ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಾ... ಆರೋಗ್ಯ ಜೋಪಾನ

Published 12 ಮೇ 2023, 21:13 IST
Last Updated 12 ಮೇ 2023, 21:13 IST
ಅಕ್ಷರ ಗಾತ್ರ

ಉಷಾ ರವೀಂದ್ರ, ಆಹಾರತಜ್ಞೆ 

ಕುಟುಂಬ ಸದಸ್ಯರ ಹೊಟ್ಟೆ ತಣ್ಣಗಿರಲಿ ಎಂದು ಸದಾ ಯೋಚಿಸುವ ಅಮ್ಮಂದಿರೆಲ್ಲ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಾಳಜಿ ಮಾಡುವುದು ಅಷ್ಟಕಷ್ಟೆ. ಮುಖ್ಯವಾಗಿ ಎಲ್ಲ ಅಮ್ಮಂದಿರ ಬದುಕು ಒಂದು ಬಗೆಯ ಮಾನಸಿಕ ಒತ್ತಡದಲ್ಲಿಯೇ ಕಳೆದು ಹೋಗುತ್ತದೆ. ದೈಹಿಕ, ಮಾನಸಿಕ, ವೃತ್ತಿ ಬದುಕು ಜತೆಗೆ ಸಾಮಾಜಿಕವಾದಂಥ ಒತ್ತಡಗಳು ಅವರನ್ನು ಇನ್ನಿಲ್ಲದಂತೆ ಹೈರಣಾಗಿಸುತ್ತವೆ.  ಬಹುತೇಕ ಅಮ್ಮಂದಿರು ಎದುರಿಸುತ್ತಿರುವಂಥ ಆರೋಗ್ಯ ಸಮಸ್ಯೆಗಳು ಹೀಗಿವೆ.  

ಒತ್ತಡ: ತಾಯಿಯಾದ ಕ್ಷಣವೇ ಒತ್ತಡ ಆರಂಭವಾಗುತ್ತದೆ. ಜತೆಗೆ ಸಾಮಾಜಿಕ ನಿರ್ಬಂಧಗಳು ಅವಳೊಳಗೆ ಇನ್ನಿಲ್ಲದಂಥ ಗೊಂದಲವನ್ನು ಸೃಷ್ಟಿಮಾಡುತ್ತದೆ.   ‘ಮಗು ಸರಿಯಾಗಿ ಊಟ ಮಾಡಲ್ಲ, ಕೂಸಿಗೆ ಬೇಕಾದಷ್ಟು ಎದೆಹಾಲು ಸಿಗುತ್ತಿಲ್ಲ‘ , ಎಷ್ಟೇ ಕಾಳಜಿ ಮಾಡಿದರೂ ಮಗ ಹೇಳಿದ ಮಾಡು ಕೇಳುತ್ತಿಲ್ಲ ಹೀಗೆ  ಈ ‘ಇಲ್ಲ‘ಗಳು ಅವಳನ್ನು ಮತ್ತಷ್ಟು ಒತ್ತಡಕ್ಕೆ ದೂಡುತ್ತವೆ ಎನ್ನುವುದಂತೂ ನಿಜ. ಹಣಕಾಸಿನ ಕೊರತೆ ಇದ್ದುಬಿಟ್ಟರಂತೂ ಅವಳ ಒತ್ತಡದ ಪಾಡು ಹೇಳುವುದು ಕಷ್ಟ. ಜತೆಗೆ ಅಭದ್ರತೆಯೂ ಸೇರಿಕೊಂಡು ಬಿಟ್ಟರೆ ಆತಂಕದ ಹಾಗೂ ಖಿನ್ನತೆ ಅವಳನ್ನು ಆವರಿಸಿಕೊಂಡು ಬಿಡುತ್ತದೆ. 

ಮಲಬದ್ಧತೆ:  ಹಲವು ತರಹದ ಒತ್ತಡವನ್ನು ನಿರಂತರವಾಗಿ ಅನುಭವಿಸುವುದರಿಂದ ಹೆಚ್ಚಿನ ತಾಯಂದಿರು ಮಲಬದ್ಧತೆಯಂಥ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಆದರೆ ಯಾರಲ್ಲಿಯೂ ಹೇಳಿಕೊಳ್ಳುವುದಕ್ಕೂ ಮುಜುಗರ ಪಟ್ಟುಕೊಳ್ಳುತ್ತಾರೆ.

ಬಿ12 ಜೀವಸತ್ವದ ಕೊರತೆ: ಈಚೆಗೆ ಹಲವು ತಾಯಂದಿರಲ್ಲಿ ರಕ್ತಹೀನತೆಯ ಜತೆಗೆ ಬಿ12 ಜೀವಸತ್ವದಂಥ ಕೊರತೆಯೂ ಕಂಡುಬರುತ್ತಿದೆ. ನಿತ್ಯ ಚಟುವಟಿಕೆ ಸಾಮಾನ್ಯವಾಗಿದ್ದರೂ ತೀವ್ರ ಸುಸ್ತು, ಮೆಟ್ಟಿಲು ಹತ್ತಲು ಆಗದಂಥ ಪರಿಸ್ಥಿತಿ ಇರುತ್ತದೆ. ಬಿ 12 ಜೀವಸತ್ವ ಕೊರತೆ ಇದ್ದವರಲ್ಲಿ ಊಟದ ವಾಸನೆ ಕಂಡರೂ ಆಗದಂಥ ಪರಿಸ್ಥಿತಿ ಇರುತ್ತದೆ. ಬಿ 12 ಜೀವಸತ್ವಕ್ಕೆ ಆಗರವೇ ಮಾಂಸಾಹಾರ. ಮೊಟ್ಟೆ, ಹಾಲು, ಮೊಸರಿನಲ್ಲಿ ಈ ಅಂಶ ಹೇರಳವಾಗಿರುತ್ತದೆ. 

ಹಾರ್ಮೋನ್‌ ವ್ಯತ್ಯಯ: ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ ಹಾರ್ಮೋನ್‌ನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ತಾಯಿಯಾದ ಕೂಡಲೇ ದೈಹಿಕವಾಗಿ ಹಲವು ಬದಲಾವಣೆಯಾಗುತ್ತವೆ. ಇದರಿಂದ ಶರೀರದ ತೂಕ ಹೆಚ್ಚುತ್ತದೆ. ಹಾರ್ಮೋನ್‌ ವ್ಯತ್ಯಾಸದಿಂದಾಗಿ ಋತುಚಕ್ರದಲ್ಲಿಯೂ ಏರುಪೇರು ಕಂಡುಬರಬಹದುದು. 

ಮೂಳೆ ಸವತೆ: ಹಿಂದಿನ ಕಾಲದಲ್ಲಿ ಕುಳಿತು ಅಡುಗೆ ಮಾಡುವ ಪದ್ಧತಿ ಇತ್ತು. ಈಗ ಒಂದೇ ಸಮನೆ ನಿಂತು ಅಡುಗೆ ಮಾಡುವುದರಿಂದ ಮೂಳೆಗಳ ಸವೆತ, ಗಂಟುನೋವು ಕಾಣಬಹುದು. ಜತೆಗೆ ಕ್ಯಾಲ್ಸಿಯಂನ ಕೊರತೆಯೂ ಇದಕ್ಕೆ ಕಾರಣವಾಗಿರುತ್ತದೆ. ಮನೆಯವರಿಗೆಲ್ಲ ಊಟ ಬಡಿಸಿದ ಮೇಲೆಯೇ ಅವರು ಊಟ ಮಾಡುತ್ತಾರೆ.ಇಲ್ಲಿ ಬದಲಾವಣೆ ಆಗಬೇಕು. ಬೆಳಿಗ್ಗೆದ್ದು ಗಡಿಬಿಡಿಯಲ್ಲಿ ಕಾಫಿ, ಟೀ ಕುಡಿದು ಹಸಿವು ನೀಗಿಸಿಕೊಳ್ಳುತ್ತಾರೆ.ಇದು ಸರಿಯಾದ ಕ್ರಮವಲ್ಲ. ಇದರಿಂದ ಹೊಟ್ಟೆಯುರಿ, ಉಬ್ಬರ, ಆಸಿಡಿಟಿ ಆಗುತ್ತದೆ. ಇಡೀ ಕುಟುಂಬದ ಶ್ರೇಯೋಭೃದ್ಧಿಗಾಗಿ ಪೂಜೆ, ವ್ರತ ಮಾಡುವ ಅಮ್ಮಂದಿರು ಅಗತ್ಯವಾಗಿ ಯೋಚನೆ ಮಾಡಬೇಕಿರುವುದು ಇಷ್ಟು. ದೀರ್ಘಕಾಲ ಆಹಾರ ಸೇವನೆ ಮಾಡದೇ ಇದ್ದರೆ ಆ್ಯಸಿಡಿಟಿಯ ಜತೆಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಶೂನ್ಯ ಕ್ಯಾಲೋರಿಸ್‌ (ಎಂಟಿ ಕ್ಯಾಲೋರಿಸ್‌) ಸ್ಥಿತಿ ತಲುಪುತ್ತದೆ.ಇದು ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. 

ಅಮ್ಮಂದಿರು ಗಟ್ಟಿಯಾಗಿದ್ದರೆ, ಎಲ್ಲರನ್ನು ಚೆನ್ನಾಗಿಯೇ ನೋಡಿಕೊಳ್ಳಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡಗಳಿರುವುದು ಸಹಜ. ಇದು ತಾಯಿಯು ಹೊರತಲ್ಲ. ಹಾಗೆಂದು ತನಗೋಸ್ಕರ ಹತ್ತು ನಿಮಿಷ ಮೀಸಲಿರಿಸಿಒಂಡು ಮನೆಯ ಇಷ್ಟದ ಜಾಗದಲ್ಲಿ ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಮನೆಗೆಲಸವನ್ನು ತಪ್ಪದೇ ಮಕ್ಕಳಿಗೆ ಹೇಳಿಕೊಡಿ. ಅಡುಗೆ, ಮನೆಯನ್ನು ಚೊಕ್ಕಟವಾಗಿಡುವುದು ಎಲ್ಲವೂ ಜೀವನ ಕೌಶಲ ಇದನ್ನು ತಪ್ಪದೇ ಮಕ್ಕಳಿಗೆ ಕಲಿಸಿ. ಇದರಿಂದ ನಿಮಗೂ ಹೊರೆ ಕಡಿಮೆಯಾಗುತ್ತದೆ.ಮಕ್ಕಳಿಗೂ ಕೌಶಲ ಕಲಿಸಿದಂತಾಗುತ್ತದೆ. 

ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡಿ. ನಿಮ್ಮ ಊಟದ ಟೇಬಲ್‌ನಲ್ಲಿ ಅಮ್ಮನಿಗೂ ತಟ್ಟೆ ಇರಲಿ. ಬಗೆ ಬಗೆಯ ಭಕ್ಷ್ಯಗಳನ್ನು ಬಡಿಸುವಾಗ ಅಮ್ಮನ ತಟ್ಟೆಯಿಂದಲೇ ಮೊದಲುಗೊಳ್ಳಲಿ. ಕಾಲಕ್ಕೆ ಕಾಲಕ್ಕೆ ಅಮ್ಮನ ಊಟದ ಮೆನುವಿನಲ್ಲಿ ಎಲ್ಲ ಸತ್ವಯುತ ಆಹಾರ ಪದಾರ್ಥ ಇವೆಯೇ ಎಂಬುದನ್ನು ಮನೆಯ ಇತರ ಸದಸ್ಯರು ನೋಡಿಕೊಳ್ಳುವಷ್ಟು ಕಾಳಜಿ ಬೆಳೆಯಲಿ.  ಎಲ್ಲರನ್ನು  ಪ್ರೀತಿಸಿ, ಕಾಳಜಿ ಮಾಡುವ ಅಮ್ಮನ ಸುತ್ತ ಬೆಚ್ಚಗಿನ ಆಸರೆಯೊಂದು ಇರಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT