ಮಂಗಳವಾರ, ಅಕ್ಟೋಬರ್ 27, 2020
22 °C

PV Web Exclusive | ಭವಿಷ್ಯದ ಹೆಣ್ಣುಮಕ್ಕಳ ಸಮಾನತೆಗಾಗಿ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ನಿನ್ನೆಯಷ್ಟೇ ಜಗತ್ತಿನಾದ್ಯಂತ ‘ಅಂತರರಾಷ್ಟ್ರೀಯ ಹೆಣ್ಣುಮಗು ದಿನ’ ಆಚರಿಸಲಾಗಿದೆ. ಕೋವಿಡ್‌ನಿಂದಾಗಿ ಜಗತ್ತು ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ಕುಟುಂಬದ ಆರೋಗ್ಯದ ಕಾಳಜಿಯನ್ನು ಹಿಂದಿಗಿಂತ ಹೆಚ್ಚಾಗಿಯೇ ಹೆಣ್ಣುಮಕ್ಕಳು ವಹಿಸುತ್ತಿದ್ದಾರೆ. ಮನೆಗೆಲಸ–ಕಚೇರಿ ಕೆಲಸ ನಡುವೆಯೇ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಹೆಣ್ಣು ಮಕ್ಕಳ ಈ ಗುಣ ಜಗತ್ತಿನೆಲ್ಲೆಡೆ ಸಾರ್ವತ್ರಿಕವಾದುದು.

ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಬದಲಾಗುತ್ತಿರುವ ಜಗತ್ತಿನ ಚಿತ್ರಣದಲ್ಲಿ ಹೆಣ್ಣುಮಕ್ಕಳ ದನಿಯೂ ಅಡಗಿದೆ. ಅದಕ್ಕಾಗಿಯೇ ಈ ಬಾರಿ ವಿಶ್ವಸಂಸ್ಥೆ ‘ಅಂತರರಾಷ್ಟ್ರೀಯ ಹೆಣ್ಣುಮಗು ದಿನ’ಕ್ಕೆ ನೀಡಿರುವ ಸಂದೇಶವೂ ಅರ್ಥಪೂರ್ಣವಾಗಿದೆ. ‘ಭವಿಷ್ಯದ ಹೆಣ್ಣುಮಕ್ಕಳ ಸಮಾನತೆಗಾಗಿ–ನನ್ನ ದನಿ’ ಎನ್ನುವ ಸಂದೇಶ ನೀಡಿರುವ ವಿಶ್ವಸಂಸ್ಥೆ, ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ನಡುವೆಯೂ ಸಾಧನೆ ಮಾಡಿರುವ  ಐವರು ಯುವತಿಯರ ಚಿತ್ರಣವನ್ನೂ ನೀಡಿದೆ.

ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಮಾನತೆಯ ಆಶಯಕ್ಕಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಮಲಾಲ ಯೂಸುಫ್‌ ಝೈ ಅವರಿಂದ ಹಿಡಿದು ಹವಾಮಾನ ವೈಪರೀತ್ಯ ಕುರಿತು ಜಾಗತಿಕವಾಗಿ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿರುವ ಸ್ವೀಡನ್‌ನ ಪುಟ್ಟ ಪೋರಿ ಗ್ರೇತಾ ಥುನ್‌ಬರ್ಗ್ ತನಕ ಹಲವು ಉದಾಹರಣೆಗಳು ಕಣ್ಣೆದುರಿಗಿವೆ.

ದುರಿತ ಕಾಲದಲ್ಲಿ ಸಿಕ್ಕ ಅವಕಾಶ ನಡುವೆಯೇ ತಮ್ಮತನವನ್ನು ಸಾಬೀತುಪಡಿಸಿದ ವಿಶ್ವದ ನಾನಾ ಭಾಗಗಳ ಐವರು ಯುವತಿಯರ ಸಾಧನೆಯ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಈ ಯುವತಿಯರು ಪುರುಷ ಮತ್ತು ಮಹಿಳೆ ಪರಸ್ಪರ ಗೌರವಿಸುವ ಸಮಾನತೆಯ ಕನಸನ್ನು ಹೊತ್ತಿದ್ದಾರೆ.

ಔಮಾ ಕಲ್ಸೌಮ್ ಡಯೋಪ್

ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದ ಡಾಕರ್ ನಗರದ 18ರ ಯುವತಿ ಔಮೌ ಕಲ್ಸೌಮ್ ಡಯೋಪ್, ಕೋವಿಡ್ ನಡುವೆಯೇ ಯುವಜನರಲ್ಲಿ ಅರಿವು ಮೂಡಿಸುವಲ್ಲಿ ನಿರತರಾಗಿದ್ದಾರೆ. ‘ಬಾಲ್ಯದಿಂದಲೂ ನಾನು ಸಿನಿಮಾಗಳನ್ನು ನೋಡುತ್ತಿದ್ದೆ. ಆದರೆ, ಕ್ಯಾಮೆರಾದ ಹಿಂದೆ ಯಾರು ಇರುತ್ತಿದ್ದರು ಎಂಬುದು ತಿಳಿಯುತ್ತಿರಲಿಲ್ಲ’ ಎನ್ನುವ ಡಯೋಪ್, ಇದೀಗ ತಮ್ಮ ಸಮುದಾಯದ ಮಹಿಳೆಯರ ಕಥನಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾರೆ.

ಡಾಕರ್‌ ನಗರದಲ್ಲಿ ಕೋವಿಡ್ ಸಮಯದಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಎಷ್ಟೋ ಮಹಿಳೆಯರು ತಮ್ಮನ್ನು ಅಪಾಯಕ್ಕೊಡುವ ವ್ಯಕ್ತಿಯ ಜತೆಗೇ ಮನೆಯಲ್ಲಿರಬೇಕಾದ ಅಪಾಯಕಾರಿ ಸಂದರ್ಭವೂ ಇದೆ.‌

ತನ್ನ ಸಮುದಾಯದ ಯುವಜನರಿಗೆ ಶೋಷಣೆಗಳ ಕುರಿತು ಅರಿವು ಮೂಡಿಸುವಲ್ಲಿ ಸಕ್ರಿಯವಾಗಿರುವ ಡೋಪರ್, ಅನೇಕ ತರಬೇತಿ, ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಯುವಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಹೆಣ್ಣುಮಕ್ಕಳಿಗೆ ಕೌನ್ಸೆಲಿಂಗ್ ಕೂಡಾ ಮಾಡುತ್ತಿದ್ದಾರೆ.

ಯುವತಿಯರನ್ನಷ್ಟೇ ಅಲ್ಲ ಸಮುದಾಯದ ಯುವಕರನ್ನೂ ಸಂವಾದದಲ್ಲಿ ತೊಡಗಿಸಿಕೊಂಡಿರುವ ಡೋಪರ್, ಪುರುಷರು ಎಸೆಯುವ ಥರಾವಳಿ ಪ್ರಶ್ನಾವಳಿಗೆ ಶಾಂತಚಿತ್ತದಿಂದಲೇ ಉತ್ತರಿಸುತ್ತಾರೆ. ‘ಮಹಿಳೆಯ ಉಡುಪೇ ತಮ್ಮನ್ನು ಲೈಂಗಿಕತೆಗೆ ಪ್ರಚೋದಿಸುತ್ತದೆ. ಹಾಗಾಗಿ, ನಮ್ಮ ಸಮುದಾಯದ ಹೆಣ್ಣುಮಕ್ಕಳು ಪ್ರಚೋದನಾತ್ಮಕ ಉಡುಪು ಧರಿಸಬಾರದು’ ಎಂದು ಪ್ರಶ್ನಿಸಿದ್ದ ಯುವಕನಿಗೆ ‘ಅವಳು ಏನೇ ಧರಿಸಿರಲಿ, ಅವಳ ಮೇಲೆ ಅತ್ಯಾಚಾರ ಮಾಡುವ ಹಕ್ಕು ನಿನಗಿಲ್ಲ’ ಎಂದು ಖಡಕ್ ಆಗಿಯೇ ಡಯೋಪ್ ಉತ್ತರಿಸಿದ್ದಾರೆ.


ಬೆಲೆನ್ ಪೆರುಗಾಚಿ

ಬೆಲೆನ್ ಪೆರುಗಾಚಿ

ಈಕ್ವೆಡಾರ್‌ನ ಪ್ಯಾಕ್ವೆಸ್ಟಾನ್ಸಿಯಾ ಎನ್ನುವ ಸಣ್ಣ ಊರಿನ ಬೆಲೆನ್ ಪೆರುಗಾಚಿ 16ರ ಹರೆಯದಲ್ಲೇ ಸ್ಥಳೀಯ ಆರ್ಥಿಕತೆ ಮತ್ತು ಸಂಪ್ರದಾಯ ಉಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಹಸುಗಳ ಹಾಲು ಮಾರಿ ಅದರಿಂದ ಬರುತ್ತಿದ್ದ ಆದಾಯದಲ್ಲಿ ಬೆಲೆನ್ ಕುಟುಂಬ ಬದುಕು ಕಟ್ಟಿಕೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಹಾಲಿನ ಮಾರುಕಟ್ಟೆ ಕುಸಿತವಾಗಿ ಸ್ಥಳೀಯ ಆರ್ಥಿಕತೆಗೆ ಪೆಟ್ಟು ಬಿದ್ದಿತು. ಈಕ್ವೆಡಾರ್‌ನ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಹೈನುಗಾರಿಕೆ ಅನೇಕ ಕುಟುಂಬಗಳಿಗೆ ಆದಾಯದ ಮುಖ್ಯಮೂಲವಾಗಿತ್ತು. ಆ ಮೂಲಕ್ಕೆ ಧಕ್ಕೆ ಒದಗಿದಾಗ ಬೆಲೆನ್, ಸ್ಥಳೀಯವಾಗಿ ಮಾರುಕಟ್ಟೆ ಆರಂಭಿಸಿ, ಗ್ರಾಮೀಣ ಕುಟುಂಬಗಳಿಗೆ ಬೆಂಬಲಿಸಲು ನಿರ್ಧರಿಸಿದರು.

ಸ್ಥಳೀಯ ಕಾಯಂಬಿ ಸಮುದಾಯದ ಸಂಸ್ಕೃತಿಯ ಉಳಿವಿಗೂ ಶ್ರಮಿಸುತ್ತಿರುವ ಬೆಲೆನ್, ‘ಗ್ರಾಮೀಣ ಪ್ರದೇಶದ ಜನರು ನಗರಗಳಲ್ಲಿನ ಜನರಂತೆಯೇ ಅವಕಾಶಗಳನ್ನು ಹೊಂದಬೇಕೆಂದು’ ಆಶಿಸುತ್ತಾರೆ. ‘ನಾನು ವಿಭಿನ್ನ ಸಂಸ್ಕೃತಿಗಳನ್ನು ಗೌರವಿಸುವ, ಪುರುಷರು ಮತ್ತು ಮಹಿಳೆಯರನ್ನು ಗೌರವಿಸುವ ಜಗತ್ತನ್ನು ಕಲ್ಪಿಸಿಕೊಳ್ಳುತ್ತೇನೆ ... ನಾನು ಸಮಾನತೆಯ ಕನಸು ಕಾಣುತ್ತೇನೆ’ ಎನ್ನುತ್ತಾರೆ ಬೆಲೆನ್ ಪೆರುಗಾಚಿ.


ಸೊಮಯಾ ಫಾರುಕಿ

ಸೊಮಯಾ ಫಾರುಕಿ

ಅಫ್ಘಾನಿಸ್ತಾನದ ಹೆರಾತ್ ನಗರದ 17 ವರ್ಷದ ಸೊಮಯಾ ಫಾರುಕಿ ರೊಬೊಟಿಕ್ಸ್ ಚಾಂಪಿಯನ್ ಎಂದೇ ಪ್ರಸಿದ್ಧಿ.

ಹೆರಾತ್‌ನಲ್ಲಿ ಕೋವಿಡ್–19ನ ಮೊದಲ ಪ್ರಕರಣ ವರದಿಯಾದಾಗಲೇ, ಸೊಮಯಾ ಮತ್ತು ಆಕೆಯ ಗೆಳತಿಯರ ತಂಡ ಕಡಿಮೆ ವೆಚ್ಚದಲ್ಲಿ ವೆಂಟಿಲೇಟಿರ್ ತಯಾರಿಸುವ ಕಾರ್ಯದಲ್ಲಿ ಮಗ್ನವಾಯಿತು. ಕೋವಿಡ್ ತೀವ್ರತೆಯಿಂದಾಗಿ ತಂಡ ತಮ್ಮ ಈ ಯೋಜನೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆದರೆ, ಮೂರು ತಿಂಗಳ ಬಳಿಕ ಸೊಮಾಯ ಮತ್ತೆ ತಂಡವನ್ನು ಒಗ್ಗೂಡಿಸಿಕೊಂಡು ಸಾಂಪ್ರದಾಯಕವಲ್ಲದ ಆದರೆ, ಕಡಿಮೆ ವೆಚ್ಚದಲ್ಲಿ ದೊರೆಯಬಹುದಾದ ವೆಂಟಿಲೇಟರ್ ತಯಾರಿಕೆಯಲ್ಲಿ ಯಶಸ್ಸು ಕಂಡರು.

ಸೊಮಯಾ ಅವರ ಆವಿಷ್ಕಾರ ಸರ್ಕಾರದ ಗಮನ ಸೆಳೆಯಿತು. ಸೊಮಯಾ ಮತ್ತು ಆಕೆಯ ತಂಡವನ್ನು ಕಾಬೂಲ್‌ಗೆ ಬರುವಂತೆ ಸರ್ಕಾರ ಆಹ್ವಾನಿಸಿದೆ. ಅಲ್ಲಿನ ಸಾರ್ವಜನಿಕ ಆರೋಗ್ಯ ಸಚಿವಾಲಯದ ಎದುರು ಈ ತಂಡ ತಮ್ಮ ವೆಂಟಿಲೇಟರ್‌ ಪ್ರದರ್ಶಿಸಬೇಕಿದೆ. ‘ಸರ್ಕಾರ ಅನುಮೋದನೆ ನೀಡಿದರೆ, ಸಾಂಪ್ರದಾಯಿಕ ವೆಂಟಿಲೇಟರ್‌ಗಳು ಲಭ್ಯವಿಲ್ಲದ ತುರ್ತು ಸಂದರ್ಭಗಳಲ್ಲಿ ನಮ್ಮ ವೆಂಟಿಲೇಟರ್‌ಗಳನ್ನು ಬಳಸಬಹುದು’ ಎನ್ನುತ್ತಾರೆ ಸೊಮಯಾ.

‘ಕೋವಿಡ್ ಸಂದರ್ಭದಲ್ಲಿ ನನ್ನ ಅನೇಕ ಗೆಳತಿಯರಿಗೆ ಅವರ ಪೋಷಕರು ಮದುವೆ ಮಾಡಿದರು. ಆರ್ಥಿಕ ಹೊರೆಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಈ ನನ್ನ ಗೆಳತಿಯರಿಗೂ ನನ್ನಂತೆಯೇ ಓದುವ ಅವಕಾಶ ಸಿಕ್ಕಿದ್ದರೆ ಖಂಡಿತಾ ಏನಾದರೊಂದು ಸಾಧನೆ ಮಾಡುತ್ತಿದ್ದರು’ ಎಂದು ಹೇಳುತ್ತಾರೆ ಸೊಮಯಾ.


ಹಸ್ಮಿಕ್

ಹಸ್ಮಿಕ್

ಅರ್ಮೇನಿಯಾದ ಯೆರೆವಾನ್‌ನ ಹಸ್ಮಿಕ್ ಬಾಗ್ದಾಸಾರ್ಯನ್ ಎನ್ನುವ 16ರ ಪೋರಿ ತನ್ನ ತಂಡದ ಜತೆಗೂಡಿ ‘ವರ್ಚುವಲ್ ಪ್ರಯೋಗಾಲಯ’ ರೂಪಿಸಿದ್ದಾಳೆ.

ಬಾಲ್ಯದಿಂದಲೇ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಹಸ್ಮಿಕ್‌ಗೆ ತನ್ನ ಶಾಲೆಗಳಲ್ಲಿ ಉತ್ತಮ ಪ್ರಯೋಗಾಲಯಗಳು ಇಲ್ಲದೇ ಇರುವುದು ಬೇಸರ ಉಂಟು ಮಾಡುತ್ತಿತ್ತು. ತನ್ನಂತೆಯೇ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ವರ್ಚುವಲ್ ಪ್ರಯೋಗಾಲಯ ಏಕೆ ಸ್ಥಾಪಿಸಬಾರದು ಎಂದು ಯೋಚಿಸಿ, ಸ್ನೇಹಿತರ ಜತೆಗೂಡಿ ಹಸ್ಮಿಕ್ ಈ ಪ್ರಯೋಗಕ್ಕೆ ಮುಂದಾದಳು.

‘ವರ್ಚುವಲ್ ಲ್ಯಾಬ್‌ನ ಹೆಡ್ ಸೆಟ್‌ ಅನ್ನು ಹಾಕಿಕೊಂಡರೆ ಸಾಕು ವಿಜ್ಞಾನ ಲೋಕವೇ ಅನಾವರಣಗೊಳ್ಳುತ್ತದೆ. ಶಾಲೆಗಳಲ್ಲಿ ಶಿಕ್ಷಕರು ಪ್ರಯೋಗಾಲಯದಲ್ಲಿ ತೋರಿಸುವ ಪ್ರಯೋಗಗಳನ್ನಷ್ಟೇ ನೋಡಲು ಅವಕಾಶವಿರುತ್ತದೆ. ಆದರೆ, ವರ್ಚುವಲ್ ಲ್ಯಾಬ್‌ನಲ್ಲಿ ವಿದ್ಯಾರ್ಥಿ ತಾನೇ ಸ್ವತಃ ಪ್ರಯೋಗ ಮಾಡಿದ ಅನುಭವ ಪಡೆಯುತ್ತಾನೆ’ ಎನ್ನುತ್ತಾರೆ ಹಸ್ಮಿಕ್.

ಕೋವಿಡ್‌ನಿಂದಾಗಿ ಶಾಲೆಗಳಿಗೆ ಹೋಗಲಾರದ ವಿದ್ಯಾರ್ಥಿಗಳಿಗೆ ವರ್ಚುವಲ್ ಲ್ಯಾಬ್ ವರದಾನವಾಗಬಲ್ಲದು. ಹಸ್ಮಿಕ್ ಮತ್ತು ಅವರ ತಂಡವು ಅರ್ಮೆನಿಯಾದ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ಎದುರು ತಮ್ಮ ಮೂಲಮಾದರಿಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ.


ಸೆಬಾಬಟ್ಸೊ ಎನ್ಸೆಫೆ

ಸೆಬಾಬಟ್ಸೊ ಎನ್ಸೆಫೆ

ದಕ್ಷಿಣ ಆಫ್ರಿಕಾದ ಐವರಿ ಪಾರ್ಕ್‌ನ 19 ವರ್ಷದ ಸೆಬಾಬಟ್ಸೊ ಎನ್ಸೆಫೆ ಕೋವಿಡ್ ಸಮಯದಲ್ಲಿ ‘ಮೈ ಹೆಲ್ತ್’ ಆ್ಯಪ್ ರೂಪಿಸಿದ್ದಾರೆ.

ಸೆಬಾಬಟ್ಸೊ ಸ್ಥಳೀಯ ಕ್ಲಿನಿಕ್‌ಗೆ ಕೋವಿಡ್ ಪರೀಕ್ಷೆಗೆ ತೆರಳಿದಾಗ ಅಲ್ಲಿ ಗರ್ಭಿಣಿಯೊಬ್ಬರು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡಿದ್ದರು. ಮಹಿಳೆಯೊಬ್ಬಳು ಪ್ರಸವಪೂರ್ವ ವೈದ್ಯರ ಭೇಟಿಗಾಗಿ ಇಷ್ಟೊಂದು ದೀರ್ಘಕಾಲ ನಿಲ್ಲುವುದನ್ನು ಕಂಡ ಸೆಬಾಬಟ್ಸೊ ಅಲ್ಲಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಬೇಸತ್ತಿದ್ದರು.

ಒಂದು ವೇಳೆ ವೈದ್ಯರು ಸಿಗದಿದ್ದರೆ ಆ ಮಹಿಳೆ ಮತ್ತೆ ಮರುದಿನ ಕ್ಲಿನಿಕ್‌ಗೆ ಬರಬೇಕು. ದೂರದಲ್ಲಿ ವಾಸಿಸುತ್ತಿದ್ದರೆ, ಟ್ಯಾಕ್ಸಿಗೆ ಪಾವತಿಸಲು ಹಣವಿರದಿದ್ದರೆ? ಹೀಗೆ ಪ್ರಶ್ನೆಗಳು ಮನದಲ್ಲಿ ಏಳತೊಡಗಿದಾಗ ಯೋಚನೆಗೆ ಬಂದಿದ್ದು ‘ಮೈ ಹೆಲ್ತ್’ ಆ್ಯಪ್.

‘ಸ್ಥಳೀಯ ಭಾಷೆಯಲ್ಲೇ ರೋಗಿಗಳು ತಮ್ಮ ಕಾಯಿಲೆ ಬಗ್ಗೆ ಮಾಹಿತಿ ಪಡೆಯಲು ‘ಮೈ ಹೆಲ್ತ್‌‘ ಆ್ಯಪ್ ನೆರವಾಗುತ್ತದೆ. ಸಣ್ಣಪುಟ್ಟ ಸಮಸ್ಯೆಗಳಿಗಾಗಿ ದೂರದ  ಊರುಗಳಿಂದ ರೋಗಿಗಳು ಪ್ರಯಾಣಿಸುವ ಅಗತ್ಯವೂ ಇಲ್ಲ. ತಜ್ಞ ವೈದ್ಯರು ಆ್ಯಪ್ ಮೂಲಕವೇ ರೋಗಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ವಿಶೇಷವಾಗಿ ಎಚ್‌ಐವಿ ಮತ್ತು ಏಡ್ಸ್ ಪೀಡಿತರಿಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲೂ ಈ ಆ್ಯಪ್ ನೆರವಾಗುತ್ತದೆ’ ಎನ್ನುತ್ತಾರೆ ಸೆಬಾಬಟ್ಸೊ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು