ಭಾನುವಾರ, ಏಪ್ರಿಲ್ 18, 2021
33 °C

ಮಹಿಳಾ ದಿನಾಚರಣೆ: ಸಹೋದರಿಯರ ಯುಗಳ ಗೀತೆ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

Prajavani

ನಾವು ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಸಣ್ಣ ಹಳ್ಳಿ ಮುರೂರಿನವರು. ಸಂಗೀತದ ಗಂಧವಿರುವ ಎಲ್ಲರ ಮನೆಗಳಲ್ಲಿ ಸಾಮಾನ್ಯವಾಗಿ ತಂದೆ–ತಾಯಿಯರು ಮಕ್ಕಳ ಸಂಗೀತ ಕಲಿಕೆಗೆ ಪ್ರೋತ್ಸಾಹಿಸುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಿರಿಯರು ಯಾರೂ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿರಲಿಲ್ಲ. ಜೊತೆಗೆ ಹೆಚ್ಚು ಅವಕಾಶಗಳಿಲ್ಲದ ಸಣ್ಣ ಊರು. ನಮ್ಮ ಸಂಗೀತಾಸಕ್ತಿ ಕಂಡು ತಂದೆ ಸಂಗೀತ ಗುರುಗಳ ಬಳಿ ಸೇರಿಸಿ ಕಲಿಸಿದರು. ನಾವು ರಿಯಾಜ್‌ ಮಾಡುವುದು ನೋಡಿ ಅಪ್ಪ ಅಮ್ಮನಿಗೂ ಎಲ್ಲಿಲ್ಲದ ಸಂಗೀತಾಸಕ್ತಿ ಬಂತು. ಅವರೂ ನಮ್ಮೊಂದಿಗೆ ಶಾಸ್ತ್ರೀಯ ಸಂಗೀತ ಕಲಿಯಲಾರಂಭಿಸಿದರು. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತದ ಜೂನಿಯರ್‌ ಗ್ರೇಡ್‌ ಪರೀಕ್ಷೆಯನ್ನು ನಮ್ಮಿಬ್ಬರ ಜೊತೆಗೆ ಅಪ್ಪ ರಾಮಚಂದ್ರ ಭಟ್ ಹಾಗೂ ಅಮ್ಮ ಆಶಾ ಭಟ್ ಸಹ ಬರೆದಿದ್ದರು.

ಪೋಷಕರು ನಮ್ಮನ್ನು ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣನವರ್ ಅವರ ಬಳಿ ಸಂಗೀತ ಕಲಿಕೆಗೆ ಸೇರಿಸಿದರು. ಮುಂದೆ ನಾವಿಬ್ಬರೂ ಕೋಲ್ಕತ್ತದ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ವಿದುಷಿ ಶುಭ್ರ ಗುಹಾ ಅವರ ಮಾರ್ಗದರ್ಶನವ‌ನ್ನೂ ಪಡೆದೆವು.

ಸತತ ಪರಿಶ್ರಮದಿಂದ ಸಂಗೀತ ಕಲಿತು ನಾನು (ರೇಷ್ಮಾ) ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದೆಯಾದೆ. ಧಾರವಾಡ ಆಕಾಶವಾಣಿಯಲ್ಲಿ ನಿರಂತರವಾಗಿ ಶಾಸ್ತ್ರೀಯ, ಲಘು ಸಂಗೀತ ಕಛೇರಿ ನೀಡುತ್ತಲೇ ಬಂದಿದ್ದೇವೆ. ನಾನು ಓದಿದ್ದು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌, ಎಂ.ಟೆಕ್‌ ಪದವಿ. ತಂಗಿ ರಮ್ಯಾ ಓದಿದ್ದು ಇನ್‌ಸ್ಟ್ರುಮೆಂಟೇಶನ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ. ಆದರೆ ನಮ್ಮಿಬ್ಬರ ಒಲವು ಸಾಂಪ್ರದಾಯಿಕ ಸಂಗೀತ ಕಲೆಯತ್ತಲೇ.

ಹಲವು ಸಂಗೀತ ಪ್ರಶಸ್ತಿ, ಪುರಸ್ಕಾರಗಳೂ ನಮಗೆ ಸಿಕ್ಕಿವೆ. ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಯುವ ಪುರಸ್ಕಾರ, ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದಿಂದ ಗಾನ ಜ್ಯೋತಿ ಪುರಸ್ಕಾರ, ಕಲಬುರ್ಗಿಯ ಮಹಾಂತ ಜ್ಯೋತಿ ಪ್ರತಿಷ್ಠಾನದಿಂದ ಕಲಾ ಜ್ಯೋತಿ ಪುರಸ್ಕಾರ ಮುಂತಾದವು ಹಾಗೂ ರಮ್ಯಾಳಿಗೆ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್‌ ಪ್ರತಿಷ್ಠಾನದ ಪ್ರಶಸ್ತಿ, ಕಲಾ ಪ್ರತಿಭೋತ್ಸವದಲ್ಲಿ ಸತತವಾಗಿ ಪ್ರಥಮ ಬಹುಮಾನ ಲಭಿಸಿದೆ. ಕೆಲವಾರು ಸಂಗೀತದ ಆಲ್ಬಂಗಳನ್ನೂ ಹೊರತಂದಿದ್ದೇವೆ.

ಸಂಗೀತ ಕಲಿಕೆ ನಮಗೆಷ್ಟು ಸವಾಲಾಗಿತ್ತು ಎಂದರೆ, ಶಾಲಾ– ಕಾಲೇಜು ದಿನಗಳಲ್ಲಿ ಪರೀಕ್ಷೆಯ ದಿನಗಳಲ್ಲೂ ನಾವು ನಮ್ಮ ರಿಯಾಜ್‌ ಬಿಡುವಂತಿರಲಿಲ್ಲ. ಯೂಟ್ಯೂಬ್‌ನಲ್ಲಿ ಮರಾಠಿ ಅಭಂಗಗಳನ್ನು ಕೇಳಿಕೇಳಿ ಕಲಿತೆವು. ಹೊಸದನ್ನು ಕಲಿಯುವುದು, ಆಸ್ವಾದಿಸುವುದು, ಹಾಡುವುದು ನಮಗೆ ಎಂದಿಗೂ ಇಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು