ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರೆಯದ ಹೆಣ್ಣು ಮಕ್ಕಳ ಮಾನಸಿಕ ತೊಳಲಾಟ: ತಲ್ಲಣಿಸದಿರು ಮನವೇ..!

Last Updated 10 ಡಿಸೆಂಬರ್ 2021, 19:43 IST
ಅಕ್ಷರ ಗಾತ್ರ

ಹದಿವಯಸ್ಸಿನಲ್ಲಿ ಹೆಣ್ಣುಮಕ್ಕಳಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು, ಅವರಲ್ಲಿ ಒಮ್ಮೊಮ್ಮೆ ಖಿನ್ನತೆಗೂ ಕಾರಣವಾಗುತ್ತವೆ. ಇಂಥ ಮಾನಸಿಕ ತಲ್ಲಣಗಳನ್ನು ಪ್ರೀತಿ, ಸ್ನೇಹ, ವಿಶ್ವಾಸದೊಂದಿಗೆ ಗೆಲ್ಲಬೇಕಿದೆ.

‘ನನ್ನ ಮಗಳು ಮಹತಿ ಇತ್ತೀಚೆಗೆ ತುಂಬಾನೇ ಖಿನ್ನತೆಗೊಳಗಾಗಿದ್ದಾಳೆ. ಸದಾ ಮಂಕಾಗಿರುತ್ತಾಳೆ. ಮನೆಯಲ್ಲಿ ಒಬ್ಬಳೇ ಕುಳಿತು ಏನೋ ಯೋಚಿಸುತ್ತಿರುತ್ತಾಳೆ. ಋತುಮತಿಯಾದಾಗಿನಿಂದಲೂ ಹೀಗೆ ವರ್ತಿಸುತ್ತಿದ್ದಾಳೆ. ಚಿಕ್ಕಪುಟ್ಟ ವಿಷಯಗಳಿಗೂ ಅಳುತ್ತಾಳೆ, ಬೇಸರ ಮಾಡಿಕೊಳ್ಳುತ್ತಾಳೆ. ಅವಳನ್ನು ಹೇಗೆ ಸರಿಪಡಿಸಬೇಕೆಂದೇ ತಿಳಿಯುತ್ತಿಲ್ಲ. ಹೆಣ್ಣುಮಕ್ಕಳು ಸಣ್ಣವರಿದ್ದಾಗಲೇ ಚಂದ. ಹದಿಹರೆಯಕ್ಕೆ ಕಾಲಿಟ್ಟ ನಂತರ ಆತಂಕ ಶುರುವಾಗುತ್ತದೆ. ಈ ಹಂತದಲ್ಲಿ ಹೆಣ್ಣುಮಕ್ಕಳನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸುವುದು ನಮಗೆಲ್ಲ ದೊಡ್ಡ ಸವಾಲು’

– ಅಂದು ಕಚೇರಿಯ ಊಟದ ಬಿಡುವಿನಲ್ಲಿ ಸುಮತಿ ಪಾಟೀಲ್‌ ತನ್ನ ಮನೆಯ ಕತೆಯನ್ನು ಗೆಳತಿಯ ಬಳಿ ಹಂಚಿಕೊಂಡಿದ್ದರು. ಗೆಳೆತಿಯ ಮಾತಿಗೆ ಮಾತು ಜೋಡಿಸಿದ ಮಂಜುಳಾರಾವ್‌, ‘ನನಗೂ ಈ ಅನುಭವವಾಗಿದೆ’ ಎಂದಿದ್ದರು. ಇದು ಈ ಇಬ್ಬರು ಗೆಳತಿಯರ ಅನುಭವವಷ್ಟೇ ಅಲ್ಲ, ಹದಿವಯಸ್ಸಿನ ಹೆಣ್ಣುಮಕ್ಕಳ ಹಲವು ತಾಯಂದಿರಅನುಭವವೂ ಆಗಿರಬಹುದು. ಮನೆಯಲ್ಲಿ ಈ ವಯಸ್ಸಿನ ಹೆಣ್ಣುಮಕ್ಕಳಿದ್ದಾಗ, ಸಾಮಾನ್ಯವಾಗಿ ಇಂಥ ಸಮಸ್ಯೆಗಳು ತಾಯಂದಿರನ್ನು ಕಾಡುತ್ತವೆ. ಇವುಗಳನ್ನು ಸಂಭಾಳಿಸಲು ಅವರು ಬಹಳ ಹರಸಾಹಸ ಪಡುತ್ತಾರೆ.

ಬಾಲ್ಯಾವಸ್ಥೆಯಿಂದ ಹರೆಯಕ್ಕೆ ಕಾಲಿಟ್ಟಾಗ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಅವರ ಮೆದುಳು ದೊಡ್ಡವರ ಹಾಗೇ ವರ್ತಿಸಲು ಆರಂಭವಾಗುತ್ತದೆ. ಆದರೆ, ಸಂಪೂರ್ಣವಾಗಿ ಪ್ರೌಢವಾಗಿರುವುದಿಲ್ಲ.ಇದು ಸಂಕೀರ್ಣ ವಯಸ್ಸು. ಈ ವಯಸ್ಸಿನವರು ಕೆಲವೊಮ್ಮೆ ಬುದ್ಧಿವಂತರ ಹಾಗೆ, ಇನ್ನೂ ಕೆಲವೊಮ್ಮೆ ಅತಿ ಪೆದ್ದರಂತೆ ವರ್ತಿಸುತ್ತಾರೆ. ಈ ವರ್ತನೆಗಳ ಜೊತೆಗೆ ಇತ್ತೀಚೆಗೆ ತಂತ್ರಜ್ಞಾನದ ಅತಿಯಾದ ಪ್ರಭಾವವೂ ಹೆಣ್ಣುಮಕ್ಕಳ ಮನಸ್ಸನ್ನು ಮತ್ತಷ್ಟು ತಲ್ಲಣಗೊಳಿಸುತ್ತಿದೆ.

‘ಕೋವಿಡ್‌ –‌ ಲಾಕ್‌ಡೌನ್‌ ನಂತರದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿವೆ. ವರ್ಕ್‌ ಫ್ರಂ ಹೋಮ್‌, ಆನ್‌ಲೈನ್ ತರಗತಿಗಳಂತಹ ಚಟುವಟಿಕೆಗಳು ಹದಿಹರೆಯದವರಲ್ಲಿ ಅದರಲ್ಲೂ ಹೆಚ್ಚಾಗಿ ಯುವತಿಯರಲ್ಲಿ ಇಂಥ ಮಾನಸಿಕ ತಲ್ಲಣಗಳನ್ನು ಉಂಟು ಮಾಡಿವೆ’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಹಾಗೂ ಆಪ್ತಸಮಾಲೋಚಕಿ ಡಾ. ವಸುಂಧರಾ ಭೂಪತಿ.

‘ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳೊಂದಿಗೆ ಬಹಳ ಜಾಗರೂಕತೆಯಿಂದ, ಗೌರವಯುತವಾಗಿ ನಡೆದುಕೊಳ್ಳುವುದು ಬಹಳ ಮುಖ್ಯ. ಜೊತೆಗೆ, ದೈಹಿಕ–ಮಾನಸಿಕ ಪರಿಸ್ಥಿತಿ ನಿಭಾಯಿಸಲು ಮಕ್ಕಳ ಮನಸ್ಸನ್ನು ಸಜ್ಜುಗೊಳಿಸಬೇಕು. ‘ನಾವೂ ಇದೇ ಹಂತವನ್ನು ದಾಟಿ ಬಂದವರು. ಅವರ ವಯಸ್ಸಲ್ಲಿ ನಾವು ಹಾಗಿರಲಿಲ್ಲ. ಇವಳೇಕೆ ಹೀಗಾಡುತ್ತಾಳೆ’ ಎನ್ನುತ್ತಾ ಗದರುವುದು, ನಿಂದಿಸುವುದು, ಹೊಡೆಯುವುದು ಮಾಡಬೇಡಿ. ಮಕ್ಕಳ ಮನೋಭಾವ ಅರಿತು, ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ’ ಎನ್ನುತ್ತಾರೆ ವಸುಂಧರಾ ಭೂಪತಿ.

ಸೌಹಾರ್ದ ಸಂಬಂಧವಿರಲಿ..

ಹದಿವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು ಅವಶ್ಯ. ಅಮ್ಮಂದಿರು ಮಕ್ಕಳಲ್ಲಿ ಸಮಸ್ಯೆ ಕಂಡ ತಕ್ಷಣ ಅವರೊಂದಿಗೆ ಮುಕ್ತವಾಗಿ ಮಾತಾಡಿ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸೂಕ್ಷ್ಮವಾಗಿ ಭಾವನೆಗಳನ್ನು ಅವಲೋಕಿಸಿ, ಅವರ ನೋವಿಗೆ ಸ್ಪಂದಿಸಬೇಕು. ಸಾಂತ್ವನ ಹೇಳಬೇಕು ಎಂದು ಸಲಹೆ ನೀಡುತ್ತಾರೆ ವಸುಂಧರಾ.

ಇಂಥ ಸಮಯದಲ್ಲಿ ಮನೆಯವರಿಗಿಂತ ಮಕ್ಕಳಿಗೆ ಸ್ನೇಹಿತರ ಅವಶ್ಯಕತೆ ಹೆಚ್ಚಿರುತ್ತದೆ. ಆ ಕಾರಣಕ್ಕೆ ಗಂಡು–ಹೆಣ್ಣು ಎಂಬ ಭೇದವಿಲ್ಲದೆ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಾಗಿ ಭಾವಿಸದೇ ಮಗಳ ನಡವಳಿಕೆ ಮತ್ತು ಅವರ ಗೆಳೆಯರ ಬಗ್ಗೆ ನಿಗಾ ಇಟ್ಟರೆ ಸಾಕು. ಅದು ಬಿಟ್ಟು, ಆಕೆ ‘ಸ್ನೇಹ ಮಾಡಿದ್ದೇ ತಪ್ಪು’ ಎಂದು ರಾದ್ಧಾಂತ ಮಾಡುವುದು ಸಲ್ಲ. ಸ್ನೇಹ ಮಾಡುವ ಮೊದಲು, ಅದು ಹೇಗೆ ಮುಂದುವರಿಯಬೇಕು ಎಂಬುದನ್ನು ಮಕ್ಕಳಿಗೆ ತಿಳಿ ಹೇಳಿ. ಅದರೊಂದಿಗೆ ಸ್ನೇಹಿತರಿಗೆ ಗೌರವ ನೀಡುವುದನ್ನೂ ಕಲಿಸಿ.

ದುಶ್ಚಟಗಳಿಂದ ದೂರವಿರಲಿ..

ಹದಿಹರೆಯದಲ್ಲಿ ಹೆಣ್ಣುಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ತಾವು ಮಾಡುತ್ತಿರುವುದು ತಪ್ಪು ಎಂಬುದರ ಅರಿವಿರುವುದಿಲ್ಲ. ಸ್ನೇಹಿತರಿಗೆ ಧೂಮಪಾನ, ಮದ್ಯಪಾ‌ನದಂತಹ ದುಶ್ಚಟಗಳಿದ್ದಾಗ, ಅವರ ಪ್ರಭಾವದಿಂದಲೋ ಅಥವಾ ಇದನ್ನು ಅನುಕರಿಸದಿದ್ದರೆ ನನ್ನನ್ನು ಕೇವಲವಾಗಿ ನೋಡುತ್ತಾರೆಂದೋ, ಆ ಚಟವನ್ನು ಕಲಿಯಲು ಪ್ರಯತ್ನಿಸಬಹುದು. ಅಂಥ ವೇಳೆ ಸಂಯಮದಿಂದ ವರ್ತಿಸಿ. ಒಮ್ಮೆಲೆ ಆ ‘ಸಂಗ’ ದಿಂದ ದೂರ ಮಾಡಲು ಪ್ರಯತ್ನಿಸಬೇಡಿ. ಮೊದಲು ದುಶ್ಚಟಗಳಿಂದಾಗುವ ದುಷ್ಪರಿಣಾಮಗಳನ್ನು ಉದಾಹರಣೆ ಸಹಿತ ತಿಳಿಸಿ ಹೇಳಿ. ಒಮ್ಮೆ ಹೇಳಿ ಗದರಿಸಿ ಬಿಟ್ಟು ಬಿಟ್ಟರೆ ಸಾಲದು, ಬದಲಿಗೆ ಅವರ ಮೇಲೆ ನಿಗಾ ಇಟ್ಟು, ಆಗಾಗ ಪರಿಸ್ಥಿತಿ ಗಮನಿಸಿ ಮನವರಿಕೆ ಮಾಡುತ್ತಿರಬೇಕು. ಆಗ ನಿಧಾನವಾಗಿಯಾದರೂ ಭವಿಷ್ಯದಲ್ಲಿ ಮಕ್ಕಳನ್ನು ದುಶ್ಚಟಗಳಿಂದ ದೂರ ಮಾಡಬಹುದು.

ಪ್ರಬುದ್ಧವಾಗಿ ನಡೆದುಕೊಳ್ಳಿ

ಈ ವಯಸ್ಸಿನವರು ಮಕ್ಕಳೂ ಅಲ್ಲ, ದೊಡ್ಡವರು ಅಲ್ಲ. ಮಾನಸಿಕವಾಗಿ ಅಷ್ಟೆಲ್ಲ ಬೆಳವಣಿಗೆ ಹೊಂದಿರುವವರೂ ಅಲ್ಲ. ಆ ಕಾರಣಕ್ಕೆ ನೀವು ಎಂತಹ ಕಷ್ಟದ ಸಂದರ್ಭವಾದರೂ ಅವರ ಬಳಿ ಪ್ರಬುದ್ಧವಾಗಿ ಹಾಗೂ ತಿಳಿವಳಿಕೆಯಿಂದ ನಡೆದುಕೊಳ್ಳಬೇಕು. ಮಗಳ ಬಗ್ಗೆ ನಿಮ್ಮಲ್ಲಿರುವ ಅನುಮಾನವನ್ನು ಎತ್ತಾಡುವ ಬದಲು, ಆಕೆಯೊಂದಿಗೆ ಚರ್ಚಿಸಿ. ಆ ಚರ್ಚೆ ಆರೋಗ್ಯಕರವಾಗಿರಲಿ.

ಮಗಳಿಗೆ ಸ್ನೇಹಿತೆಯಾಗಿರಿ

ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ತಾಯಿಯೇ ಮೊದಲ ಸ್ನೇಹಿತೆ. ಈ ವಯಸ್ಸಿಗೆ ಬಂದ ಮೇಲಂತೂ ಮಕ್ಕಳು ಒಂದಿಷ್ಟು ದಿನ ಯಾರೊಂದಿಗೂ ಬೆರೆಯಲು ಹಿಂಜರಿಯುತ್ತಾರೆ. ಅಲ್ಲದೇ ತಮ್ಮ ಮನದಲ್ಲಾಗುತ್ತಿರುವ ತಲ್ಲಣಗಳನ್ನು ಹೇಳಿಕೊಳ್ಳಲು ಅವರು ಉತ್ತಮ ಸ್ನೇಹಕ್ಕಾಗಿ ಹಾತೊರೆಯುತ್ತಿರುತ್ತಾರೆ. ಆಗ ತಾಯಿಯಾದವರು ಮಗಳೊಂದಿಗೆ ಗೆಳತಿಯಂತಿರಬೇಕು. ಮಗಳ ಪ್ರತಿ ನಡೆಯಲ್ಲೂ ಅವರು ಸ್ನೇಹಿತೆಯಂತೆ ಹೆಜ್ಜೆ ಇಡಬೇಕು. ಪ್ರೀತಿಯ ಸಾಗರವೇ ಆಗಿರುವ ಅಮ್ಮ, ಮಗಳ ನೋವು–ನಲಿವಿಗೆ ಹೆಗಲಾಗಬೇಕು.

****

ಹದಿಹರೆಯದ ಹೆಣ್ಣುಮಕ್ಕಳ ಮಾನಸಿಕ ತೊಳಲಾಟವನ್ನು ಸ್ನೇಹ, ಪ್ರೀತಿಯ ಚಿಕಿತ್ಸೆಯೊಂದಿಗೆ ಸರಿಪಡಿಸಬೇಕೇ ವಿನಾ, ಗದರಿ, ನಿಂದಿಸಿ, ನೀತಿ ನಿಯಮಗಳನ್ನು ಹೇರಬಾರದು. ದೇಹದಲ್ಲಿ ಶಕ್ತಿ ಕ್ಷೀಣಿಸುವುದೂ ಖಿನ್ನತೆಗೆ ಕಾರಣ. ಹಾಗಾಗಿ, ಹದಿವಯಸ್ಸಿನ ಹೆಣ್ಣುಮಕ್ಕಳ ದೈಹಿಕ ಆರೋಗ್ಯ ಉತ್ತಮವಾಗಿರಬೇಕು. ಊಟದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳ ಸೇವಿಸಬೇಕು. ದಿನಕ್ಕೆ 3 ಲೀಟರ್‌ ನೀರು ಕುಡಿಯಬೇಕು. ಜಂಕ್‌ಫುಡ್ ಸೇವನೆ ತುಂಬ ಮಿತಿಗೊಳಿಸಿಕೊಳ್ಳಬೇಕು.

– ಡಾ. ವಸುಂಧರಾ ಭೂಪತಿ, ಆಯುರ್ವೇದ ವೈದ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT