೊಲೀಸರಿಗೆ ಯಾಕೆ ಸಿಕ್ಕಿಲ್ಲ? ಹಾಗಿದ್ದರೆ ತಮ್ಮನ್ನು ಕಾನೂನಿಗೆ ಒಪ್ಪಿಸಿಕೊಂಡವರು ಮೂರ್ಖರೇ, ತಲೆಮರೆಸಿಕೊಂಡವರೇ ಬುದ್ಧಿವಂತರೇ? ಈ ಪ್ರಕರಣದಲ್ಲಿ ಆರೋಪಿಯೊಬ್ಬ ಶ್ರೀಲಂಕಾದಲ್ಲಿ ಕ್ಯಾಸಿನೊ ನಡೆಸುವಾತ; ಪ್ರಭಾವಿ ಮಾಜಿ ಮಂತ್ರಿಯ ಒಡನಾಡಿ, ಅವನೆಲ್ಲಿ? ಡ್ರಗ್ಸ್‌ ಸೇವಿಸುವ ಎಲ್ಲಾ ನಟರೂ ವಿಚಾರಣೆಗೆ ಒಳಪಟ್ಟರೇ? ರಾಜಕಾರಣಿಗಳ ಮಕ್ಕಳು, ಉದ್ಯಮಿಗಳು, ಅವರ ಮಕ್ಕಳು, ಐ.ಟಿ ಬಿ.ಟಿಯವರು, ಬೇರೆಲ್ಲಾ ವಲಯಗಳಲ್ಲಿರುವವರು, ವಿಚಾರಣೆಗೆ ಒಳಪಟ್ಟರೇ? ಹೆಸರು ಹೊರಗೆ ಬಂದರೂ ಕೋರ್ಟಿನಿಂದ ತಡೆಯಾಜ್ಞೆ ಪಡೆದು ಕೆಲವರು ತಮ್ಮ ಹೆಸರು ಚರ್ಚೆಯಾಗದಂತೆ ತಪ್ಪಿಸಿಕೊಂಡರೇ? ವಿಷಲ್‌ ಬ್ಲೋವರ್‌ಗಳು, ಸಮಾಜವನ್ನು ಸ್ವಚ್ಛ ಮಾಡುತ್ತೇವೆಂದು ಬಾವುಟ ಹಿಡಿದವರು, ಮೊದಲೊಂದಷ್ಟು ದಿನ ದೂಳೆಬ್ಬಿಸಿ ನಂತರ ಕಾಣೆಯಾಗಿದ್ದೇಕೆ? 24X7 ಟಿವಿ ವಾಹಿನಿಗಳು, ಕೋವಿಡ್ಡನ್ನೂ ಮರೆತು ಇಡೀ ದಿನ ನಶೆರಾಣಿಯರು, ಡ್ರಗ್ಗಿಣಿಯರು ಎಂದು ಒಟ್ಟು ಪ್ರಕರಣಕ್ಕೆ ಸ್ತ್ರೀಲಿಂಗವನ್ನು ಲೇಪಿಸಿದವರು, ಸದ್ದು ಮಾಡುವುದನ್ನು ಕಡಿಮೆ ಮಾಡಿಬಿಟ್ಟರೇ?

ಇಂದಿಗೂ ನಿತ್ಯ ಕ್ಯಾಮೆರಾಗೆ ಪೂಜೆ ಮಾಡಿ, ಕಾಯಿ ಒಡೆದು ಕೆಲಸ ಪ್ರಾರಂಭ ಮಾಡುವ ಏಕೈಕ ವೃತ್ತಿ ನಮ್ಮದು, ಸಿನಿಮಾರಂಗದ್ದು. ಲಕ್ಷಾಂತರ ಜನರ ಪೈಕಿ, ಸರಸ್ವತಿ ನಮ್ಮ ಕೆಲವರಿಗೆ ಮಾತ್ರ ಒಲಿದು ಬಂದಿದ್ದಾಳೆ ಎಂದು ನಂಬುವವರು ನಾವು. ನಮಗೆ, ಕಾಲ್ಪನಿಕವಾದರೂ ತಪ್ಪು ಸಂದೇಶವನ್ನು ರವಾನಿಸುವ, ಸಮಾಜಘಾತುಕ ಪಾತ್ರಗಳನ್ನು ನಿರ್ವಹಿಸುವುದಿಲ್ಲ ಎಂದು ಪಣತೊಟ್ಟ ಡಾ.ರಾಜ್ ಕುಮಾರ್, ಕೃಷ್ಣನ ಪಾತ್ರ ನಿರ್ವಹಿಸುವಾಗ ಮಾಂಸಾಹಾರವನ್ನು ಮಾತ್ರವಲ್ಲ, ಏನನ್ನೂ ಸೇವಿಸದೆ ತಪಸ್ಸಿನಂತೆ ಕೆಲಸ ಮಾಡಿದ ಎನ್.ಟಿ.ರಾಮರಾವ್ ಅವರಂಥವರು ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಚಿತ್ರರಂಗಕ್ಕೆ ಲಗ್ಗೆ ಇಟ್ಟಿರುವ ಈ ವಿಷವನ್ನು ತೊಡೆದು ಹಾಕುವ ಕೆಲಸವನ್ನು ಭಾವುಕರಾಗಿ ಅಡ್ಡಿಪಡಿಸುವ ಅಗತ್ಯವಿಲ್ಲ! ಒಂದಿಬ್ಬರು ತಪ್ಪು ಮಾಡಿ ಸಿಲುಕುವುದರಿಂದ, ನೂರು ವರ್ಷಗಳ ಇತಿಹಾಸವಿರುವ ಚಿತ್ರರಂಗಕ್ಕೇ ಮಸಿ ಬಳಿದಂತೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.

ಡ್ರಗ್ಸ್ ಎನ್ನುವಂಥದ್ದು ಸಮಾಜಕ್ಕೇ ಮಾರಕ, ಲಕ್ಷಾಂತರ ಯುವಜನರನ್ನು ನಾಶಮಾಡುವ ವಿಷ. ಆರೋಪ ಸಾಬೀತಾದರೆ, ಅವರು ಯಾರೇ ಆಗಿರಲಿ, ಕಠಿಣ ಶಿಕ್ಷೆಯಾಗಲೇಬೇಕು! ಇಷ್ಟು ಪಟ್ಟು ಹಿಡಿದು ದಂಧೆಕೋರರನ್ನರಸಿ, ಪೊಲೀಸರು ಬೆನ್ನು ಬಿದ್ದಿದ್ದನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಂಡಿರಲಿಲ್ಲ. ಆದರೆ, ಸಮಾಜವನ್ನು ಡ್ರಗ್ಸ್ ಮುಕ್ತಗೊಳಿಸುವುದು ಕೇವಲ ಆರಂಭ ಶೂರತ್ವಕ್ಕೆ ನಿಲ್ಲಬಾರದು, ಅದೊಂದು ತಾರ್ಕಿಕ ಅಂತ್ಯವನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT