ಮಂಗಳವಾರ, ಆಗಸ್ಟ್ 16, 2022
21 °C

ಸ್ಮಿತಾ ಮುಖದಲ್ಲಿ ನಗು ಹೇಗೆ ಮೂಡಿಸುವುದು?

ನಡಹಳ್ಳಿ ವಸಂತ್ Updated:

ಅಕ್ಷರ ಗಾತ್ರ : | |

Prajavani

ದೂರದೇಶದಿಂದ ಮಹಿಳೆಯೊಬ್ಬಳು ಕರೆಮಾಡಿ ಆಪ್ತಸಮಾಲೋಚನೆಯ ಸಹಾಯ ಕೇಳಿದ್ದಳು. ಸ್ಮಿತಾ ಎನ್ನುವುದು ಅವಳ ಕಾಲ್ಪನಿಕ ಹೆಸರು. 28 ವರ್ಷದ ಸ್ಮಿತಾ ಮದುವೆಯಾಗಿ 8 ವರ್ಷಗಳಾಗಿದ್ದರೂ ಕುಮಾರಿಯಾಗಿಯೇ ಉಳಿದಿದ್ದಳು. ಮದುವೆಯಾದ ಪ್ರಾರಂಭದ ದಿನಗಳಲ್ಲಿ ಏನೇನೋ ಸಬೂಬುಗಳನ್ನು ಹೇಳಿ ಪತ್ನಿಯಿಂದ ದೂರವಿರುತ್ತಿದ್ದ ಪತಿ, ನಂತರ ಯಾವುದೇ ಲೈಂಗಿಕ ಆಸಕ್ತಿಯನ್ನು ತೋರಿಸದೆ ಕೊರಡಿನಂತೆ ಪಕ್ಕದಲ್ಲಿ ಮಲಗಿರುತ್ತಿದ್ದ. ಅವನನ್ನು ಹತ್ತಿರ ಸೆಳೆಯುವ ಸ್ಮಿತಾಳ ಪ್ರಯತ್ನಗಳೆಲ್ಲಾ ವಿಫಲವಾದಾಗ ಹತಾಶೆಯಿಂದ ಸುಮ್ಮನಾಗಿದ್ದಳು. ಅತ್ತೆ ಮತ್ತು ತಾಯಿಯೊಂದಿಗೆ ಈ ವಿಷಯವನ್ನು ಹೇಳಿಕೊಂಡರೂ ಪ್ರಯೋಜನವಾಗದಿದ್ದಾಗ ತನ್ನ ಉದ್ಯೋಗ, ಓದಿನಲ್ಲಿ ಎಂಟು ವರ್ಷ ಕಳೆದಿದ್ದಳು. ಹೋದವರ್ಷ ಪತಿಯ ಮೊಬೈಲ್ ಸಂದೇಶಗಳನ್ನು ಅಕಸ್ಮಾತ್ತಾಗಿ ಗಮನಿಸಿದಾಗ ಅವನು ಸಲಿಂಗಕಾಮಿಯಾಗಿರಬಹುದೇ ಎನ್ನುವ ಅನುಮಾನ ಅವಳಿಗೆ ಮೂಡಿತ್ತು.
ಅವಳ ದುರಂತ ಕಥೆ ನನ್ನೊಳಗೆ ಮೂಡಿಸುತ್ತಿದ್ದ ಬೇಸರ ಅಸಹಾಯಕತೆಗಳನ್ನು ಹಿಂದೆಸರಿಸಿ, ಎಂಟು ವರ್ಷ ನಿಮ್ಮ ಜೀವನದ ಬಗೆಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೆ ಏಕೆ ಮತ್ತು ಹೇಗೆ ಕಳೆದಿರಿ ಎಂದು ಕೇಳಿದೆ. ಸಮಾಜದ ಬಗೆಗಿನ ಭಯ ಹಿಂಜರಿಕೆಗಳು ಎನ್ನುವ ಮಾಮೂಲಿನ ಉತ್ತರ ಬಂತು. ದೂರದೇಶದಲ್ಲಿ ಬೇರೆ ಸಮಾಜದಲ್ಲಿ ಬದುಕುತ್ತಿದ್ದರೂ ಬಾಲ್ಯದಲ್ಲಿ ಬಿತ್ತಲಾದ ಸಾಂಸ್ಕೃತಿಕ ಧಾರ್ಮಿಕ ನಂಬಿಕೆಗಳ ಆಳ ಎಷ್ಟಿರಬಹುದು ಎಂದು ಚಕಿತಗೊಂಡೆ. ನಿಧಾನವಾಗಿ ಪ್ರಶ್ನಿಸುತ್ತಾ ಹೋದಂತೆ ಸ್ತ್ರೀಯರ ಬದುಕಿನ ದುರಂತದ ವಿವಿದ ಮುಖಗಳು ಅನಾವರಣಗೊಳ್ಳತೊಡಗಿದವು.

ಸ್ಮಿತಾಳ ಪತಿ ಸಲಿಂಗಕಾಮಿ ಎನ್ನುವುದು ಅವಳು ತೋರಿಸಿದ ಪತಿಯ ಸಂದೇಶಗಳಿಂದ ಸ್ಪಷ್ಟವಾಗಿತ್ತು. ಮದುವೆಗೆ ಮೊದಲೇ ಅವನಿಗೆ ಇದು ಗೊತ್ತಿರಲೇಬೇಕು. ಹಾಗಿದ್ದರೂ ತನ್ನ ಲೈಂಗಿಕ ಆಸಕ್ತಿಗಳನ್ನು ಕುಟುಂಬ ಸಮಾಜದ ಎದುರು ತೋರಿಸಲಾಗದೆ ಅವನು ಮದುವೆಯ ನಾಟಕವಾಡಿದ್ದ. ಎಂಟು ವರ್ಷ ಸಮಾಜದ ನೋಟಕ್ಕೆ ಪತ್ನಿಯಾಗಿ ರಾತ್ರಿಯೆಲ್ಲಾ ಪಕ್ಕದಲ್ಲಿ ಮಲಗಿರುವ ಜೀವವೊಂದಕ್ಕೆ ತಾನು ಮಾಡುತ್ತಿರುವ ಅನ್ಯಾಯದ ಬಗೆಗೆ ಕುರುಡಾಗುವ ತಣ್ಣನೆಯ ಕ್ರೌರ್ಯವನ್ನು ತೋರಿದ್ದ. ಸಲಿಂಗಕಾಮದ ಬಗೆಗೆ ಇರುವ ಸಾಮಾಜಿಕ ತಪ್ಪುನಂಬಿಕೆಗಳು ಹಾಗೂ ಕಾನೂನಿನ ಗೊಂದಲ ಮತ್ತು ಪುರುಷಪ್ರಧಾನ ಸಮಾಜದಲ್ಲಿನ ಗಂಡಿನ ವರ್ತನೆಗೆ ಸ್ಮಿತಾ ಬಲಿಪಶುವಾಗಿದ್ದಳು.
ವ್ಯವಸ್ಥೆಯನ್ನು ಒಪ್ಪಿಕೊಳ್ಳುತ್ತಾ ಹೆಣ್ಣಿನ ನೋವಿಗೆ ಮತ್ತೊಂದು ಹೆಣ್ಣು ಕೂಡ ಕಾರಣವಾಗುವುದು ದುರಂತದ ಇನ್ನೊಂದು ಮುಖ. ಮತ್ತೊಂದು ಹೆಣ್ಣಲ್ಲ ಎರಡು- ಸ್ಮಿತಾಳ ಅತ್ತೆ ಮತ್ತು ತಾಯಿ. ಅತ್ತೆಗೆ ಮಗನ ಬಗೆಗೆ ಸ್ವಲ್ಪವಾದರೂ ತಿಳಿದಿರಲೇಬೇಕು ಮತ್ತು ತಾಯಿಗೆ ಅಳಿಯನ ಬಗೆಗೆ ಅನುಮಾನಗಳೂ ಬರದಿರಲು ಸಾಧ್ಯವೇ ಇಲ್ಲ. ಇವರಿಬ್ಬರೂ ತೋರಿಸಿದ ಮೌನ ಅಸಹಾಯಕತೆಗಳ ತಣ್ಣನೆಯ ಕ್ರೌರ್ಯದ ಹಿಂದೆಯೂ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಕಟ್ಟುಪಾಡಗಳಲ್ಲದೆ ಇನ್ನೇನಿರಲು ಸಾಧ್ಯ?

ಈ ದುರಂತದ ಕೊನೆಯ ಮತ್ತು ಅತ್ಯಂತ ಆಳವಾದ ಬೇರುಗಳು ಸ್ಮಿತಾಳಲ್ಲಿಯೇ ಇರುವುದು ಸಾಧ್ಯವಿತ್ತು. ಇಷ್ಟೆಲ್ಲಾ ವರ್ಷಗಳ ಅಸ್ತಿತ್ವಹೀನ ಖಾಲೀತನದ ಬದುಕಿನ ನಂತರವೂ ಸ್ಮಿತಾ ನನ್ನಿಂದ ನಿರೀಕ್ಷಿಸಿದ್ದ ಸಹಾಯವನ್ನು ಕೇಳಿ ದಂಗಾಗಿಹೋದೆ. ತನ್ನ ಪತಿ ಸಲಿಂಗಕಾಮಿಯಾಗಿದ್ದರೆ ಅದಕ್ಕೆ ಪರಿಹಾರಗಳಿವೆಯೇ ಎನ್ನುವುದು ಅವಳ ಪ್ರಶ್ನೆಯಾಗಿತ್ತು. ಸಲಿಂಗಕಾಮಿಗಳ ಬಗೆಗೆ ವೈಜ್ಞಾನಿಕವಾಗಿ ವಿವರಿಸಿದ ಮೇಲೂ ಅವಳು ಹೇಳಿದ್ದು ‘ನನ್ನಲ್ಲಿ ಲೈಂಗಿಕತೆಯ ಬಗೆಗೆ ಜಿಗುಪ್ಸೆ ಹುಟ್ಟಿದೆ. ಪತಿಯ ಮೇಲೆ ಪ್ರೀತಿಯಿರುವುದರಿಂದ ಅವರ ಜೊತೆ ಬದುಕನ್ನು ಮುಂದುವರೆಸಲು ಸಾಧ್ಯವೇ ಎಂದು ಯೋಚಿಸುತ್ತಿದ್ದೇನೆ’.

ವಿಚ್ಛೇದನ ಪಡೆದು ಹೊಸ ಬದುಕಿನತ್ತ ಮುಖಮಾಡಬೇಕೆಂದು ಅವಳನ್ನು ಹೇಗೆ ಪ್ರೇರೇಪಿಸುವುದು? ನನ್ನೊಳಗಿನ ಹತಾಶೆ ಅಸಹಾಯಕತೆಗಳು ಸ್ಫೋಟವಾಗುವ ಮಟ್ಟಕ್ಕೆ ಬರುವಷ್ಟರಲ್ಲಿ ಅವಳಿಗೆ ಕೊಟ್ಟಿದ್ದ ಸಮಯ ಮುಗಿದಿತ್ತು. ಮತ್ತೆ ಅವಳು ಕರೆ ಮಾಡಿದರೆ ಏನು ಮಾತನಾಡುವುದೆಂದು ಈಗಲೂ ಹೊಳೆಯುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು