ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Womens Day | ಸಾಮರ್ಥ್ಯಕ್ಕೆ ಪರ್ಯಾಯ ‘ಸ್ತ್ರೀ’

Last Updated 7 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.

***

ಚಿಕ್ಕಂದಿನಿಂದಲೂ ನೀರಿನ ಸೆಳೆತ, ನೀರಾಟವನ್ನೇ ಇಷ್ಟಪಡುವ ನನ್ನನ್ನು ಅಜ್ಜ ಕಡಲತಡಿಗೆ ಕರೆದುಕೊಂಡು ಹೋಗುತ್ತಿದ್ದರು. ಒಂಬತ್ತು ವರ್ಷ ಇರುವಾಗ ಸರ್ಫಿಂಗ್ ಕಲಿಯಲು ಶುರು ಮಾಡಿದೆ. ಶಾಲೆಗೆ ರಜೆ ಇದ್ದಾಗಲೆಲ್ಲ ಅಜ್ಜ ನನಗೆ ಹೆಗಲಾಗುತ್ತಿದ್ದರು. ಅಮ್ಮ–ಅಪ್ಪನಿಗೆ ಅನುಮಾನ. ಮಗಳ ಮೈಬಣ್ಣ ಯಾಕೋ ಕಪ್ಪಾಗುತ್ತಿದೆ...ನಾನು ಸರ್ಫಿಂಗ್ ಕ್ಲಾಸ್‌ಗೆ ಹೋಗುತ್ತಿರುವುದು ಒಂದೆರಡು ವರ್ಷ ಅಪ್ಪ–ಅಮ್ಮನಿಗೆ ಗೊತ್ತೇ ಇರಲಿಲ್ಲ! ಅಜ್ಜ ಮತ್ತು ಅಣ್ಣ ಈ ಗುಟ್ಟನ್ನು ಕಾಪಿಟ್ಟಿದ್ದರು...

ಒಮ್ಮೆ ಈ ಗುಟ್ಟು ರಟ್ಟಾಯಿತು. ನನಗೆ ಈಜು ಬರ್ತಿರಲಿಲ್ಲ. ಅಮ್ಮನಿಗೆ ತಳಮಳ. ಸರ್ಫಿಂಗ್ ಬೇಡವೆಂದು ಪಟ್ಟುಹಿಡಿದರು. ಒಂದು ವರ್ಷದ ಸಂಘರ್ಷ ಕಳೆದು ಅಮ್ಮನನ್ನು ಒಪ್ಪಿಸಿ, ಮತ್ತೆ ಸರ್ಫಿಂಗ್ ಕ್ಲಾಸಿಗೆ ಸೇರಿದ್ದಾಯಿತು. ಎಲ್ಲರ ಬೆಂಬಲ, ಕಲಿಕೆಯ ಹುಮ್ಮಸ್ಸು ದುಪ್ಪಟ್ಟಾಯಿತು. ಈಗ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಮೆಡಲ್ ಸಿಕ್ಕಾಗಲಿಲ್ಲ ಜನಜಂಗುಳಿ ನಡುವೆ ನಾನು ಅಪ್ಪ–ಅಮ್ಮನನ್ನು ಅರಸುತ್ತೇನೆ. ಅಪ್ಪನಿಗೆ ಅನಾರೋಗ್ಯ, ಒಮ್ಮೆಯೂ ಅವರಿಗೆ ನನ್ನೊಟ್ಟಿಗೆ ಸ್ಪರ್ಧೆಗೆ ಬರಲಾಗಲಿಲ್ಲ. ಮೆಡಲ್ ಗೆದ್ದಾಗ ಅಪ್ಪನಿಗೆ ಕಾಲ್ ಮಾಡಿ ಸಂತಸ ಹಂಚಿಕೊಳ್ಳುತ್ತೇನೆ. ಕರೆಯಲ್ಲಿಯೇ ಸಂಭ್ರಮಿಸುವ ಅಪ್ಪ–ಅಮ್ಮನ ಖುಷಿಯನ್ನ ಹಿಡಿದಿಡಲು ಪದಗಳು ಸೋಲುತ್ತವೆ.

ಸರ್ಫಿಂಗ್‌ಗಿಂತ ಸ್ಟ್ಯಾಂಡಪ್ ಪ್ಯಾಡ್ಲಿಂಗ್ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸುತ್ತೇನೆ. 2015ರಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಬಾಚಿಕೊಂಡೆ. 2016ರಲ್ಲಿ ಮತ್ತೆ ಸತತ ಮೂರು ಚಿನ್ನದ ಪದಕಗಳು ದೊರೆತವು. ಇದೇ ವರ್ಷ ಸ್ಟ್ಯಾಂಡಪ್ ಪ್ಯಾಡ್ಲಿಂಗ್ ವರ್ಲ್ಡ್ ಕಪ್‌ನಲ್ಲಿ ಟಾಪ್ 16ರಲ್ಲಿ ನಾನೂ ಒಬ್ಬಳಾಗಿದ್ದೆ. ಇವನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಈಗಲೂ ನನ್ನತ್ರ, ‘ಯಾಕೆ ಹುಡುಗರ ಕ್ಷೇತ್ರವಾದ ಸರ್ಫಿಂಗ್ ನಿನಗೆ ಇಷ್ಟ’ವೆಂದು ಪ್ರಶ್ನಿಸುತ್ತಾರೆ.

‘ಯಾಕೆ ಇಷ್ಟು ಕಪ್ಪಾಗಿದ್ದೀಯಾ’ ಈ ಮಾತು ಕೇಳಿಕೇಳಿ ಸಾಕಾಗಿದೆ. ಹೆಣ್ಣಿಗೆ ಬಣ್ಣವೇ ಅಷ್ಟು ಪ್ರಧಾನವಾಗುತ್ತಾ? ಸದಾ ಕಾಡುವ ಪ್ರಶ್ನೆಯಿದು. ಇತ್ತೀಚೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದೇನೆ. ಸಂವೇದನೆ ಇಲ್ಲದವರಿಗೆ ಉತ್ತರಿಸುತ್ತಾ ನನ್ನ ಎನರ್ಜಿ ಯಾಕೆ ವೇಸ್ಟ್ ಮಾಡಿಕೊಳ್ಳಲಿ.

ಸರ್ಫಿಂಗ್ ಕಲಿಯುವ ಆಸಕ್ತ ಹೆಣ್ಣು ಮಕ್ಕಳಿಗೆ ಸುರಕ್ಷಾ ಭಾವ ಇರಬೇಕು. ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಕಡಲ್ ಸರ್ಫ್ ಸ್ಕೂಲ್ ನಡೆಸುತ್ತಿದ್ದೇನೆ. ಪ್ರತಿ ವರ್ಷ ಮಹಿಳಾ ದಿನಾಚರಣೆಯ ಒಂದು ವಾರ ಇಲ್ಲಿ ಹೆಣ್ಣು ಮಕ್ಕಳು ‘ಸರ್ಫ್ ಲೈಕ್ ಎ ಗರ್ಲ್’ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಸಾಮರ್ಥ್ಯಕ್ಕೆ ಪರ್ಯಾಯ ಪದ ಸ್ತ್ರೀ. ನಮ್ಮೊಳಗಿನ ಅದಮ್ಯ ಶಕ್ತಿ ಯಾವ ಸಾಧನೆಗೂ ಅಡ್ಡಿಯಾಗದು, ಭರವಸೆಯೊಂದನ್ನು ಬೊಗಸೆಯಿಂದ ಜಾರದಂತೆ ಜತನವಾಗಿಟ್ಟುಕೊಳ್ಳಿ.

-ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT