ರವಿಕೆಯಲ್ಲೂ ದೇವರ ಚಿತ್ರ, ವಿನ್ಯಾಸ

7

ರವಿಕೆಯಲ್ಲೂ ದೇವರ ಚಿತ್ರ, ವಿನ್ಯಾಸ

Published:
Updated:

ಕಲಮ್‌ಕಾರಿ ಸೀರೆಗಳಲ್ಲಿ ಬುದ್ಧನ ಮುಖ ಹಾಗೂ ಕೃಷ್ಣ ಚಿತ್ರಗಳುಳ್ಳ ಸೀರೆಗಳು ಪ್ರಸಿದ್ಧಿ ಪಡೆದಿತ್ತು. ಹಾಗೇ ಗಣೇಶ, ತಿರುಪತಿ ವೆಂಕಟರಮಣ, ಕೃಷ್ಣ, ಸರಸ್ವತಿ, ರಾಧಾಕೃಷ್ಣ ಮೊದಲಾದ ದೇವರ ಚಿತ್ರಗಳನ್ನು ರವಿಕೆಗಳಲ್ಲಿ ಅಚ್ಚಾಗಿಸುವುದು ಈಗಿನ ಹೊಸ ಟ್ರೆಂಡ್‌. 

ದೇವರ ಚಿತ್ರಗಳು ಈಗ ರವಿಕೆಯಲ್ಲೂ ರಾರಾಜಿಸುತ್ತವೆ. ಈಗ ಫ್ಯಾಷನ್‌ ಲೋಕದಲ್ಲಿ ದಿನಕ್ಕೊಂದು ಹೊಸ ಹೊಸ ಟ್ರೆಂಡ್‌ಗಳು ಸುದ್ದಿಯಾಗುತ್ತಲೇ ಇರುತ್ತವೆ. ವಸ್ತ್ರವಿನ್ಯಾಸಕರು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅವುಗಳಲ್ಲಿ ಕೆಲವೊಂದು ಅವರ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆಯುತ್ತದೆ. ಬ್ಲೌಸ್‌ಗಳ ಮೇಲೆ ದೇವರ ಚಿತ್ರ ಕೂಡ ಅಂತಹ ಪ್ರಯೋಗದ ಕೂಸು. ಆರಂಭದಲ್ಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಈ ವಿನ್ಯಾಸದ ರವಿಕೆಗಳು ಹರಿದಾಡುತ್ತಿದ್ದವು. ಅಲ್ಲಿಂದಲೇ ಈ ವಿನ್ಯಾಸದ ರವಿಕೆಗಳು ಜನಪ್ರಿಯವಾದವು.

ಈ ವಿನ್ಯಾಸದ ರವಿಕೆಗಳು  ಕೈಯಿಂದಲೇ ಮಾಡುವಂತಹದ್ದಾಗಿದ್ದು, ಎಂಬ್ರಾಯ್ಡರಿ ಕೆಲಸಗಳನ್ನು ಹೆಚ್ಚು ಬೇಡುತ್ತವೆ. ಬಟ್ಟೆಯ ಬಣ್ಣದ ವಿರುದ್ಧ ಬಣ್ಣದ ದಾರದಿಂದ ಮುತ್ತು, ಹರಳು ಹಾಗೂ ಸಣ್ಣಸಣ್ಣ ಕನ್ನಡಿಗಳನ್ನು ಬಳಸಿಕೊಂಡು ಎಂಬ್ರಾಯ್ಡರಿ ಮಾಡಲಾಗುತ್ತದೆ. ಇದಕ್ಕೆ ಚಿನ್ನದ ಬಣ್ಣದ ದಾರವನ್ನು ಹೆಚ್ಚು ಬಳಸುವುದರಿಂದ ದೇವರ ಚಿತ್ರಗಳು ಎದ್ದು ಕಾಣುತ್ತದೆ. ಕೈಯಿಂದ ಮೂಡಿರುವ ವಿನ್ಯಾಸವನ್ನು ನೋಡುವುದೇ ಚಂದ. 

ಗಣೇಶ ಚತುರ್ಥಿ ಹಬ್ಬ ಸಮೀಪದಲ್ಲಿದೆ. ಅದಾದ ಬಳಿಕ ಸಾಲು ಸಾಲು ಹಬ್ಬಗಳು ಮುಂದೆ ಬರಲಿವೆ. ದಸರಾ, ದೀಪಾವಳಿ, ನವರಾತ್ರಿ ಹಬ್ಬ ಸೇರಿದಂತೆ ಹಬ್ಬದ ಸಂದರ್ಭಕ್ಕೆ ಈ ರವಿಕೆಗಳು ಸರಿ ಹೊಂದುತ್ತವೆ. ದೇವರ ಚಿತ್ರಗಳಲ್ಲದೇ ಗೋಪುರ, ದೀಪಗಳ ಚಿತ್ರಗಳನ್ನು ಸಹ ಮೂಡಿಸಲಾಗುತ್ತದೆ. ಈ ರವಿಕೆಗಳು ರೇಷ್ಮೆ, ಕಾಂಜೀವರಂ ಮತ್ತು ಬನಾರಸ್‌, ಖಾದಿ ಸೀರೆ, ಹತ್ತಿ ಸೀರೆಗಳಿಗೆ ಚಂದ ಕಾಣುತ್ತದೆ.

ಈಗ ಕುತ್ತಿಗೆ ಪೂರ್ತಿ ಆವರಿಸುವ, ದೋಣಿಯಾಕಾರದ ವಿನ್ಯಾಸದ ರವಿಕೆಗಳು ಟ್ರೆಂಡ್‌ ಆಗಿವೆ. ಈ ರವಿಕೆಗಳಲ್ಲಿ ದೇವರ ಚಿತ್ರಗಳ ವಿನ್ಯಾಸಗಳು ಚಂದ ಕಾಣುತ್ತವೆ. ಅಗಲ ಬೆನ್ನು ಹೊಂದಿದ ಮಹಿಳೆಯರಿಗೆ ಇಂತಹ ವಿನ್ಯಾಸದ ರವಿಕೆಗಳು ಚಂದ ಕಾಣುತ್ತವೆ. ಹಬ್ಬ ಹರಿದಿನ, ಮದುವೆಯಂತಹ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಇದು ಸರಿ ಹೊಂದುತ್ತದೆ. ಈಚೆಗೆ ವಿಭಿನ್ನತೆ ಬಯಸುವ ಮದುಮಗಳೂ ಸಹ ತನ್ನ ಮದುವೆಗೆ ಇಂತಹದೇ
ರವಿಕೆ ತೊಟ್ಟುಕೊಳ್ಳಲು ಬಯಸುತ್ತಾಳಂತೆ. 

ನವರಾತ್ರಿ ಸಮಯದಲ್ಲಿ ದೇವಿಯ ಚಿತ್ರಗಳು, ದೀಪಾವಳಿ ಸಂದರ್ಭದಲ್ಲಿ ದೀಪಗಳ ಚಿತ್ರಗಳನ್ನು ಹೊಲಿಸಿಕೊಳ್ಳಲು ಹೆಚ್ಚು ಜನರು ಬಯಸುತ್ತಾರೆ. ಈಗ ಎಲ್ಲರೂ ಹೊಸತನ ಬಯಸುತ್ತಾರೆ. ಇತ್ತೀಚೆಗೆ ಲಕ್ಷ್ಮೀ ಕಾಸಿನ ಸರದಂತಹ ಲಕ್ಷ್ಮೀ ಪದಕಗಳನ್ನು ಜೋಡಿಸುವಂತಹ ವಿನ್ಯಾಸ ಹೆಚ್ಚು ಪ್ರಚಲಿತದಲ್ಲಿದೆ ಎನ್ನುತ್ತಾರೆ ವಸ್ತ್ರ ವಿನ್ಯಾಸಕರು.

ಈ ರವಿಕೆಗಳು ಸಾಂಪ್ರದಾಯಿಕ ನೋಟ ನೀಡುವುದರಿಂದ ಅದೇ ರೀತಿಯೇ ಅಲಂಕಾರ ಮಾಡಿಕೊಂಡರೆ ಚಂದ. ಆ್ಯಂಟಿಕ್‌ ಆಭರಣಗಳು ಈ ಉಡುಪುಗಳಿಗೆ ಚಂದ ಕಾಣುತ್ತದೆ. ಹಾಗೇ ಸೊಂಟಕ್ಕೆ ಅಗಲ ಪಟ್ಟಿ, ಮೂಗಿಗೆ ದೊಡ್ಡ ಬೊಟ್ಟು ತೊಟ್ಟರೆ ಎಲ್ಲರ ಗಮನ ಸೆಳೆಯುವುದಂತೂ ನಿಜ.

ದೇವರ ಚಿತ್ರಗಳ ವಿನ್ಯಾಸಗಳನ್ನು ಬೆನ್ನು, ಕೈಗಳಲ್ಲಿ ಮೂಡಿಸಿರುತ್ತಾರೆ. ಹಾಗಾಗಿ ತುರುಬು ಅಥವಾ ಜಡೆ ಎತ್ತಿ ಕಟ್ಟಿದ್ದರೆ ಸೊಗಸಾದ ನೋಟ ನಿಮ್ಮದಾಗುತ್ತದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !