ಭಾನುವಾರ, ಮಾರ್ಚ್ 29, 2020
19 °C
ವಿಮಾನ ನಿಲ್ದಾಣದ ಮಹಿಳಾ ಅಗ್ನಿಶಾಮಕ ದಳದಲ್ಲಿ ತುಮಕೂರಿನ ರೂಪಾ

ಛಲದ ಬೆಂಕಿಯ ‘ಫೈರ್ ಫೈಟರ್‌’

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ವಿಮಾನವನ್ನು ಹತ್ತಿರದಿಂದಲೂ ನೋಡಿರಲಿಲ್ಲ. ತರಬೇತಿಗಾಗಿ ಕೋಲ್ಕತ್ತಾಗೆ ಹೋಗಲು ವಿಮಾನ ಏರಿದಾಗ ಬಹುದಿನದ ಕನಸು ನನಸಾಯಿತು. ಆದರೆ ಈಗ, ದೇಶದ ಮೊದಲ ಮಹಿಳಾ ವೈಮಾನಿಕ ಅಗ್ನಿಶಾಮಕ ದಳದ ಸದಸ್ಯೆ ಅನ್ನೋ ಹೆಮ್ಮೆ ನನ್ನದಾಗಿದೆ’ ಎಂದು ಕಣ್ಣರಳಿಸಿ ಹೇಳಿದರು ಎಚ್.ಸಿ. ರೂಪಾ. ತುಮಕೂರಿ‌ನ ಹೊಸಹಳ್ಳಿಯ ರೂಪಾ ಸದ್ಯ ಬೆಂಗಳೂರಿನ‌ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣ ನಿಗಮದ (ಬಿಐಎಎಲ್‌) ಅಗ್ನಿಶಾಮಕ ದಳದಲ್ಲಿ ‘ಫೈರ್ ಫೈಟರ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಹಿಳಾ ಅಗ್ನಿಶಾಮಕ ದಳದ 14 ಯುವತಿಯರಲ್ಲಿ ರೂಪಾ ಕೂಡ ಒಬ್ಬರು.

‘‘ನಮ್ಮ ಊರಿಂದ ಒಬ್ಬಳೇ ಒಬ್ಬಳು ಹುಡುಗಿಯೂ ಬೆಂಗಳೂರಿಗೆ ಕೆಲಸಕ್ಕೆ ಎಂದು ಹೋಗಿರಲಿಲ್ಲ. ಫೈರ್ ಫೈಟರ್ ಆಗ್ತೀನಿ ಅಂದಾಗ, ಊರವರೆಲ್ಲ ‘ಬೆಂಕಿ ಆರಿಸೋಕೆ ಹೋಗ್ತಾಳಂತೆ’ ಎಂದು ಆಡಿಕೊಂಡರು‌. ಆದರೆ, ಈಗ ನಾನು ಓದಿದ ಕಾಲೇಜಿನಿಂದ (ಸಿದ್ಧಾರ್ಥ ಕಾಲೇಜು) ನನಗೆ ಆಹ್ವಾನ ಬರುತ್ತಿದೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿಯ ನಾಲ್ಕು ಮಾತುಗಳನ್ನಾಡು ಬಾ ಎಂದು ಕರೆಯುತ್ತಿದ್ದಾರೆ’’ ಎಂದು ಅವರು ಹೇಳುತ್ತಾರೆ.

ಬಿ.ಕಾಂ ಪದವೀಧರೆಯಾಗಿರುವ ರೂಪಾ, ಸಿದ್ಧಾರ್ಥ ಕಾಲೇಜಿನಲ್ಲಿ ಓದುವಾಗಲೇ ಕ್ಯಾಂಪಸ್ ಸಂದರ್ಶನದಲ್ಲಿ ಈ ಕೆಲಸಕ್ಕೆ ಆಯ್ಕೆಯಾದವರು‌. ‘‘ಬಿಐಎಎಲ್‌ನ ಮಾನವ ಸಂಪನ್ಮೂಲ ತಂಡದವರು ನಮ್ಮ ಕಾಲೇಜಿಗೆ ಕ್ಯಾಂಪಸ್‌ ಸಂದರ್ಶನಕ್ಕಾಗಿ ಬರುವ ದಿನವೇ ಅಕ್ಕನ ಮದುವೆ ಇತ್ತು. ಸಂದರ್ಶನಕ್ಕೆ ಹಾಜರಾಗಲೇಬೇಕು ಎಂದು ನಾನು ಹಟ ಹಿಡಿದಿದ್ದೆ. ಆದರೆ, ಕುಟುಂಬದವರೆಲ್ಲ ವಿರೋಧಿಸಿದರು. ‘ಅಕ್ಕನ ಮದುವೆಗಿಂತ ನಿನಗೆ ಸಂದರ್ಶನವೇ ಮುಖ್ಯವೇ?’ ಎಂದು ಬೈದರು. ಆದರೆ, ನನ್ನಕ್ಕ ನನ್ನ ಬೆಂಬಲಕ್ಕೆ ನಿಂತಳು. ‘ನೀನು ಸಂದರ್ಶನಕ್ಕೆ ಹಾಜರಾಗು. ನೀನು ಆಯ್ಕೆಯಾದರೆ, ಅದೇ ನನ್ನ ಮದುವೆಗೆ ನಿಜವಾದ ಉಡುಗೊರೆ’ ಎಂದು ಕಳುಹಿಸಿಕೊಟ್ಟಳು. ನಾನು ಆಯ್ಕೆಯಾದೆ’’ ಎಂದು ಅವರು ನೆನಪಿಸಿಕೊಂಡರು.

‘ನನ್ನ ಸಹೋದರಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಆಗಿದ್ದಾಳೆ. ನಾನು ಫೈರ್‌ ಫೈಟರ್‌ ಆಗಲು ಅವಳೇ ನನಗೆ ಸ್ಫೂರ್ತಿ’ ಎಂದು ಸಾಧನೆಯ ನಗು ಬೀರುತ್ತಾರೆ ರೂಪಾ.

ಶೈಕ್ಷಣಿಕ ಅರ್ಹತೆ ಮಾತ್ರವಲ್ಲದೆ, ದೈಹಿಕ ಸಾಮರ್ಥ್ಯ ಮತ್ತು ಚುರುಕುತನವನ್ನು ಬಯಸುವ ಕೆಲಸ ಇದು. ಸುರಕ್ಷಿತವಾದ ಮತ್ತು ಸುಲಭ ಸ್ವರೂಪದ ಕೆಲಸಗಳನ್ನೇ ಆಯ್ಕೆ ಮಾಡಿಕೊಳ್ಳುವವರ ಮಧ್ಯೆ ರೂಪಾ ಅವರಂತಹ ಯುವತಿಯರು ವಿಭಿನ್ನವಾಗಿ ನಿಲ್ಲುತ್ತಾರೆ.  

ಅಗ್ನಿ ಅವಘಡ ನಡೆದಾಗ ಬೆಂಕಿ ನಿಯಂತ್ರಣಕ್ಕೆ ತರುವ ಬಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪ್ರಯಾಣಿಕರನ್ನು ರಕ್ಷಿಸಲು ಅನುಸರಿಸುವ ಕ್ರಮಗಳ ಬಗ್ಗೆ ರೂಪಾ ಅರಿತಿದ್ದಾರೆ. ವಿಮಾನ ರಕ್ಷಣೆ ಮತ್ತು ಅಗ್ನಿ ಅವಘಡ ವಿರುದ್ಧದ ಕಾರ್ಯಾಚರಣೆ (ಎ.ಆರ್‌.ಎಫ್‌.ಎಫ್‌) ತಂಡದ ಭಾಗವಾಗಿರುವ ರೂಪಾ ಮತ್ತು ಸಹೋದ್ಯೋಗಿಗಳ ಬ್ಯಾಚ್, ಅಣಕು ಪ್ರದರ್ಶನಗಳ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು