ಭಾನುವಾರ, ಮಾರ್ಚ್ 29, 2020
19 °C

ಭಪ್ಪರೆ.. ಬಾಪ್ಸಿ

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದು 80ರ ದಶಕ. ಆಗ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಕಡಿಮೆ ಇದ್ದರೂ ‘ಅರ್ಬುದ’ ಎಂಬ ಈ ಭಯಾನಕ ಮಹಾಮಾರಿಯ ಹೆಸರು ಕೇಳಿದರೆ ಬೆಚ್ಚಿಬೀಳುವವರೇ ಹೆಚ್ಚಾಗಿದ್ದ ಕಾಲವದು. ವೈದ್ಯಕೀಯ ವೃತ್ತಿಗಿಳಿಯಬೇಕೆಂಬ ಹಂಬಲವಿರುವ ಪುರುಷರೂ ಕ್ಯಾನ್ಸರ್‌ ವಿಷಯ ಬಿಟ್ಟು ಬೇರೆ ‘ಸಬ್ಜೆಕ್ಟ್‌’ ಆಯ್ದುಕೊಳ್ಳುತ್ತಿದ್ದರು. ಇಂತಹ ಸಮಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕನ್ನಡತಿಯೊಬ್ಬರು ‘ಮೆಡಿಕಲ್‌ ಆಂಕಾಲಜಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ದಿಟ್ಟತನ ಮೆರೆದರು. ಭಾರತದ ಮೊದಲ ಮಹಿಳಾ ಕ್ಯಾನ್ಸರ್‌ ತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೆನ್ನೈನ ಅಡ್ಯಾರ್‌ ಕ್ಯಾನ್ಸರ್‌ ಸಂಸ್ಥೆಯಲ್ಲಿ 1985ರಲ್ಲಿ ಮೊದಲ ಬಾರಿಗೆ ಆರಂಭಿಸಿದ ‘ಮೆಡಿಕಲ್‌ ಆಂಕಾಲಜಿ’ ಎಂ.ಡಿ ಕೋರ್ಸ್‌ನ ಪ್ರಥಮ ಬ್ಯಾಚ್‌ನಲ್ಲಿ ಪ್ರವೇಶ ಪಡೆದವರು ಬೆಂಗಳೂರಿನ ಡಾ. ಪಿ.ಪಿ. ಬಾಪ್ಸಿ. ಅವರಿಗೆ ಯಾವುದೇ ಮಹಿಳಾ ಸಹಪಾಠಿಗಳು ಇರಲಿಲ್ಲ. ಅವರು ಸೇರಿದ ಐದು ವರ್ಷಗಳ ನಂತರ ಮಹಿಳೆಯರು ಈ ಕೋರ್ಸ್‌ ಸೇರಲಾರಂಭಿಸಿದರು. ಹೀಗಾಗಿ ಕಾಲೇಜು ದಿನಗಳಲ್ಲೂ ಡಾ. ಬಾಪ್ಸಿ ಏಕೈಕ ಕ್ಯಾನ್ಸರ್‌ ವೈದ್ಯ ವಿದ್ಯಾರ್ಥಿನಿ!

ಈ ಕೋರ್ಸ್‌ ಸೇರುವುದಕ್ಕೂ ಮುನ್ನ ಬಾಪ್ಸಿ ನಾಲ್ಕು ವರ್ಷ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರು. ಅದಾಗಿ ಎರಡು ವರ್ಷಗಳ ಕೋರ್ಸ್‌ ಮುಗಿಸಿ ಬಂದು ಮತ್ತೆ ಕಿದ್ವಾಯಿ ಆಸ್ಪತ್ರೆಯಲ್ಲೇ ಸೇವೆ ಮುಂದುವರಿಸಿ ವಿವಿಧ ಹಂತಗಳ ವೈದ್ಯಕೀಯ ವೃತ್ತಿ ನಡೆಸಿ ನಿರ್ದೇಶಕಿಯಾಗಿಯೂ ಹಲವಾರು ವರ್ಷ ದುಡಿದರು. ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ 2007ರಲ್ಲಿ ಕ್ಯಾನ್ಸರ್‌ ವಿಭಾಗ ಆರಂಭಿಸುವಲ್ಲಿ ಡಾ. ಬಾಪ್ಸಿ ಅವರ ಕೊಡುಗೆ ದೊಡ್ಡದು.

ತಾವು ಕ್ಯಾನ್ಸರ್‌ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ರೋಗಿಗಳೊಂದಿಗೆ ವೃತ್ತಿಜೀವನದಲ್ಲಿ ಕಂಡುಂಡ ಅಪರೂಪದ ಘಟನೆಗಳನ್ನು ದಾಖಲಿಸಿದ ಪುಸ್ತಕ ‘ಹೋಪ್‌ ಟು ಕೋಪ್‌’ ವೈದ್ಯಕೀಯ ವಲಯದಲ್ಲಿ ಜನಪ್ರಿಯ ಕೃತಿ.

ಕ್ಯಾನ್ಸರ್‌ ರೋಗಿಗಳು ಸಂಪೂರ್ಣ ಗುಣಮುಖರಾದ ಬಳಿಕ ಯೋಗಾಸನ, ಡಯಟ್‌ ಮೂಲಕ ಹೇಗೆ ಸುಖಕರ ಜೀವನ ನಡೆಸಬಹುದು ಎಂಬ ಬಗ್ಗೆ ಬರೆದ ಉಪನ್ಯಾಸ ಆಧಾರಿತ ಬರಹವನ್ನು ಸಿಂಗಪುರದಲ್ಲಿ 2009ರಲ್ಲಿ ನಡೆದ ‘ಯುರೋಪಿಯನ್‌ ಸ್ಕೂಲ್‌ ಆಫ್‌ ಮೆಡಿಕಲ್‌ ಆಂಕಾಲಜಿ’ ವಿಶ್ವ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ ಹೆಮ್ಮೆ ಇವರದು. ಈ ಬರಹಕ್ಕೆ ‘ಬೆಸ್ಟ್ ಪೇಪರ್‌ ಅವಾರ್ಡ್‌’ ಕೂಡ ಲಭಿಸಿದೆ. ‘ಇಂಡಿಯನ್‌ ಮೆಡಿಕಲ್‌ ಆಂಕಾಲಜಿ ಅಸೋಸಿಯೇಷನ್‌’ನಿಂದ ಜೀವಮಾನದ ಸಾಧನೆಗಾಗಿ ನೀಡುವ ‘ಲೈಫ್‌ಟೈಮ್‌ ಅವಾರ್ಡ್‌’ಗೂ 2015ರಲ್ಲಿ ಭಾಜನರಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು