ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನಾಟದ ಕೈಚಳಕ

Last Updated 14 ಜೂನ್ 2018, 12:26 IST
ಅಕ್ಷರ ಗಾತ್ರ

‘ಕಲಾತ್ಮಕ ಹಾಗೂ ಕಮರ್ಷಿಯಲ್‌ ಚಿತ್ರದ ಛಾಯಾಗ್ರಹಣ ಭಿನ್ನವಾದುದು. ಕಲಾತ್ಮಕ ಚಿತ್ರಗಳ ದೃಶ್ಯಗಳಿಗೆ ತಕ್ಕಂತೆ ಬೆಳಕಿನ ಸಂಯೋಜನೆ ಮುಖ್ಯ. ಇಲ್ಲಿ ಕಥೆಗೆ ಅನುಗುಣವಾಗಿ ಮುಂಜಾನೆ, ಮಧ್ಯಾಹ್ನ, ಮುಸ್ಸಂಜೆಯ ಬೆಳಕಿನಾಟವನ್ನು ಸೆರೆಹಿಡಿಯಬೇಕಿದೆ. ಕಮರ್ಷಿಯಲ್‌ ಚಿತ್ರಗಳಲ್ಲಿ ಕಲಾವಿದರ ಮುಖಭಾವಕ್ಕೆ ತಕ್ಕಂತೆ ಕ್ಯಾಮೆರಾ ಕೈಚಳಕ ಮಾಡಬಹುದು’  –ಹೀಗೆ ಕಲಾತ್ಮಕ ಹಾಗೂ ಕಮರ್ಷಿಯಲ್‌ ಸಿನಿಮಾಗಳ ನಡುವಿನ ಛಾಯಾಗ್ರಹಣದ ಚೌಕಟ್ಟು ಬಿಡಿಸಿಟ್ಟಿದ್ದು ಸಿನಿಮಾಟೋಗ್ರಾಫರ್ ಗುಂಡ್ಲುಪೇಟೆ ಸುರೇಶ್‌.

ಸ್ಥಿರ ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗ ಭರವಸೆಯ ಸಿನಿಮಾಟೋಗ್ರಾಫರ್. ‘ಪೆರೋಲ್‌’, ‘ಹುಡುಗ ಹುಡುಗಿ’, ‘ಬರ್ಫಿ’, ‘ನಾನಿ’, ‘ಭುಜಂಗ’, ‘ನನ್‌ ಮಗಳೇ ಹೀರೊಯಿನ್’, ‘ಕಾಲಚಕ್ರ’, ‘ಕಾಜಲ್’ ಹೀಗೆ ಅವರು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ, ಮಾಡುತ್ತಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸುರೇಶ್‌ ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಓದಿದ್ದು ಎಸ್ಎಸ್‌ಎಲ್‌ಸಿ. ಅವರದು ರೈತ ಕುಟುಂಬ. ತಂದೆ– ತಾಯಿಯ ಏಳನೇ ಪುತ್ರರಾದ ಅವರ ಚಿತ್ತ ಛಾಯಾಪೆಟ್ಟಿಗೆಯತ್ತ ಹೊರಳಿದ್ದು ಆಕಸ್ಮಿಕ. ತೊಂಬತ್ತರ ದಶಕದಲ್ಲಿ ಉದ್ಯೋಗ ಅರಸಿ ಮೈಸೂರಿಗೆ ಕಾಲಿಟ್ಟ ಅವರು ಅಲ್ಲಿನ ಸ್ಟುಡಿಯೊವೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಕಪ್ಪು– ಬಿಳುಪಿನ ಛಾಯಾಚಿತ್ರಗಳನ್ನು ವರ್ಣಮಯ ಮಾಡುವುದು ಅವರ ಕೆಲಸ. ಗ್ರಾಮೀಣ ಹಿನ್ನೆಲೆಯ ಅವರು ಕತ್ತಲ ಕೋಣೆಯಲ್ಲಿಯೇ ಬಣ್ಣದ ಲೋಕದ ಸೆಳೆತಕ್ಕೆ ಸಿಲುಕಿದರು. ಇವರ ಕೆಲಸದಲ್ಲಿನ ಶ್ರದ್ಧೆ, ಬದ್ಧತೆ, ಕೌಶಲ ಸ್ಥಿರ ಛಾಯಾಗ್ರಾಹಕ ಸುನಿಲ್‌ ನಾಗರಾಜ್‌ ಅವರ ಕಣ್ಣಿಗೆ ಬಿದ್ದಿತು. ಬಳಿಕ ಸುರೇಶ್‌ ಅವರ ಪಯಣ ಸಾಗಿದ್ದು ಗಾಂಧಿನಗರಕ್ಕೆ. ಅಲ್ಲಿ ಮೂರು ವರ್ಷ ಕಾಲ ಕತ್ತಲೆ ಕೋಣೆಯಲ್ಲಿ ಬಿಂಬಗಳ ಹುಡುಕಾಟದಲ್ಲಿ ಮುಳುಗಿದರು. ಅವರ ಕೆಲಸ ಗುರುತಿಸಿದ ಹಿರಿಯ ನಟ ಸುಂದರ ಕೃಷ್ಣ ಅರಸ್‌ ತಾವು ನಿರ್ದೇಶಿಸಿದ ‘ಸಂಗ್ಯಾ ಬಾಳ್ಯಾ’ ಚಿತ್ರಕ್ಕೆ ಸ್ಥಿರ ಛಾಯಾಗ್ರಾಹಕರಾಗಿ ನೇಮಿಸಿಕೊಂಡರು. ಆ ನಂತರ ಸಿಕ್ಕಿದ ಅವಕಾಶ ಬಳಸಿಕೊಂಡು ನೂರಾ ಒಂದು ಚಿತ್ರಗಳಿಗೆ ಸ್ಥಿರ ಛಾಯಾಗ್ರಾಹಕರಾಗಿ ದುಡಿದ ಹೆಮ್ಮೆ ಸುರೇಶ್‌ ಅವರದು.

‘ಸಂಗ್ಯಾ ಬಾಳ್ಯಾ ಚಿತ್ರದ ಆಲ್ಬಂ ಮಾಡಿದೆ. ಇದು ಗಾಂಧಿನಗರದಲ್ಲಿ ಸದ್ದು ಮಾಡಿತು. ಸ್ನೇಹಿತ ಸುಭಾಷ್‌ ಕಡಕೋಳ ಅವರು ಇದನ್ನು ನಟ ವಿಷ್ಣುವರ್ಧನ್‌ ಅವರಿಗೆ ತೋರಿಸಿದರು. ವಿಷ್ಣು ಸರ್‌ ಅವರಿಂದಲೂ ಮೆಚ್ಚುಗೆ ಸಿಕ್ಕಿತು. ಅವರ ‘ಸಾಮ್ರಾಟ್‌’ ಚಿತ್ರಕ್ಕೆ ಸ್ಥಿರ ಛಾಯಾಗ್ರಾಹಕನಾದೆ’ ಎಂದು ನೆನಪು ಮೆಲುಕು ಹಾಕುತ್ತಾರೆ ಅವರು.

ಛಾಯಾಗ್ರಹಣದ ಕಲಿಕೆಗಾಗಿ ಅವರು ಯಾವುದೇ ಕೋರ್ಸ್‌ಗಳ ಬೆನ್ನುಹತ್ತಿದವರಲ್ಲ. ಕಾಲೇಜುಗಳಿಗೂ ಎಡತಾಕಿದವರಲ್ಲ. ಸ್ಥಿರ ಸಿನಿಮಾಟೋಗ್ರಫರ್‌ ಆಗಿ ಕೆಲಸ ಮಾಡುತ್ತಲೇ ಸಿನಿಮಾಟೋಗ್ರಫಿ ಪ್ರಾಥಮಿಕ ಪಾಠ ಕಲಿತ ಅವರು ಮೊದಲು ಕೆಲಸಕ್ಕೆ ಸೇರಿದ್ದು ಛಾಯಾಗ್ರಾಹಕ ಬಿ.ಎಲ್‌. ಬಾಬು ಅವರ ಬಳಿ. ‘ಸಿನಿಮಾ ಛಾಯಾಗ್ರಹಣ ಮಾಡಬೇಕೆಂಬ ಆಸೆ ಮೊಳೆಯಿತು. ಆಗ ಬಾಬು ಚೈತ್ರದ ಪ್ರೇಮಾಂಜಲಿ ಚಿತ್ರಕ್ಕೆ ಕೆಲಸ ಮಾಡುತ್ತಿದ್ದರು. ಆ ಚಿತ್ರದಲ್ಲಿ ಸಹಾಯಕನಾಗಿ ದುಡಿದೆ. ಆರಾಧ್ಯ, ಎಂ.ಡಿ. ಶ್ರೀಧರ್‌, ಎಸ್‌. ಮಹೇಂದರ್‌ ಅವರಿಂದ ಸಾಕಷ್ಟು ಕಲಿತೆ’ ಎನ್ನುತ್ತಾರೆ ಅವರು.

ಸುರೇಶ್‌ ಮೊದಲ ಬಾರಿಗೆ ಸ್ವತಂತ್ರ ಸಿನಿಮಾಟೋಗ್ರಫರ್ ಆಗಿ ಕೆಲಸ ಮಾಡಿದ್ದು ‘ಪೆರೋಲ್‌’ ಚಿತ್ರದಲ್ಲಿ. ಬಳಿಕ ‘ಹುಡುಗ ಹುಡುಗಿ’, ‘ಬರ್ಫಿ’ ಹೀಗೆ ಒಂದಾದ ನಂತರ ಒಂದು ಅವಕಾಶಗಳು ಸಿಗುತ್ತಲೇ ಹೋದವು. ಇಲ್ಲಿಯವರೆಗೆ ಹದಿನಾರು ಚಿತ್ರಗಳಲ್ಲಿ ಅವರ ಕ್ಯಾಮೆರಾದ ಕುಸುರಿಯಿದೆ. ‘ಹುಡುಗ ಹುಡುಗಿ’, ‘ನಾನಿ’ ಅವರಿಗೆ ಹೆಸರು ತಂದುಕೊಟ್ಟ ಚಿತ್ರಗಳು. ‘ನಾನಿ ಚಿತ್ರದ ಬೆಳಕಿನಾಟ ಚಂದನವನದಲ್ಲಿ ನನಗೊಂದು ಗಟ್ಟಿನೆಲೆ ಒದಗಿಸಿತು’ ಎಂದು ಸ್ಮರಿಸುತ್ತಾರೆ.

‘ಕಾಲಚಕ್ರ’ ಚಿತ್ರದ ನಿರ್ದೇಶಕ ಸುಮಂತ್‌ ಕ್ರಾಂತಿ. ಇದರಲ್ಲಿ ನಟ ವಸಿಷ್ಠ ಸಿಂಹ ಅವರದು ಯುವ ಮತ್ತು ಮಧ್ಯವಯಸ್ಕನ ಎರಡು ವಿಭಿನ್ನ ಶೇಡ್‌ ಇರುವ ಪಾತ್ರ. ಇದರಲ್ಲಿ ಸುರೇಶ್‌ ಅವರ ಕ್ಯಾಮೆರಾ ಚಳಕವಿದೆ. ‘ಭಿನ್ನವಾದ ಕಥಾವಸ್ತು ಹೊಂದಿರುವ ಚಿತ್ರ ಇದು. ಜೂಮ್‌ ಇಲ್ಲದೆ ಕೇವಲ ಬ್ಲಾಕ್‌ಲೆನ್ಸ್‌ ಬಳಸಿ ಚಿತ್ರೀಕರಿಸಿದ್ದೇವೆ. ಇದೊಂದು ವಿಶಿಷ್ಟ ಅನುಭವ. ಚಿತ್ರಸೊಗಸಾಗಿ ಮೂಡಿಬಂದಿದೆ’ ಎಂದು ವಿವರಿಸುತ್ತಾರೆ.

ಸದ್ಯ ಸುರೇಶ್‌ ಅವರು ಸುಮಂತ್‌ ಕ್ರಾಂತಿ ನಿರ್ದೇಶನದ ‘ಕಾಜಲ್’ ಚಿತ್ರದ ಛಾಯಾಗ್ರಹಣದಲ್ಲಿ ಬ್ಯುಸಿ. ಬಾಹುಬಲಿ ನಿರ್ದೇಶನದ ಮತ್ತೊಂದು ಸಿನಿಮಾದಲ್ಲೂ ಕೆಲಸ ಮಾಡಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT