ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯಾಗುವ ಕಾಲಕ್ಕೆ ಅಮ್ಮನಾಗುವ ಬಯಕೆ

Last Updated 20 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಆಂಧ್ರಪ್ರದೇಶದ ಗುಂಟೂರಿನ74 ವರ್ಷದ ಎರಮಟ್ಟಿ ಮಂಗಯಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ವಿಶ್ವದ ಹಿರಿಯ ತಾಯಿಯಾಗಿ ಸಂಭ್ರಮಿಸಿದ್ದಾರೆ. ಈ ದಾಖಲೆಯ ಬೆನ್ನಲ್ಲೇ ವಿವಿಧ ಭಾಗಗಳಿಂದ ಸಾಲು ಸಾಲು ಹಿರಿಯಮ್ಮಂದಿರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಬದುಕಿನ ಸಂಧ್ಯಾಕಾಲದಲ್ಲಿ ಮಾತೃತ್ವದ ಧನ್ಯತೆ ಪಡೆದ ಅಮ್ಮಂದಿರ ಮುಂದಿರುವ ಸವಾಲುಗಳು ಹೊಸ ರೂಪ ಪಡೆಯುತ್ತಿವೆ. ಅದರ ಹಿಂದೆಯೇ ಈ ಪ್ರವೃತ್ತಿಯನ್ನು ಉತ್ತಮ ಸಮಾಜಕ್ಕೆ ಮಾರಕವೆಂದು ಪರಿಗಣಿಸಬೇಕು ಮತ್ತು ಇದನ್ನು ತಡೆಯುವ ಗಂಭೀರ ಪ್ರಯತ್ನಗಳಾಗಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಪ್ರಜ್ಞಾವಂತ ನಾಗರಿಕರಿಂದ ಹಿಡಿದು, ವೈದ್ಯಕೀಯ ತಜ್ಞರು, ಕಾನೂನು ತಜ್ಞರು, ಸಾಮಾಜಿಕ ಚಿಂತಕರು ಈ ಬಗ್ಗೆ ಕಳವಳ ಪಡುತ್ತಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿ ಅಮ್ಮನಾದ ಮಂಗಯಮ್ಮ ಈ ಮೂಲಭೂತ ಪ್ರಶ್ನೆಗಳ ಜನನಿಯಾಗಿದ್ದಾರೆ.

ಇದು ನಮ್ಮ ದೇಶದಲ್ಲಿ ನಡೆದ ಮೊದಲ ಘಟನೆ ಏನೂ ಅಲ್ಲ. ಬಹುಶಃ ಕೊನೆಯದೂ ಆಗಲಿಕ್ಕಿಲ್ಲ. ಕಳೆದೊಂದು ದಶಕದಿಂದ ಈಚೆಗೆ ಇಂತಹ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದಿವೆ. 2010ರಲ್ಲಿಹರಿಯಾಣದ ಸತ್ರೋಡ್‌ನ ಭಟೇರಿದೇವಿ ತನ್ನ 66ರ ಹರೆಯದಲ್ಲಿ ತ್ರಿವಳಿಗಳಿಗೆ ಜನ್ಮ ನೀಡಿದ್ದರು. ಇಂಥದ್ದೇ ಇನ್ನೊಂದು ಘಟನೆ 2016ರಲ್ಲಿಯೂ ಬೆಳಕಿಗೆ ಬಂದಿತ್ತು. ಹರಿಯಾಣದ ದಲ್ಜಿಂದರ್ ಕೌರ್ ಎನ್ನುವ 72 ವರ್ಷದ ಅಜ್ಜಮ್ಮ ಮಗುವಿಗೆ ಜನ್ಮ ನೀಡಿ ವಿಸ್ಮಯವನ್ನುಂಟು ಮಾಡಿದ್ದರು. ಆಗೆಲ್ಲಾ ಇದು ಅಚ್ಚರಿಯ ಸಂಗತಿಯಾಗಿ ಪರ್ಯಾಪ್ತಿ ಹೊಂದಿತ್ತು. ಈ ಬಾರಿ ಹಾಗಾಗಲಿಲ್ಲ. 74 ವರ್ಷದ ಮಂಗಯಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡುವುದರೊಂದಿಗೆ ಈ ಕ್ರಮಕ್ಕೆ ಮೂಗುದಾರ ಹಾಕಬೇಕು ಎನ್ನುವ ಅನಿವಾರ್ಯತೆಗೆ ಮುನ್ನುಡಿಯೂ ಬರೆದಿದ್ದಾರೆ.

ಪೋಷಣೆಯ ಸವಾಲು
ಈ ವಯಸ್ಸಿನಲ್ಲಿ ಗರ್ಭಧರಿಸುವುದನ್ನು ಕೆಲ ಸ್ತ್ರೀರೋಗ ತಜ್ಞರು ಸುತಾರಾಂ ಬೆಂಬಲಿಸುವುದಿಲ್ಲ. ಇಂತಹ ಗರ್ಭಧಾರಣೆಯಸಾಮಾಜಿಕ, ಆರ್ಥಿಕ, ಮಾನಸಿಕ, ಕೌಟುಂಬಿಕ ಸವಾಲುಗಳ ಎಚ್ಚರಿಕೆಯನ್ನು ನೀಡುತ್ತಿವೆ ವೈದ್ಯಕೀಯ ಸಂಘ–ಸಂಸ್ಥೆಗಗಳು. 12–13ರ ಅಪ್ರಾಪ್ತೆಯರು ಗರ್ಭಧರಿಸುವುದು, ತಾಯಿಯಾಗುವುದು ಹೇಗೆ ಸಮಸ್ಯಾತ್ಮಕವೊ ಹಾಗೆಯೇ 60–70ರ ವೃದ್ಧೆ ತಾಯಿಯಾಗುವುದೂ ಕೂಡ ಸಮಸ್ಯೆಯೇ. ಆ ವಯಸ್ಸಿನಲ್ಲಿ ದೈಹಿಕಶಕ್ತಿ ಕುಗ್ಗುವುದರಿಂದ ಗರ್ಭಾವಸ್ಥೆಯ ಒತ್ತಡವನ್ನು ಅವರು ತಡೆದುಕೊಳ್ಳಲಾರರು. ಮಕ್ಕಳ ಪಾಲನೆ–ಪೋಷಣೆ ಮಾಡುವುದೂ ಸವಾಲು. ಸಾಮಾಜಿಕ ಹಾಗೂ ಕೌಟುಂಬಿಕಮನಸ್ಥಿತಿಗಳೂ ಸಹ ಇದನ್ನು ಪುರಸ್ಕರಿಸುವುದಿಲ್ಲ. ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುವ ಕಾರಣ ಸಮಾಜಕ್ಕೆ ಆರೋಗ್ಯವಂತ ಮಕ್ಕಳನ್ನು ಕೊಡಲು ಅವರು ಅಶಕ್ತರು.

‘ಐವಿಎಫ್ ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸುವ ಮಸೂದೆಯನ್ನು ಮಂಡಿಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತ ಬಂದಿದೆ. ಐವಿಎಫ್‌ಗೆ ಮಹಿಳೆಯರ ಗರಿಷ್ಠ ವಯಸ್ಸು 45, ಪುರುಷರ ಗರಿಷ್ಠ ವಯಸ್ಸು 50 ಎಂದು ಮೆಡಿಕಲ್‌ ಕೌನ್ಸಿಲ್‌ ವಯಸ್ಸಿನ ಮಿತಿಯನ್ನು ವಿಧಿಸಿದೆ. ಆದರೆ ಈ ಮಾರ್ಗಸೂಚಿಗಳನ್ನು ಎಷ್ಟು ಕ್ಲಿನಿಕ್‌ಗಳು ಅನುಸರಿಸುತ್ತವೆ? ವೈದ್ಯರಾದ ನಾವು ನೈತಿಕ ಪ್ರಜ್ಞೆಯಿಂದ ಕೆಲಸ ಮಾಡಬೇಕು. ಮಹಿಳೆಯ ವಯಸ್ಸು, ದೈಹಿಕ ಸ್ಥಿತಿಯನ್ನು ಗಮನಿಸಿ ಇಂತಹ ನಿರ್ಧಾರ ಕೈಗೊಳ್ಳಬೇಕು’ ಎನ್ನುತ್ತಾರೆ ಡಾ. ಮಹೇಶ ಕೋರೆಗೋಳ. ಇಂಡಿಯನ್‌ ಸೊಸೈಟಿ ಫಾರ್‌ ಅಸಿಸ್ಟೆಡ್‌ ರಿಪ್ರೊಡಕ್ಷನ್‌ನ ಕರ್ನಾಟಕ ಚಾಪ್ಟರ್‌ನ ಕಾರ್ಯಕಾರಿ ಸದಸ್ಯರೂ ಆಗಿರುವ ಅವರು ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಕಾನೂನಿನ ಅಗತ್ಯವಿದೆ ಎನ್ನುತ್ತಾರೆ.

ಡಾ. ದೇವಿಕಾ ಗುಣಶೀಲ, ಸ್ತ್ರೀರೋಗ ತಜ್ಞೆ, ಗುಣಶೀಲ ಫರ್ಟಿಲಿಟಿ ಸೆಂಟರ್‌
ಡಾ. ದೇವಿಕಾ ಗುಣಶೀಲ, ಸ್ತ್ರೀರೋಗ ತಜ್ಞೆ, ಗುಣಶೀಲ ಫರ್ಟಿಲಿಟಿ ಸೆಂಟರ್‌

ಕಾನೂನು ರೂಪಿಸಲಿ
‘ಬಾಡಿಗೆ ತಾಯ್ತನ ಹಾಗೂ ಗರ್ಭಪಾತಗಳಿಗೆ ಕಟ್ಟುನಿಟ್ಟಾದ ಕಾನೂನುಗಳಿವೆ. ಐವಿಎಫ್‌ಗೆ ಏಕಿಲ್ಲ?’ ಎನ್ನುವ ಪ್ರಶ್ನೆ ವಕೀಲೆ ಅಂಜಲಿ ರಾಮಣ್ಣ ಅವರದು. ‘ಯಾವ ವಯಸ್ಸಿನಲ್ಲಿ ಮದುವೆ ಆಗಬೇಕು, ಯಾರು ದತ್ತು ತೆಗೆದುಕೊಳ್ಳಬೇಕು ಎನ್ನುವ ಕಾನೂನು ಇದೆ. ಯಾವ ವಯಸ್ಸಿನವರೆಗೂ ಐವಿಎಫ್‌ ತಂತ್ರಜ್ಞಾನದಿಂದ ಮಗುವನ್ನು ಮಾಡಿಕೊಳ್ಳಬಹುದು ಎನ್ನುವುದಕ್ಕೂ ಕಾನೂನು ಬರಬೇಕು. ಕ್ಲಿನಿಕ್‌ಗಳು ನೈತಿಕ ಪ್ರಜ್ಞೆಯನ್ನು ಮರೆತಾಗ ಮಕ್ಕಳ ಹಿತದೃಷ್ಟಿಯಿಂದ ಕೆಲವು ಎಚ್ಚರಿಕೆಗಳನ್ನು ಕಾನೂನಿನ ಮೂಲಕವೇ ಕೊಡಬೇಕಾಗುತ್ತದೆ’ ಎನ್ನುವುದು ಅವರ ಸ್ಪಷ್ಟನೆ.

ತಾಯಿ ಹಾಗೂ ಮಕ್ಕಳ ಜೀವವನ್ನು ಪಣಕ್ಕಿಟ್ಟು ಇಂತಹ ಪ್ರಯತ್ನಕ್ಕೆ ಮುಂದಾದ ವೈದ್ಯರ ಕ್ರಮವನ್ನು ಅನೇಕ ವೈದ್ಯಕೀಯ ಸಂಘಗಳು ಖಂಡಿಸಿವೆ.ಇಂಡಿಯನ್‌ ಸೊಸೈಟಿ ಫಾರ್‌ ಅಸಿಸ್ಟೆಡ್‌ ರಿಪ್ರೊಡಕ್ಷನ್‌ (ಐಎಸ್‌ಎಆರ್‌), ವೈದ್ಯಕೀಯ ಭ್ರೂಣಶಾಸ್ತ್ರಜ್ಞರ ಅಕಾಡೆಮಿ (Academy of Clinical Embryologists) ಹಾಗೂ ಇಂಡಿಯನ್‌ ಫರ್ಟಿಲಿಟಿ ಸೊಸೈಟಿ ಒಟ್ಟಾಗಿ ಇಂತಹ ಪ್ರಯತ್ನವನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

‘ಈ ಬೆಳವಣಿಗೆಯಿಂದ ವೈದ್ಯಕೀಯ ವಲಯ ಎತ್ತ ಸಾಗುತ್ತಿದೆ ಎನ್ನುವ ಕಳವಳ ಉಂಟಾಗಿದೆ. ಇದನ್ನು ಈಗಲೇ ಸರಿಪಡಿಸಬೇಕು’ ಎಂದು ವೈದ್ಯಕೀಯ ಭ್ರೂಣಶಾಸ್ತ್ರಜ್ಞರ ಅಕಾಡೆಮಿ ಹೇಳಿದರೆ,‘ಇದು ತಂತ್ರಜ್ಞಾನದ ದುರುಪಯೋಗ. ತಾಯಿ–ಮಕ್ಕಳ ಜೀವವನ್ನು ಪಣಕ್ಕಿಡುವ ಇಂತಹ ಪ್ರಯತ್ನಗಳ ವಿರುದ್ಧ ಧ್ವನಿ ಎತ್ತಬೇಕು’ ಎಂದಿದೆ ಐಎಸ್‌ಎಆರ್‌.

ಆರೋಗ್ಯಕ್ಕೂ ಕುತ್ತು
40ರ ನಂತರ ಮಹಿಳೆಯ ದೈಹಿಕ ಸಾಮರ್ಥ್ಯ ಕುಗ್ಗುತ್ತ ಹೋಗುತ್ತದೆ. 50ರ ನಂತರ ಮಕ್ಕಳನ್ನು ಹೆರುವುದು, ಪೋಷಿಸುವುದು, ಬೆಳೆಸುವುದು ಅವಳಿಗೆ ಸವಾಲು. ಇದೇ ಕಾರಣಕ್ಕೆ ಸೃಷ್ಟಿಯೂ ‘ಋತುಬಂಧ’ವನ್ನು ವಿಧಿಸುತ್ತದೆ. ವಿಜ್ಞಾನದ ಸಹಾಯದಿಂದ ಸೃಷ್ಟಿಯ ಈ ನಿಯಮವನ್ನು ಮೀರಿ ಮುನ್ನುಗ್ಗುವ ಈ ಪ್ರವೃತ್ತಿಗೆ ಭಾರತೀಯ ಮೆನೋಪಾಸ್ ಸೊಸೈಟಿ ಸಹ ಅಚ್ಚರಿ ವ್ಯಕ್ತಪಡಿಸಿದೆ. ವರ್ಷಗಳ ಹಿಂದೆಯೇ ಅಜ್ಜಿಯಂದಿರನ್ನು ತಾಯಂದಿರನ್ನಾಗಿ ಮಾಡುವ ಪದ್ಧತಿಯ ವಿರುದ್ಧ ಸಾರ್ವಜನಿಕ ಎಚ್ಚರಿಕೆಗಳನ್ನು ಸಹ ನೀಡಿದೆ. ಋತುಬಂಧದ ನಂತರ ಗರ್ಭಧಾರಣೆ ಅಪಾಯಕಾರಿ. ಅದರಲ್ಲೂ 45 ದಾಟಿದ ನಂತರ ಅಧಿಕ ರಕ್ತದೊತ್ತಡ, ಮಧುಮೇಹ, ಪ್ರಸವಪೂರ್ವ ಸಮಸ್ಯೆ, ಗರ್ಭಧಾರಣೆ ಮತ್ತು ಹೆರಿಗೆಯ ಇತರ ತೊಡಕುಗಳು ಅಪಾಯವನ್ನು ಹೆಚ್ಚಿಸುತ್ತವೆ.

ಋತುಬಂಧದ ನಂತರ, ಗರ್ಭಾಶಯದ ಒಳಪದರದಲ್ಲಿಭ್ರೂಣವನ್ನು ಕಾಪಾಡುವ ಹಾರ್ಮೋನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೃದಯ ಸೇರಿದಂತೆ ಇತರ ಅಂಗಾಂಗಗಳು ಸಹ ದುರ್ಬಲಗೊಳ್ಳುತ್ತವೆ. ಇವೆಲ್ಲ ತಿಳಿದೂ ಮಹಿಳೆಯ ವಯಸ್ಸು, ಆರೋಗ್ಯ, ಸ್ಥಿತಿ–ಗತಿ, ಅಡ್ಡಪರಿಣಾಮಗಳನ್ನು ಲೆಕ್ಕಿಸದೇ ಕ್ಲಿನಿಕ್‌ಗಳು ಇಂತಹ ಪ್ರಯತ್ನಕ್ಕೆ ಮುಂದಾಗುತ್ತಿವೆ. ಯಾವುದೇ ಮಾನ್ಯತೆ, ಮೇಲ್ವಿಚಾರಣೆ ಮತ್ತು ನಿಯಂತ್ರಣವಿಲ್ಲದೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಐವಿಎಫ್ ಚಿಕಿತ್ಸಾಲಯಗಳಿಗೆ ಕಡಿವಾಣ ಹಾಕಲು ಕಾನೂನು ರೂಪುಗೊಳ್ಳಬೇಕಾದ ಅಗತ್ಯವಿದೆ.

**

ಋತುಬಂಧ ತಲುಪುವ ಸುಮಾರು ಹತ್ತು ವರ್ಷಗಳ ಮುಂಚೆಯೇ ದೇಹ ಸಾಕಷ್ಟು ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತದೆ. ಅಂಡಾಶಯವೂ ದುರ್ಬಲವಾಗುತ್ತದೆ. ಅಂಡಾಣು ಬಿಡುಗಡೆಗೆ ಕಾರಣವಾಗುವ ಹಾರ್ಮೋನ್‌ನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಅಂಡಾಣು ಗುಣಮಟ್ಟವೂ ಕುಗ್ಗುತ್ತದೆ. ಕ್ರೋಮೊಸೋಮ್‌ ವ್ಯತ್ಯಾಸ ಇದೇ ಅವಧಿಯಲ್ಲಿ ಆರಂಭವಾಗುತ್ತದೆ. 45–50ರಲ್ಲಿ ಮಹಿಳೆಗೆ ಐವಿಎಫ್‌ ಚಿಕಿತ್ಸೆ ನೀಡುವುದೇ ಅಪಾಯಕಾರಿ. ಅಂಥದ್ದರಲ್ಲಿ 60ರ ನಂತರ ಮಹಿಳೆಯಲ್ಲಿ ಗರ್ಭಧಾರಣೆಯ ಆಸೆ ಹುಟ್ಟಿಸುವುದನ್ನು ನಾವಂತೂ ಒಪ್ಪುವುದಿಲ್ಲ. ಹೀಗಿದ್ದಾಗ 74 ವರ್ಷದ ಮಹಿಳೆಯನ್ನು ಅವರು ಹೇಗೆ ಐವಿಎಫ್‌ಗೆ ಒಡ್ಡಿದರೆಂದು ಅರ್ಥವಾಗುತ್ತಿಲ್ಲ. ಈ ವಯಸ್ಸಿನ ಮಹಿಳೆ ಸಮಾಜಕ್ಕೆ ಉತ್ತಮ ಮಗುವನ್ನು ನೀಡಲು ಅಶಕ್ತಳಾಗಿರುತ್ತಾಳೆ. ಗರ್ಭಾವಸ್ಥೆಯ ಒತ್ತಡವನ್ನು ತಡೆದುಕೊಳ್ಳುವ ತ್ರಾಣ ಅವಳಲ್ಲಿ ಉಳಿದುಕೊಂಡಿರುವುದಿಲ್ಲ. ಇದೆಲ್ಲವೂ ಮಕ್ಕಳ ದೈಹಿಕ–ಮಾನಸಿಕ ಆರೋಗ್ಯ ಹಾಗೂ ಬೆಳವಣಿಗೆಯ ಮೇಲೆಯೂ ಪರಿಣಾಮ ಬೀರುತ್ತದೆ. ವೈದ್ಯಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿ, ಆರ್ಥಿಕವಾಗಿಯೂ ಇದು ಸವಾಲಿನ ಸಂಗತಿಯೇ. ಈ ಬಗ್ಗೆ ಸ್ಪಷ್ಟವಾದ ಹಾಗೂ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT