ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಮಗುವಿನ ಮಾತಲ್ಲೇ ಮುತ್ತು ಸುರಿಯಲಿ

Last Updated 17 ಮಾರ್ಚ್ 2023, 21:00 IST
ಅಕ್ಷರ ಗಾತ್ರ

‘ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ’

ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷ ಪಡುತ್ತವೆ ಎನ್ನುತ್ತದೆ ಈ ಸುಭಾಷಿತ. ನಮ್ಮ ವೇದಶಾಸ್ತ್ರಗಳಲ್ಲಿ, ಭಗವದ್ಗೀತೆ, ಪುರಾಣಗಳಲ್ಲಿ ವಾಕ್ ಶುದ್ಧಿಗೆ ಸಂಬಂಧಿಸಿದಂತೆ ಇಂತಹ ಬೇಕಾದಷ್ಟು ಸಾಲುಗಳು ಸಿಗುತ್ತವೆ. ಶುದ್ಧವಾದ ಮಾತಿಗೆ ಇರುವ ಮಹತ್ವ ಅದು. ಅದೇ ಅವಾಚ್ಯ ಶಬ್ದವನ್ನಾಡಿದಾಗ, ’ಸಂಸ್ಕಾರವಂತರು ಆಡೋ ಮಾತಾ ಅದು?’ ಎನ್ನುತ್ತಾರೆ. ಅದರಲ್ಲೂ ಮಕ್ಕಳು ಕೆಟ್ಟ ಶಬ್ದ ಆಡಿದರೆ ಮೊದಲು ಬೆಟ್ಟು ಮಾಡುವುದೇ ಹೆತ್ತವರ ಕಡೆಗೆ.

ಮಕ್ಕಳು ಎಲ್ಲಿಂದಲೋ ಆಡಬಾರದ ಮಾತುಗಳನ್ನು ಕಲಿತು ಬಂದಿರಬಹುದು ಅಥವಾ ಮನೆಗಳಲ್ಲೇ ದಂಡಿಯಾಗಿ ಬೈಗುಳ ಶಬ್ದ ಬಳಸುತ್ತಿರಬಹುದು. ಹೇಗೇ ಇದ್ದರೂ ಮಕ್ಕಳಾಡುವ ಇಂತಹ ಶಬ್ದಗಳನ್ನು ನಿಗ್ರಹಿಸುವುದು ಹೆತ್ತವರಾಗಿ ನಮ್ಮ ಕರ್ತವ್ಯ. ವಯಸ್ಸಿಗನುಗುಣವಾಗಿ ಅದನ್ನು ಸಾಧಿಸಲು ಒಂದಷ್ಟು ಸಾಧ್ಯತೆಗಳು ಇಲ್ಲಿವೆ.

2 ರಿಂದ 4 ವರ್ಷದ ಮಕ್ಕಳಿಗೆ

l→ಮನೆಯಲ್ಲೇ ದೊಡ್ಡವರು ಬೈಗುಳ ಪದಗಳ ಬಳಕೆ ಮಾಡುತ್ತಿದ್ದರೆ ಅಂತಹ ಶಬ್ದಗಳನ್ನು ಆಡದಂತೆ ಎಚ್ಚರ ವಹಿಸಬೇಕು. ನಮ್ಮನ್ನೇ ನಾವು ತಿದ್ದಿಕೊಳ್ಳದೆ ಮಕ್ಕಳನ್ನು ತಿದ್ದಿದರೆ ಯಾವುದೇ ಉಪಯೋಗವಿಲ್ಲ. ಮಕ್ಕಳು ಯಾವುದೇ ವಯಸ್ಸಿನವರಾಗಿರಲಿ.

l→ಎಳೆಯ ವಯಸ್ಸಲ್ಲಂತೂ ಕೆಟ್ಟ ಶಬ್ದ ಮಕ್ಕಳ ಕಿವಿಗೇ ಬೀಳದಿದ್ದರೆ ಅವರು ಆ ಪದಗಳನ್ನು ಹೇಳಲಂತೂ ಸಾಧ್ಯವೇ ಇಲ್ಲವಲ್ಲ. ಒಂದೆರಡು ಬಾರಿ ಆಡಿದರೂ ದೊಡ್ಡವರು ಪುನರಾವರ್ತಿಸಿಲ್ಲ ಎಂದಾದಲ್ಲಿ ಕಲಿತ ಶಬ್ದವನ್ನು ಮಗು ಕೆಲ ದಿನಗಳಲ್ಲಿಯೇ ಮರೆತು ಬಿಡುತ್ತದೆ.

l→ಮಗು ಬೈಗುಳ ಪದ ಬಳಸಿತು ಎಂಬ ಆತಂಕದಲ್ಲಿ ಅವಸರವಾಗಿ ತಿದ್ದಲು ಮುಂದಾಗುತ್ತೇವೆ. ಹೊಸ ಶಬ್ದವನ್ನು ಉಚ್ಚರಿಸುವ ಭರದಲ್ಲಿ ಅಚಾನಕ್ಕಾಗಿ ಹೇಳಿರಬಹುದು ಅಥವಾ ಕೆಟ್ಟ ಶಬ್ದದಂತೆ ಕೇಳಿಸಿರಬಹುದು. ಅದರಲ್ಲೂ ಮೊತ್ತ ಮೊದಲ ಬಾರಿಗೆ ಹೇಳಿದ್ದರೆ ಆ ಬಗ್ಗೆ ಏನೂ ಹೇಳದೆ ಸುಮ್ಮನಾಗಬೇಕು. ಅತಿಯಾಗಿ ತಿದ್ದಲು ಹೊರಟಾಗ ಶಬ್ದವನ್ನು ಮರೆಯುವ ಬದಲು ಇನ್ನಷ್ಟು ನೆನಪಿಟ್ಟುಕೊಳ್ಳುತ್ತಾರೆ. ಉಚ್ಚಾರದ ಸಮಸ್ಯೆಯಾಗಿದ್ದರೆ ಅದನ್ನು ತಿದ್ದಬೇಕು.

l→ಚಿಕ್ಕ ವಯಸ್ಸಿನ ಬಹುತೇಕ ಸಮಸ್ಯೆಗಳಿಗೆ ಮರೆಸುವುದೇ ದೊಡ್ಡ ಮದ್ದು. ಕೆಟ್ಟ ಶಬ್ದ ಹೇಳಿದಾಗ ಬೇರೇನೋ ಆಟಿಕೆ, ಚಿತ್ರಗಳತ್ತ ಗಮನ ಸೆಳೆಯಬೇಕು. ಶಬ್ದ ಹೇಳಿದಾಗೆಲ್ಲಾ ಹೀಗೆ ಮಾಡುತ್ತಲೇ ಇರಬೇಕು.

l→ಯಾವ ಸಂದರ್ಭಗಳಲ್ಲಿ ಅವಾಚ್ಯ ಶಬ್ದಗಳನ್ನು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಿ ಕೋಪ ಬರುವ/ಹಠ ಏರುವ ಸಂದರ್ಭಗಳನ್ನೇ ಮುಂಚಿತವಾಗಿ ನಿಯಂತ್ರಿಸಬೇಕು.

4 ರಿಂದ 7 ವರ್ಷ

l→ಮಕ್ಕಳು ಹೊರಪ್ರಪಂಚಕ್ಕೆ ತೆರೆದುಕೊಳ್ಳುವ ಸಮಯ ಇದು. ಹೊರಗಿಂದ ಕಲಿತು ಬರುವುದು ಇದೇ ವಯಸ್ಸಲ್ಲಿ. ಹೀಗಾಗಿ ಮಕ್ಕಳು ಬೆರೆಯುವ ವಾತಾವರಣದ ಕಡೆಗೂ ಗಮನ ಕೊಡಬೇಕಾಗುತ್ತದೆ.

l→ದೊಡ್ಡವರನ್ನು ಆಕರ್ಷಿಸಲೆಂದೇ ಪದೇ ಪದೇ ಕೆಟ್ಟ ಶಬ್ದ ಬಳಸುತ್ತಿದ್ದರೆ ಅದರತ್ತ ಗಮನವಹಿಸದೆ ನಿರ್ಲಕ್ಷಿಸುವುದು ಒಳ್ಳೆಯದು. ಮಗು ಒಳ್ಳೆಯ ಮಾತನ್ನಾಡಿದಾಗ ಹೊಗಳಿ, ಅದರಿಂದಲೇ ಹೆಚ್ಚು ಆಕರ್ಷಿತರಾಗಿದ್ದೇವೆ ಎಂಬುದನ್ನು ತೋರಿಸಿಕೊಡಬೇಕು.

l→ಕೆಟ್ಟ ಶಬ್ದ ಬಳಸಿದಾಗ ಆಗುವ ಕೆಟ್ಟ ಪರಿಣಾಮಗಳನ್ನು ಕಥೆ ಕಟ್ಟಿ ಹೇಳಿದಾಗ ಮಕ್ಕಳಿಗೆ ಬೇಗನೆ ಮನದಟ್ಟಾಗುತ್ತದೆ. ಹೀರೊ ಆದವನ ಅತಿಮುಖ್ಯ ಗುಣಗಳಲ್ಲಿ ಒಳ್ಳೆಯ ಮಾತೂ ಒಂದು ಎಂಬುದನ್ನು ಸ್ವಲ್ಪ ಹೆಚ್ಚೇ ಒತ್ತಿ ಒತ್ತಿ ಹೇಳಬೇಕು.

l→‘ನಿಂಗೆ ಯಾರಾದ್ರೂ ಬೈದಾಗ ನೋವಾಗುತ್ತದಲ್ವಾ? ಅದೇ ಥರ ಬೇರೆಯವರಿಗೂ ಕೆಟ್ಟ ಶಬ್ದ ಕೇಳಿದಾಗ ಬೇಸರವಾಗುತ್ತದೆ‘ ಎಂಬುದನ್ನು ನಯವಾದ ಮಾತಿನಲ್ಲಿ ತಿಳಿಸಬೇಕು.

l→ನಾವೇ ಅವಾಚ್ಯ ಶಬ್ದ ಬಳಸುತ್ತಿದ್ದರೆ ತಿದ್ದಲು ಹೋದಾಗ ಮಕ್ಕಳು ಮಾತು ಕೇಳುವುದಿಲ್ಲ. ಆಗ `ಬೈಗುಳ ಶಬ್ದ ಆಡಬಾರದು ಅಂದುಕೊಂಡ್ರೂ ಒಮ್ಮೊಮ್ಮೆ ಬಂದುಬಿಡುತ್ತದೆ. ಇಬ್ಬರೂ ಸೇರಿ ನಮ್ಮ ಭಾಷೆ ಸರಿಪಡಿಸಿಕೊಳ್ಳೋಣ’ ಎನ್ನಬೇಕು. ಆಗ ಮಗುವಿಗೆ ತಿದ್ದಿಕೊಳ್ಳಲು ಹೆತ್ತವರೂ ಜೊತೆಗಿದ್ದಾರೆ ಎಂಬ ಸಮಾಧಾನವಾಗುತ್ತದೆ.

l→ಕೆಲವು ಟಿವಿ ಶೋಗಳಲ್ಲಿ ಸಭ್ಯವಲ್ಲದ ಶಬ್ದ ಬಳಸಿ ಹಾಸ್ಯ ಮಾಡಿದಾಗ ಪ್ರೇಕ್ಷಕರು ನಗುವಂಥದ್ದು ಮಾಮೂಲು. ಕೇಳಿದ್ದೆಲ್ಲಾ ಹೇಳುವ ಈ ಚಿಕ್ಕ ವಯಸ್ಸಿನಲ್ಲಿ ಇಂತಹ ನಗುವಿಗೆ ಕಾರಣವಾಗುವ ಶಬ್ದಗಳಂತೂ ಮಕ್ಕಳಿಗೆ ಇನ್ನಷ್ಟು ಆಕರ್ಷಣೀಯ ಎನಿಸುತ್ತದೆ. ಮಗುವಿನ ಮುಂದೆ ದೊಡ್ಡವರು ಇಂತಹ ಟಿವಿ ಶೋಗಳನ್ನು ನೋಡದೆ ಇರುವುದು ಉತ್ತಮ.

l→ಬೈಗುಳ ಶಬ್ದ ಯಾವ ಭಾವವನ್ನು ಹೊರಹಾಕುವ ಸಂದರ್ಭದಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಅಲ್ಲಿ ಬಳಸಬಹುದಾದ ಬೇರೆ ಸಭ್ಯ ಶಬ್ದಗಳನ್ನು ಹೇಳಿಕೊಡಬಹುದು. ಸಾಮಾನ್ಯವಾಗಿ ಕೆಟ್ಟ ಶಬ್ದ ಹೇಳುವುದು ಸಿಟ್ಟು ಅಥವಾ ನೋವಾದಾಗಲೇ ಆಗಿರುತ್ತದೆ. ಅಂತಹ ಹೊತ್ತಲ್ಲಿ ಬೈಗುಳ ಶಬ್ದದ ಬದಲಿಗೆ ‘ನನಗೆ ಸಿಟ್ಟು ಬಂದಿದೆ’ ಎಂದು ಕೋಪದಲ್ಲೇ ಹೇಳಲಿ.

8 ರಿಂದ 10 ವರ್ಷ

ಇಷ್ಟು ಹೊತ್ತಿಗಾಗಲೇ ಸರಿ-ತಪ್ಪುಗಳ ಸ್ಪಷ್ಟ ಚಿತ್ರಣ ಮಕ್ಕಳಲ್ಲಿ ರೂಪುಗೊಂಡಿರುತ್ತದೆ. ಹೀಗಾಗಿ ಈ ವಯಸ್ಸಿನ ಮಕ್ಕಳಿಗೆ ಕೆಟ್ಟ ಮಾತುಗಳಿಂದ ಆಗುವ ಪರಿಣಾಮವನ್ನು ನೇರವಾಗಿಯೇ ಹೇಳಬೇಕು. ಕೆಟ್ಟ ಮಾತುಗಳನ್ನು ಆಡಿದಾಗ ನಮ್ಮೊಳಗೆ ಹುಟ್ಟುವ ಭಾವಕ್ಕೂ ಒಳ್ಳೆಯ ಮಾತುಗಳಿಂದ ಆಗುವ ಸಕಾರಾತ್ಮಕ ಬದಲಾವಣೆಗೂ ಇರುವ ವ್ಯತ್ಯಾಸದ ಅರಿವು ಮೂಡಿಸಬೇಕು.

ಹೀಗೆ ಮಕ್ಕಳಿಗೆ ಹತ್ತು ವರ್ಷವಾಗುವ ತನಕ ಅವಾಚ್ಯ ಶಬ್ದಗಳನ್ನಾಡಿದಾಗೆಲ್ಲಾ ತಿದ್ದುತ್ತಾ ಹೋದರೆ ಆಮೇಲೆ ಅಂತಹ ಶಬ್ದಗಳನ್ನು ಕೇಳಿಸಿಕೊಂಡರೂ ಆಡುವುದಿಲ್ಲ. ನುಡಿದರೆ ಮುತ್ತಿನ ಹಾರದಂತಹ ಮಾತುಗಳು ನಮ್ಮ ಮಕ್ಕಳದ್ದಾಗಲು ಸ್ವಲ್ಪ ಹೆಚ್ಚೇ ಪ್ರಯತ್ನ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT