ಶನಿವಾರ, ಫೆಬ್ರವರಿ 22, 2020
19 °C

ಖುಷಿ ಖುಷಿಯಲಿ.. ವೃತ್ತಿ ಜೊತೆಯಲಿ!

ಸಂಜೀವ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಕುಟುಂಬ, ಉದ್ಯೋಗ, ಮದುವೆ, ಮಕ್ಕಳು, ಸಂಸಾರ.. ಹೀಗೆ ಹೆಣ್ಣಿನ ಬದುಕು ಬಯಲು ದಾರಿಯಂತೆ ಸಾಗುತ್ತಾ ಹೋಗುತ್ತದೆ. ಇವುಗಳ ಮಧ್ಯೆ ಆಕೆಗೆ ಸಂತೋಷ ಎನ್ನುವುದು ಮೃಗಜಲವನ್ನು ಸೆರೆ ಹಿಡಿದಂತೆ ಎಂಬ ಮಾತು ಇತ್ತು. ಆದರೆ ಇವುಗಳ ಜೊತೆ ಆಕೆ ತನ್ನ ನಿಜವಾದ ಸುಖ– ಸಂತೋಷ ಯಾವುದರಲ್ಲಿ ಅಡಗಿದೆ ಎಂಬುದನ್ನು ಕಂಡುಕೊಂಡಿದ್ದಾಳೆ.

‘ಖುಷಿ ಎನ್ನುವುದು ಹಾಗೆ ಬಂದು ಹೀಗೆ ಹೋಗುವಂತಹದ್ದಲ್ಲ, ಅದು ಒಡೆಯುವಂತಹ ಬುದ್ಬುದವೂ ಅಲ್ಲ; ಮನಸ್ಸಿನ ತಾಕಲಾಟಗಳನ್ನು ನಿವಾರಿಸಿಕೊಂಡು ಬದುಕಿನ ಬಗ್ಗೆ ಸಕಾರಾತ್ಮಕ ನಿಲುವು ತಾಳಿದಾಗ ಉಂಟಾಗುವ ಅನುಭೂತಿ ಇದೆಯಲ್ಲ ಅದೇ ಖುಷಿ’ ಎಂದು ವ್ಯಾಖ್ಯಾನಿಸುವ ಖಾಸಗಿ ವಿಮಾ ಕಂಪನಿಯ ಉದ್ಯೋಗಿ ಗೌರಿ ಶ್ರೀಧರ್‌, ತನ್ನ ಆರ್ಥಿಕ ಸ್ವಾತಂತ್ರ್ಯ ಕೂಡ ಆನಂದದ ಅನುಭೂತಿಯ ಪ್ರಮುಖ ಭಾಗ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಹಾಗಾದರೆ ‘ಖುಷಿ ಎನ್ನುವುದು ಭಾರತೀಯ ಮಹಿಳೆಗೆ ಅಲ್ಪ ವಿರಾಮದಂತೆ. ಹಾಗೆ ಬಂದು ಹೀಗೆ ಹೋಗಿಬಿಡುತ್ತದೆ’ ಎಂಬ ಮಾತಿಗೆ ಪೂರ್ಣ ವಿರಾಮ ನೀಡುತ್ತಿದ್ದಾರೆಯೇ ಈಗಿನ ಮಹಿಳೆಯರು? ಹೌದು ಎನ್ನುತ್ತದೆ ಇತ್ತೀಚೆಗೆ ನಗರಗಳಲ್ಲಿ ನಡೆದ ಸಮೀಕ್ಷೆಯೊಂದು.

ಆರ್ಥಿಕ ಸ್ವಾವಲಂಬನೆ

ಸುಸ್ಥಿರ ಅಭಿವೃದ್ಧಿ ಕೇಂದ್ರ (ಸಿಎಸ್‌ಡಿ) ಸಿದ್ಧಪಡಿಸಿರುವ ಸಮೀಕ್ಷಾ ವರದಿಯಲ್ಲಿ 18– 25ರೊಳಗಿನ ಯುವತಿಯರು ಹಾಗೂ 35– 44 ವರ್ಷದೊಳಗಿನ ಮಹಿಳೆಯರು ಸಂತಸದ ಬದುಕಿಗೆ ಬುನಾದಿ ಹಾಕಿಕೊಂಡಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಇದಕ್ಕೆ ಪ್ರಮುಖ ಕಾರಣ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿರುವುದು.

ಆರ್ಥಿಕ ಸ್ವಾವಲಂಬನೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಿನ ಜಮಾನದಲ್ಲಂತೂ ಸ್ವಂತ ದುಡಿಮೆ ಪುರುಷರಿಗೆ ಎಷ್ಟು ಮುಖ್ಯವೊ ಮಹಿಳೆಯರಿಗೂ ಕೂಡ ಅಷ್ಟೇ ಮಹತ್ವದ್ದು. ದುಡಿಮೆಯಿಂದ ಸಂಪಾದಿಸುವ ಹಣ ಅವರ ಬದುಕಿನ ಭವಿಷ್ಯವನ್ನು ನಿರ್ಧರಿಸುವುದಲ್ಲದೇ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತದೆ. ಈ ಅಪರಿಮಿತ ಸ್ವಾತಂತ್ರ್ಯವೇ ಸಂತಸದ ದಾರಿಗೆ ಎಡೆ ಮಾಡಿಕೊಡುತ್ತದೆ ಎನ್ನುವುದೂ ನಿಚ್ಚಳ ಸತ್ಯ.

ಹೆಣ್ಣಿನ ಮುಂದಿನ ಜೀವನ ನಿರ್ಧರಿಸುವ ಪೋಷಕರು ಹಾಗೂ ಬಂಧುಗಳು ಉದ್ಯೋಗಸ್ಥ ಹಾಗೂ ನಿರುದ್ಯೋಗಿ ಯುವತಿಯರನ್ನು ನೋಡುವ ವಿಧಾನ ಬೇರೆಯೇ. ಮದುವೆ ವಿಚಾರ ಬಂದಾಗ ಉದ್ಯೋಗಸ್ಥ ಯುವತಿಗೆ ಆಕೆಯ ಪೋಷಕರು ‘ಏನಂತಿಯಮ್ಮ ಈ ಸಂಬಂಧಕ್ಕೆ?’ ಎಂದು ಅಭಿಪ್ರಾಯ ಕೇಳುವುದು ಬಹುತೇಕ ಪ್ರಕರಣಗಳಲ್ಲಿ ಸಹಜ. ಆದರೆ ಉದ್ಯೋಗ ಮಾಡದ ಯುವತಿಯ ಆಯ್ಕೆಗಳು ಕುಟುಂಬದ ಹಿರಿಯರದ್ದೇ ಆಗಿರುತ್ತದೆ. ಇನ್ನು ಈ ಸ್ವಾತಂತ್ರ್ಯ ಕೂಡ ಆಕೆ ಮಾಡುವ ಕೆಲಸ ಮತ್ತು ಆರ್ಥಿಕ ಬಲದ ಮೇಲೆ ನಿರ್ಧಾರವಾಗುತ್ತದೆ.

‌‌‌‌‌‘ನಾನು ನನ್ನ ಪತಿ ಇಬ್ಬರೂ ಉದ್ಯೋಗಿಗಳಾಗಿದ್ದರಿಂದ ಯಾವ ಸಮಸ್ಯೆ ಬಂದರೂ ಇಬ್ಬರೂ ಚರ್ಚಿಸಿ ತೀರ್ಮಾನಿಸುತ್ತೇವೆ. ಆಯ್ಕೆಯ ನಿರ್ಧಾರ ಕೂಡ ಇಬ್ಬರದ್ದೂ ಇರುತ್ತದೆ. ಮದುವೆಯಾಗಿ ಮೂರು ವರ್ಷಗಳವರೆಗೂ ಈ ರೀತಿಯ ಬಾಂಧವ್ಯ ನಮ್ಮಲ್ಲಿರಲಿಲ್ಲ. ಕೆಲಸಕ್ಕೆ ಸೇರಿ ಮೂರು ತಿಂಗಳು ಕಳೆದ ನಂತರ ಇದು ಬದಲಾಗಿದ್ದು, ಅದಕ್ಕೆ ಕಾರಣ ನಾನು ಕೂಡ ಉದ್ಯೋಗಿಯಾಗಿ ಆರ್ಥಿಕವಾಗಿ ಕುಟುಂಬಕ್ಕೆ ಬೆಂಬಲ ನೀಡಿದಾಗ’ ಎಂದು ತಮ್ಮ ಖುಷಿಯ ಕಾರಣವನ್ನು ಬಿಚ್ಚಿಡುತ್ತಾರೆ ಮಾನವ ಸಂಪನ್ಮೂಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಕವಿತಾ ರಾವ್‌.

ಮದುವೆಯಾದರೆ ಸಾಕು ಜೀವನದಲ್ಲಿ ಅರ್ಧ ಗೆಲುವು ಸಾಧಿಸಿದಂತೆ. ಮದುವೆಯ ನಂತರ ಮಕ್ಕಳು ಆಗಲೇಬೇಕು; ಆಗದಿದ್ದರೆ ಅದರ ಪರಿಣಾಮವನ್ನು ಮಹಿಳೆಯೇ ಅನುಭವಿಸಬೇಕು ಎಂಬಂತಹ ಸಾಮಾಜಿಕ ಮನಃಸ್ಥಿತಿ ಕೂಡ ಹೆಣ್ಣಿನ ಸಂತೋಷವನ್ನು ನುಂಗಿ ಹಾಕಿತ್ತು. ಮದುವೆ, ಮಕ್ಕಳು ಮಾತ್ರ ಸಂತಸಕ್ಕೆ ಕಾರಣ ಎಂಬ ನಂಬಿಕೆಯನ್ನು ಕೂಡ ಪಕ್ಕಕ್ಕೆ ಸರಿಸುತ್ತಾರೆ ಇಂದಿನ ಯುವತಿಯರು ಎಂದು ಹೇಳುತ್ತದೆ ಅಮೆರಿಕದಲ್ಲಿ ನಡೆದ ಇನ್ನೊಂದು ಅಧ್ಯಯನ.

ಅಚ್ಚರಿ ಎಂದರೆ ಅಮೆರಿಕದ ಅಧ್ಯಯನವೊಂದರ ಪ್ರಕಾರ ಅವಿವಾಹಿತ ಮಹಿಳೆಯರು ಹಾಗೂ ಮಕ್ಕಳಿಲ್ಲದ ಮಹಿಳೆಯರು ಹೆಚ್ಚು ಸಂತಸದಿಂದಿರುತ್ತಾರೆ ಎನ್ನುತ್ತದೆ ವರದಿ. ಅಮೆರಿಕನ್ ಟೈಮ್ ಯೂಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ಕೂಡ ಅದನ್ನೇ ಹೇಳುತ್ತದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಜೀವನದ ಅಸಲಿ ಆನಂದ ಅನುಭವಿಸುತ್ತಿದ್ದೇನೆ ಎನ್ನುವವರೂ ಸಹ ಇದ್ದಾರೆ. ಇಲ್ಲಿ ದೇಶ, ವಿದೇಶ ಹಾಗೂ ಸಂಪ್ರದಾಯ ಮತ್ತು ಭಿನ್ನಾಭಿಪ್ರಾಯಗಳು ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ಮಹಿಳೆಯರ ಸಂತಸ ಹಾಗೂ ಸ್ವಾತಂತ್ರ್ಯ ವಿಚಾರದಲ್ಲಿ ಅವುಗಳನ್ನು ಒಂದೇ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ ಎನ್ನುತ್ತಾರೆ ಲೇಖಕಿ ಜೇನ್‌.

ಗ್ರಾಮೀಣ ಭಾಗದಲ್ಲಿ ಕೂಡ ಮಾನಸಿಕವಾಗಿ ಕುಗ್ಗಿಸುತ್ತಿದ್ದ ಗೊಡ್ಡು ಸಂಪ್ರದಾಯಗಳು ಕಡಿಮೆಯಾಗುತ್ತಿದ್ದು, ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದಿರುವ ಮಹಿಳೆಯರು ಆ ಗೋಡೆಯನ್ನು ದಾಟಿ ಸಂತಸದ ಹಾದಿಯತ್ತ ಸಾಗುತ್ತಿದ್ದಾರೆ. ವೈಯಕ್ತಿಕವಾಗಿ, ಸಾಮಾಜಿಕವಾಗಿ ಮಹಿಳೆಯರು ಎಷ್ಟು ಖುಷಿಯಿಂದ ಇದ್ದಾರೆ? ಅದಕ್ಕೆ ಸುತ್ತಲಿನ ಸಮಾಜ ಹೇಗೆ ಸ್ಪಂದಿಸುತ್ತಿದೆ ಎಂಬುದು ಕೂಡ ಮುಖ್ಯ.

ನಿಜವಾದ ಯಶಸ್ಸು

ಗೃಹಿಣಿಯರು ಕೂಡ ಸಂತೋಷದಿಂದಿರುತ್ತಾರೆ. ಕೆಲವರಿಗೆ ನಾನು ಕೂಡ ಅವರಂತೆ ಉದ್ಯೋಗ ಮಾಡುತ್ತಿಲ್ಲ ಎಂಬ ಕೀಳರಿಮೆ ಇರುತ್ತದೆ. ಅದು ಅವರವರ ವ್ಯಕ್ತಿಗತವಾಗಿರುವಂತಹದ್ದು. ಉದ್ಯೋಗದಲ್ಲಿರುವ ಮಹಿಳೆಯರು ಯಾರನ್ನೂ ಅವಲಂಬಿಸುವುದಿಲ್ಲ. ಅದು ಗಂಡ ಅಥವಾ ಮನೆಯವರಾಗಿರಬಹುದು. ತಮ್ಮ ಜೀವನ ತಾವೇ ನಡೆಸಬಹುದು ಎಂಬ ಧೈರ್ಯ ಹಾಗೂ ಆರ್ಥಿಕ ಸ್ವಾವಲಂಬನೆ ಅವರನ್ನು ಹೆಚ್ಚು ಖುಷಿಯಾಗಿರುವಂತೆ ಮಾಡುತ್ತದೆ.

ಮದುವೆಯ ನಂತರ ತನ್ನ ಜೀವನ ಆರಂಭವಾಯಿತು. ತಂದೆ–ತಾಯಿಗೆ ಹೊರೆಯಾಗಿರುವುದು ತಪ್ಪಿತು. ಗಂಡ– ಹೆಂಡತಿ ನೆಮ್ಮದಿಯಿಂದ ಇರಬಹುದು ಎಂಬುದು ಕೆಲವು ಮಹಿಳೆಯರ ಖುಷಿಗೆ ಕಾರಣ ಕೂಡ. ವಿವಾಹ, ಉದ್ಯೋಗ ಇರಲಿ, ಇಲ್ಲದಿರಲಿ ಜೀವನದಲ್ಲಿ ಎಂತಹ ಪರಿಸ್ಥಿತಿಯಲ್ಲಿದ್ದರೂ ಖುಷಿಯಾಗಿರಬೇಕು ಅದುವೇ ಜೀವನದ ನಿಜವಾದ ಯಶಸ್ಸು

ಡಿ. ಯಶೋದ, ಆಪ್ತ ಸಮಾಲೋಚಕಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು