ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೀತಿ ಮಾಡಿ ಮೋಸ ಹೋದೆ’

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

1. ನನಗೆ ಮದುವೆಯಾಗಿ 3 ವರ್ಷದ ಗಂಡು ಮಗುವಿದೆ. ನಾವಿಬ್ಬರೂ ಪ್ರೀತಿಸಿ, ಎರಡು ಮನೆಯವರನ್ನು ಒಪ್ಪಿಸಿ ಮದುವೆಯಾದವರು. ನನ್ನ ಗಂಡ ವಕೀಲ. ಅವರು ನನಗೆ ಪರಪುರುಷರೊಂದಿಗೆ ಸಂಬಂಧ ಕಲ್ಪಿಸಿ ಪ್ರತಿದಿನ ಅನುಮಾನದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ನನ್ನ ಮಗುವಿನ ಭವಿಷ್ಯದ ದೃಷ್ಟಿಯಿಂದ ಎಷ್ಟೇ ಅನುಸರಿಸಿಕೊಂಡು ಬಂದರೂ ನನ್ನ ಗಂಡ ಬದಲಾಗಲಿಲ್ಲ. ಕೊನೆಗೆ ನನ್ನ ಚಿಕ್ಕಮ್ಮನ ಮಗಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡು ನನ್ನ ನಿಷ್ಕಲ್ಮಷ ಪ್ರೀತಿಗೆ ಮೋಸ ಮಾಡಿ, ಅವಳಜೊತೆ ಬೇರೆ ಮನೆಯಲ್ಲಿ ಇದ್ದಾರೆ. ಅವರು ಮಾಡಿದ ನಂಬಿಕೆ ದ್ರೋಹದಿಂದ ಬೇಸತ್ತು, ಅವರಿಂದ ಶಾಶ್ವತವಾಗಿ ದೂರವಾಗಲು ಬಯಸಿದ್ದೇನೆ. ಆದರೆ ನನ್ನ 3 ವರ್ಷದ ಮಗುವಿಗೆ ಅಪ್ಪನೆಂದರೆ ಪ್ರಾಣ. ನಾನು ಎಂ.ಎ., ಬಿ.ಎಡ್‌. ಮುಗಿಸಿದ್ದೇನೆ. ಆದರೆ, ತರಬೇತಿ ಮುಗಿಸಿ 10 ವರ್ಷಗಳಾಗಿವೆ. ವಿದ್ಯಾಭ್ಯಾಸದ ನಂತರ ಕೆಲಸಕ್ಕೂ ಹೋಗದೆ, ವಿವಾಹದ ನಂತರ ಹೊರ ಪ್ರಪಂಚದ ಸಂಪರ್ಕವೂ ಇಲ್ಲದೇ, ಕೇವಲ ಗೃಹಿಣಿಯಾಗಿ ಸಾಂಸಾರಿಕ ಜೀವನದ ಕರ್ತವ್ಯವನ್ನು ನಿರ್ವಹಿಸಿರುತ್ತೇನೆ. ಕೆಲಸಕ್ಕೆ ಹೋಗಲು ಅನುಭವ ಕೇಳುತ್ತಾರೆ. ಅಲ್ಲದೇ ನಾನಿರುವ ಮನಃಸ್ಥಿತಿಯಲ್ಲಿ ಮಕ್ಕಳಿಗೆ ಗುಣಮಟ್ಟದ ಪಾಠವನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ವಿದ್ಯಾರ್ಹತೆಗೆ ಬೇರೆ ಯಾವ ಕೆಲಸ ಸೂಕ್ತ? ನನ್ನ ಮಗುವಿನ ಭವಿಷ್ಯ ಹೇಗೆ ನಿಭಾಯಿಸಲಿ? ಪ್ರೀತಿಯ ಅಪ್ಪನನ್ನು ಹೇಗೆ ಮರೆಸಲಿ? ನಾನು ಖಿನ್ನತೆಗೆ ಒಳಗಾಗಿದ್ದೇನೆಯೆ? ನನ್ನ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡಿ.
ವೀಣಾ, ಊರು ಬೇಡ

ಉತ್ತರ: ನಿಮ್ಮ ಗಂಡ ಮಾಡಿರುವುದು ಸರಿಯಲ್ಲ; ಅವರು ನಿಮ್ಮ ಜೀವನವನ್ನು ಘಾಸಿಗೊಳಿಸಿದ್ದಾರೆ. ಮನೆಯ ಹಿರಿಯರ ಸಹಾಯ ಪಡೆದುಕೊಂಡು ನಿಮ್ಮ ಗಂಡನೊಂದಿಗೆ ಮಾತನಾಡಿ. ಅವರು ನಿಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ರೀತಿ ಮಾಡಿದರೆ ಸಂಸಾರ ಮುಂದೆ ಹೋಗಲು ಸಾಧ್ಯವಿಲ್ಲ. ಒಬ್ಬ ವಿದ್ಯಾವಂತೆಯಾಗಿ ಗಂಡನಿಂದ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿತ್ತು. ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬೇಕಿತು; ಮುಂದುವರಿಯಲು ಬಿಡಬಾರದಿತ್ತು. ಹಿರಿಯರ ಸಹಾಯದೊಂದಿಗೆ ಈ ವಿಷಯಕ್ಕೆ ಒಂದು ಅಂತ್ಯವನ್ನು ಕಾಣಿಸಿ. ಉದ್ಯೋಗಕ್ಕೆ ಸೇರಲು ಎಂದಿಗೂ ತಡ ಎಂಬುದಿಲ್ಲ. ನೀವು ಶಾಲೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಿ. ಆರಂಭದಲ್ಲಿ ಸಂಬಳ ಕಡಿಮೆ ಇರಬಹುದು. ಆದರೆ ಅನುಭವದ ದೃಷ್ಟಿಯಿಂದ ಮುಂದೆ ಇದು ನೆರವಾಗುತ್ತದೆ. ಶಾಲೆಯ ನಿರ್ವಹಣೆಯ ಕೆಲಸವ್ನೂ ನೀವು ವಹಿಸಿಕೊಳ್ಳಬಹುದು. ಅದರ ಜೊತೆಯಲ್ಲಿ ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ ಕೂಡ ನಡೆಸಬಹುದು.

2. ನನ್ನ ಅಣ್ಣನಿಗೆ ಅವನ ಹೆಂಡತಿಯ ಜೊತೆ ಸಂಬಂಧ ಸರಿಯಿಲ್ಲ. ಅವರಿಗೆ ಮದುವೆಯಾಗಿ 8 ವರ್ಷದ ಮಗನಿದ್ದಾನೆ. ಮದುವೆಯಾದಾಗಿನಿಂದ ಅತ್ತಿಗೆ ಅಣ್ಣನ ಮೇಲೆ ಆರೋಪ ಮಾಡುವುದು ಮತ್ತು ದರ್ಪದಿಂದ ನಡೆದುಕೊಳ್ಳುವುದು ಮಾಡುತ್ತಾರೆ. ತಂದೆಯ ಮನೆಯಲ್ಲೇ ವಾಸಿಸುವ ಅವರು ನನ್ನ ಅಣ್ಣ ಅವರನ್ನು ನೋಡಲು ಹೋಗುವುದನ್ನು ಇಷ್ಟಪಡುವುದಿಲ್ಲ. ಅವರಿಬ್ಬರ ಸಂಬಂಧ ಸರಿ ಹೋಗಬೇಕು ಎಂದರೆ ಏನು ಮಾಡಬೇಕು?
ಹೆಸರು, ಊರು ಬೇಡ

ಉತ್ತರ:ನಿಮ್ಮ ಅಣ್ಣ–ಅತ್ತಿಗೆ – ಇಬ್ಬರೂ ಕೂಡಿ, ಅರ್ಥಮಾಡಿಕೊಂಡು ಮಾತನಾಡಬೇಕು. ನಿಮ್ಮ ಅಣ್ಣ ಅವರ ಹೆಂಡತಿಯೊಂದಿಗೆ ಆರೋಗ್ಯಕರ ಸಂವಹನವನ್ನು ನಡೆಸಬೇಕು. ಅವರು ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಬಯಕೆಗಳು ಸರಿಯಾಗಿವೆ ಎಂದೆನಿಸಿದರೆ ಅವನ್ನು ಪೂರೈಸಲು ಮುಂಧಾಗಬೇಕು. ಆಗ ಮಾತ್ರ ಅವರಿಬ್ಬರೂ ಸಂತೋಷದಿಂದ ಬದುಕಲು ಸಾಧ್ಯ. ಅನೇಕ ಸಂದರ್ಭಗಳಲ್ಲಿ ಸಂವಹನ ಕೊರತೆ ಮತ್ತು ಅಹಂನ ಕಾರಣದಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ನಾನೇ ಯಾಕೆ ಮಾತನಾಡಬೇಕು, ನಾನಾಗಿಯೇ ಏಕೆ ಸೋಲಬೇಕು – ಎಂಬ ಭಾವಗಳು ಇಂತಹ ಸಂದರ್ಭವನ್ನು ಸೃಷ್ಟಿಸುತ್ತವೆ. ಸಾಧ್ಯವಾದರೆ ಎರಡೂ ಮನೆಯ ಹಿರಿಯರನ್ನು ಈ ಮಾತುಕತೆಯಲ್ಲಿ ಸೇರಿಸಿಕೊಳ್ಳಿ. ಅವರಿಬ್ಬರಿಗೂ ಜೀವನ, ಮದುವೆ ಎಂದರೆ ಏನು ಎಂಬುದನ್ನು ಅರ್ಥ ಮಾಡಿಸಲು ಎಲ್ಲರೂ ಪ್ರಯತ್ನಿಸಿ. ಆದರೆ ಅವರಿಗೇ ಈ ವಿಷಯದಲ್ಲಿ ಆಸಕ್ತಿ ಇಲ್ಲವೆಂದಾದರೆ ನೀವೇನು ಮಾಡಲು ಸಾಧ್ಯವಿಲ್ಲ. ನನಗೆ ನಿಮ್ಮ ಕಾಳಜಿ ಅರ್ಥವಾಗುತ್ತದೆ. ಆದರೆ ಈ ಎಲ್ಲದರ ನಂತರ ಅವರಿಬ್ಬರೇ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ: bhoomika@prajavani.co.in
ವಾಟ್ಸ್ಯಾಪ್: 9482006746

ಸುನೀತಾ ರಾವ್, ಆಪ್ತ ಸಮಾಲೋಚಕಿ
ಸುನೀತಾ ರಾವ್, ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT