ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಜರ್ ಜನರಲ್ ಮಾಧುರಿ ಅನ್ವೇಷಣೆಯ ದಾರಿ...

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆ (Science, technology and innovation) ಕುರಿತು ಸಲಹೆ ನೀಡಲು ಈಚೆಗೆಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ 21 ಸದಸ್ಯರ ಸಮಿತಿ ರಚಿಸಲಾಯಿತು. ಈ ಪ್ರತಿಷ್ಠಿತ ಸಮಿತಿಗೆ ಆಯ್ಕೆಯಾದವರ ಪಟ್ಟಯಲ್ಲಿ ಪುಣೆಯಲ್ಲಿರುವ ಸಶಸ್ತ್ರಪಡೆಗಳ ವೈದ್ಯಕೀಯ ಕಾಲೇಜಿನ ಡೀನ್ ಮೇಜರ್‌ ಜನರಲ್ ಮಾಧುರಿ ಕಾನಿಟ್ಕರ್ ಅವರ ಹೆಸರೂ ಇದೆ.

ರಾಷ್ಟ್ರೀಯ ಭದ್ರತೆ, ಸೈನಿಕ ತರಬೇತಿ, ಶಿಶುಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅಪರೂಪದ ಸಾಧನೆ ಮೆರೆದವರು ಮಾಧುರಿ ಕಾನಿಟ್ಕರ್. ವಿಭಿನ್ನ ಆಸಕ್ತಿಗಳು ಮತ್ತು ಹೊಸತನದ ತುಡಿತಕ್ಕೆ ಅವರು ಹೆಸರುವಾಸಿ. ಸೇನೆಯಲ್ಲಿ ಮೇಜರ್‌ ಜನರಲ್ ಹುದ್ದೆಗೇರಿದ ಮೊದಲ ಮಹಿಳೆ ಎನ್ನುವ ಶ್ರೇಯಸ್ಸೂ ಅವರದು.

‘ಅನ್ವೇಷಣೆ ಎನ್ನುವುದು ಒಂದು ಮನೋಭಾವ. ಅದನ್ನು ರೂಢಿಸಿಕೊಂಡವರನ್ನು ಚಿಕ್ಕಂದಿನಲ್ಲಿಯೇ ಗುರುತಿಸಿ ಬೆನ್ನು ತಟ್ಟಬೇಕು. ಈ ಮನೋಭಾವಕ್ಕೆ ನೀರೆರೆದರೆ ನಮ್ಮ ಯುವಜನರು ಅದ್ಭುತಗಳನ್ನು ಸಾಧಿಸುತ್ತಾರೆ. ಹೊಸತನಕ್ಕೆ ತುಡಿಯುವ ಮನೋಭಾವವನ್ನು ಜೀವಮಾನ ವಿಡೀ ಕಾಪಾಡಿಕೊಳ್ಳುವುದು ಅಗತ್ಯ’ ಎನ್ನುವ ಮಾಧುರಿ ಅವರ ಮಾತನ್ನು ಅಭಿಮಾನಿಗಳು ಮತ್ತು ಶಿಷ್ಯರು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.

‘ದೇಶದ ಇತರೆಲ್ಲ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ವೈದ್ಯರು ತಯಾರಾಗುತ್ತಾರೆ. ಆದರೆ ಇಲ್ಲಿ ಓದುವವರು ಸೈನಿಕರ ಶಿಸ್ತು, ವೈದ್ಯರ ಸೇವಾ ಮನೋಭಾವ ಮತ್ತು ಶಿಕ್ಷಕರ ಶ್ರದ್ಧೆಯನ್ನು ರೂಢಿಸಿಕೊಳ್ಳುತ್ತಾರೆ’ ಎಂದು ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ವೈದ್ಯಕೀಯ ಕಾಲೇಜಿನ ಬಗ್ಗೆ ಮಾಧುರಿ ಅವರಿಗೆ ಹೆಮ್ಮೆ ಇದೆ.

ಒಬ್ಬಾಕೆ ತನ್ನ ಜೀವಮಾನದಲ್ಲಿ ಇಷ್ಟೆಲ್ಲಾ ಸಾಧಿಸಬಹುದೇ ಎಂದು ಬೆರಗುಗೊಳ್ಳುವಷ್ಟು ಸಾಧನೆ ಅವರದು. ಸಶಸ್ತ್ರಪಡೆಗಳಿಗೆ ಸಲ್ಲಿಸಿದ ಸೇವೆಗಾಗಿ ಅತಿವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ, ವೈದ್ಯಕೀಯ ಶಿಕ್ಷಣದಲ್ಲಿ ಎಂಬಿಬಿಎಸ್, ಎಂಡಿ (ಶಿಶುಆರೋಗ್ಯ), ಮಕ್ಕಳ ಮೂತ್ರಪಿಂಡ ಅಧ್ಯಯನದಲ್ಲಿ ಫೆಲೊಶಿಪ್ ಸೇರಿದಂತೆ ಹಲವು ಪದವಿಗಳನ್ನು ಪಡೆದುಕೊಂಡಿದ್ದಾರೆ.

ವಿವಿಧ ಸುದ್ದಿ ಚಾನೆಲ್‌ಗಳು, ನಿಯತಕಾಲಿಕೆಗಳಲ್ಲಿ ಮಾಧುರಿ ಅವರ ಸಂದರ್ಶನ ಪ್ರಕಟವಾಗಿದೆ. ಯುಟ್ಯೂಬ್‌ನಲ್ಲಿಯೂ ಹಲವು ವಿಡಿಯೊಗಳಿವೆ. ಈ ಎಲ್ಲ ಮೂಲಗಳಿಂದ ಸಂಗ್ರಹಿಸಿದ ಮಾಧುರಿ ಅವರ ಬದುಕು ಮತ್ತು ಚಿಂತನೆಗಳನ್ನು ಅವರದೇ ಮಾತುಗಳಲ್ಲಿಯೇ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ಸೇನೆಗೆ ಸೇರಿದ್ದು ಅಚಾನಕ್: ಹಲವರು ಸಣ್ಣ ವಯಸ್ಸಿನಿಂದಲೂ ಸೇನೆಗೆ ಸೇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ನನ್ನ ಕಥೆಯೇ ಬೇರೆ. ಪುಣೆಯ ಫರ್ಗುಸನ್ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದಾಗ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂದು ಆಸೆಪಟ್ಟೆ. ನನ್ನ ಜೊತೆಗೆ ಕೋಣೆ ಹಂಚಿಕೊಂಡಿದ್ದಾಕೆ ವಾಯುಸೇನೆಯ ಹಿನ್ನೆಲೆ ಹೊಂದಿದ್ದಳು. ಆಕೆಗೆ ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ಸೇರುವ ಆಸೆಯಿತ್ತು. ನಾನು ಮೊದಲ ಬಾರಿಗೆ ಈ ಕಾಲೇಜಿನ ಹೆಸರು ಕೇಳಿದ್ದೇ ಅವಳ ಬಾಯಲ್ಲಿ. ಅರ್ಜಿ ಹಾಕಲೆಂದು ಬಂದ ನನಗೆ ಇಲ್ಲಿನ ವಾತಾವರಣ ಇಷ್ಟವಾಯಿತು. ನನ್ನ ಭಾವೀಪತಿಯನ್ನು ಇಲ್ಲಿಯೇ ಮೊದಲ ಸಲ ಭೇಟಿಯಾಗಿದ್ದೂ ಸಹ ಸೇನೆಗೆ ಸೇರಲು ಇದ್ದ ಕಾರಣಗಳಲ್ಲಿ ಒಂದು.

ವೈದ್ಯಕೀಯ ತರಬೇತಿಯ ನಂತರ ಸೈನಿಕ ಶಿಕ್ಷಣ ಪಡೆಯಲು ಲಖನೌಗೆ ಕಳುಹಿಸಿದರು. ಅಲ್ಲಿ ಸಮರಸಿದ್ಧ ಸೈನಿಕಳಾಗಿ ರೂಪುಗೊಂಡೆ. ಬೆಳ್ಳಂಬೆಳಿಗ್ಗೆ ಎದ್ದು ಐದು ಕಿ.ಮೀ. ಓಡಬೇಕಿತ್ತು; ಹಗ್ಗವನ್ನು ಹಿಡಿದು ಗೋಡೆ ಹತ್ತಬೇಕಿತ್ತು; ಎತ್ತರ ಜಿಗಿತ ಸೇರಿದಂತೆ ಹತ್ತಾರು ಬಗೆಯ ಸೈನಿಕ ಕಸರತ್ತುಗಳನ್ನು ರೂಢಿಸಿಕೊಂಡೆ. ಅಲ್ಲಿಯೇ ಶಸ್ತ್ರಾಸ್ತ್ರಗಳ ಬಳಕೆಯನ್ನೂ ಕಲಿಸಿದರು.

ಜೋಧಪುರ ಹೊರವಲಯದ ಸೇನಾ ಶಿಬಿರದಲ್ಲಿ ನನ್ನ ಮೊದಲ ಡ್ಯೂಟಿ. ಅಲ್ಲಿ ಆಸ್ಪತ್ರೆಯ ಕಟ್ಟಡವೇ ಇರಲಿಲ್ಲ. ಒಂದು ಅಂಬುಲೆನ್ಸ್‌ನಲ್ಲಿ ನಮ್ಮ ಕೆಲಸ ಸಾಗಬೇಕಿತ್ತು. ಸಂಚಾರಿ ಸೇನಾ ಘಟಕವಾದ ಕಾರಣ ಡೇರೆಗಳಲ್ಲಿ ಸಿಬ್ಬಂದಿ ವಾಸಿಸುತ್ತಿದ್ದರು. ಮಹಿಳೆಯನ್ನು ಸಂಚಾರಿ ಘಟಕಕ್ಕೆ ನಿಯೋಜಿಸಿದ್ದು ಇದೇ ಮೊದಲು. ಡೇರೆಗಳಲ್ಲಿ ಹೀಗೆ ಮಹಿಳೆ ಇರಬಾರದು ಎಂದು,ಜೋಧಪುರದ ಕೇಂದ್ರ ಘಟಕಕ್ಕೆ ಹೋಗಲು ನನಗೆ ಸೂಚಿಸಿದರು. ಆದರೆ ನಾನು ಒಪ್ಪಲಿಲ್ಲ.

‘ನನ್ನನ್ನು ಇಲ್ಲಿಗೆ ನಿಯೋಜಿಸಿದ್ದಾರೆ. ನಿಮ್ಮ ಜೊತೆಗೇ ಇರುತ್ತೇನೆ. ನಾಳೆ ಯುದ್ಧ ಆರಂಭವಾಯಿತು ಎಂದಿಟ್ಟುಕೊಳ್ಳಿ. ನಿಮ್ಮೊಡನೆ ಯುದ್ಧಭೂಮಿಗೂ ಬರುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲಿದ್ದ ಎಲ್ಲರೂ ನನ್ನನ್ನು ಕ್ರಮೇಣ ಒಪ್ಪಿಕೊಂಡರು. ನನ್ನಲ್ಲಿ ಅವರಿಗೆ ಒಬ್ಬ ಸೇನಾಧಿಕಾರಿ ಮಾತ್ರವೇ ಕಾಣಿಸುತ್ತಿದ್ದಳು. ಮುಂದೆ ಏನೆಲ್ಲಾ ನಡೆಯಿತು ಎನ್ನುವುದು ಈಗ ಇತಿಹಾಸ.

ರಾಜೀನಾಮೆ ಕೊಡಬೇಕು ಅಂದುಕೊಂಡಿದ್ದೆ: ಸೇನೆಯಲ್ಲಿ ಮಹಿಳೆಯರ ಸಂಖ್ಯೆ ತುಂಬ ಕಡಿಮೆ. ನಮ್ಮ ಬ್ಯಾಚ್‌ನಲ್ಲಿ (1978) 20 ಹುಡುಗಿಯರು ವೈದ್ಯಕೀಯ ಶಿಕ್ಷಣವನ್ನು ಮುಗಿಸಿದರು. ಆದರೆ ಎಲ್ಲರೂ ಸೇವೆಗೆ ನಿಯೋಜಿತರಾಗಲಿಲ್ಲ. ಮದುವೆಯ ನೆಪದಿಂದ ಕೆಲವರು ಬಾಂಡ್ ಮೊತ್ತ ಪಾವತಿಸಿ ಹೊರಗೆ ಹೋದರು. ಐದು ವರ್ಷದ ಶಾರ್ಟ್‌ ಸರ್ವಿಸ್ ಕಮಿಷನ್ ಮುಗಿದ ನಂತರ ಕೆಲವರು ಹೊರಗೆ ಹೋದರು. ನಾವು ಆರೇಳು ಮಂದಿ ಮಾತ್ರ ಪರ್ಮನೆಂಟ್ ಕಮಿಷನ್‌ಗೆ ಹೆಸರು ಬರೆಸಿದೆವು. ಈ ಹಿಂದೆ ವರ್ಗಾವಣೆ ಮತ್ತು ಕಠಿಣ ಸೇವಾ ನಿಯಮಗಳನ್ನು ಪೂರೈಸಿ ಸೇನೆಯಲ್ಲಿ ಉಳಿದುಕೊಳ್ಳುವುದು ಹೆಂಗಸರಿಗೆ ಕಷ್ಟವಾಗುತ್ತಿತ್ತು. ಗಂಡ–ಹೆಂಡತಿ ಇಬ್ಬರೂ ಸೇನೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಇಬ್ಬರನ್ನೂ ಹಿಂದೆ ಒಂದೇ ಊರಿನಲ್ಲಿ ಸೇವೆ ನಿಯೋಜಿಸುತ್ತಿರಲಿಲ್ಲ. ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಕಡ್ಡಾಯ ವರ್ಗಾವಣೆ, ರಾತ್ರಿಪಾಳಿಯಲ್ಲಿ ಕೆಲಸ, ಮನೆಯಲ್ಲಿ ಮಕ್ಕಳು, ಪೋಷಕರು, ಅತ್ತೆಮಾವ... ಎಲ್ಲದರ ಸಮತೋಲನ ಕಾಯ್ದುಕೊಳ್ಳುವ ಕಷ್ಟ ಅನುಭವಿಸಿದವರಿಗೇ ಗೊತ್ತು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ.

ಅಸ್ಸಾಂ, ಅರುಣಾಚಲಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ನಾನು ಸೇವೆ ಸಲ್ಲಿಸಿದ್ದೇನೆ. ನಿಖಿಲ್ ಮತ್ತು ವಿಭೂತಿ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ನನ್ನ ಮದುವೆಯಾಗಿ 35 ವರ್ಷಗಳಾಗಿವೆ. ನಾವು ಗಂಡ–ಹೆಂಡತಿ ಒಂದೆಡೆ 12 ವರ್ಷ ಇದ್ದರೆ ಹೆಚ್ಚು. ಮಕ್ಕಳಾದ ಮೇಲೆ ಒಮ್ಮೊಮ್ಮೆ ನನ್ನಲ್ಲಿ ಪಾಪಪ್ರಜ್ಞೆ ಮೂಡುತ್ತಿತ್ತು. ‘ನಾನು ರಾಜೀನಾಮೆ ಕೊಟ್ಟು ನಿಮ್ಮ ಜೊತೆಗೆ ಇದ್ದುಬಿಡಲೇ?’ ಎಂದು ಮಕ್ಕಳನ್ನು ಕೇಳಿದ್ದೆ. ಆದರೆ ಮಕ್ಕಳು ಪರಿಸ್ಥಿತಿ ಅರ್ಥ ಮಾಡಿಕೊಂಡರು. ಅಪ್ಪ ಮನೆಯಲ್ಲಿ ಇಲ್ಲ, ಅಮ್ಮ ಬ್ಯುಸಿಯಾಗಿದ್ದಾಳೆ ಎನ್ನುವುದು ಅರಿತುಕೊಂಡು ‘ನಮಗೆ ಫುಲ್ ಟೈಂ ಅಮ್ಮ ಬೇಡವೇ ಬೇಡ’ ಎಂದುಬಿಟ್ಟರು! ಪ್ರತಿ ಸಂದರ್ಭದಲ್ಲಿಯೂ ಪತಿಲೆಫ್ಟಿನೆಂಟ್ ಜನರಲ್ರಾಜೀವ್ ಕಾನಿಟ್ಕರ್ ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದರು. ಈಗ ಇದೇ ನಾನು ಇದೇ ಉತ್ಸಾಹವನ್ನು ನನ್ನ ವಿದ್ಯಾರ್ಥಿಗಳಲ್ಲಿ ತುಂಬಲು ಯತ್ನಿಸುತ್ತಿದ್ದೇನೆ.

ರಾಷ್ಟ್ರಪತಿಯಿಂದ ‘ಅತಿ ವಿಶಿಷ್ಟ ಸೇವಾ ಪದಕ’ವನ್ನು ಪಡೆಯುತ್ತಿರುವ ಸಾರ್ಥಕ ಕ್ಷಣ...
ರಾಷ್ಟ್ರಪತಿಯಿಂದ ‘ಅತಿ ವಿಶಿಷ್ಟ ಸೇವಾ ಪದಕ’ವನ್ನು ಪಡೆಯುತ್ತಿರುವ ಸಾರ್ಥಕ ಕ್ಷಣ...

ವೈದ್ಯಕೀಯ ಸಾಧನೆ: ವಿಷಯತಜ್ಞೆಯಾಗಬೇಕು ಎನ್ನುವ ಆಸೆ ಮೊದಲಿನಿಂದಲೂ ನನಗಿತ್ತು. ಆದರೆ ಆರಂಭದಲ್ಲಿ ಹಿರಿಯರಿಂದ ಅಂಥ ಬೆಂಬಲ ಸಿಗಲಿಲ್ಲ. ನನ್ನ ಸ್ವಂತ ರಜೆಗಳನ್ನು ಬಳಸಿಕೊಂಡು ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ (ಏಮ್ಸ್) ಸೇರಿದಂತೆ ವಿವಿಧೆಡೆ ಫೆಲೊಶಿಪ್‌ಗಳನ್ನು ಮಾಡಿದೆ. ನನ್ನ ಬದ್ಧತೆ ಮತ್ತು ಸೇವೆಯಲ್ಲಿ ಇರುವ ಶ್ರದ್ಧೆಯನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಶೈಕ್ಷಣಿಕ ರಜೆ ಕೊಟ್ಟರು. ಮಕ್ಕಳಿಗೆ ಡಯಾಲಿಸಿಸ್ ಮಾಡುವ ಸೌಲಭ್ಯ ಭಾರತದಲ್ಲಿ ಇಲ್ಲ ಎಂಬುದನ್ನು ಕಂಡುಕೊಂಡೆ. ಸಿಂಗಪಪುರದಲ್ಲಿ ಅದಕ್ಕೆ ಸಂಬಂಧಿಸಿದ ಒಂದು ಕೋರ್ಸ್ ಇತ್ತು. ನಾಲ್ಕು ತಿಂಗಳು ಅಲ್ಲಿಯೇ ಇದ್ದು ಕೋರ್ಸ್‌ ಮುಗಿಸಿದೆ.

ಬ್ರಿಟನ್‌ನ ರಾಯಲ್ ಕಾಲೇಜಿನಿಂದ ಮಂಜೂರಾದ ಶಿಷ್ಯವೇತನ ಬಳಸಿಕೊಂಡು ಲಂಡನ್‌ನಲ್ಲಿ ಮೂತ್ರಕೋಶ ಸಮಸ್ಯೆಗಳಬಗ್ಗೆ ಅಧ್ಯಯನ ಮಾಡಿದೆ. ಸ್ವಂತ ಆಸಕ್ತಿಯಿಂದ ಮಾಡಿದ ಈ ಅಧ್ಯಯನಗಳು ಸಶಸ್ತ್ರ ಪಡೆಗಳಿಗಾಗಿ ಹಲವು ಘಟಕಗಳನ್ನು ಸ್ಥಾಪಿಸಲು ಮತ್ತು ವೈದ್ಯಕೀಯ ಸಂಶೋಧನೆ ಮತ್ತು ಅನ್ವೇಷಣೆಗಳಲ್ಲಿ ಆಗಬೇಕಿದ್ದ ಕಾರ್ಯಗಳನ್ನು ಗುರುತಿಸಲು ಸಹಾಯವಾದವು.

ಅನ್ವೇಷಣೆಯ ಮನೋಭಾವ ಬೇಕು: ನಮ್ಮ ಕಾಲೇಜು ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಇಲ್ಲಿ ಸಂಶೋಧನೆಗೆ ಇನ್ನಷ್ಟು ಒತ್ತು ನೀಡಬೇಕು ಎನ್ನುವುದು ನನ್ನ ಆಸೆ. ಯುವಜನರಲ್ಲಿ ಸಂಶೋಧನೆ ಪ್ರವೃತ್ತಿ ಬೆಳೆಯಲು ಪ್ರತ್ಯೇಕ ಘಟಕ ಸ್ಥಾಪಿಸಬೇಕು ಎನ್ನುವ ನನ್ನ ಪ್ರಸ್ತಾವವನ್ನು ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹೊಸಥರ ಯೋಚಿಸುವುದನ್ನು ವಯಸ್ಸಾದ ಮೇಲೆ ಕಲಿಸಲು ಆಗುವುದಿಲ್ಲ. ಅನ್ವೇಷಣೆಯ ಪ್ರವೃತ್ತಿಯು ಚಿಕ್ಕವಯಸ್ಸಿನಲ್ಲಿಯೇ ಆರಂಭವಾಗಬೇಕು.

ನಮ್ಮ ಕ್ಯಾಂಪಸ್‌ನಲ್ಲಿಸಣ್ಣಮಕ್ಕಳನ್ನು ನೋಡಿಕೊಳ್ಳುವ ಬಾಲವಾಡಿಯೊಂದನ್ನು ಆರಂಭಿಸಲು ಯತ್ನಿಸುತ್ತಿದ್ದೇನೆ. ಸಣ್ಣಮಕ್ಕಳನ್ನು ಬೆಳೆಸುವ ಕಷ್ಟ ಏನು ಎಂದು ನನಗೆ ಗೊತ್ತು. ಯುವ ತಾಯಂದಿರ ಸಾಧನೆಗೆ ಮಾತೃತ್ವ ಅಡ್ಡಿಯಾಗಬಾರದು ಎನ್ನುವುದು ನನ್ನ ಕಾಳಜಿ. ‘ಇಲ್ಯುಮಿನಟಿ’ ಹೆಸರಿನ ವಿಜ್ಞಾನ ಹಬ್ಬವನ್ನೂ ನಿಯಮಿತವಾಗಿ ಆಯೋಜಿಸುತ್ತೇವೆ. ಇದು ಅನ್ವೇಷಣೆಗಳ ಮ್ಯಾರಥಾನ್. ನನ್ನ ವೃತ್ತಿ ಅನುಭವದಲ್ಲಿ ನಾನು ಏನೇನು ಕಂಡುಕೊಂಡಿದ್ದೇನೆಯೋ ಅದೆಲ್ಲವನ್ನೂ ಕಾಲೇಜಿಗೆ ಮರಳಿ ಕೊಡುತ್ತಿದ್ದೇನೆ. ನನ್ನ ಬದುಕಿನ ಶೇ80ರಷ್ಟು ಸಮಯವನ್ನು ವೃತ್ತಿಗೆ ಮೀಸಲಾಗಿದೆ. ನಿವೃತ್ತಳಾಗುವವರೆಗೂ ಈ ಬದ್ಧತೆ ಹೀಗೆಯೇ ಇರುತ್ತದೆ.

ಡಿ.ಎಂ.ಘನಶ್ಯಾಮ
ಡಿ.ಎಂ.ಘನಶ್ಯಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT