ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಹೃದಯಿ ಸುಂದರಿಯ ಸಾವಿಗೆ 23 ವರ್ಷ!

Last Updated 9 ಸೆಪ್ಟೆಂಬರ್ 2020, 8:25 IST
ಅಕ್ಷರ ಗಾತ್ರ

ಆಗಸ್ಟ್‌ 31, 1997

ಜಗತ್ತು ಒಂದು ಘೋರ ಸಾವು ಕಂಡ ದಿನ.

ಇಂಗ್ಲೆಂಡ್‌ ರಾಣಿ, ತನ್ನ ಅಸಾಧಾರಣ ಸೌಂದರ್ಯ, ಶ್ರೀಮಂತಿಕೆ, ಪ್ರತಿಭೆ, ಹೃದಯವಂತಿಕೆ, ವಿವಾದಗಳು, ವಿಲಕ್ಷಣ ಬದುಕಿನ ರೀತಿಯಿಂದ ವಿಶ್ವದ ಗಮನ ಸೆಳೆದ ಡಯಾನಾ ಬರ್ಬರ ಸಾವು ಕಂಡ ದಿನವದು. ಇದೇ ಆಗಸ್ಟ್‌ 31, 2020ಕ್ಕೆ ಡಯಾನಾ ಎನ್ನುವ ಅಪ್ರತಿಮ ಸುಂದರಿ ಈ ಜಗತ್ತಿಗೆ ವಿದಾಯ ಹೇಳಿ 23 ವರ್ಷಗಳಾದವು.

ಸೃಷ್ಟಿಯ ನಿಯಮವೇ ಹಾಗಿದೆ ಏನೊ. ಇಲ್ಲಿ ಪರಿಪೂರ್ಣ ಬದುಕು ಯಾರಿಗೂ ದಕ್ಕುವುದೇ ಇಲ್ಲ. ಎಲ್ಲಾ ಇದೆ ಎನ್ನುವ ಸಮಾಧಾನದ ನಡುವೆಯೂ ಎಲ್ಲೊ ಒಂದು ಕೊರತೆ ಉಳಿದೇ ಇರುತ್ತದೆ. ಡಯಾನಾ ಜೀವನದಲ್ಲೂ ಆಗಿದ್ದು ಅದೇ. ಇಂಗ್ಲೆಂಡ್‌ನ ಮಧ್ಯಮ ವರ್ಗದ ಕುಟುಂಬದ ಮೂರನೇ ಮಗಳಾಗಿ ಹುಟ್ಟಿದ ಡಯಾನಾ, ಚಿಕ್ಕಂದಿನಿಂದಲೂ ನೋವು, ನಿರಾಸೆಗಳನ್ನೇ ಅನುಭವಿಸುತ್ತ ಬಂದವಳು. ತಂದೆ-ತಾಯಿ ನಡುವಿನ ವೈಮನಸ್ಸು ಡಯಾನಾಳ ಬಾಲ್ಯದ ದಿನಗಳಲ್ಲಿ ಕರಿನೆರಳು ತುಂಬುತ್ತ ಹೋಯಿತು. 7 ವರ್ಷದವಳಿದ್ದಾಗ ಅವಳ ತಂದೆ–ತಾಯಿ ಪರಸ್ಪರ ದೂರವಾದರು. ತಾಯಿ ಪ್ರೀತಿಯಿಂದ ವಂಚಿತಳಾಗಿ, ಕೆಲ ದಿನ ಅಪ್ಪನ ಮನೆಯಲ್ಲಿ ಅಜ್ಜಿಯ ಆರೈಕೆಯಲ್ಲಿ ಬೆಳೆದಳು. ಅಜ್ಜಿ ತೀರಿಕೊಂಡ ನಂತರ, ಬೋರ್ಡಿಂಗ್ ಶಾಲೆಗೆ ಸೇರಿದಳು. ಆದರೆ ಅದೇಕೊ ಅವಳಿಂದ ಶೈಕ್ಷಣಿಕ ಸಾಧನೆ ಸಾಧ್ಯವಾಗಲಿಲ್ಲ. 16ನೇ ವಯಸ್ಸಿಗೆ ಶಾಲೆ ಬಿಟ್ಟು, ಉಪಜೀವನಕ್ಕಾಗಿ ಪಟ್ಟ ಪಾಡೂ ಅಷ್ಟಿಷ್ಟಲ್ಲ. ತನ್ನ ತಂದೆ ಕೊಡಿಸಿದ ಫ್ಲ್ಯಾಟನ್ನು ಕೆಲ ದಿನ ಸ್ನೇಹಿತೆಯರೊಂದಿಗೆ ಹಂಚಿಕೊಂಡು ಇದ್ದಳು. ಜೀವನದ ಖರ್ಚು ನೀಗಿಸಲು ತನ್ನ ಶ್ರೀಮಂತ ಗೆಳತಿಯರ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. ನಂತರ ಶಿಶುವಿಹಾರದಲ್ಲಿ ಸಹಾಯಕಿಯಾಗಿಯೂ ಕೆಲಸ ಮಾಡಿದಳು.

ಚಿಕ್ಕ ವಯಸ್ಸಿನಲ್ಲೇ ತನ್ನ ಬದುಕಿನ ತೇರನ್ನು ತಾನೇ ಎಳೆಯಬೇಕಾದ ಅನಿವಾರ್ಯತೆಗೆ ಬಿದ್ದ ಡಯಾನಾಳ ಮನಸ್ಸು ಅದಾಗಲೇ ದೊಡ್ಡದೊಡ್ಡ ಕನಸುಗಳನ್ನು ಹೊತ್ತು ಹೈರಾಣಾಗಿತ್ತು. ಏನೂ ಇಲ್ಲದ ವಾಸ್ತವ, ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಕನಸಿನ ನಡುವೆ ನಿಡುಸುಯ್ಯುತ್ತಲೇ ಬಣ್ಣಬಣ್ಣದ ಬದುಕನ್ನು ರೂಪಿಸಿಕೊಳ್ಳುವ ಉಮೇದಿಗೆ ಬಿದ್ದಳು. ತನ್ನ ಸ್ನಿಗ್ಧ ಸೌಂದರ್ಯ, ಪ್ರತಿಭೆ, ಬುದ್ಧಿವಂತಿಕೆಯ ಮೇಲೆ ಅವಳಿಗೆ ಸಾಕಷ್ಟು ವಿಶ್ವಾಸವಿತ್ತು. ತನ್ನ ಈ ಗುಣಗಳನ್ನೇ ಮುಂದಿಟ್ಟುಕೊಂಡು ಬದುಕಿಗೊಂದು ಭದ್ರ ಬುನಾದಿ ಹಾಕಿಕೊಳ್ಳಬೇಕು. ಜಗತ್ತಿನ ಎಲ್ಲಾ ಸುಖಗಳೂ ತನ್ನ ಕಾಲಡಿ ಬಂದು ಬೀಳುವಂತೆ ಬದುಕಬೇಕೆಂಬ ಹಂಬಲ ಶ್ರೀಮಂತ ವ್ಯಕ್ತಿಗಳ ಸ್ನೇಹ ಬೆಳೆಸಲು ಪ್ರೇರೇಪಿಸಿತು. ಎಂಥವರನ್ನೂ ಒಂದೇ ಕ್ಷಣಕ್ಕೆ ಸೆಳೆಯಬಲ್ಲ ಅವಳ ಸೌಂದರ್ಯಕ್ಕೆ ಇಂಗ್ಲಂಡ್‌ನ ರಾಜಕುಮಾರ ಚಾರ್ಲ್ಸ್ ಸಹ ಸೋತ.

ಹತಾಶೆಯ ಮತ್ತೊಂದು ರೂಪ

ಜುಲೈ 29, 1981. ಡಯಾನಾಳ ಬದುಕಿನ ಬಹುದೊಡ್ಡ ಅಧ್ಯಾಯ ಆರಂಭವಾದ ದಿನ. 19ನೇ ವಯಸ್ಸಿಗೆ ನಮ್ಮ ನಡುವಿನ ಸಾಧಾರಣ ಹುಡುಗಿಯರಂತೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡೇ ಹಸೆಮಣೆ ಏರಿದ ಡಯಾನಾ, ಅಲ್ಲಿಗೇ ತನ್ನ ನೋವು–ನಿರಾಸೆಯ ಅಧ್ಯಾಯ ಮುಗಿಯಿತೆನ್ನುವ ನಿರಾಳತೆ ಕಂಡಳು. ಇಂಗ್ಲಂಡ್‌ನ ರಾಜಮನೆತನದ ಮುಖ್ಯ ಸ್ಥಾನವನ್ನು ಅಲಂಕರಿಸಿದ ತನಗೆ ಇನ್ನೆಲ್ಲಿಯ ದುಃಖ–ದುಮ್ಮಾನ ಎನ್ನುವ ನೆಮ್ಮದಿ ನೆಲೆಯೂರಿತು. ಭಾರತವೂ ಸೇರಿದಂತೆ ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ, ಮನೆಮನೆಗಳಲ್ಲಿ ರಾಣಿ ಡಯಾನಾಳ ಅದ್ಧೂರಿ ಮದುವೆಯನ್ನು ಟೀವಿ ಪರದೆಯ ಮೇಲೆ ನೋಡಿ ಜನ ಕಣ್ತುಂಬಿಕೊಂಡರು.

ಆದರೆ ಎಲ್ಲವೂ ಅವಳು ಅಂದಾಜಿಸಿದಂತೆ ನಡೆಯಲಿಲ್ಲ. ‘ಇಂಗ್ಲೆಂಡ್‌ನ ರಾಣಿಯಾಗಿ ಮೆರೆಯಲಿರುವ ನಾನು ಇನ್ನು ಎಲ್ಲ ಬವಣೆಗಳನ್ನೂ ತೊಡೆದುಕೊಂಡು ಬಿಡಲಿದ್ದೇನೆ’ ಎಂಬ ಅವಳ ಉಮೇದು ಜರ್ರನೇ ಇಳಿದು ಹೋಗಲು ಹೆಚ್ಚು ದಿನವೇನೂ ಬೇಕಾಗಲಿಲ್ಲ. ಸಂವೇದನಗೆಳಿಗೆ, ಮಾನವೀಯತೆಗೆ ಹೆಸರಾಗಿದ್ದ ಡಯಾನಾ, ತನ್ನ ಇತಿಮಿತಿಯ ಬದುಕಿನಲ್ಲೂ ತನ್ನ ಗೆಳೆಯ–ಗೆಳತಿಯರಿಗೆ ನೆರವಾಗುತ್ತಿದ್ದ ಡಯಾನಾ, ತನ್ನಲ್ಲಿ ಎರಡು ಬ್ರೆಡ್ಡುಗಳಿದ್ದರೆ ಒಂದನ್ನು ರಸ್ತೆಯ ಮೇಲೆ ಹಸಿವಿನಿಂದ ಮುದುಡಿ ಕುಳಿತ ಭಿಕ್ಷುಕನ ಕೈಗೆ ಹಾಕುತ್ತಿದ್ದ ಡಯಾನಾ, ಬಹಳ ಬೇಗ ರಾಜಮನೆತನದ ಕಟ್ಟುನಿಟ್ಟಿಗೆ, ಬಿಗಿತನಕ್ಕೆ ರೋಸಿ ಹೋದಳು. ಯಾವ ಆಡಂಭರ, ಅರಸೊತ್ತಿಗೆಗೆ ಹಂಬಲಿಸಿದಳೊ ಆ ಬದುಕು ಬಹಳ ಬೇಗ ಹೇವರಿಕೆ ಹುಟ್ಟಿಸಿತು. ರಾಜಮನೆತನದ ಸಂಪ್ರದಾಯ, ಕೃತಕ ನಡವಳಿಕೆ, ಗಾಂಭೀರ್ಯ, ವೈಭೋಗಗಳು ಠೊಳ್ಳು ಎಂದೆನಿಸಲು ಬಹಳ ಸಮಯವೇನೂ ಬೇಕಾಗಲಿಲ್ಲ ಅವಳಿಗೆ.

ರಾಜಕುಮಾರ ಚಾರ್ಲ್ಸ್ ಬಗೆಗಿನ ಆಸಕ್ತಿಯೂ ಅಷ್ಟೇ ವೇಗವಾಗಿ ಇಳಿದು ಹೋಯಿತು. ಚಾರ್ಲ್ಸ್ ತಾನಂದುಕೊಂಡ, ತಾನು ಬಯಸಿದ, ತಾನು ಮೆಚ್ಚುವ ಪ್ರೇಮಿಯಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅವಳಿಗೆ ಬಹಳೇ ತ್ರಾಸದಾಯಕವಾಯಿತು. ಎಲ್ಲದರಲ್ಲೂ ಚಾರ್ಲ್ಸ್ ಅವಳಿಗಿಂತ ಬಹಳ ‘ಎತ್ತರ’ದಲ್ಲಿದ್ದ. ಆಸೆ- ಆಕಾಂಕ್ಷೆ, ಅಭಿರುಚಿ, ಆಸಕ್ತಿ, ಹಿನ್ನೆಲೆ ಎಲ್ಲದರಲ್ಲೂ ಅವರಿಬ್ಬರ ನಡುವೆ ಬಹುದೊಡ್ಡ ಅಂತರವಿತ್ತು. ಅವನ ಹಿರಿಯ, ಶ್ರೀಮಂತ ಮತ್ತು ಬುದ್ಧಿವಂತ ಸ್ನೇಹಿತರು, ಬಂಧುಗಳು ಡಯಾನಾಗೆ ತನ್ನವರೆನಿಸಲೇ ಇಲ್ಲ. ಅವರೂ ಅವಳನ್ನು ಪರಕೀಯಳನ್ನಾಗಿಯೇ ಕಂಡರು. ರಾಜಮನೆತನದ ಮನರಂಜನಾ ಕ್ರೀಡೆಗಳು, ಹರಟೆಗಳು, ವಿಷಯಗಳಲ್ಲಿ ಅವಳಿಗೆ ಆಸಕ್ತಿ ಹುಟ್ಟಲಿಲ್ಲ. ಅರಸೊತ್ತಿಗೆಯ ಪ್ರಮುಖ ವಿಚಾರಗಳೆಲ್ಲ ಅವಳಿಗೆ ಅರ್ಥಹೀನ ಎನಿಸಲು ಆರಂಭವಾದವು. ರಾಯಲ್ ಜೀವನಶೈಲಿ ಅವಳಿಗೆ ಬಹಳ ಬೇಗ ರೇಜಿಗೆ ಹುಟ್ಟಿಸಲು ಆರಂಭಿಸಿತ್ತು.

ಅಸಮಾಧಾನದ ಹೊಗೆ

ಡಯಾನಾ ಜೊತೆಗೆ ಚಾರ್ಲ್ಸ್ ಹೊರಗೆ ಹೆಜ್ಜೆ ಹಾಕಿದಾಗೆಲ್ಲ ಜನ ಹಿಂದೆಂದಿಗಿಂತ ಹೆಚ್ಚೇ ಮುತ್ತಿಕೊಳ್ಳುತ್ತಿದ್ದರು. ರಾಜಮನೆತನದ ಚಾರ್ಲ್ಸ್ ಗಿಂತಲೂ ಪಾರಿಜಾತದಂತೆ ಕಂಗೊಳಿಸುವ ಡಯಾನಾ, ಅವಳ ಆಕರ್ಷಕ ಕೂದಲು, ವಿಭಿನ್ನ ಹೇರ್‌ಸ್ಟೈಲ್‌, ವಿಶಿಷ್ಟವಾದ ಗೌನ್‌ಗಳು, ಮೋಹಕ ನಗುವಿಗೆ ಜನ ಮರುಳಾಗುತ್ತಿದ್ದರು. ಅವಳ ಮುಖದ ಮೇಲೆ ಸದಾ ವಿರಾಜಮಾನವಾಗಿರುತ್ತಿದ್ದ ನಿಶ್ಕಲ್ಮಶ ನಗುವಿಗೆ ಜನಸಾಮಾನ್ಯರೂ, ರಾಜಮನೆತನಗಳೂ, ಮಾಧ್ಯಮಗಳೂ ಸಮ್ಮೋಹನಗೊಳ್ಳುತ್ತಿದ್ದುದೂ ಸತ್ಯ.

ಆದರೆ ಈ ಎಲ್ಲ ಸಂಗತಿಗಳಿಂದ ಹೆಮ್ಮೆ ಪಡಬೇಕಿದ್ದ ಚಾರ್ಲ್ಸ್‌ ಮುಜುಗರ ಹಾಗೂ ಅಸಮಾಧಾನದಕ್ಕೆ ಒಳಗಾದುದು ವಿಪರ್ಯಾಸ. ಚಾರ್ಲ್ಸ್‌ನ ಮುಖದ ಮೇಲಿನ ಅಸಮಾಧಾನದ ಗೆರೆಗಳನ್ನು ಆಗಾಗ್ಗೆ ಎಣಿಸುತ್ತಲೇ ಇದ್ದ ಡಯಾನಾ ಅವನ ನಡವಳಿಕೆಗೆ ಕುಗ್ಗಿ ಹೋದಳು. ಹೀಗೆ ಆರಂಭದಲ್ಲೇ ಅವರ ನಡುವೆ ಮಿಸುಕಾಡುತ್ತಿದ್ದ ವಿಷಾದದ ಎಳೆಯೊಂದು ದಿನದಿನಕ್ಕೂ ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತಲೇ ಹೋಯಿತು.

ರಾಜಕುಮಾರ ತನ್ನನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎನ್ನುವ ಜಿಗುಪ್ಸೆ ಡಯಾನಾಳಲ್ಲೂ ಸೇಡು–ಕ್ರೋದದ ಭಾವವನ್ನು ಹುಟ್ಟಿಸಿತ್ತು. ಆದರೆ ಒಮ್ಮೆ ಮಾಧ್ಯಮದ ಸಂದರ್ಶನ ಒಂದರಲ್ಲಿ, ‘ನಾನು ಡಯಾನಾಳನ್ನು ಪ್ರೀತಿಸಿರಲೇ ಇಲ್ಲ, ಅದೊಂದು ದುಡುಕಿನ ನಿರ್ಧಾರ’ ಎಂಬ ಹೇಳಿಕೆ ಕೊಟ್ಟಾಗ ರೋಶದಿಂದ ಕುದ್ದು ಹೋದಳು ಡಯಾನಾ.

ಪ್ರೀತಿ, ಕರುಣೆ, ಸ್ನೇಹ ಭಾವದಿಂದ ಚಿರಪರಿಚಿತಳಾದ ಡಯಾನಾ, ರಾಣಿಯ ಪೋಷಾಕಿನೊಳಗೆ ತೂರಿಕೊಳ್ಳಲು ಶ್ರಮಿಸಿಯೂ ವಿಫಲಳಾದಳು. ಸಣ್ಣ ಸಣ್ಣ ವಿಚಾರಗಳಲ್ಲಿ ಅವಳಿಗೆ ಅದಮ್ಯ ಖುಷಿ. ರಸ್ತೆ ಬದಿಯಲ್ಲಿ ಪೋಲಿ ಜೋಕು ಮಾಡುತ್ತಾ, ಕಟ್ಟೆಯ ಮೇಲೆ ಕುಳಿತು ಮಹತ್ವವಲ್ಲದ ವಿಚಾರಗಳನ್ನು ಹರಟುವ ಸ್ನೇಹ ವಲಯ ಅವಳದು. ಬೇಕೆನಿಸಿದ್ದನ್ನು ತಿಂದು, ಚಂದ ಕಂಡದ್ದನ್ನು ತೊಟ್ಟು, ಮನಸ್ಸು ಬಂದಲ್ಲಿ ಓಡಾಡುವ ಹುಮ್ಮಸ್ಸಿನ ಹುಡುಗಿ. ಆದರೆ ಆ ಬಂಗಾರದ ಪಂಜರದಲ್ಲಿ ಅಂಥದ್ದಕ್ಕೆಲ್ಲ ಆಸ್ಪದ ಇರಲಿಲ್ಲ. ತನಗಿಷ್ಟವಾದ ಸರಳ ಉಡುಗೆ ಧರಿಸುವುದೂ ಅಸಾಧ್ಯವಾಯಿತು. ಕಿರಿಕಿರಿ ಎನಿಸುತ್ತಿದ್ದ ಕೋಟ್ ಹಾಗೂ ಮ್ಯಾಕ್ಸಿ ಧರಿಸುವಂತೆ ಒತ್ತಡ. ತಿನ್ನಲು, ತೊಡಲು, ಮಾತನಾಡಲೂ ಅಲ್ಲಿ ಗೆರೆಗಳಿದ್ದವು. ಇಂತಹ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಒಂದು ರೀತಿಯ ಮನೋವೇದನೆಗೆ ಒಳಗಾದ ಡಯಾನಾ ಎಲ್ಲವನ್ನೂ, ಎಲ್ಲರನ್ನೂ ಪ್ರಶ್ನಿಸುವ, ತಿರಸ್ಕರಿಸುವ ಭಂಡತನಕ್ಕೆ ಬಿದ್ದಳು.

ಇದೆಲ್ಲದರ ನಡುವೆಯೇ ವಿಲಿಯಮ್ ಮತ್ತು ಹ್ಯಾರಿ ಮಡಿಲು ತುಂಬಿದ್ದರು. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತ, ಅವರ ಆರೈಕೆಯಲ್ಲಿ ನೋವು ಮರೆಯಲು ಯತ್ನಿಸಿದಳು. ತಾಯಿಯಿಂದ ದೂರಾಗಿ ತಾನು ಅನುಭವಿಸಿದ ಯಾತನೆ ತನ್ನ ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ, ಮುರಿದು ಹೋದ ಸಂಸಾರವನ್ನು ಮತ್ತೆ ಕಟ್ಟಲು ಹವಣಿಸಿದಳು. ಆದರೆ ಆ ಅರಮನೆಯಲ್ಲಿ ಅವಳಿಗೆ ಪ್ರೀತಿ, ವಿಶ್ವಾಸ, ಗೌರವ, ಕಾಳಜಿ, ಕೊನೆಯ ಪಕ್ಷ ಚಿಕ್ಕದೊಂದು ಅನುಭೂತಿಯೂ ದಕ್ಕದಾಯಿತು. ಚಾರ್ಲ್ಸ್‌ನ ಮನಸ್ಸಿನಲ್ಲಿಯಾದರೂ ತನಗೊಂದು ಜಾಗ ಸಿಗುವುದೇನೊ ಎಂದು ಬಹಳ ದಿನ ಕಾಯ್ದಳು. ಅವಳು ಹತ್ತಿರ ಹೋದಾಗಲೆಲ್ಲಾ ಚಾರ್ಲ್ಸ್‌ ದೂರ ಸರಿಯುತ್ತಿದ್ದ. ಅವಳ ಉಪಸ್ಥಿತಿ–ಅನುಪಸ್ಥಿತಿ ಯಾವುದೂ ತನಗೆ ಎಳ್ಳಷ್ಟೂ ಮುಖ್ಯವಲ್ಲ ಎನ್ನುವಂತೆ ವರ್ತಿಸುತ್ತಿದ್ದ. ಅವನ ಪ್ರೀತಿಯಿಂದ ವಂಚಿತಳಾದ ಡಯಾನಾಳ ಒಳಗಿನ ಪುಟ್ಟ ಪ್ರೇಮಿ ವ್ಯಾಘ್ರಳಾದಳು. ಎಲ್ಲವನ್ನೂ ಪಡೆದ ನಂತರವೂ ಬದುಕು ಖಾಲಿ ಅನಿಸಲು ಶುರುವಾಯಿತು. ವಿವಾಹ ಬಂಧನದಾಚೆ ಪ್ರೀತಿಗಾಗಿ ಕೈಚಾಚಿದಳು.

ಮುರಿದು ಬಿತ್ತು ಸಂಸಾರ

1981ರ ಜುಲೈ 29ರಂದು ಜಗತ್ತಿನ ಎಲ್ಲ ಪತ್ರಿಕೆಗಳ ಮುಖಪುಟವನ್ನೂ ಭರ್ತಿ ಮಾಡಿದ್ದ ಆ ಅದ್ಧೂರಿ ಮದುವೆ ಡಿಸೆಂಬರ್ 1992ಕ್ಕೆ ಅಂತ್ಯ ಕಂಡಿತು. ಚಾರ್ಲ್ಸ್‌ನಿಂದ ಬೇರ್ಪಟ್ಟ ನಂತರ ಅವಳ ಪ್ರೇಮದಾಹ ಹೆಚ್ಚುತ್ತಲೇ ಹೋಯಿತು. ಈ ಹತ್ತು ವರ್ಷಗಳ ಅವಧಿಯಲ್ಲಿ ಅವಳು ಹಣ, ಅಧಿಕಾರ, ಜನಮನ್ನಣೆ ಎಲ್ಲವನ್ನೂ ಪಡೆದುಕೊಂಡಿದ್ದಳು. ಆದರೆ ಪ್ರೀತಿಯ ಹಸಿವು ಮಾತ್ರ ತಣಿಯಲೇ ಇಲ್ಲ. ಬದುಕಿನ ಕಟ್ಟಕಡೆಯ ಗಳಿಗೆಯವರೆಗೂ ಹುಡುಕುತ್ತಿದ್ದ ನಿಷ್ಕಾಮ ಪ್ರೇಮ ಅವಳ ತೆಕ್ಕೆಗೆ ಸಿಗಲೇ ಇಲ್ಲ. ವೈವಾಹಿಕ ಜೀವನಕ್ಕೆ ಕೊನೆ ಹಾಡಿದ ನಂತರ ಸಮಸ್ಯೆಗಳೆಲ್ಲ ಕೊನೆಗೊಳ್ಳುತ್ತವೆ ಎಂದುಕೊಂಡಳು. ಆದರೆ ಮದುವೆ ಮುರಿದು ಬಿದ್ದ ನಂತರವೂ ಅವಳ ಬದುಕು ಸರಿಯಾದ ದಿಕ್ಕೆನೆಡೆಗೆ ಸಾಗಲೇ ಇಲ್ಲ. ಪ್ರೀತಿ ಅರಸಿ ಹೋದಲ್ಲೆಲ್ಲ ಸೋಲೇ ಸಿಕ್ಕಿತು. ಪ್ರೇಮದ ಹುಡುಕಾಟದಲ್ಲಿ ತೆಕ್ಕೆಗೆ ಸಿಕ್ಕಿದ್ದು ಬರೀ ಒಂದಷ್ಟು ಮೋಜಷ್ಟೇ...

ಪ್ರೀತಿಯ ಬೆನ್ನು ಹತ್ತಿ

ಅವಳು ಪ್ರೀತಿ ಅರಸಿ ಬೆನ್ನುಹತ್ತಿದ ವ್ಯಕ್ತಿಗಳು ಹಲವರು. ಅವರಲ್ಲಿ ಅವಳು ಭರವಸೆಯಿಟ್ಟು ಪ್ರೀತಿಸಿದ್ದು ಡಾ. ಹಸ್ನತ್ ಖಾನ್ ಎಂಬ ಹೃದಯ ತಜ್ಞನನ್ನು. ಆತ ರೋಗಿಗಳನ್ನು ಅತ್ಯಂತ ತನ್ಮಯತೆಯಿಂದ ಉಪಚರಿಸುತ್ತಿದ್ದ ರೀತಿಗೆ ಸೋತಳು. ಅವನಿಗಾಗಿ ಅವಳು ಏನೆಲ್ಲ ಮಾಡಿದಳು. ಹೃದಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಓದಿದಳು. ಖುರಾನ್ ಅನ್ನು ಎದೆಗವುಚಿಕೊಂಡು ಗೌರವ ಸೂಚಿಸಿದಳು. ಆದರೆ ಅವರಿಬ್ಬರೂ ವಿರುದ್ಧ ಮನೋಭಾವದವರು. ಖಾನ್ ಬಹಳ ಬೇಗ ಅವಳಿಂದ ದೂರವಾದ. ಕೆಲ ದಿನ ಮತ್ತೆ ನೋವಿನ ಮನೆ ಸೇರಿದವಳಿಗೆ ಫಯಾದ್ ದೋದಿಯೊಂದಿಗಿನ ಸ್ನೇಹ ಸಮಾಧಾನ ಸಿಂಪಡಿಸಿತು. ಇಬ್ಬರೂ ಬಹು ಬೇಗ ಹತ್ತಿರವಾದರು. ಮಕ್ಕಳೊಂದಿಗೆ ಹೋಗಿ ಅವನೊಂದಿಗೆ ರಜದ ದಿನಗಳನ್ನು ಕಳೆದು ಬರುತ್ತಿದ್ದಳು. ಅವನೊಂದಿಗೆ ಮದುವೆಯಾಗಿ ನೆಮ್ಮದಿಯಿಂದ ಬದುಕುವ ಕನಸೂ ಹುಟ್ಟಿತ್ತು. ಆದರೆ ಅದಕ್ಕೆ ಅವಕಾಶವನ್ನೇ ಕೊಡದ ವಿಧಿ ಅದೊಂದು ದಿನ ಇಬ್ಬರನ್ನೂ ಸಾವಿನ ಮನೆಗೆ ಎಳೆದೊಯ್ದಿತ್ತು.

ಮದರ್‌ ತೆರೇಸಾ ಮಾದರಿ

1992ರ ಫೆಬ್ರುವರಿಯಲ್ಲಿ ಚಾರ್ಲ್ಸ್- ಡಯಾನಾ ಜೋಡಿ ಭಾರತಕ್ಕೆ ಭೇಟಿ ಕೊಟ್ಟಿತ್ತು. ಚಾರ್ಲ್ಸ್ ವಾಣಿಜ್ಯ ಸಭೆಗಳಲ್ಲಿ ಇಲ್ಲಿನ ಬಹುದೊಡ್ಡ ವ್ಯಾಪಾರಿಗಳೊಂದಿಗೆ ಕಾಲ ಕಳೆದರೆ,ಡಯಾನಾ ಅನಾಥಾಶ್ರಮ, ಕೊಳಚೆ ಪ್ರದೇಶಗಳನ್ನು ಹುಡುಕಿ ಅಲೆದಳು. ಕೋಲ್ಕತ್ತದಲ್ಲಿದ್ದ ಮದರ್ ತೆರೇಸಾ ಅವರ ಸೇವೆಯಿಂದ ಪುಳಕಿತಗೊಂಡ ಡಯಾನಾ, ಭಾರತ ಸೇರಿದಂತೆ ಜಗತ್ತಿನ ಬಡ ಜನರ ಸೇವೆಗೆ ತಾನೂ ನಿಲ್ಲಬೇಕೆಂದು ಹಂಬಲಿಸಿದಳು. ಲೆಕ್ಕವಿಲ್ಲದಷ್ಟು ಚಾರಿಟಿಗಳೊಂದಿಗೆ ದುಡಿಯಲು ನಿಂತದ್ದು ಇದೇ ಪ್ರೇರಣೆಯಿಂದ. ‘ಮದರ್’ ಕರೆದರೆ ಎಲ್ಲಿಗೆ ಬೇಕಾದರೂ ಹಾರಲು ಸಿದ್ಧ ಎಂದೂ ಹೇಳಿಕೊಂಡಿದ್ದಳು.

ಮಹಾರಾಣಿ, ಸೌಂದರ್ಯದ ಖನಿ. ಹಣ, ಆಸ್ತಿ, ಐಶ್ವರ್ಯ, ಅಧಿಕಾರ, ಜನಮನ್ನಣೆ ಎಲ್ಲ ಇದ್ದರೂ ಅವಳೊಬ್ಬ ಹತಭಾಗ್ಯೆ. ವೈಯಕ್ತಿಕ ಬದುಕಿನಲ್ಲಿ ಎದುರಾದ ಸೋಲುಗಳನ್ನು, ಸವಾಲುಗಳನ್ನು ಅವಳು ಸಾಮಾಜಿಕ ಬದುಕಿನ ಯಶಸ್ಸಿಗೆ ಮೈಲುಗಲ್ಲುಗಳನ್ನಾಗಿ ಮಾಡಿಕೊಂಡವಳು. ಬದುಕಿನುದ್ದಕ್ಕೂ ಹಿಡಿ ಪ್ರೀತಿಗಾಗಿ ಹೋರಾಡಿದ ಅವಳ ಎದೆಯೊಳಗೆ ಪ್ರೀತಿಯ ಆಗರವೇ ಇತ್ತು. ಜಗತ್ತಿನ ಎಲ್ಲ ಬಡ, ಅನಾಥ, ರೋಗಪೀಡಿತ ಮಕ್ಕಳಿಗೂ ತಾಯಿಯಾದಳು. ಅಸಹಾಯಕ ಹೆಣ್ಣು ಮಕ್ಕಳಿಗೆ ಪ್ರೀತಿಯ ಧಾರೆ ಎರೆದಳು. ಏಡ್ಸ್ ಹಾಗೂ ಕುಷ್ಟ ರೋಗಗಳಿಗೆ ಗುರಿಯಾದವರತ್ತ ಸಹಾನುಭೂತಿಯ ಹೊಳೆಯನ್ನೇ ಹರಿಸುತ್ತಿದ್ದ ಡಯಾನಾ, ಕೆಲವೊಮ್ಮೆ ನೊಂದವರೊಂದಿಗೆ ಕುಳಿತು ತಾನೂ ಅತ್ತು ಬರುತ್ತಿದ್ದಳು... ಇಂಥ ಅಪ್ಪಟ ತಾಯಿ ಹೃದಯದ ರಾಣಿ ಡಯಾನಾಳ ದುರಂತ ಸಾವು 23 ವರ್ಷಗಳ ನಂತರವೂ ರಾಜಮನೆತನದ ಮನಸುಗಳಲ್ಲಿ ಮರೆಯಾಗದ ದುರಂತವಾಗಿ ಅಚ್ಚಾಗಿದೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT