ಭಾನುವಾರ, ಮಾರ್ಚ್ 26, 2023
31 °C

ಕೆಎಸ್‌ಆರ್‌ಟಿಸಿ ಪ್ರಮೀಳಾ ರಾಜ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮ ಹಿಳೆಯರು ಬಸ್‌, ಲಾರಿ, ಆಟೊ, ಟ್ರ್ಯಾಕ್ಟರ್‌... ಹೀಗೆ ಎಲ್ಲ ವಾಹನಗಳನ್ನು ಓಡಿಸುತ್ತಾರೆ. ಇದು ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುವ ವಿಷಯ.

ಈಗ, ವಾಹನಗಳನ್ನು ಓಡಿಸುವುದಷ್ಟೇ ಅಲ್ಲ, ವಾಹನ ಗಳ ತಯಾರಿಸುವ ಹಾಗೂ ಕೆಟ್ಟುನಿಂತ ವಾಹನಗಳನ್ನು ರಿಪೇರಿ ಮಾಡುವ ಕ್ಷೇತ್ರದಲ್ಲೂ ದುಡಿಯುತ್ತಿದ್ದಾರೆ !

ಈ ಸುದ್ದಿ ಓದಿ ಅಚ್ಚರಿಯಾದರೆ, ಒಮ್ಮೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಡಿಪೊಗಳಿಗೆ, ಕಾರ್ಯಾಗಾರಗಳಿಗೆ ಭೇಟಿ ನೀಡಿ. ಅಲ್ಲಿ, ಬಸ್‌ಗಳ ಬಿಡಿಭಾಗಳ ಜೋಡಣೆ, ಎಂಜಿನ್‌ ರಿಪೇರಿಯಂತಹ ತಾಂತ್ರಿಕ ನಿರ್ವಹಣೆ ಕಾರ್ಯಗಳಲ್ಲಿ ನೂರಾರು ಮಹಿಳೆಯರು ತೊಡಗಿಸಿಕೊಂಡಿರುವುದನ್ನು ನೋಡಬಹುದು. ಈ ಡಿಪೊಗಳಲ್ಲಿ, ಬಸ್‌ ದುರಸ್ತಿಯಂತಹ ದೈಹಿಕ ಶ್ರಮದ ಕೆಲಸವನ್ನು ಮಹಿಳಾ ಮೆಕ್ಯಾನಿಕ್‌ ಮತ್ತು ಎಂಜಿನಿಯರ್‌ಗಳು ನಿರ್ವಹಿಸುತ್ತಾ, ತಮ್ಮ ಶಕ್ತಿಯನ್ನು ಅನಾವರಣಗೊಳಿಸುತ್ತಾರೆ.

ಸಾವಿರ ಸಂಖ್ಯೆಯಲ್ಲಿ...

ಕೆಎಸ್‌ಆರ್‌ಟಿಸಿ ಒಂದರಲ್ಲೇ 1,015 ಮಹಿಳಾ ಮೆಕಾನಿಕಲ್ ಹಾಗೂ ತಾಂತ್ರಿಕ ಸಿಬ್ಬಂದಿಯಿದ್ದಾರೆ. ಪುರುಷ ಸಹೊದ್ಯೋಗಿಗಳೊಂದಿಗೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ದುಡಿಯುತ್ತಿದ್ದಾರೆ. ‘ಮೊದಲು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಆಯ್ತು, ನಂತರ ಪರಿಸ್ಥಿತಿ ಅರ್ಥಮಾಡಿಕೊಂಡು ಕೆಲಸ ನಿರ್ವಹಿಸಿದೆ. ತಮ್ಮ ಜೊತೆಗಿರುವ ಸಹೋದ್ಯೋಗಿಗಳು ಗೊತ್ತಿಲ್ಲದನ್ನು ತಿಳಿಸಿ, ಕಲಿಸಿಕೊಡುತ್ತಾರೆ. ಪುರುಷ ಸಿಬ್ಬಂದಿಗಳ ಸರಿಸಮವಾಗಿ ಎಲೆಕ್ಟ್ರಿಕ್‌ ವರ್ಕ್‌, ರಿಪೇರಿ ಕೆಲಸಗಳನ್ನು ಮಾಡುತ್ತಿದ್ದೇನೆ. ಇಲ್ಲಿನ ಸಹೊದ್ಯೋಗಿಗಳ ಬೆಂಬಲದಿಂದ ಇದೆಲ್ಲ ಸಾಧ್ಯ’ ಎನ್ನುತ್ತಾರೆ ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಬಸ್‌ ಡಿಪೊದಲ್ಲಿ ಕೆಲಸ ಮಾಡುತ್ತಾತಿರುವ ಶಾಂತಾಕುಮಾರಿ.

ಈ ಕೇಂದ್ರ ಬಸ್ ಡಿಪೊದಲ್ಲಿ 12 ವರ್ಷಗಳಿಂದ ಶಾಂತಾ ಕುಮಾರಿ ಕೆಲಸ ಮಾಡುತ್ತಿದ್ದಾರೆ. ಐಟಿಐ ಓದಿರುವ ಇವರು ಸ್ಟಿಕ್ಕರಿಂಗ್, ವಾಹನಗಳ ಪರಿಶೀಲನೆ, ಬಸ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ವಿಭಾಗದಲ್ಲಿ ಇದ್ದಾರೆ.

6 ತಿಂಗಳ ಹಿಂದೆ ಆಟೊ ಎಲೆಕ್ಟ್ರೀಷಿಯನ್‌ ಕೆಲಸಕ್ಕೆ ಸೇರಿರುವ ಮನುಶ್ರೀ ಎಂ. ಅವರಿಗೆ ಹೊಸ ಕೆಲಸ ಎಂಬ ಅಂಜಿಕೆ ಇಲ್ಲವಂತೆ. ಬದಲಿಗೆ ಬಸ್‌ ರಿಪೇರಿಗಳಲ್ಲಿ ಮೆಷಿನ್‌ಗಳ ಬಳಕೆ ಕುರಿತು ಭಾರಿ ಕುತೂಹಲ. ಇಂತಹ ತಾಂತ್ರಿಕ ಆವಿಷ್ಕಾರದ ಬಗ್ಗೆ ಆಸಕ್ತಿ ಇರುವ ಇವರು, ‘ಬಸ್‌ ರಿಪೇರಿಗೆ ಮಷಿನ್‌ಗಳು ಇವೆ. ನಮ್ಮಲ್ಲಿ ಕ್ಯಾಲಿಬ್ರೇಷನ್ ಕೆಲಸಗಳಿಗೆ ಮತ್ತಷ್ಟು ಮಷಿನ್‌ ಬೇಕು. ಈ ತಂತ್ರಜ್ಞಾನದ ಸಹಾಯದಿಂದ ನಮ್ಮ ತಲೆಮಾರಿಗೆ ಹೆಚ್ಚು ದೈಹಿಕ ಶ್ರಮವೇನೂ ಇಲ್ಲ’ ಎನ್ನುತ್ತಾರೆ.

‘ಹೆವಿ ಮಿಷನರಿ ರಿಪೇರಿ ವಿಭಾಗದಲ್ಲಿ ಕೆಲಸ ಮಾಡುವ ಬಗ್ಗೆ ಹೆಮ್ಮೆ ಇದೆ‘ ಎನ್ನುವ ಆಶಾ, ಒಂಬತ್ತು ವರ್ಷಗಳಿಂದ ಶಾಂತಿನಗರದ ಕೆಎಸ್‌ಆರ್‌ಟಿಸಿಯ ಕೇಂದ್ರ ಬಸ್ ಡಿಪೊ–1ರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಟೊಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮೊ ಮಾಡಿರುವ ಇವರು ಡಾಕಿಂಗ್‌ (ಬಸ್‌ ಗ್ರಿಪ್‌ ಬಗ್ಗೆ ಪರಿಶೀಲನೆ) ಹಾಗೂ ಬಸ್‌ ಒಳಭಾಗದ ಲೈಟ್‌, ಎಸಿ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.

ತಾಂತ್ರಿಕತೆ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಪದವಿ ಪಡೆದು ಬಂದಿದ್ದರೂ, ಕೆಲವೊಮ್ಮೆ ಎಸಿ ಬಸ್‌ಗಳಿಗೆ ನೀರಿನ ಬಾಟಲಿ ಇಡುವುದಕ್ಕೆ, ಬಸ್‌ ಮೇಲೆ ಸ್ಟಿಕ್ಕರ್‌ ಅಂಟಿಸುವುದಕ್ಕೆ ಅಥವಾ ಸೀಟ್‌ ಸರಿಪಡಿಸುವುದಕ್ಕೆ ಸೀಮಿತಗೊಳಿಸುತ್ತಾರೆ. ಈ ಮಿತಿಗಳನ್ನು ಮೀರಿ ಎಲ್ಲಾ ವಿಧದ ಕೆಲಸ ಮಾಡುತ್ತೇನೆ ಎಂಬ ಸ್ವಇಚ್ಚೆ ಇದ್ದರೂ ಕೆಲವೊಮ್ಮೆ ಇದಕ್ಕೆ ಪೂರಕ ವಾತಾವರಣ ಇರುವುದಿಲ್ಲ. ಇದರಿಂದ ನಿರಾಸೆಯಾಗದೆ ಮುನ್ನುಗ್ಗಬೇಕು ಎನ್ನುತ್ತಾರೆ ಕೆಲವು ಸಿಬ್ಬಂದಿ.

ತಲೆ ಕೆಡಿಸಿಕೊಳ್ಳುವ ಹಾಗಿಲ್ಲ

‘ಏನಾದರೂ ಇರಲಿ ನಮ್ಮ ಕೆಲಸದಲ್ಲಿ ಹೆಣ್ಣುಗಂಡು ಎಂಬ ವ್ಯತ್ಯಾಸವನ್ನು ನೋಡದೆ ವೃತ್ತಿಪರವಾಗಿ ಇರಬೇಕು’ ಎನ್ನುವ ಧೋರಣೆ ದೀಪಾ ಅವರದ್ದು. ಅವರು ಕೇಂದ್ರ ಬಸ್ ಡಿಪೊ–4ರಲ್ಲಿ ನಿರ್ವಹಣೆ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಐಟಿಐ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ಡಿಪ್ಲೊಮೊ ಮಾಡಿರುವ ದೀಪಾ 19 ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಮೆಕ್ಯಾನಿಕ್‌ ಆಗಿ ಆಯ್ಕೆಯಾದ ಎರಡನೇ ಬ್ಯಾಚ್‌ನವರು. ‘ವೃತ್ತಿ ಆಯ್ಕೆ ಮಾಡಿಕೊಂಡ ಮೇಲೆ ದೈಹಿಕ ಕೆಲಸಗಳು ಎಂಬು ಅಳುಕು ಇಟ್ಟುಕೊಳ್ಳಬಾರದು’ ಎಂಬುದು ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು